ಚಂದ್ರವಳ್ಳಿ ನ್ಯೂಸ್, ತುಮಕೂರು:
ಇಂದಿನ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿಗಳ ಪರಿಚಯದಿಂದ ಸಾಕಷ್ಟು ಅನುಭವಗಳು, ಉತ್ತಮ ಸಂಪರ್ಕ ಹಾಗೂ ಉದ್ಯೋಗಾವಕಾಶಗಳ ಲಭ್ಯತೆ ಹೆಚ್ಚಾಗಿರುತ್ತದೆ ಎಂದು ಸಾಹೇ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ ಅಶೋಕ್ ಮೆಹ್ತ ಅಭಿಪ್ರಾಯ ಪಟ್ಟರು.
ನಗರದ ಶ್ರೀ ಸಿದ್ಧಾರ್ಥ ತಾಂತ್ರಿಕ ಮಹಾವಿದ್ಯಾಲಯದ ಆವರಣದ ಚಾಣುಕ್ಯ ಬ್ಲಾಕ್ ಲ್ಲಿ ನಡೆದ ಹಳೇ ವಿದ್ಯಾರ್ಥಿಗಳ ಸಮಾಗಮ ಕೂಟ ಸೇತುಬಂದ-೨೦೨೫ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳು ಪರಿಚಯವನ್ನು ಇಂದಿನ ವಿದ್ಯಾರ್ಥಿಗಳು ಮಾಡಿಕೊಳ್ಳಿ, ಅವರ ಸಂಪರ್ಕವನ್ನು ನಿರಂತರವಾಗಿ ಇಟ್ಟುಕೊಳ್ಳಿ ಇವರೊಂದಿಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳಿ ಈ ಮೂಲಕ ಕಾಲೇಜಿನ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮವಾದ ಅವಕಾಶಗಳು ದೊರೆಯುತ್ತದೆ. ಹಳೇ ವಿದ್ಯಾರ್ಥಿಗಳು ಕಾಲೇಜಿನೊಂದಿಗೆ ಯಾವಾಗಲೂ ನಿಕಟ ಸಂಪರ್ಕವನ್ನು ಹೊಂದುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಉನ್ನತಿಗೆ ಸಹಕರಿಸುತ್ತಿರಬೇಕು ಎಂದು ತಿಳಿಸಿದರು.
ಎಸ್ ಎಸ್ ಎಸ್ ಐಟಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ ಎಸ್ ರವಿಪ್ರಾಕಾಶ್ ಮಾತನಾಡಿ ಹಳೇ ವಿದ್ಯಾರ್ಥಿಗಳು ಕಾಲೇಜಿನ ರಾಯಭಾರಿಗಳಿದ್ದ ಹಾಗೆ ಹಳೇ ವಿದ್ಯಾರ್ಥಿಗಳು ವೃತ್ತಿ ಜೀವನದಲ್ಲಿ ಎತ್ತರಕ್ಕೆ ಏರುತ್ತಿದ್ದರೆ ಕಾಲೇಜಿಗೆ ಹೆಮ್ಮೆ. ಹಳೇ ವಿದ್ಯಾರ್ಥಿಗಳಿಗೂ ಇಂದಿನ ವಿದ್ಯಾರ್ಥಿಗಳಿಗೆ ಉತ್ತಮ ಸ್ನೇಹ ಸಂಬಂಧ ಈ ಸೇತು ಬಂಧ ಕಾರ್ಯಕ್ರಮದ ಮೂಲಕ ಉಂಟಾಗುತ್ತದೆ. ಹಳೇ ವಿದ್ಯಾರ್ಥಿಗಳ ಸಂಪರ್ಕದಿಂದ ವಿದ್ಯಾರ್ಥಿಗಳಿಗೆ ತಮ್ಮ ಭವಿಷ್ಯದ ಜೀವನಕ್ಕೆ ಅವಕಾಶಗಳ ಬಾಗಿಲು ತೆರೆದಂತಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ ಅನುಭವಗಳನ್ನು ಅವರ ಸಂಪರ್ಕವನ್ನು ಪಡೆದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಹಳೇ ವಿದ್ಯಾರ್ಥಿ ಹಾಗೂ ಕೆಪಿಎಂಜಿ ಕಂಪನಿಯ ಪಾರ್ಟ್‌ನರ್ ಕನ್‌ಸಲ್‌ಟಿಂಗ್ ಆದ ಸದಾಶಿವ ಹೆಗ್ಗಡೆ ಮಾತನಾಡಿ ಸಾಧನೆ ಶ್ರಮದಿಂದ ಮಾತ್ರ ಸಾಧ್ಯವಾಗುತ್ತದೆ. ಸಮಯ ಬೇಗ ಸರಿದುಹೋಗುತ್ತದೆ ಈ ಸಮಯವನ್ನು ವ್ಯರ್ಥಮಾಡದೆ ವಿದ್ಯಾರ್ಥಿಗಳು ಸರಿಯಾಗಿ ಬಳಸಿಕೊಳ್ಳಬೇಕು. ವಿದ್ಯಾರ್ಥಿಗಳು ವೃತ್ತಿಭೂಮಿಗೆ ಕಾಲಿಡುವ ಮುನ್ನ ಅಗತ್ಯವಿರುವ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು, ನಿಮ್ಮ ಮೇಲೆ ನಿಮಗೆ ವಿಶ್ವಾಸವಿರಲಿ, ನೀವು ಏನು ಮಾಡುತ್ತೀರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತೀರ ಎಂಬುದರ ಮೇಲೆ ನಿಮ್ಮ ಭವಿಷ್ಯ ನಿರ್ಧಾರವಾಗಿರುತ್ತದೆ, ವಿದ್ಯಾರ್ಥಿಗಳು ಪ್ರಪಂಚದೊಂದಿಗೆ ತೆರೆದುಕೊಳ್ಳಬೇಕು, ನಿಮ್ಮ ಸಂಪರ್ಕಗಳನ್ನು ಹೆಚ್ಚಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಹಳೇ ವಿದ್ಯಾರ್ಥಿ ಹಾಗೂ ನೋಕಿಯಾ ಕಂಪನಿಯ ಟಿಇಸಿ ಮ್ಯಾನೇಜರ್ ಆದ ಸಹನಾ ಮಾತನಾಡಿ ಕಾರ್ಪೊರೇಟ್ ಕಂಪನಿಗಳಲ್ಲಿ ಹೊಸ ಹೊಸ ಅವಕಾಶಗಳಿವೆ, ಈ ಅವಕಾಶಗಳನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು, ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉದ್ದಿಮೆಗಳನ್ನು ಆರಂಭಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ನುಡಿಗಳನ್ನಾಡಿದರು.
ಕಾರ್ಯಕ್ರಮದಲ್ಲಿ ಹಳೇ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪ್ರೋತ್ಸಾಯಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ಎಸ್ ಐಟಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ವೈ.ಎಂ ರೆಡ್ಡಿ, ಡಾ.ವೀರಯ್ಯ, ಅಕಾಡೆಮಿಕ್ ಡೀನ್ ಡಾ.ಎಸ್. ರೇಣುಕಾಲತಾ, ಸಿಎಸ್‌ಸಿ ವಿಭಾಗದ ಮುಖ್ಯಸ್ಥರಾದ ಡಾ.ರವಿರಾಮ್, ಸಹಾಯಕ ಪ್ರಾಧ್ಯಾಪಕರಾದ ಡಾ. ಜೀವಿತ್ ಸೇರಿದಂತೆ ಇಂಜಿನಿಯರಿಂಗ್ ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರು, ಕಾಲೇಜಿನ ಹಳೇ ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು.

