ಆಹಾರ-ವಿಹಾರ-ವಿಚಾರ ಶುದ್ಧತೆಯಿಂದ ಆರೋಗ್ಯ ವರ್ಧನೆ ಸಾಧ್ಯ

News Desk

ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ನಮ್ಮ ಆಹಾರ, ವಿಹಾರ ಮತ್ತು ವಿಚಾರಗಳ ಶುದ್ಧತೆಯಿಂದ ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ರಂಗಾಪುರ ಋಷಿ ಸಂಸ್ಕøತಿ ವಿದ್ಯಾಕೇಂದ್ರದ ಯೋಗಗುರು ತಿಪ್ಪಾರೆಡ್ಡಿ ಹೇಳಿದರು.

ಸ್ಥಳೀಯ ರೋಟರಿ ಕ್ಲಬ್, ಇನ್ನರ್‍ವ್ಹೀಲ್ ಕ್ಲಬ್ ಮತ್ತು ಹರಪನಹಳ್ಳಿಯ ಜನನಿ ಯೋಗ & ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಹಮ್ಮಿಕೊಂಡಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

- Advertisement - 

ಪಂಚಭೂತಗಳಿಂದ ಮಾಡಲ್ಪಟ್ಟ ನಮ್ಮ ಶರೀರಕ್ಕೆ ಅಸ್ವಸ್ಥತೆ ಉಂಟಾದಾಗ ಅದಕ್ಕೆ ಚಿಕಿತ್ಸೆಯೂ ಪಂಚಭೂತಗಳಲ್ಲೇ ಅಡಗಿದೆ.  ಆರೋಗ್ಯವೇ ಜೀವನದ ದೊಡ್ಡ ಸಂಪತ್ತು. ಈ ಬಗ್ಗೆ ಜನಸಾಮಾನ್ಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯತೆ ಇದೆ. ಯಾವುದೇ ಅಡ್ಡ ಪರಿಣಾಮಗಳು ಇಲ್ಲದ ಇಂಥ ಚಿಕಿತ್ಸೆಯ ಬಗ್ಗೆ ಜನರು ಒಲವು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಯೋಗ ಹಾಗೂ ಪ್ರಕೃತಿ ಚಿಕಿತ್ಸೆ ಒಂದೇ ನಾಣ್ಯದ ಎರಡು ಮುಖಗಳು. ಇದು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ನಮ್ಮ ದೇಹ ಸದಾ ಚೈತನ್ಯದಿಂದ ಇರಬೇಕಾದರೆ ಪರಿಶುದ್ಧ ಆಹಾರ, ಗಾಳಿಯ ಜತೆಗೆ ಜೀವನಶೈಲಿ ಕೂಡಾ ಶುದ್ಧವಾಗಿರಬೇಕು. ಜೀವನಶೈಲಿ ರೋಗಗಳಿಂದ ಜನರು ಮುಕ್ತಿ ಪಡೆಯಬೇಕಾದರೆ ಇಂಥ ಸಹಜ ವಿಧಾನದತ್ತ ಹೊರಳಬೇಕು ಎಂದು ಅಭಿಪ್ರಾಯಪಟ್ಟರು.

- Advertisement - 

ಒತ್ತಡ ಜೀವನದಿಂದ ಮನಸ್ಸಿನ ಏರಿಳಿತಗಳು ಹೆಚ್ಚುತ್ತಿರುವ ಪ್ರಸ್ತುತ ಕಾಲಘಟ್ಟದಲ್ಲಿ ಕಾಯಿಲೆಗಳು ಹೆಚ್ಚುತ್ತಿವೆ. ನಾಲಿಗೆಗೆ ರುಚಿಕರ ಎನಿಸಿದ ಆಹಾರಕ್ಕೆ ಆದ್ಯತೆ ನೀಡುವ ಮೂಲಕ ರೋಗಗಳನ್ನು ನಾವೇ ಆಹ್ವಾನಿಸಿಕೊಳ್ಳುತ್ತಿದ್ದೇವೆ. ನಮ್ಮ ಆರೋಗ್ಯ ಸುಸ್ಥಿರವಾಗಿ ಇರಬೇಕಾದರೆ ಏನು ಬೇಕು ಎನ್ನುವುದನ್ನು ಅರಿತುಕೊಂಡು ಪ್ರಜ್ಞಾಪೂರ್ವಕ ಜೀವನಶೈಲಿ ಅಳವಡಿಸಿಕೊಳ್ಳುವುದು ಅಗತ್ಯ ಎಂದು ಪ್ರತಿಪಾದಿಸಿದರು.

ಮುಖ್ಯ ಅತಿಥಿಗಳಾಗಿದ್ದ ಜನನಿ ಯೋಗ & ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಮಾತನಾಡಿ, ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಉತ್ತಮ ಭವಿಷ್ಯವಿದ್ದು, ಜೀವನದಲ್ಲಿ ಇದನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಮತ್ತು ಸಂತೋಷದಾಯಕ ಬದುಕು ನಮ್ಮದಾಗಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ರೋಟರಿ ಕಾರ್ಯದರ್ಶಿ ಜಿ.ಎಂ.ಹರಿಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ಮಾಧ್ಯಮ & ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇನ್ನರ್‍ವ್ಹೀಲ್ ಅಧ್ಯಕ್ಷೆ ಸುಮಾ ಸಂತೋಷ್, ಕಾರ್ಯದಶಿ ಅಮೃತಾ ಮಲ್ಲಿಕಾರ್ಜುನ್ ಉಪಸ್ಥಿತರಿದ್ದರು.

ಎಸ್.ರುದ್ರಪ್ಪ ಸ್ವಾಗತಿಸಿ, ಹೊಳಲಪ್ಪ ವಂದಿಸಿದರು. ಯೋಗ ಪ್ರಾಧ್ಯಾಪಕ ಜಯರಾಂ ಪ್ರಾರ್ಥಿಸಿದರು. ರೋಟರಿ ಸಂಸ್ಥೆಯ ಮಾಜಿ ಸಹಾಯಕ ಗವರ್ನರ್ ಸುದರ್ಶನ್ ಮತ್ತು ಪದಾಧಿಕಾರಿಗಳು ಭಾಗವಹಿಸಿದ್ದರು. 100ಕ್ಕೂ ಹೆಚ್ಚು ಮಂದಿ ಶಿಬಿರದ ಪ್ರಯೋಜನ ಪಡೆದರು.

 

 

 

Share This Article
error: Content is protected !!
";