ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ಕಳೆದ ಹಲವಾರು ವರ್ಷಗಳಿಂದ ಅಪ್ರಾಪ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಅಪ್ರಾಪ್ತ ಬಾಲಕಿಯರು, ಯುವತಿಯರ ಮೇಲೆ ದೌರ್ಜನ್ಯ ನಡೆಯುತ್ತಿರುವುದು ನೋವಿನ ಸಂಗತಿ. ಇದನ್ನು ಸಂಪೂರ್ಣವಾಗಿ ಬೇರುಸಹಿತ ಕಿತ್ತುಹಾಕಲು ಪೊಲೀಸ್, ನ್ಯಾಯಾಂಗ ಇಲಾಖೆಯೊಂದಿಗೆ ಎಲ್ಲರೂ ಕೈಜೋಡಿಸಬೇಕಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ್ ತಿಳಿಸಿದರು.
ಅವರು, ಶನಿವಾರ ಬಾಪೂಜಿ ಸಂಯುಕ್ತಪದವಿಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪೋಕ್ಸೋ ಕಾಯ್ದೆ ಪ್ರಬಂಧ ಸ್ಪರ್ಧೆಯಲ್ಲಿ ಭಾಗವಹಿಸಿದ ಸುಮಾರು ೨೧೦ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಿಸಿ ಮಾತನಾಡಿದರು. ವಿಶೇಷವಾಗಿ ವಿದ್ಯಾರ್ಥಿನಿಯರಲ್ಲಿ ಹೆಚ್ಚು ಜಾಗೃತಿ ಮೂಡಿಸಬೇಕಿದೆ. ಈ ಪ್ರಬಂಧಸ್ಪರ್ಧೆ ವಿದ್ಯಾರ್ಥಿನಿಯರಲ್ಲಿ ಆತ್ಮಸ್ಥೈರ್ಯ ತುಂಬಲಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ಷೇತ್ರಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್, ಪ್ರಬಂಧ ಸ್ಪರ್ಧೆಯಲ್ಲಿ ನಿರೀಕ್ಷೆಗೂ ಮೀರಿ ಹೆಚ್ಚಿನ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಭಾಗವಹಿಸಿದ ೧೦೩ ಶಾಲೆಯ ೨೧೦ ವಿದ್ಯಾರ್ಥಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಾಗಿದೆ. ಪ್ರಬಂಧಸ್ಪರ್ಧೆಯ ಫಲಿತಾಂಶವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪ್ರಥಮ, ದ್ವಿತೀಯ ಶ್ರೇಣಿ ಪಡೆದವರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗುತ್ತಾರೆ ಎಂದರು.
ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಆರ್.ಹೇಮಾ ಮಾತನಾಡಿ, ಸರ್ಕಾರ ಕಾನೂನನ್ನು ರೂಪಿಸಿ ಅಪ್ರಾಪ್ತರನ್ನು ರಕ್ಷಿಸಲು ಮುಂದಾಗಿದ್ದರೂ ನಿರೀಕ್ಷಿತಮಟ್ಟದಲ್ಲಿ ಕಾನೂನು ಜಾರಿಯಾಗುತ್ತಿಲ್ಲ. ಇದಕ್ಕೆ ಪ್ರಮುಖಕಾರಣ ಅಪ್ರಾಪ್ತರಲ್ಲಿ ಅವಮಾನವಾಗುತ್ತದೆ ಎಂಬ ಆತಂಕ ದೂರವಾಗಿಲ್ಲ. ಇದರ ಪ್ರಯೋಜವನ್ನು ಪಡೆಯುವ ದುಷ್ಕರ್ಮಿಗಳು ಮತ್ತೆ ಕೃತ್ಯವೆಸಗುತ್ತಾರೆ. ಆದ್ದರಿಂದ ಈ ಕಾಯ್ದೆ ಪರಿಣಾಮವಾಗಿ ಜಾರಿಯಾದರೆ ಮಾತ್ರ ಅಪ್ರಾಪ್ತರು ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಪಿಎಸ್‌ಐ ಈರೇಶ್, ವಕೀಲರಾದ ಕುರುಡಿಹಳ್ಳಿಶ್ರೀನಿವಾಸ್, ಓಂಕಾರಪ್ಪ, ಟಿ.ಬಿ.ಬೋರಯ್ಯ, ಜಿ.ಒ.ಸುಮಲತ, ಡಿ.ಶಿಲ್ಪ, ತೇಜಸ್ವಿನಿ, ನಾಗರತ್ನ, ಇಸಿಒ ಲಕ್ಷ್ಮಿಕಾಂತರೆಡ್ಡಿ, ಶಿವಪ್ಪ, ಸಿಆರ್‌ಪಿಗಳಾದ ಡಿ.ಮಹಂತೇಶ್, ಮೂಡ್ಲಪ್ಪ, ಕೆಂಚವೀರನಹಳ್ಳಿ ಎನ್.ಮಲ್ಲೇಶ್, ಸುರೇಶ್.ಸಿ.ವಿ.ತಿಪ್ಪೇಸ್ವಾಮಿ, ವಿಷ್ಣುವರ್ಧನ, ಈಶ್ವರಪ್ಪ ಮುಂತಾದವರು ಭಾಗವಹಿಸಿದ್ದರು.

