ಚಂದ್ರವಳ್ಳಿ ನ್ಯೂಸ್, ಬಳ್ಳಾರಿ :
ವಿದ್ಯಾರ್ಥಿನಿಯೊಬ್ಬರು ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡು ಸಮಾಜ ವಿಜ್ಞಾನ ಪರೀಕ್ಷೆ ಬರೆಯುವ ಮೂಲಕ ಅಚ್ಚರಿ ಮೂಡಿಸಿರುವ ಪ್ರಸಂಗ ಬಳ್ಳಾರಿ ನಗರದ ಕುರವಳ್ಳಿ ತಿಮ್ಮಪ್ಪ ಮೆಮೋರಿಯಲ್ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ಜರುಗಿದೆ.
ಇದೀಗ ಸಾಮಾಜಿಕ ಜಾಲತಾಣ ಸೇರಿದಂತೆ ಅನೇಕ ಕಡೆ ಈ ವಿದ್ಯಾರ್ಥಿನಿ ಪರೀಕ್ಷೆ ಬರೆಯುತ್ತಿರುವ ವಿಡಿಯೋ ವೈರಲ್ ಆಗಿದೆ.
ವಿದ್ಯಾರ್ಥಿನಿ ಹಿಮಬಿಂದು ಈ ಕುರಿತು ಮಾತನಾಡಿ, ಚಿಕ್ಕ ವಯಸ್ಸಿನಿಂದಲೇ ಗಾಂಧಾರಿ ವಿದ್ಯೆ ಅಭ್ಯಾಸ ಮಾಡುತ್ತಿದ್ದೇನೆ. ಶಿಕ್ಷಕರು ಮತ್ತು ಪೋಷಕರ ಸಹಕಾರದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ಗಾಂಧಾರಿ ವಿದ್ಯೆಯ ಮೂಲಕ ಒಳಗಿನ ಮೂರನೇ ಕಣ್ಣಿನ ಶಕ್ತಿಯಿಂದ ಪರೀಕ್ಷೆ ಬರೆದಿದ್ದೇನೆ ಎಂದಿದ್ದಾರೆ. ವಿದ್ಯಾರ್ಥಿನಿಯ ಈ ಸಾಧನೆಗೆ ಪೋಷಕರು, ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಗಾಂಧಾರಿ ವಿದ್ಯೆಯ ಸಹಾಯದಿಂದ ಈ ವಿದ್ಯಾರ್ಥಿನಿ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಫೋಟೋಗಳನ್ನು ಕೂಡಾ ನಿಖರವಾಗಿ ಗುರುತಿಸುತ್ತಾಳೆ ಎಂದು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ, ಆಂಜನೇಯಸ್ವಾಮಿ, ಶ್ರೀ ಕನಕದಾಸರು ಹೀಗೆ ಅನೇಕ ಮಹನೀಯರ ಫೋಟೋಗಳನ್ನು ಗುರುತಿಸಲು ವಿದ್ಯಾರ್ಥಿನಿಗೆ ಕ್ಷಣ ಮಾತ್ರ ಸಮಯ ಸಾಕು. ಇಷ್ಟೇ ಅಲ್ಲದೇ ತಂತ್ರಜ್ಞಾನದ ವಿಷಯದಲ್ಲೂ ಕೂಡ ಹಿಮಬಿಂದು ಮುಂದು ಎಂದು ಪೋಷಕರು ತಿಳಿಸಿದ್ದಾರೆ.
ಕಣ್ಣು ಮುಚ್ಚಿಕೊಂಡು ಮೊಬೈಲ್‌ನಲ್ಲಿರುವ ಅಕ್ಷರಗಳನ್ನು ತಕ್ಷಣ ಹೇಳುತ್ತಾಳೆ. ಹನ್ನೊಂದು ವರ್ಷದವಳಿದ್ದಾಗಿನಿಂದಲೂ ಗಾಂಧಾರಿ ವಿದ್ಯೆ ಕರಗತ ಮಾಡಿಕೊಂಡಿರುವ ವಿದ್ಯಾರ್ಥಿನಿ ಎಂಟನೇ ತರಗತಿಯ ಎಲ್ಲಾ ಪರೀಕ್ಷೆಗಳನ್ನ ಕಣ್ಣಿಗೆ ಬಟ್ಟೆಕಟ್ಟಿಯೇ ಬರೆಯಲು ನಿರ್ಧಾರಿಸಿದ್ದಾಳೆ.
