ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಮಾನವ ಹಕ್ಕುಗಳು ನಮಗೆ ಇಂದು ದೊರೆತಿರಬೇಕಾದರೆ ಅದು ನಮಗೆ ಸಂವಿಧಾನ ನೀಡಿರುವ ಬಳುವಳಿಯಾಗಿದ್ದು, ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್‌ಅವರ ದೂರದೃಷ್ಟಿತ್ವ, ಸಮಾನತೆ ಹಾಗೂ ಮಾನವೀಯ ಮೌಲ್ಯಗಳಿಗೆ ಅವರು ನೀಡುತ್ತಿದ್ದ ಪ್ರಾಶಸ್ತ್ಯವೇ ಮೂಲವಾಗಿದೆ ಎಂದು ಲೇಖಕ ಹಾಗೂ ಪ್ರಗತಿಪರ ಚಿಂತಕ ಡಾ.ಮಂಜುನಾಥ್.ಎಂ.ಅದ್ದೆ ತಿಳಿಸಿದರು.
ನಗರದ ಕನ್ನಡ ಜಾಗೃತ ಭವನದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಸಮಿತಿ ವತಿಯಿಂದ ನಡೆದ ಸಂವಿಧಾನ ಸಮರ್ಪಣಾ ದಿನ ಹಾಗೂ ಮಾನವ ಹಕ್ಕುಗಳ ದಿನಾಚರಣೆ ಅಂಗವಾಗಿ ನಡೆದ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಅಂಬೇಡ್ಕರ್‌ದೃಷ್ಟಿಯಲ್ಲಿ ಮಾನವ ಹಕ್ಕುಗಳು ವಿಷಯ ಕುರಿತು ಮಾತನಾಡಿದರು.
ಯಾವುದೇ ದೇಶವನ್ನು ಅರ್ಥ ಮಾಡಿಕೊಳ್ಳಬೇಕಾದರೆ, ಅದರ ರಾಜಕೀಯ ಸಾಂಸ್ಕೃತಿಕ, ಆರ್ಥಿಕ ಚರಿತ್ರೆಯ ಜೊತೆಗೆ ಸಾಮಾಜಿಕ ಚರಿತ್ರೆಯನ್ನು ಅರ್ಥ ಮಾಡಿಕೊಳ್ಳಬೇಕು.
ಸಂವಿಧಾನ ಬರೀ ದಲಿತರಿಗೆ ಸೀಮಿತವಾಗಿದ್ದು, ಅವರೇ ಸಂವಿಧಾನದಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎನ್ನುವುದೇ ಅಸಮಂಜಸ. ಈ ತಪ್ಪು ಕಲ್ಪನೆ ಮೊದಲು ದೂರಾಗಬೇಕು. ಸಂವಿಧಾನ ಜಾರಿಗೂ ಮುನ್ನ ದೇಶದಲ್ಲಿ ದಲಿತರು, ಶೋಷಿತರು ಅನುಭವಿಸುತ್ತಿದ್ದ ಬವಣೆಗಳನ್ನು ನೋಡಿದರೆ ನಮಗೆ ಸಂವಿಧಾನದ ಮಹತ್ವ ಅರ್ಥವಾಗುತ್ತದೆ. ಮತದಾನದ ಹಕ್ಕು ಸಹ ಮೊದಲು ಜಮೀನ್ದಾರರಿಗೆ ಹಾಗೂ ಗಣ್ಯರಿಗೆ ಮಾತ್ರವೇ ಸೀಮಿತವಾಗಿತ್ತು. ಮಹಿಳೆಯರಿಗೆ ಅಧಿಕಾರವಿರಲಿ ಮತದಾನದ ಹಕ್ಕೇ ಇರದಂತೆ ಮಾಡುವ ಹುನ್ನಾರಗಳು ನಡೆಯುತ್ತಿತ್ತು. ಸಂವಿಧಾನದಲ್ಲಿನ ಸಮಾನತೆ, ಬ್ರಾತೃತ್ವಗಳಿಂದಾಗಿ ಇಂದು ಎಲ್ಲರಿಗೂ ಮತದಾನದ ಹಕ್ಕು ಸಿಕ್ಕಿದೆ.
