ಶಾಸಕ ರಮೇಶ್ ಜಾರಕಿಹೊಳಿ ಹಾಗೂ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮುಖಾಮುಖಿ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ :
ಬೆಳಗಾವಿಯ ಸುವರ್ಣ ವಿಧಾನಸೌಧದ ಮೊಗಸಾಲೆಯಲ್ಲಿ ಗೋಕಾಕ್​ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಅವರು ಮುಖಾಮುಖಿಯಾಗಿ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸಿದರು. ರಮೇಶ್ ಜಾರಕಿಹೊಳಿ ನೇರವಾಗಿ ಮೆಟ್ಟಿಲು ಏರಿ ಅಧಿವೇಶನಕ್ಕೆ ಹೋಗುವಾಗ ಅತ್ತ ಕಡೆಯಿಂದ ಬಂದ ವಿಜಯೇಂದ್ರ ಅವರು ಜಾರಕಿಹೊಳಿ ಬಳಿ ಹೋಗಿ ಮಾತನಾಡಿಸಿದರು.

ಇಬ್ಬರ ನಡುವೆ ಏನು ಮಾತುಕತೆ ಆಯ್ತು? ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಮೇಶ್ ಜಾರಕಿಹೊಳಿ, ಏನೂ ವಿಶೇಷ ಮಾತುಕತೆ ಇಲ್ಲ, ಅವರು ರೈತರ ಪ್ರತಿಭಟನೆ ಸ್ಥಳಕ್ಕೆ ಹೋಗಿದ್ದರು. ನೀವು ರೈತ ಪ್ರತಿಭಟನೆ ಸ್ಥಳಕ್ಕೆ ಬನ್ನಿ ಎಂದು ನನಗೂ ಹೇಳಿದರು. ಅದಕ್ಕೆ ನಾನು ಬರುತ್ತೇನೆ ಎಂದೆ, ಕುಶಲೋಪರಿ ಮಾತನಾಡಿದ್ದೇವೆ ಎಂದು ತಿಳಿಸಿದ್ದಾರೆ.

- Advertisement - 

ಉತ್ತರ ಕರ್ನಾಟಕದ ಶಾಸಕರು ಧ್ವನಿ ಎತ್ತಬೇಕು: ಅಶೋಕ್
ಉತ್ತರ ಕರ್ನಾಟಕ ಶಾಸಕರು ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಸಮಸ್ಯೆಗಳ ಕುರಿತು ಮಾತನಾಡಬೇಕು.
ನಾವು ಈ ಸರ್ಕಾರಕ್ಕೆ ನಿಯಮಾವಳಿ ಸೂಚನೆ ಪ್ರಕಾರ ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಅವಕಾಶ ನೀಡಿದ್ದಾರೆ. ಇದರಿಂದ ಈ ಭಾಗದ ಶಾಸಕರು ಧ್ವನಿ ಎತ್ತಬೇಕು ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸುವರ್ಣ ವಿಧಾನಸೌಧದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅಶೋಕ್,  ರಾಜ್ಯ ಸರ್ಕಾರದ ಪರಿಸ್ಥಿತಿ ಡೋಲಾಯಮಾನ ಸ್ಥಿತಿಯಲ್ಲಿದೆ. ಬಯಲು ಸೀಮೆಯಲ್ಲಿ ಅತಿವೃಷ್ಟಿ ಹಾಗೂ ಭೀಮಾ ನದಿ ಪ್ರವಾಹದಿಂದ ಜನ ಜಾನುವಾರುಗಳ ಸಾವು ಸಂಭವಿಸಿದರೂ ಯಾವುದೇ ನಯಾಪೈಸೆ ಪರಿಹಾರ ನೀಡುವುದಕ್ಕೆ ಇವರ ಬಳಿ ಹಣವಿಲ್ಲ. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಆದರೂ, ಇದುವರೆಗೆ ರೈತರಿಗೆ ಪರಿಹಾರ ನೀಡಲಿಲ್ಲಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement - 

ಬಿಜೆಪಿ ಯಾವ ನೈತಿಕತೆ ಇಟ್ಟುಕೊಂಡು ರೈತರ ಜೊತೆಗೆ ಪ್ರತಿಭಟನೆ ಮಾಡುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈತರ ಆತ್ಮಹತ್ಯೆ ಪ್ರಕರಣದಲ್ಲಿ ದೇಶದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಇಷ್ಟರ ಮೇಲೆ ಇವರ ಸಾಧನೆ ಗೊತ್ತಾಗುತ್ತದೆ ಎಂದು ಸೂಚ್ಯವಾಗಿ ತಿಳಿಸಿದ್ದಾರೆ.

ಬಿಜೆಪಿಯಿಂದ ರೈತರ ಪರವಾಗಿ ಮಂಗಳವಾರ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. ಕಾಂಗ್ರೆಸ್ ನಾಯಕರಿಗೆ ಬಿಸಿ ಮುಟ್ಟಿಸುವ ಕೆಲಸ ಮಾಡುತ್ತೇವೆ. ಈ ಪಕ್ಷಕ್ಕೆ ರೈತರ ಬಗ್ಗೆ ಎಳ್ಳಷ್ಟೂ ಕಾಳಜಿ ಇಲ್ಲ. ಬೆಳೆ ಹಾನಿ ಸಂಭವಿಸಿದ ರೈತರಿಗೆ ಕೇಂದ್ರ ಸರ್ಕಾರ ಎನ್ ಡಿಆರ್ ಎಫ್ ಮಾರ್ಗಸೂಚಿ ಅನ್ವಯ ಹಣ ಬಿಡುಗಡೆ ಮಾಡಿದೆ. ಇವರಿಗೆ ನಾಟಿ ಕೋಳಿ ತಿನ್ನುವುದಕ್ಕೆ ಸಮಯ ಇದೆ. ಕೇಂದ್ರದ ಬಳಿ ಹೋಗಲು ಸಮಯವಿಲ್ಲ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರ್ಕಾರ ಸಂಪೂರ್ಣವಾಗಿ ಕುಸಿದಿದೆ. ಇವರ ಬಳಿ ಹಣ ಇಲ್ಲ, ಏನೂ ಇಲ್ಲ. ಯುವಕರು ಉದ್ಯೋಗಕ್ಕೋಸ್ಕರ ಪ್ರತಿಭಟನೆ ಮಾಡುತ್ತಿದ್ದಾರೆ. ಆ ಯುವಕರ ಧ್ವನಿಯನ್ನು ಸರ್ಕಾರ ಆಲಿಸುತ್ತಿದೆಯೇ? ಎಂದು ಅಶೋಕ್​ ಪ್ರಶ್ನಿಸಿದರು.

ಸರ್ಕಾರ ರಾಜ್ಯದಲ್ಲಿ ಮತ್ತೆ ಟಿಪ್ಪು ಜಯಂತಿ ಆಚರಣೆ ಮಾಡುತ್ತಿದೆ ಎಂಬ ಮಾಧ್ಯಮದವರ ಪ್ರಶ್ನೆ ಕುರಿತು ಪ್ರತಿಕ್ರಿಯಿಸಿದ ಅವರು, ‘ಟಿಪ್ಪು ಜಯಂತಿ, ಬಿನ್ ಲಾಡನ್ ಅಥವಾ ಪಾಕಿಸ್ತಾನ ಜಯಂತಿ ಮಾಡಿಕೊಳ್ಳಲಿ. ಅವರದೇ ಸರ್ಕಾರ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

Share This Article
error: Content is protected !!
";