ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗುಡಿ ಗೋಪುರಗಳು ಜನರ ಜೀವನಾಡಿಯಾಗಬೇಕು. ಸಾಮಾಜಿಕ ಚಟುವಟಿಕೆಗಳ ಕೇಂದ್ರವಾಬೇಕು. ಸಮಾಜದಲ್ಲಿ ಸಾಮರಸ್ಯ ತರುವಂತಾಗಬೇಕು ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ್‌ಮಠದ್‌ತಿಳಿಸಿದರು.
ನಗರದ ಜೋಗಿಮಟ್ಟಿಯ ಸದ್ಗುರು ಆಶ್ರಮದ ಉದಾಯಚಲದಲ್ಲಿ ದೇವಾಲಯ ಸಂವರ್ಧನಾ ಸಮಿತಿಯಿಂದ ಆಯೋಜಿಸಿದ್ದ ಅರ್ಚಕರ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಅರ್ಚಕರ ತರಬೇತಿ ಶಿಬಿರ ಕೇವಲ ಪೂಜೆ, ಮಂತ್ರ, ಶ್ಲೋಕಗಳನ್ನು ಕಲಿಸುವುದಕ್ಕಲ್ಲ. ದೇವಸ್ಥಾನವನ್ನು ಸಾಮಾಜಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಮಾಡಬೇಕು ಎನ್ನುವ ಉದ್ದೇಶ ಹೊಂದಿದೆ. ದೇವಸ್ಥಾನಗಳು ಮತ್ತೆ ಪೂಜೆಗೆ ಸೀಮಿತವಲ್ಲ, ಗ್ರಾಮಗಳ ಸಾಮಾಜಿಕ ಸಾಮರಸ್ಯ ಕಾಪಾಡುವಂತಾಗಬೇಕು ಎಂದರು.
ದೇವಾಲಯ ಹಸಿದವರಿಗೆ ಅನ್ನ ನೀಡುವ ಕೇಂದ್ರವಾಗಬೇಕು. ಶಕ್ತಿ ಇರುವ ದೇವಸ್ಥಾನಗಳಿಂದ ಆ ಗ್ರಾಮದ ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶಿಕ್ಷಣಕ್ಕೆ ನೆರವು ನೀಡುವಂತಾಗಬೇಕು. ಅವಕಾಶ ಇರುವ ಕಡೆಗಳಲ್ಲಿ ಯೋಗ ತರಬೇತಿ, ಆರೋಗ್ಯ ಶಿಬಿರ, ಗ್ರಂಥಾಲಯ, ಗೋಶಾಲೆಯಂತಹ ಚಟುವಟಿಕೆಗಳನ್ನು ಮಾಡಿಸುವ ಕಲ್ಪನೆಯನ್ನು ಅರ್ಚಕರಿಗೆ ನೀಡುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ದೇವಸ್ಥಾನಗಳನ್ನು ಕೇಂದ್ರವಾಗಿಟ್ಟುಕೊಂಡು ವಾರದಲ್ಲಿ ಒಂದು ದಿನ ಮಹಿಳೆಯರೆಲ್ಲಾ ಸೇರಿ ಮಾತೃ ಮಂಡಳಿ ರಚಿಸಿ ಸ್ವಾವಲಂಬನೆಯ ಬದುಕಿನ ಬಗ್ಗೆ ಚಿಂತನ ಮಂಥನ ನಡೆಸಬೇಕು. ಮಾತೃ ಭೋಜನ ನಡೆಯಬೇಕು. ವಿವಿಧ ಸಮಾಜದ ಮುಖಂಡರ ಜೊತೆ ಸಂವಾದ, ಅನೌಪಚಾರಿಕ ಕಾರ್ಯಕ್ರಮಗಳು ನಡೆಯಬೇಕು ಎಂದರು.
ಈ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾ ಮಟ್ಟದ ಅರ್ಚಕರ ತರಬೇತಿ ಶಿಬಿರ ನಡೆಸುತ್ತಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಿಂದ ೬೫ ಅರ್ಚಕರು, ವಿವಿಧ ವರ್ಗ, ಪಂಥಗಳಿಂದ ಭಾಗವಹಿಸಿದ್ದಾರೆ. ಇದೇ ಮೊದಲ ಬಾರಿಗೆ ಮಂತ್ರೋಚ್ಛಾರಣೆ ಮಾಡುವವರು, ೨ನೇ ತರಗತಿಯಿಂದ ಸ್ನಾತಕೋತ್ತರ ಪದವಿ ವರೆಗೆ ಓದಿರುವವರು ಭಾಗವಹಿಸಿದ್ದಾರೆ. ಕಳೆದ ಒಂದೂವರೆ ವರ್ಷದಲ್ಲಿ ರಾಜ್ಯದಲ್ಲಿ ೮ ಶಿಬಿರಗಳು ನಡೆದಿದ್ದು, ೫೫೦ ಜನರಿಗೆ ತರಬೇತಿ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಭೀಮಸಮುದ್ರದ ಉದ್ಯಮಿ ಲವಕುಮಾರ್‌ಮಾತನಾಡಿ, ಅರ್ಚಕರಿಗೆ ತರಬೇತಿ ನೀಡುತ್ತಿರುವುದು ಬಹಳ ಅಪರೂಪದ ವಿಚಾರ. ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದವರೂ ಭಾಗವಹಿಸಿರುವುದು ಶ್ಲಾಘನೀಯ. ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಬೇಕು ಎಂದರು.
