ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳನ್ನು ಆರ್ಥಿಕ ಇಲಾಖೆ ಅನುಮತಿ ಪಡೆದು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಹಣಮಂತ ನಿರಾಣಿ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಿಎಂ ಉತ್ತರಿಸಿದರು. ರಾಜ್ಯದಲ್ಲಿ ನಿಗಮ ಮಂಡಳಿಗಳು ಸೇರಿದಂತೆ ಸುಮಾರು 2,84,881 ಹುದ್ದೆಗಳು ಖಾಲಿಯಿದ್ದು, ಇವುಗಳನ್ನು ಶೀಘ್ರಗತಿಯಲ್ಲಿ ತುಂಬಲು ತೆಗೆದುಕೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡುವಂತೆ ನಿರಾಣಿ ಕೋರಿದ್ದರು.
ಸರ್ಕಾರದ ವಿವಿಧ ಇಲಾಖೆಗಳೂ ಸೇರಿದಂತೆ ರಾಜ್ಯದಲ್ಲಿ ಖಾಲಿ ಇದ್ದ ಒಟ್ಟು 2,84,881 ಹುದ್ದೆಗಳ ಪೈಕಿ ಗುತ್ತಿಗೆ ಹಾಗೂ ಹೊರಗುತ್ತಿಗೆ ಎರಡೂ ಸೇರಿ 96,844 ಹುದ್ದೆಗಳನ್ನು ಈಗಾಗಲೇ ಭರ್ತಿ ಮಾಡಲಾಗಿದೆ. ಇನ್ನುಳಿದ 1,88,037 ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡಲಾಗುವುದು. ಅದರಲ್ಲಿ ವಿವಿಧ ನಿಗಮ ಮಂಡಳಿಗಳಲ್ಲಿ 1,01,420 ಹುದ್ದೆಗಳು, ವಿಶ್ವವಿದ್ಯಾಲಯಗಳಲ್ಲಿ 14,677 ಹುದ್ದೆಗಳೂ ಸೇರಿವೆ. ಈಗಾಗಲೇ 24,300 ಹುದ್ದೆಗಳ ನೇಮಕಾತಿ ಪ್ರಕ್ರಿಯೆಗೆ ಆರ್ಥಿಕ ಇಲಾಖೆಯಿಂದ ಅನುಮತಿ ದೊರೆತಿದೆ. ಹೈದರಾಬಾದ್(ಕಲ್ಯಾಣ) ಕರ್ನಾಟಕಕ್ಕೆ 371 ಜೆ ಅಡಿ 32,132 ಹುದ್ದೆಗಳು ಭರ್ತಿಯಾಗಬೇಕಿದೆ. ಒಟ್ಟು 56,432 ಹುದ್ದೆಗಳ ಭರ್ತಿಗೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಒಳಮೀಸಲಾತಿಯ ಬಿಕ್ಕಟ್ಟಿನಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ವಿಳಂಬವುಂಟಾಗಿತ್ತು. ಈಗ ಈ ಸಮಸ್ಯೆಗೆ ಬಗೆಹರಿದಿದೆ. ಆರ್ಥಿಕ ಇಲಾಖೆಯ ಅನುಮತಿ ಪಡೆದು ಹಂತ-ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು ಎಂದು ತಿಳಿಸಿದರು.
ಹುದ್ದೆಗಳ ಭರ್ತಿಗೆ ಸರ್ಕಾರ ಬದ್ಧ: ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸರ್ಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಇದಕ್ಕಾಗಿ ನಮ್ಮದೇ ಆದ ಸಮಯ ನಿಗದಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಪರಿಷತ್‌ವಿಪಕ್ಷ ನಾಯಕ ನಾರಾಯಣಸ್ವಾಮಿ ಅವರಿಗೆ ಸಿಎಂ ಪ್ರತಿಕ್ರಿಯೆ ನೀಡಿದರು.
ಬಿಜೆಪಿಯ ಹಣಮಂತ ನಿರಾಣಿ ಅವರು ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಯವರು ಉತ್ತರಿಸಿದ ನಂತರ, ಡಿಸಿಎಂ ಅವರು ಮಾತನಾಡಿ ಸ್ಪಷ್ಟನೆ ನೀಡಿದರು.
ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಒಳಮೀಸಲಾತಿ ವಿಚಾರ ಬಾಕಿ ಇರುವ ಕಾರಣಕ್ಕೆ ಒಂದಷ್ಟು ಭರ್ತಿ ಕೆಲಸ ಬಾಕಿಯಿದೆ ಎಂದರು.
ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಗೆ ಚಿಂತನೆ: ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಅರಣ್ಯ ಹಾಗೂ ಪೊಲೀಸ್ ಇಲಾಖೆಗಳಲ್ಲಿ ಶೇ.3ರಷ್ಟು ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಿಎಂ ಉತ್ತರಿಸಿದರು. ರಾಜ್ಯದಲ್ಲಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ, ಕ್ರೀಡಾ ಸಾಧಕರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ, ಕ್ರೀಡಾ ಮೂಲಸೌಕರ್ಯ ವೃದ್ಧಿ ಹಾಗೂ ಕಬಡ್ಡಿ ಕ್ರೀಡೆಗೆ ಪ್ರೋತ್ಸಾಹ ನೀಡುವ ಬಗ್ಗೆ ಡಿಸೋಜಾ ಮಾಹಿತಿ ಕೋರಿದ್ದರು.
ರಾಜ್ಯ ಸರ್ಕಾರದಿಂದ ಒಲಿಂಪಿಕ್ಸ್, ಪ್ಯಾರಾಲಿಂಪಿಕ್ಸ್, ಕಾಮನ್ವೆಲ್ತ್, ಏಷ್ಯನ್ ಗೇಮ್ಸ್ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ 13 ಕ್ರೀಡಾಪಟುಗಳಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಪೊಲೀಸ್ ಇಲಾಖೆಯಲ್ಲಿ 70 ಕಾನ್ಸ್ಟೇಬಲ್ಗಳಿಗೆ ನೇರ ನೇಮಕಾತಿ ಹಾಗೂ 14 ಪಿಎಸ್ಐಗಳ ನೇಮಕಾತಿ ಆಗಿದೆ. ಅಲ್ಲದೇ, ಅರಣ್ಯ ಇಲಾಖೆಯಲ್ಲಿ ಶೇ.3, ಪೊಲೀಸ್ ಇಲಾಖೆಯಲ್ಲಿ ಶೇ.3 ಹಾಗೂ ವಿವಿಧ ಇಲಾಖೆಗಳಲ್ಲಿ ಶೇ.2ರಷ್ಟು ಮೀಸಲಾತಿ ನೀಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಲಾಗುವುದು. ಕಬಡ್ಡಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಸಿಎಂ ವಿವರಿಸಿದರು.