3ನೇ ಕಣ್ಣಿನಿಂದ ತಿಳಿಯುತ್ತೆ:
ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಾನು ಬರೆಯುವ ಅಭ್ಯಾಸವನ್ನು ಚಿಕ್ಕ ವಯಸ್ಸಿನಿಂದ ಮಾಡಿಕೊಂಡಿದ್ದೇನೆ. ಪರೀಕ್ಷೆ ಬರೆಯುವ ಮೊದಲು ಒಂದು ಗೌಪ್ಯವಾದ ಮಂತ್ರವನ್ನು ಹೇಳುತ್ತೇನೆ. ಅದನ್ನು ಯಾರಿಗೂ ನಾನು ಹೇಳುವುದಿಲ್ಲ. ಒಟ್ಟು ಹೀಗೆ 25 ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿದ್ದೇನೆ. ಈ ವಿದ್ಯೆಯನ್ನು ಗುರುಗಳು ಕಲಿಸಿದ್ದು, ಮೂರನೇ ಕಣ್ಣಿನಲ್ಲಿ ಎಲ್ಲವೂ ನನಗೆ ತಿಳಿಯುತ್ತದೆ. ಅದಕ್ಕಾಗಿ ಒಂದು ಪ್ರಾಣಾಯಾಮ ಹೇಳಿಕೊಟ್ಟಿದ್ದಾರೆ ಎಂದು ವಿದ್ಯಾರ್ಥಿನಿ ಹಿಮಬಿಂದು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ತಂದೆ ರಾಮಾಂಜನೇಯ ರೆಡ್ಡಿ ಮಾತನಾಡಿ ಒಂದನೇ ತರಗತಿಯಿಂದಲೇ ಹಿಮಬಿಂದು ಈ ಅಭ್ಯಾಸ ಮಾಡಿಕೊಂಡಿದ್ದಾಳೆ. ಆನ್‌ಲೈನ್ ಕ್ಲಾಸ್‌ನಲ್ಲಿ ಇದರ ತರಬೇತಿ ಪಡೆದಿದ್ದಾಳೆ. ಪ್ರತಿದಿನ ನಮ್ಮ ಮುಂದೆ ಇಂತಹ ಸಾಹಸಗಳನ್ನು ಅವಳು ಮಾಡುತ್ತಾಳೆ. ಮನೆಯಲ್ಲೂ ಕೂಡ ಇದನ್ನು ಕಲಿಯುತ್ತಾಳೆ. ಈ ಬಗ್ಗೆ ಅವಳ ಶಾಲೆಯಲ್ಲಿಯೂ ಕೂಡ ಮೆಚ್ಚುಗೆ ಇದೆ. ಎಲ್ಲ ಕಡೆ ಆಕೆ ಸಾಧನೆಯ ಬಗ್ಗೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ.
ಅವಕಾಶ ಇದೆಯಾ?
ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆಯುವ ಅವಕಾಶ ಇದೆಯಾ ಎನ್ನುವ ಪ್ರಶ್ನೆ ಮೂಡಿದೆ. ವಿದ್ಯಾರ್ಥಿನಿ ಹಿಮಬಿಂದು ಚಿಕ್ಕ ವಯಸ್ಸಿನಿಂದಲೇ ಗಾಂಧಾರಿ ವಿದ್ಯೆ ಕಲಿತುಕೊಂಡ ಕಾರಣ ಎಲ್ಲವನ್ನು ಕಣ್ಣು ಮುಚ್ಚಿಕೊಂಡೇ ಲೀಲಾಜಾಲವಾಗಿ ಹೇಳುತ್ತಾಳೆ. ಆಕೆಯ ಸಾಧನೆಗೆ ಅವರ ಶಿಕ್ಷಕರು ಹಾಗೂ ಪೋಷಕರೂ ಕೂಡ ಸಾಥ್ ನೀಡಿದ್ದಾರೆ.
ಈ ವಿದ್ಯಾರ್ಥಿನಿ 8ನೇ ತರಗತಿಯಲ್ಲಿ ಓದುತ್ತಿದ್ದು ಶಾಲಾ ಆಡಳಿಯ ಮಂಡಳಿ ಕಣ್ಣಿಗೆ ಬಟ್ಟೆಕಟ್ಟಿ ಪರೀಕ್ಷೆ ಬರೆಯಲು ಅನುಮತಿ ನೀಡಿದ್ದಾರೆ. ಆದರೆ ಎಸ್‌ಎಸ್‌ಎಲ್‌ಸಿ ಅಥವಾ ಪಿಯುಸಿಯಂತಹ ಬೋರ್ಡ್ ಪರೀಕ್ಷೆಗಳನ್ನು ಹೀಗೆ ಬರೆಯಲು ಅವಕಾಶ ಇರುವುದಿಲ್ಲ ಎನ್ನುವ ಮಾಹಿತಿಯನ್ನು ಶಿಕ್ಷಕರು ತಿಳಿಸಿದ್ದಾರೆ.

