ಚಂದ್ರವಳ್ಳಿ ನ್ಯೂಸ್, ದಾವಣಗೆರೆ :
ಜಿಲ್ಲೆಯ ರೆಸಾರ್ಟ್ ಒಂದರಲ್ಲಿ ನಡೆಯುತ್ತಿದ್ದ ರಿಸಪ್ಷನ್ನಲ್ಲಿ 67 ಲಕ್ಷ ಮೌಲ್ಯದ ಚಿನ್ನಾಭರಣ ಕದ್ದು ತಮ್ಮೂರಿಗೆ ಪರಾರಿಯಾಗಿದ್ದ ಮಧ್ಯಪ್ರದೇಶ ರಾಜ್ಯ ಮೂಲದ ಬ್ಯಾಂಡ್ ಬಾಜಾ ಗ್ಯಾಂಗ್ ಪೊಲೀಸರು ಚಿನ್ನಾಭರಣ ತಂದಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ಜರುಗಿದೆ.
ಚಿನ್ನಾಭರಣಗಳ ಕಳವು ಪ್ರಕರಣವನ್ನು ಬೆನ್ನತ್ತಿದ ದಾವಣಗೆರೆ ಪೊಲೀಸರು ಪ್ರಕರಣದ ಜಾಡು ಹಿಡಿದು ಮಧ್ಯಪ್ರದೇಶಕ್ಕೆ ತೆರಳಿ ಈ ಗ್ಯಾಂಗ್ನಿಂದ 51 ಲಕ್ಷ ಮೌಲ್ಯದ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ, ನವೆಂಬರ್ 14 ರಂದು ಕಳ್ಳತನಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.ಖಾಸಗಿ ರೆಸಾರ್ಟ್ವೊಂದರಲ್ಲಿ ಮದುವೆಯ ರಿಸಪ್ಷನ್ ನಡೆಯುತ್ತಿತ್ತು. ಈ ಸಂಭ್ರಮದ ವೇಳೆ ಮಗುವೊಂದು ಡ್ಯಾನ್ಸ್ ಮಾಡುತ್ತಿತ್ತು. ಆಗ ದೂರುದಾರರ ತಾಯಿ ಚಿನ್ನಾಭರಣ ಇರುವ ಬ್ಯಾಗ್ನ್ನು ನೆಲದ ಮೇಲಿಟ್ಟು ಚಪ್ಪಾಳೆ ತಟ್ಟಿ ನಂತರ ನೋಡಿದಾಗ ಅಲ್ಲಿ ಬ್ಯಾಗ್ ಇರಲಿಲ್ಲ.
ಇಡೀ ರೆಸಾರ್ಟ್ ಹುಡುಕಿದರೂ ಸುಳಿವು ಸಿಗಲಿಲ್ಲ. ಆಗ ನಾವು ಸಿಸಿಟಿವಿ, ಟೋಲ್ಗಳನ್ನು ಪರಿಶೀಲನೆ ನಡೆಸಿದೆವು. ನಂತರ ನಮ್ಮ ಸಿಬ್ಬಂದಿ ಮಧ್ಯಪ್ರದೇಶದ ಸಿಸೋಡಿಯಾ ಗ್ಯಾಂಗ್ ಕಳ್ಳತನ ಮಾಡಿದೆ ಅಂದುಕೊಂಡು ಅಲ್ಲಿಗೆ ಹೋದರು ಎಂದು ತಿಳಿಸಿದ್ದಾರೆ.
