ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
ಐತಿಹಾಸಿಕ ಮಹತ್ವದ ತಾಣ ಉಳವಿಯ ಚನ್ನಬಸವಣ್ಣನವರ ರಥೋತ್ಸವದ ಅಂಗವಾಗಿ, ಹೊಳಲ್ಕೆರೆಯ ಉಳವಿ ಚನ್ನಬಸವೇಶ್ವರ ಪಾದಯಾತ್ರೆ ಸಮಿತಿ, ಜಾಗತಿಕ ಲಿಂಗಾಯತ ಮಹಾಸಭಾ, ಒಂಟಿ ಕಂಬದ ಮುರುಘಾ ಮಠ ಹೊಳಲ್ಕೆರೆ, ಶ್ರೀ ಜಗದ್ಗುರು ಮರುಘ ರಾಜೇಂದ್ರ ಬೃಹನ್ಮಠ ಚಿತ್ರದುರ್ಗ.
ಇವರುಗಳ ಸಹಯೋಗದಲ್ಲಿ ಹೊಳಲ್ಕೆರೆ ಒಂಟಿ ಕಂಬದ ಮುರುಘಾಮಠದಲ್ಲಿ ನಿನ್ನೆಯ ದಿನ ಹಲವು ಬಸವಪರ ಸಂಘಟನೆಗಳು ಮತ್ತಿತರ ಭಕ್ತರು ಸೇರಿದ ಸಭೆಯಲ್ಲಿ ಪಾದಯಾತ್ರೆ ಕೈಗೊಳ್ಳುವ ಸಲುವಾಗಿ ಇಲ್ಲಿನ ಶ್ರೀ ತಿಪ್ಪೇರುದ್ರಸ್ವಾಮಿಗಳ ಸಮ್ಮುಖದಲ್ಲಿ ಸಭೆ ಕರೆಯಲಾಗಿತ್ತು.
ಪಾದಯಾತ್ರೆಯ ಉದ್ದೇಶ ಕುರಿತು ಮಾತನಾಡಿದ ತಿಪ್ಪೇರುದ್ರಶ್ರೀಗಳು ಇತ್ತೀಚಿನ ದಿನಮಾನಗಳಲ್ಲಿ ಲಿಂಗಾಯತ ಧರ್ಮಿಯರಲ್ಲಿ ಶ್ರದ್ಧೆ ಇಮ್ಮಡಿಗೊಳಿಸಲು ಸಂಘಟನೆಯ ಕೊರತೆ ಇದೆ. ಇದನ್ನು ನೋಡಿದಾಗ ಧರ್ಮ ಪ್ರಚಾರದ ಅಗತ್ಯ ತುಂಬಾ ಇದೆ ಅನಿಸುತ್ತದೆ. ಆದುದರಿಂದ ಪ್ರತಿಯೊಬ್ಬ ಲಿಂಗಾಯತರು ಶರಣರ ಕರ್ಮಭೂಮಿಗಳ ದರ್ಶನವನ್ನು ಜೀವನದಲ್ಲಿ ಒಮ್ಮೆಯಾದರೂ ಮಾಡಬೇಕೆಂಬ ಜಾಗ್ರತೆಯನ್ನು ಉಂಟುಮಾಡಲು ಹಾಗೂ ಪಾದಯಾತ್ರೆಯ ಉದ್ದಕ್ಕೂ ಬರುವಂತ ಎಲ್ಲಾ ಹಳ್ಳಿಗಳಲ್ಲಿ ಲಿಂಗಾಯತ ಧರ್ಮದ ಬಗ್ಗೆ ಜನಜಾಗೃತಿಯನ್ನು ಮೂಡಿಸುತ್ತಾ ಅವರನ್ನೆಲ್ಲ ಶರಣರ ಪುಣ್ಯಕ್ಷೇತ್ರಗಳ ದರ್ಶನ ಮಾಡುವ ಅವರ ತತ್ವಾದರ್ಶಗಳನ್ನ ರೂಢಿಸಿಕೊಳ್ಳುವತ್ತ ಆ ಬಗೆಯ ವಿಚಾರಗಳನ್ನು ತಿಳಿಸುವುದು ಅಗತ್ಯವಿದೆ ಎಂದು ತಿಳಿಸಿದರು.
