ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಹೊರಟ್ಟಿ ಇರುವುದೇ ಹಾಗೆ…ಗೀರ್ ಹಸು ಹಾಲು ಸ್ವಾದದ ಗಮ್ಮತ್ತೇ ಬೇರೆ…!
ಹುಬ್ಬಳ್ಳಿಗೆ ಹೋದಾಗ ಹೊರಟ್ಟಿ ಅವರ ಮನೆಗೆ ಒಂದು ಭೇಟಿ ಕೊಡುವುದು ಮತ್ತು ಒಂದಷ್ಟು ಹೊತ್ತು ಮಾತನಾಡಿ, ಅವರ ಮನೆಯಲ್ಲಿ ಗೀರ್ ತಳಿಯ ಹಸುವಿನ ಹಾಲು ಕುಡಿದು ಬರುವುದು ರೂಢಿ.
ಹಾಗಾಗಿ ಸುಮ್ಮನೆ ಪೋನಾಯಿಸಿದೆ. ಇಷ್ಟೋತ್ತು ಮನೆಯಲ್ಲಿಯೇ ಇದ್ದೆ. ಈಗ ತೋಟಕ್ಕೆ ಬಂದಿದ್ದೇನೆ. ತಗಡೂರ್ ನೀವು ಸ್ವಲ್ಪ ಬಿಡುವು ಮಾಡಿಕೊಂಡು ನಮ್ಮ ತೋಟಕ್ಕೆ ಬಂದು ಬಿಡ್ರಿ ಎಂದರು.
ಹೇಗೂ ಅವರ ತೋಟವನ್ನು ಒಮ್ಮೆ ನೋಡಬೇಕು ಎಂದುಕೊಂಡಿದ್ದರೂ, ಪ್ರತಿ ಬಾರಿ ಅತ್ತ ಹೋದಾಗ ಏನಾದರೊಂದು ಕಾರಣಕ್ಕೆ ಸಮಯ ಕೂಡಿಬಂದಿರಲಿಲ್ಲ. ಸರಿ. ಈ ಬಾರಿ ಹೋಗಲೇಬೇಕು ಎಂದು ತೀರ್ಮಾನಿಸಿ ಅಲ್ಲಿಗೆ ಹೋಗಲು ಗಣಪತಿ ಗಂಗೊಳ್ಳಿ ಅವರ ಜೊತೆಗೂಡಿದೆ.
ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಎಂದು ಹೆಸರಿದ್ದರೂ, ಅವರಿಗೆ ಕರೆಯುವುದು ಹೊರಟ್ಟಿ ಎಂದು. ಹೆಚ್ಚೆಂದರೆ ಬಸವರಾಜ ಹೊರಟ್ಟಿ ಎನ್ನುತ್ತಾರೆ ಅಷ್ಟೇ. ಮಧ್ಯದಲ್ಲಿರುವ ಶಿವಲಿಂಗಪ್ಪ ಹೆಸರು ಬರೀ ಬೋರ್ಡ್‌ಗೆ ಸೀಮಿತವಾಗಿಬಿಟ್ಟಿದೆ.
ನನಗೆ ಈ ಹೆಸರು ಯಾಕೆ ಇಷ್ಟ ಅಂದರೆ, ಅದರಲ್ಲಿ ನನ್ನ ಒಡಹುಟ್ಟಿದ ಇಬ್ಬರ ಸಹೋದರರ ಹೆಸರು ಸೇರಿಕೊಂಡಿದೆ. ನನ್ನ ಹಿರಿಯ ಸಹೋದರರಾದ ಬಸವರಾಜ ಮತ್ತು ಶಿವಲಿಂಗಪ್ಪ ಹೆಸರುಗಳು ಕ್ರಮವಾಗಿ ಸೇರಿಕೊಂಡಿರುವುದು ವಿಶೇಷ. ಈ ಬಗ್ಗೆ ನಾನು ಅವರಲ್ಲಿ ಆಗಾಗ್ಗೆ ತಮಾಷೆ ಮಾಡಿ ರೇಗಿಸಿದ್ದು ಇದೆ.
ಮೇಲ್ಮನೆಯಲ್ಲಿ ದಾಖಲೆಯ ಅರ್ಧ ದಶಕಗಳಷ್ಡು ಅನುಭವ ಹೊಂದಿರುವ ಹೊರಟ್ಟಿ ಅವರು ಅತಿ ಹೆಚ್ಚು 8 ಬಾರಿ ಆಯ್ಕೆಯಾಗಿ ಗಿನ್ನೀಸ್ ದಾಖಲೆ ಬರೆದವರು.
ಉತ್ತರ ಕರ್ನಾಟಕ ಭಾಗದ ಗ್ರಾಮೀಣ ಸೊಗಡಿನ ಭಾಷೆಯನ್ನು ಇಂದಿಗೂ ಸಭಾಪತಿ ಪೀಠದಲ್ಲಿಯೂ ಬಳಸುತ್ತಾರೆ.