ಎಲ್ಲಾ ವರ್ಗದವರಿಗೆ ಶಿಕ್ಷಣ, ರಾಜಕೀಯ,ಸಾಮಾಜಿಕ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ಸಿಕ್ಕಿದೆ. ಪುರೋಹಿತಶಾಹಿ ವ್ಯವಸ್ಥೆಯಲ್ಲಿ ನಲುಗಿದ ಶೋಷಿತರು ಇಂದು ನಿರಾಳವಾಗಿದ್ದಾರೆ ಎಂದರೆ ಅದು ಸಂವಿಧಾನದ ಶಕ್ತಿ. ವಿಶೇಷವಾಗಿ ಮಹಿಳೆಯರು, ಕೃಷಿ ಮೊದಲಾದ ಕುಲಕಸುಬುಗಳಲ್ಲಿ ಶೇ.75ರಷ್ಟು ಶ್ರಮದಾನ ಮಾಡುತ್ತಿದ್ದರು. ಅವರಿಗೆ ಯಾವುದೇ ಕಷ್ಟ, ನೋವುಗಳನ್ನು ಹೇಳಿಕೊಳ್ಳುವ ಸ್ವತಂತ್ರವೂ ಇರಲಿಲ್ಲ. ಬ್ರಾಹ್ಮಣರ ಕುಟುಂಬಗಳಲ್ಲಿಯೂ ಸಹ ಮಹಿಳೆಯರು, ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯರಾದರೂ ಅವರು ಜೀವನವಿಡೀ ಸಂಪ್ರದಾಯದ ಹೆಸರಿನಲ್ಲಿ ಮಾನಸಿಕವಾಗಿ ನೊಂದುಕೊಂಡೇ ಬಾಳಬೇಕಿತ್ತು.
ಇಂತಹ ಅನಿಷ್ಟ ಪದ್ದತಿಗಳು ದೂರಾಗುವಂತೆ ಮಾಡಿದ್ದು, ನಮ್ಮ ಸಂವಿಧಾನ. ಅಂಬೇಡ್ಕರ್ ಮಹಾ ಮಾನವತಾವಾದಿಯಾಗಿದ್ದು, ಅವರ ದೃಷ್ಟಿಯಲ್ಲಿ ಮಾನವ ಹಕ್ಕುಗಳು ಹಾಗೂ ಸಮಾನತೆ ಎಲ್ಲರಿಗೂ ಸಿಗಬೇಕೆಂದು ಪ್ರತಿಪಾದಿಸಿದ್ದರಿಂದ ನಮ್ಮ ಸಂವಿಧಾನ ಅಚಲವಾಗಿದೆ. ಆದರೆ ಇಂತಹ ಸಂವಿಧಾನವನ್ನು ಬದಲಾವಣೆ ಮಾಡುವುದು, ಸಂಪ್ರದಾಯದ ಹೆಸರಿನಲ್ಲಿ ಶೋಷಣೆ ಮಾಡುತ್ತಿರುವ ಹುನ್ನಾರಗಳು ನಡೆಯುತ್ತಿರುವುದು ದುರಂತದ ಸಂಗತಿ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎ.ಬಿ.ಬಸವರಾಜು ಅವರು, ಡಾ.ಅಂಬೇಡ್ಕರ್ ಅವರು ಇಡಿ ಪ್ರಪಂಚದಾದ್ಯಂತ ಸಂಚರಿಸಿ ವಿವಿಧ ದೇಶಗಳ ಸಂವಿಧಾನವನ್ನು ಅಧ್ಯಯನ ಮಾಡಿ ಸರ್ವ ಶ್ರೇಷ್ಠ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಶಾಸಕಾಂಗ, ಕಾರ್ಯಾಂಗ, ಮತ್ತು ನ್ಯಾಯಾಂಗಗಳಲ್ಲಿ ಪ್ರತಿದಿನನಡೆಯುವ ಕಲಾಪಗಳು ಬೆಳವಣಿಗೆಗಳು ಸಂವಿಧಾನವನ್ನು ಅವಲಂಬಿಸಿ ನಡೆಯುತ್ತಿವೆ. ನಾನಿಂದು ನಿಮ್ಮ ಮುಂದೆ ಜಿಲ್ಲಾಧಿಕಾರಿಯಾಗಿ ನಿಂತು ಮಾತನಾಡುತ್ತಿದ್ದೇನೆ ಎಂದರೆ ಅದು ಬಾಬಾ ಸಾಹೇಬರು ಬರೆದುಕೊಟ್ಟ ಸಂವಿಧಾನವೆ ಮೂಲ ಕಾರಣ ಎಂದರು.