ಪಾದಯಾತ್ರೆಯ ಮುಗಿದ ನಂತರ ಉಳವಿ ಚನ್ನಬಸವೇಶ್ವರ ಜಾತ್ರೆಯಲ್ಲಿ ಮೂರು ದಿನಗಳ ಕಾಲ ಅಲ್ಲೇ ಇರುವುದರ ಮೂಲಕ ಮಹಾ ಮನೆಯಲ್ಲಿ ಮೂರು ದಿನಗಳ ಕಾಲ ಅನ್ನದಾಸೋಹದ ವ್ಯವಸ್ಥೆ ಮಾಡುವ ಮೂಲಕ ಜನರಲ್ಲಿ ಬಸವ ಧರ್ಮದ ಬಗ್ಗೆ ಲಿಂಗಾಯತ ಧರ್ಮ ಆಚರಿಸುವ ಮಾಹಿತಿಯನ್ನ ಹೇಳುವುದು ನಮ್ಮ ಉದ್ದೇಶ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಾಗತಿಕ ಲಿಂಗಾಯತ ಮಹಾಸಭಾ ಚಿತ್ರದುರ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ .ಟಿ .ನಂದೀಶ್ ಮಾತನಾಡಿ ನಮ್ಮದು ಕನ್ನಡದ ಧರ್ಮ, 900 ವರ್ಷಗಳ ಕಾಲ ಇತಿಹಾಸ ಹೊಂದಿರುವ ವೈಚಾರಿಕ, ಜಾತ್ಯತೀತ ಧರ್ಮ, ವಿಶ್ವಧರ್ಮ ಎಂದೆಲ್ಲಾ ಕೇವಲ ಭಾಷಣ ಮಾಡುವುದರಲ್ಲಿ ನಾವೆಲ್ಲ ಮುಳುಗಿ ಹೋಗಿದ್ದೇವೆ. ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಧರ್ಮಶ್ರದ್ಧೆ ಲವಲೇಶವೂ ಇಲ್ಲ. ಆದುದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಯಲ್ಲಿ ಲಿಂಗಾಯತ ಧರ್ಮದ ಆಚಾರ ವಿಚಾರಗಳನ್ನು ಪಾಲಿಸುವುದರ ಮೂಲಕ ಲಿಂಗಾಯತ ಧರ್ಮ ರಕ್ಷಣೆಯ ಹೊಣೆ ಎಲ್ಲರ ಮೇಲಿದೆ ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಹತ್ತಾರು ಬಸವ ಪರ ಸಂಘಟನೆಗಳ ಮೂಲಕ ಲಿಂಗಾಯತ ಧರ್ಮದ ಪ್ರಚಾರ ಮುನ್ನೆಲೆಗೆ ಬರುತ್ತಿದೆ. ಆದರೆ ಇದನ್ನು ಸಹಿಸದ ಹಲವಾರು ಕುತಂತ್ರಿಗಳು ಲಿಂಗಾಯತ ಧರ್ಮದ ತೇಜೋವದೆ ಮಾಡುತ್ತಿದ್ದಾರೆ. ವಚನಗಳನ್ನ ತಿರುಚಿ ಮುದ್ರಿಸುವುದು ಲಿಂಗಾಯತಪರ ಹೋರಾಟಗಾರರನ್ನ ಗುರಿಯಾಗಿರಿಸಿಕೊಂಡು ಅವಹೇಳನ ಮಾಡುವುದು, ಲಿಂಗಾಯತ ಎನ್ನುವುದು ಧರ್ಮವೇ ಅಲ್ಲ ಎನ್ನುವ ರೀತಿಯಲ್ಲಿ ಪುಸ್ತಕ ಮುದ್ರಣ ಮಾಡುವುದರ ಮೂಲಕ ಲಿಂಗಾಯತ ಧರ್ಮದ ಅಸ್ತಿತ್ವದ ಬಗೆಗಿನ ಮಾತನಾಡುತ್ತಿದ್ದಾರೆ.
