ಜಿಕೆವಿಕೆ ವತಿಯಿಂದ ಅಡಿಕೆ ತೋಟಗಳಲ್ಲಿ ಸುಳಿ ತಿಗಣೆ ಬಾಧೆಯ ಪ್ರಾತ್ಯಕ್ಷಿಕೆ 

News Desk

 ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹೋಬಳಿ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರ,ದಿಂದ  ಗೊಲ್ಲಹಳ್ಳಿ ಗ್ರಾಮದಲ್ಲಿ  ಅಡಿಕೆಯಲ್ಲಿ ಎಲೆ ಚುಕ್ಕೆ ಮತ್ತು ಸುಳಿ ತಿಗಣೆ ನಿರ್ವಹಣೆ ಕುರಿತು ಮುಂಚೂಣಿ ಪ್ರಾತ್ಯಕ್ಷಿಕೆಯನ್ನು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

 ಈ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವವನ್ನು ಗೊಲ್ಲಹಳ್ಳಿಯ ರೈತರಾದ ಪವನ್ ಕುಮಾರ್‌ರವರ ಕೃಷಿ ಕ್ಷೇತ್ರದಲ್ಲಿ ನಡೆಸಲಾಯಿತು. 

- Advertisement - 

ಕೇಂದ್ರದ ಜೇನು ಕೃಷಿ ಪ್ರಾಧ್ಯಾಪಕ ಡಾ. ಈಶ್ವರಪ್ಪ ಮಾತನಾಡಿ, ಅಡಿಕೆ ತೋಟಗಳಲ್ಲಿ ಸುಳಿ ತಿಗಣೆ ಬಾಧೆಯು ತೀವ್ರವಾಗಿ ಕಾಣಿಸಿಕೊಳ್ಳುತ್ತಿದ್ದು, ಇದರಿಂದ ಅಡಿಕೆ ಗಿಡಗಳ ಬೆಳವಣಿಗೆ ಕುಂಠಿತವಾಗಿರುವುದು ಕಂಡು ಬಂದಿರುತ್ತದೆ. ಇದರ ನಿರ್ವಹಣೆಗಾಗಿ ಥಯಾಮೇಥಾಕ್ಸಮ್ 25 25 ಗ್ರಾಂ ಹರಳುಗಳನ್ನು 100 ಲೀಟರ್ ನೀರಿನೊಂದಿಗೆ ಬೆರೆಸಿ ಸುಳಿಯ ಸಂದುಗಳಿಗೆ ತಾಕುವಂತೆ ಸಿಂಪರಣೆ ಮಾಡುವುದು ಹಾಗೂ 20 ದಿನಗಳ ನಂತರ ಅಝಾಡಿರಾಕ್ಟಿನ್ (ಬೇವಿನ ಎಣ್ಣೆ) 10000 ಪಿಪಿಎಂ ಯನ್ನು ನೀರಿನೊಂದಿಗೆ ಮಿಶ್ರಣಮಾಡಿ ಸಿಂಪರಣೆ ಮಾಡಿದ್ದರಿಂದ ಈ ಕೀಟದ ಹಾವಳಿಯು ಪರಿಣಾಮ ಕಾರಿಯಾಗಿ ನಿಯಂತ್ರಣಗೊಂಡಿದೆಯೆಂದು ವಿವರಿಸಿದರು.

 ಸಸ್ಯ ಸಂರಕ್ಷಣಾ ವಿಷಯದ ಪ್ರಾಧ್ಯಾಪಕಿ ಡಾ.ಎಸ್‌.ಸುಪ್ರಿಯಾ ಮಾತನಾಡಿ, ಅಡಿಕೆ ಬೆಳೆಯಲ್ಲಿ ಎಲೆ ಚುಕ್ಕೆ ರೋಗದ ಬಾಧೆಯು ಕಂಡು ಬಂದಿದ್ದು, ಈ ರೋಗವು ಪ್ರಾರಂಭಿಕ ಹಂತದಲ್ಲಿ ಗರಿಗಳು ಹಾಗೂ ಕಾಯಿಗಳ ಮೇಲೆ ಚಿಕ್ಕದಾದ ಕಂದು ಬಣ್ಣದ ಚುಕ್ಕೆಗಳು ಕಾಣಿಸಿಕೊಂಡು ಕ್ರಮೇಣ ಈ ಚುಕ್ಕೆಗಳ ಗಾತ್ರ ಜಾಸ್ತಿಯಾಗಿ ಬಾಧೆಗೊಳಗಾದ ಗರಿಗಳು ಹಳದಿ ಬಣ್ಣಕ್ಕೆ ತಿರುಗುವುದರಿಂದ ಅಡಿಕೆ ಗಿಡಗಳ ಬೆಳವಣಿಗೆ ಹಾಗೂ ಕಾಯಿಗಳ ಇಳುವರಿಯು ಕುಂಠಿತವಾಗಿರುವುದು ಕಂಡು ಬಂದಿತ್ತು. ಈ ರೋಗದ ನಿರ್ವಹಣೆಗಾಗಿ ಕೈಗೊಂಡ ಗಣನೀಯ ಕ್ರಮಗಳಿಂದ ರೋಗ ನಿಯಂತ್ರಣಕ್ಕೆ ಬಂದಿರುತ್ತದೆ ಎಂದು ತಿಳಿಸಿದರು. 

- Advertisement - 

ಕೇಂದ್ರದ ಕೃಷಿ ವಿಸ್ತರಣಾ ವಿಜ್ಞಾನಿ ಡಾ. ವೈ.ಎಂ. ಗೋಪಾಲ್, ಕೇಂದ್ರದ ಕಾರ್ಯ ಚಟುವಟಿಕೆಗಳ ಬಗ್ಗೆ ವಿವರಿಸುತ್ತಾ, ಕೃಷಿ ವಿಜ್ಞಾನ ಕೇಂದ್ರದಲ್ಲಿ ದೊರೆಯುವ ತಾಂತ್ರಿಕ ಮಾಹಿತಿಗಳನ್ನು ಬಳಸಿ, ರೈತರು ವೈಜ್ಞಾನಿಕವಾಗಿ ಕೃಷಿ ಮಾಡುವ ಬಗ್ಗೆ ತಿಳಿಸಿದರು. 

ರೈತ ಪವನ್‌ಕುಮಾರ್‌, ಪ್ರಾತ್ಯಕ್ಷಿಕೆಯಿಂದ ಸುಳಿ ತಿಗಣೆ ಬಾಧೆಯು ಹತೋಟಿಗೆ ಬಂದಿದೆ ಎಂದು ತಮ್ಮ ಅಭಿಪ್ರಾಯವನ್ನು ಉಳಿದ ರೈತರೊಂದಿಗೆ ಹಂಚಿಕೊಂಡರು. ಕ್ಷೇತ್ರೋತ್ಸವದಲ್ಲಿ ಗೊಲ್ಲಹಳ್ಳಿ ಮತ್ತು ಸುತ್ತಮುತ್ತಲಿನ ರೈತರು ಭಾಗವಹಿಸಿ ಮಾಹಿತಿ ಪಡೆದರು.

Share This Article
error: Content is protected !!
";