ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ರೈತ ವಿರೋಧಿ ಕಾಂಗ್ರೆಸ್ ಸರ್ಕಾರದ ವಿರುದ್ದ ಸುಮಾರು ೨೦ ಸಾವಿರಕ್ಕೂ ಹೆಚ್ಚು ರೈತರು ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿ ಬೃಹತ್ ರ್‍ಯಾಲಿಯೊಂದಿಗೆ ಅಧಿವೇಶನ ನಡೆಯುತ್ತಿರುವ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿದರು.
ಕಬ್ಬು, ಮೆಕ್ಕಜೋಳ, ಹತ್ತಿ, ತೊಗರಿ ಬೆಳೆಯನ್ನು ಕೈಯಲ್ಲಿಡಿದ ರೈತರು ಹಾಗೂ ಬಿಜೆಪಿ. ನಾಯಕರುಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಧಿಕ್ಕಾರಗಳನ್ನು ಕೂಗಿದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ ಮಧ್ಯಕರ್ನಾಟಕದ ಬಯಲು ಸೀಮೆ ಚಿತ್ರದುರ್ಗದಲ್ಲಿ ರೈತರು ಬೆಳೆ ನಷ್ಟದಿಂದ ಕಂಗಾಲಾಗಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬೆಳೆನಷ್ಟ ಪರಿಹಾರ ನೀಡುವ ಬದಲು ಕುರ್ಚಿ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ.
ಕಬ್ಬಿಗೆ ಎಫ್.ಆರ್.ಪಿ. ಆಧಾರಿತ ಬೆಲೆ ಸಿಗುತ್ತಿಲ್ಲ. ಮೆಕ್ಕೆಜೋಳ ಖರೀಧಿ ಕೇಂದ್ರ ಆರಂಭವಾಗಿಲ್ಲ. ಮಾತೆತ್ತಿದರೆ ಕೇಂದ್ರ ಸರ್ಕಾರದ ವಿರುದ್ದ ಕೈತೋರಿಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ಪ್ರಧಾನಿ ನರೇಂದ್ರಮೋದಿರವರ ಮೇಲೆ ಟೀಕಾ ಪ್ರಹಾರ ಮಾಡುತ್ತಿದೆ.
ಬರ್ತ್ ಸರ್ಟಿಫಿಕೇಟ್‌ನಿಂದ ಡೆತ್ ಸರ್ಟಿಫಿಕೇಟ್‌ವರೆಗೂ ಬೆಲೆ ಏರಿಕೆಯಾಗಿದೆ. ಒಂದು ಟ್ರಾನ್ಸ್‌ಫಾರ್ಮರ್ ಹಾಕಿಸಿಕೊಳ್ಳಲು ರೈತ ಮೂರು ಲಕ್ಷ ರೂ.ಗಳನ್ನು ಪಾವತಿಸಬೇಕಿದೆ. ಜನಸಾಮಾನ್ಯರು ಬದುಕುವುದು ಕಷ್ಟವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕಿಡಿ ಕಾರಿದರು.
ಬಿಜೆಪಿ.ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ಮುಖ್ಯ ಸಚೇತಕ ಎನ್.ರವಿಕುಮಾರ್ ಸೇರಿದಂತೆ ಪಕ್ಷದ ಅನೇಕ ಮುಖಂಡರುಗಳು, ರೈತ ನಾಯಕರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