ಸಂಘಟಿತ ಪ್ರಯತ್ನ ಮತ್ತು ಹೋರಾಟದ ಮೂಲಕ ನಾವುಗಳು ಅವರಿಗೆ ತಕ್ಕ ಉತ್ತರ ನೀಡಬೇಕಿದೆ. ನಾವು ಮಾಡಬೇಕಾದುದು ಇಷ್ಟೇ ಯಾರು ಏನೇ ಬೊಬ್ಬೆ ಹೊಡೆದರೂ ನಾವು ಅಂತರಂಗಿಕವಾಗಿ ನಮ್ಮ ಧರ್ಮದ ತತ್ವ ಸಂಪ್ರದಾಯಗಳನ್ನ ಪಾಲಿಸುತ್ತಾ ಹೋಗಬೇಕು.
ಆಗ ಮಾತ್ರ ತತ್ವ ಉಳಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾ ಬಸವ ತತ್ವ ಪರ ಸ್ವಾಮೀಜಿಗಳು ಮಠಗಳಲ್ಲಿ ಕುಳಿತು ಬಿಟ್ಟರೆ ಸಾಲದು, ಜನರ ಬಳಿಗೆ ಬರಬೇಕು. ಇಂಥ ಸಂದರ್ಭದಲ್ಲಿ ತಿಪ್ಪೇರುದ್ರಶ್ರೀಗಳಿಗೆ ನಾವೆಲ್ಲರೂ ಅವರಿಗೆ ಬೆಂಬಲವನ್ನ ಕೊಡುವುದರ ಮೂಲಕ ಅವರೂ ಕೈಗೊಂಡಿರುವ ಪಾದಯಾತ್ರೆಗೆ ಕೈಜೋಡಿಸೋಣ ಪಾದಯಾತ್ರೆ ಮಾಡೋಣ ಎಂದು ಭಿನ್ನವಿಸಿಕೊಂಡರು.
ಚಿತ್ರದುರ್ಗ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಕೆಂಚವೀರಪ್ಪ ಮಾತನಾಡಿ ಲಿಂಗಾಯತ ಧರ್ಮದ ಸಂಘಟನೆಯ, ಲಿಂಗಾಯಿತ ಧರ್ಮದ ಜಾಗೃತಿಯ ಉದ್ದೇಶದಿಂದ ಆದಷ್ಟು ಬೇಗ ಹೊಳಲ್ಕೆರೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ತಾಲೂಕು ಶಾಖೆ ಉದ್ಘಾಟನೆ ಮಾಡಬೇಕು ಹೆಚ್ಚು ಹೆಚ್ಚು ಸದಸ್ಯತ್ವವನ್ನ ಮಾಡಿಸಬೇಕೆಂದು ಕರೆಕೊಟ್ಟರು.
ಸಭೆಯಲ್ಲಿ ಚಿತ್ರದುರ್ಗ ಜಿಲ್ಲಾ ಜಾಗತಿಕ ಲಿಂಗಾಯತ ಮಹಾಸಭಾ ಖಜಾಂಚಿ ವಾಗೀಶ್, ಕಾರ್ಯದರ್ಶಿ ಧನಂಜಯ್ , ರೈತ ಸಂಘದ ಮುಖಂಡರಾದ ಮಲ್ಲಿಕಾರ್ಜುನಪ್ಪ, ಗುರು ಮಲ್ಲೇಶ್, ತಿಪ್ಪೇಸ್ವಾಮಿ, ಚಂದ್ರಶೇಖರ್, ಸೋಮಶೇಕರಪ್ಪ ಹಾಗೂ ಎಸ್.ಜೆ.ಎಂ ಶಾಲಾ ಶಿಕ್ಷಕರು ಮತ್ತು ಈಚಗಟ್ಟ, ನುಲೆನೂರು, ಗಿಲ್ಕೇನಹಳ್ಳಿ ಮುಂತಾದ ಗ್ರಾಮಸ್ಥರು ಸಭೆಗೆ ಆಗಮಿಸಿ ಸಭೆ ಯಶಸ್ವಿಗೂಳಿಸಿದರು.