ನಮ್ಮ ಸಬ್ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸುಮಾರು 15 ದಿನ ಅಲ್ಲಿಯೇ ಬೀಡುಬಿಟ್ಟಿದ್ದರು. ನಂತರ ಅವರಿಗೆ ಇದು ಬ್ಯಾಂಡ್ ಬಾಜಾ ಗ್ಯಾಂಗ್ ಎಂಬುದು ಗೊತ್ತಾಗುತ್ತೆ. ಮಧ್ಯಪ್ರದೇಶದಲ್ಲಿನ ಹುಲಿಖೇಡ್, ಕೇಡಿಯಾ ಹಾಗೂ ಝಾನ್ಸಿಯಲ್ಲಿ ಇಂತವರು ಇದ್ದಾರೆ. ಇವರು ಕಾನೂನಿನಡಿ ಹೆಚ್ಚಿನ ಶಿಕ್ಷೆಯಾಗುವುದಿಲ್ಲ ಎಂದು ಕಳ್ಳತನಕ್ಕೆ ಅಪ್ರಾಪ್ತರನ್ನು ನೇಮಿಸಿಕೊಳ್ಳುತ್ತಾರೆ. ನಮ್ಮ ಗಮನ ಬೇರೆಡೆ ಹೋದಾಗ ಕಳ್ಳತನ ಮಾಡಿ ಅಲ್ಲಿಂದ ಪರಾರಿಯಾಗುತ್ತಾರೆ ಎಂದು ಎಸ್ಪಿ ಅವರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಪಚೋರಿ ತಾಲೂಕಿನ ಬುಡಾ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಇವರ ಊರು ಬರಲಿದೆ. ನಮ್ಮ ಸಿಬ್ಬಂದಿ ಅಲ್ಲಿಗೆ ತೆರಳಿ ಅವರ ಮನೆಯನ್ನು ರೈಡ್ ಮಾಡಿ 524 ಗ್ರಾಂ ಚಿನ್ನವನ್ನು ರಿಕವರಿ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಈ ಗ್ಯಾಂಗ್ ಇದೇ ರೀತಿ ದೇಶದಲ್ಲಿ ಎಲ್ಲೆಲ್ಲಿ ಶ್ರೀಮಂತರ ಮದುವೆ ಕಾರ್ಯಕ್ರಮ ನಡೆಯುತ್ತದೆಯೋ ಅಲ್ಲಿಗೆ ತೆರಳುತ್ತಾರೆ. ನಂತರ ಅಲ್ಲಿರುವ ಮಹಿಳೆಯರನ್ನು ಗಮನಿಸಿ ಅವರ ಗಮನ ಬೇರೆಡೆ ಹೋದಾಗ ಕದಿಯುತ್ತಾರೆ. ಅವರು ಬೇರೆಯವರಂತೆಯೇ ಮದುವೆ ಬಟ್ಟೆಯನ್ನು ಧರಿಸಿ ಹೋಗಿರುತ್ತಾರೆ. ಬೇರೆ ಯಾರಿಗೂ ಡೌಟ್ ಬರುವುದಿಲ್ಲ. ನಂತರ ಗಮನ ಡೈವರ್ಟ್ ಆದಾಗ ಅಲ್ಲಿಂದ ಕದ್ದು ಪರಾರಿಯಾಗುತ್ತಾರೆ ಎಂದು ಉಮಾ ಅವರು ತಿಳಿಸಿದರು.
ಕೆಲವೊಮ್ಮೆ ನಮ್ಮ ದಾರಿ ತಪ್ಪಿಸಲು ಅವರು ದಾರಿ ಬದಲಾಯಿಸುತ್ತಾರೆ. ತಕ್ಷಣವೇ ಅವರು ಹೋಗುವುದಿಲ್ಲ. ಏಳೆಂಟು ತಾಸುಗಳ ನಂತರ ಅವರು ಅಲ್ಲಿಂದ ಹೋಗುತ್ತಾರೆ. ಯಾವುದೇ ರೀತಿಯ ಸಾಕ್ಷಿ ಬಿಡುವುದಿಲ್ಲ. ಎಲ್ಲೂ ಕೂಡಾ ಟೋಲ್ಗಳನ್ನು ಬಳಸುವುದಿಲ್ಲ. ಇಷ್ಟೆಲ್ಲ ಕ್ಲಿಷ್ಟಕರ ಇದ್ದರೂ ಕೂಡಾ ನಮ್ಮ ತಂಡ 15 ದಿನ ಅಲ್ಲಿ ತೆರಳಿ ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ. ಹಾಗಾಗಿ, ಡಿಎಸ್ಪಿ ಬಸವರಾಜ್, ಇನ್ಸ್ಪೆಕ್ಟರ್ ಅಣ್ಣಯ್ಯ, ಸಿಬ್ಬಂದಿ ಪ್ರಭು ಅವರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