ಸಂವಿಧಾನದ ಮಹತ್ವ ಹಾಗೂ ಡಾ.ಬಾಬಾಸಾಹೇಬ್ ಅಂಬೇಡ್ಕರ್ ವಿಷಯದ ಕುರಿತು ಮಾತನಾಡಿದ ಸಹಾಯಕ ಪ್ರಾಧ್ಯಪಕರಾದ ನಸ್ರೀನ್ ತಾಜ್ ಅವರು ಮಾತನಾಡಿ, ಅಂಬೇಡ್ಕರ್ ಅವರು 64 ವಿಷಯಗಳಲ್ಲಿ ಅಪಾರವಾದ ಪಾಂಡಿತ್ಯವನ್ನು ಪಡೆದಿದ್ದರು. ಅವರು ಕೇವಲ ಶೋಷಿತ ಸಮುದಾಯಗಳ ವಿಮೋಚನೆಗಾಗಿ ಮಾತ್ರ ಶ್ರಮಿಸಲಿಲ್ಲ. ಭಾರತದ ಪ್ರತಿ ನಾಗರೀಕನಿಗೂ ಸಾಮಾಜಿಕ ನ್ಯಾಯಾ ಸಿಗಬೇಕುಎಂದು ಹೋರಾಟ ಮಾಡಿದರು. ಪ್ರಪಂಚದ 194 ರಾಷ್ಟ್ರಗಳು ಸಂವಿಧಾನವನ್ನ ಅಳವಡಿಸಿಕೊಂಡಿವೆ,
ಅದರಲ್ಲಿ ಭಾರತದ ಸಂವಿಧಾನವೇ ಮಹತ್ವವಾದುದು. ನಮ್ಮ ಸಂವಿಧಾನ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿರುವ ಹಾಗೂ ಪ್ರಪಂಚದಲ್ಲೇ ಅತಿ ದೊಡ್ಡ ಲಿಖಿತ ಸಂವಿಧಾನವಾಗಿದೆ. ಭಾರತ ಪಾಕಿಸ್ತಾನ ಒಂದು ದಿನದ ಅಂತರದಲ್ಲಿ ಸ್ವಾತಂತ್ರ್ಯ ಪಡೆದರೂ ಪಾಕಿಸ್ತಾನ ಈಗಾಗಲೇ ಮೂರು ಸಂವಿಧಾನವನ್ನು ಬದಲಾಯಿಸಿದರೆ ನೇಪಾಳ ಏಳು ಸಂವಿಧಾನಗಳನ್ನು ಬದಲಾಯಿಸಿದೆ.
ಆದರೆ ಬಾಬಾ ಸಾಹೇಬರು ಬರೆದುಕೊಟ್ಟ ಸಂವಿಧಾನ ಬದಲಾಗುವುದಿಲ್ಲ. ಏಕೆಂದರೆ ದೇಶದ ಸಂವಿಧಾನವನ್ನು ಆಯಾ ಕಾಲಘಟ್ಟಕ್ಕೆ ದೇಶದ ಪ್ರಜೆಗಳಿಗೆ ಅನುಕೂಲವಾಗುವ ರೀತಿಯಲ್ಲಿ ಮತ್ತು ಸಂವಿಧಾನದ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಡಿ.ವೀರಣ್ಣ, ಪಿ.ಎಂ.ಚಿನ್ನಸ್ವಾಮಿ, ಕಾರಹಳ್ಳಿ ಶ್ರೀನಿವಾಸ್ ಹಾಗೂ ಸಿ.ಎಚ್.ಸಿದ್ದಯ್ಯ ಅವರನ್ನು ಸಂವಿಧಾನ ಪರಿಚಾಲಕರು ಎಂದು ಸನ್ಮಾನಿಸಲಾಯಿತು.
ಸಂವಿಧಾನದ ಮಹತ್ವ, ಲಕ್ಷಣ ಹಾಗೂ ಮಾನವ ಹಕ್ಕುಗಳ ಕುರಿತು ಪ್ರಬಂಧ ಬರೆದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ರಾಜ್ಯ ಕಾರ್ಯದರ್ಶಿ ಈ.ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶೇಷಾದ್ರಿ, ಕಾರ್ಮಿಕ ಮುಖಂಡ ಪಿ.ಎ. ವೆಂಕಟೇಶ್, ರೈತ ಮುಖಂಡ ಆರ್. ಚಂದ್ರತೇಜಸ್ವಿ, ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವನಾಯಕ್, ಕರ್ನಾಟಕ ಛಲವಾದಿ ಮಹಾಸಭಾ ತಾಲ್ಲೂಕು ಅಧ್ಯಕ್ಷ ಎಸ್.ಯು ರಮೇಶ್, ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾಧ್ಯಕ್ಷ ತೂಬಗೆರೆ ಷರೀಫ್, ಸಂವಿಧಾನ ರಕ್ಷಣೆಗಾಗಿ ನಾಗರೀಕರ ವೇದಿಕೆ ಸಂಚಾಲಕ ರಾಜುಸಣ್ಣಕ್ಕಿ, ಕನ್ನಡ ಜಾಗೃತ ವೇದಿಕೆಯ ಶಶಿಧರ್, ದಲಿತ ಮುಖಂಡರಾದ ಗೂಳ್ಯ ಹನುಮಣ್ಣ, ನೇರಳೆಘಟ್ಟ ರಾಮು, ರಾಮಕೃಷ್ಣ, ಮಾಳವ ನಾರಾಯಣ್ ಮುಂತಾದವರು ಉಪಸ್ಥಿತರಿದ್ದರು.