ಏ…ದನ ಕಾಯೋನೆ… ಸುಮ್ನೆ ಕೂತ್ಕೊ ಎಂದು ಸದನದಲ್ಲಿ ಗದರಿದರೂ ಯಾವ ಸದಸ್ಯರು ಎದುರಾಡುವುದಿಲ್ಲ. ಅಷ್ಟೇ ಗೌರವ ಕೊಟ್ಟು ಅವರ ಬೈಗುಳ ಕೇಳಿಸಿಕೊಳ್ಳುತ್ತಾರೆ.
ಬೇರೆ ಯಾರಾದರೂ ಈ ಮಾತುಗಳನ್ನು ಬಳಸಿದ್ದರೆ ಸದನವೇ ರಣರಗವಾಗಿ ಬಿಡುತಿತ್ತು. ಇದು ಹೊರಟ್ಟಿ ಅವರು ಸಾರ್ವಜನಿಕ ಜೀವನದಲ್ಲಿ ಅಷ್ಟೇ ಅಲ್ಲ, ಸದನದಲ್ಲಿ ಗಳಿಸಿರುವ ವಿಶ್ವಾಸರ್ಹತೆ ಕೂಡ. ಪಕ್ಷಾತೀತವಾಗಿ ಸದನ ನಡೆಸುವುದರಲ್ಲಿ ಎತ್ತಿದ ಕೈ. ಹೊರಟ್ಟಿ ಸದನಕ್ಕೆ ಅಷ್ಟೇ ಅಲ್ಲ. ನಾಡಿನ ಆಸ್ತಿ.
ಹೊರಟ್ಟಿ ಅವರ ಜೊತೆಯಲ್ಲಿ ಹಲವಾರು ಬಾರಿ ವೇದಿಕೆ ಹಂಚಿಕೊಂಡಿದ್ದೇನೆ. ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘದ ಹಲವಾರು ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬಂದಿದ್ದಾರೆ. ಓಮಾನ್, ಬಾಂಬೆ, ಕೇರಳ ಸೇರಿದಂತೆ ಹಲವು ಕಡೆಯಲ್ಲಿ ಒಟ್ಟಾಗಿ ಹೋಗಿ ಬಂದಿದ್ದೇವೆ.
ಕಳೆದ ಅವಧಿಯಲ್ಲಿ ಕೆಯುಡಬ್ಲೂೃಜೆ ರಾಜ್ಯ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ನಮಗೆಲ್ಲ ಪ್ರಮಾಣ ವಚನ ಬೋದಿಸಿದ್ದು ಕೂಡ ಅವರೇ ಎನ್ನುವುದು ವಿಶೇಷ.
ಹೊರಟ್ಟಿ ಅವರು, ರಾಜಕಾರಿಣಿಯಾಗಿ ಎಲ್ಲರಿಗೂ ಚಿರಪರಿಚಿತ. ಆದರೆ ಅವರು ಕೃಷಿಕರಾಗಿ ಗುರುತುಸಿಕೊಂಡಿದ್ದು ಕಡಿಮೆ. ನಿಜ ಹೇಳಬೇಕು ಎಂದರೆ, ಅವರು ಕೃಷಿಕರಾಗಿಯೂ ಸೈ ಅನ್ನಿಸಿಕೊಂಡರು. ಮುನ್ನೂರಕ್ಕೂ ಹೆಚ್ಚು ಹಸುಗಳನ್ನು ಸಾಕಿ ಹೈನುಗಾರಿಕೆಯಲ್ಲಿಯೂ ಯಶಸ್ವಿ ಹೆಜ್ಜೆ ಇಟ್ಟವರು. ಹಾಗಾಗಿಯೇ ಅವರ ತೋಟ ನೋಡುವ ಕುತೂಹಲ.

ಹುಬ್ಬಳ್ಳಿಯಿಂದ ಹದಿನೈದು ಕಿ.ಮೀ. ಕ್ರಮಿಸಿದರೆ ನಮ್ಮ ವಿಆರ್‌ಎಲ್ ಸಮೂಹ ಸಂಸ್ಥೆಗಳ ಕಚೇರಿ ಇರುವ ವರೂರು ಸಮೀಪದಲ್ಲಿಯೇ ಹೊರಟ್ಟಿ ಅವರ ತೋಟವಿದೆ. ಎದುರುಗಡೆ ಜೈನ್ ಸಮುದಾಯದ ಮಂದಿರ ಮತ್ತು ಸಂಸ್ಥೆಗಳಿವೆ. ಅಲ್ಲಿಗೆ ಸಮೀಪ ಇವರ ತೋಟ.