ಚಳ್ಳಕೆರೆ ನರಹರಿ ಆಶ್ರಮದ ಶ್ರೀ ರಾಜಾರಾಮ ಶಾಸ್ತ್ರಿಗಳು ಮಾತನಾಡಿ, ಅರ್ಚಕರು ತಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡಿದರೆ ಭಗವಂತ ನಿಮ್ಮ ಜೊತೆಗೆ ಇರುತ್ತಾನೆ. ಮತ್ತೊಬ್ಬರಿಗೆ ಮೋಸ, ಕುತಂತ್ರ ಮಾಡಿದರೆ ದೇವರು ಕ್ಷಮಿಸುವುದಿಲ್ಲ ಎಂದು ತಿಳಿಸಿದರು.
ಅರ್ಚನೆ, ಪೂಜೆ ಕೇವಲ ಹಣಕ್ಕಾಗಿ ಅಲ್ಲ. ಅರ್ಚಕ ಭಕ್ತ ಹಾಗೂ ಭಗವಂತನ ನಡುವೆ ಇರುವ ಏಜೆಂಟ್‌ರೀತಿಯಲ್ಲಿ ಕೆಲಸ ಮಾಡಬೇಕು. ಭಗವಂತನ ಪ್ರತಿನಿಧಿಯಂತೆ ಕಷ್ಟಕ್ಕಾಗಿ ಬಂದ ಭಕ್ತರಿಗೆ ಸಹಾಯ ಮಾಡಬೇಕು ಎಂದು ತಿಳಿಸಿದರು.
ಮಂತ್ರಗಳನ್ನು ಸ್ಪಷ್ಟ, ಶುದ್ಧ ಹಾಗೂ ನಿಧಾನವಾಗಿ ಹೇಳುವ ಅಭ್ಯಾಸ ಮಾಡಿಕೊಳ್ಳಬೇಕು. ಇದರಿಂದ ಎಲ್ಲರಿಗೂ ಅರ್ಥವಾಗುತ್ತದೆ. ಭಕ್ತರಿಗೆ ಮಂತ್ರಗಳು ಅರ್ಥವಾದರೆ ಸಂತಸವಾಗುತ್ತದೆ ಎಂದರು.
ಶಿಬಿರಕ್ಕೆ ಪ್ರಜ್ಞಾ ಪ್ರವಾಹದ ಅಖಿಲ ಭಾರತೀಯ ಸಂಯೋಜಕ ರಘುನಂದನ್, ಹಿಂದೂ ಸೇವಾ ಪ್ರತಿಷ್ಠಾನದ ಸುರೇಶ್, ಆರೋಗ್ಯ ಇಲಾಖೆಯ ಡಾ.ಶಿವಕುಮಾರ್, ಸಂಸ್ಕಾರ ಭಾರತಿಯ ಡಾ.ಕೆ.ರಾಜೀವ ಲೋಚನ, ಆರೆಸ್ಸೆಸ್ಸ್‌ಜಿಲ್ಲಾ ಕಾರ್ಯವಾಹ ರಾಮಕಿರಣ್‌ಭಾಗವಹಿಸಿದ್ದಾರೆ.
ಡಿ.೧೨ ರಂದು ನಡೆಯುವ ಸಮಾರೋಪ ಸಮಾರಂಭದ ಸಾನ್ನಿಧ್ಯವನ್ನು ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಮಾದಾರ ಚನ್ನಯ್ಯ ಸ್ವಾಮೀಜಿ, ಸಂವಾದ ಸಂಪಾದಕ ವೃಷಾಂಕ್‌ಭಟ್‌ಭಾಗವಹಿಸಲಿದ್ದಾರೆ.
ಶಿಬಿರದಲ್ಲಿ ಭಾಗವಹಿಸಿರುವ ಅರ್ಚಕರಿಗೆ ಬಂದು ಹೋಗುವ ವೆಚ್ಚ ಹೊರತುಪಡಿಸಿ ಉಳಿದಂತೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ. ಪೂಜಾ ಸಮವಸ್ತ್ರ, ಪೆನ್ನು, ಪುಸ್ತಕ, ಪೂಜಾ ಸಾಮಾಗ್ರಿ, ತುಳಸಿ ಮಾಲೆಯನ್ನು ನೀಡಲಾಗಿದೆ.
ಶಿಬಿರದಲ್ಲಿ ದೇವಾಲಯ ಸಂವರ್ಧನ ಸಮಿತಿಯ ಶಿವಮೊಗ್ಗ ವಿಭಾಗ ಸಂಯೋಜಕ ಗಂಗಣ್ಣ, ಜಿಲ್ಲಾ ಸಂಯೋಜಕ ಮಂಜುನಾಥ್, ಪ್ರಮುಖರಾದ ಗುರುಮೂರ್ತಿ, ಶಶಿಧರ್‌ಗುಡೇಕೋಟೆ, ಓಂಕಾರಪ್ಪ ಇತರರಿದ್ದರು.