ಹೊರಟ್ಟಿ ಅವರ ತೋಟ ತಲುಪಿಕೊಂಡಾಗ ಸೂರ್ಯ ಪಡುವಣಕ್ಕೆ ಜಾರುತ್ತಿದ್ದ. ಸಂಜೆ ರಂಗು, ಮೋಡದಲ್ಲಿ ಮೇಳೈಸುತಿತ್ತು. ಅದೆಲ್ಲವನ್ನೂ ಒಂದಷ್ಟು ಕ್ಲಿಕ್ಕಿಸಿದೆ.
ತೋಟದೊಳಗೊಂದು ಮನೆ. ಅಲ್ಲಿ ಹೊರಗಡೆ ಹಜಾರದಲ್ಲಿ ಮಾತನಾಡುತ್ತಾ ಕುಳಿತಿದ್ದ ಹೊರಟ್ಟಿ ಅವರನ್ನು ಮಾತನಾಡಿಸಿ ತೋಟ ನೋಡಲು ಹೊರಟೆವು. ಮಾವಿನಿಂದ ಹಿಡಿದು ಸಪೋಟ ತನಕ ಎಲ್ಲವನ್ನೂ ಬೆಳೆದಿದ್ದಾರೆ. ನಿಜ. ಅಲ್ಲಿ ಏನುಂಟು ಏನಿಲ್ಲ…? ಸುಮಾರು 33 ಎಕರೆಯಲ್ಲಿ ಹರಡಿಕೊಂಡಿರುವ ತೋಟವದು. ಸುತ್ತಾಡಿಕೊಂಡು ಬರುವ ಹೊತ್ತಿಗೆ ಸಾಕುಸಾಕಾಗಿತ್ತು.
ನನಗೆ ಇನ್ನೂ ವಿಶೇಷ ಅನ್ನಿಸಿದ್ದು ಅವರು ಅಲ್ಲಿ ಸಾಕಿರುವ ಹಸುಗಳು. ನಾನೇನೋ ಹತ್ತಿಪ್ಪತ್ತು ಹಸುಗಳು ಇರಬಹುದು ಎಂದು ಎಣಿಸಿದ್ದೆ. ಅಲ್ಲಿ ನೂರಕ್ಕೂ ಹೆಚ್ಚು ಹಸುಗಳಿವೆ. ಕೊಟ್ಟಿಗೆ ಕೂಡ ವಿಭಿನ್ನ.
ಹಸುಗಳಿಗೆ ಮೇವು ಹಾಕುವುದಕ್ಕೆ, ಸಗಣಿ ಹಾಕಿದರೆ ಆ ತೊಪ್ಪೆ ತೆಗೆಯಲು, ಗಂಜಲ ಸಲೀಸಾಗಿ ಹರಿದು ಒಂದೆಡೆ ಸೇರುವುದಕ್ಕೆ ಎಲ್ಲವೂ ವ್ಯವಸ್ಥೆ ಇದೆ. ಕೊಟ್ಟಿಗೆಗಳನ್ನು ಅಷ್ಟು ಚೆಂದವಾಗಿ ನಿಭಾಯಿಸಿದ್ದಾರೆ. ಎಲ್ಲವೂ ಇವತ್ತಿನ ಕಾಲಘಟ್ಟಕ್ಕೆ ತಕ್ಕ ಹಾಗೆ ಇದೆ. ಗೀರ್ ತಳಿಯಿಂದ ಹಿಡಿದು ಅಲ್ಲಿ ನಾನಾ ಬಗೆಯ ಹಸುಗಳನ್ನು ಸಾಕಿದ್ದಾರೆ.
ಆಳು ಕಾಳು ಸಮಸ್ಯೆ ಎಂದು 300 ಇದ್ದ ಹಸುಗಳ ಸಂಖ್ಯೆಯನ್ನು ಈಗ 100ಕ್ಕೆ ಇಳಿಸಿಕೊಂಡಿದ್ದಾರೆ. ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಇರುವ ಒಂದಷ್ಟು ಜಾಗವನ್ನು ಕಮರ್ಶಿಯಲ್ ಮಾಡಿಕೊಂಡಿದ್ದಾರೆ.
ಹೊರಟ್ಟಿ ಅವರ ಪುಟ್ಟ ಪ್ರಪಂಚದೊಳಗೊಂದು ಸುತ್ತು ಹಾಕಿ ಸಭಾಪತಿ ಹೊರಟ್ಟಿ ಅವರು ಕುಳಿತಿದ್ದ ಹಜಾರಕ್ಕೆ ಬಂದಾಗ, ನಮಗಾಗಿ ಮಂಡಕ್ಕಿ ಮಿರ್ಚಿ ಸಿದ್ಧವಾಗಿತ್ತು. ಹಾಗೆಯೇ ನಮ್ಮ ಚರ್ಚೆ, ರಾಜಕೀಯ ಕಡೆಗೆ ಹೊರಳಿತು.
ಲೇಖನ-ಶಿವಾನಂದ ತಗಡೂರು, ಚಿಂತಕರು, ಬೆಂಗಳೂರು.

