ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕಲಿಕೆಯಲ್ಲಿ ಹಿಂದುಳಿದ, ನಿಧಾನ ಕಲಿಕಾ ಮಕ್ಕಳಿಗೆ ಶಿಕ್ಷಕರು ಹೆಚ್ಚಿನ ಗಮನ ಹರಿಸುವ ಮೂಲಕ ಎಸ್‍ಎಸ್‍ಎಲ್‍ಸಿ ಫಲಿತಾಂಶ ಶೇ.100ರಷ್ಟು ತಲುಪಲು ಪ್ರಯತ್ನಿಸಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಂಶುಪಾಲ ಎಂ.ನಾಸಿರುದ್ದೀನ್ ಹೇಳಿದರು.
ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಸೋಮವಾರ ಜಿಲ್ಲಾಮಟ್ಟದ ಸಮಾಜ ವಿಜ್ಞಾನ ವಿಷಯ ಶಿಕ್ಷಕರ ಮರುಸಿಂಚನ, ಜ್ಞಾನಸೇತು, ಮೌಲ್ಯಶಿಕ್ಷಣ ಮತ್ತು ಪೋಕ್ಸೋ ಕಾಯಿದೆಗಳ ಆರು ದಿನಗಳ ತರಬೇತಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷಾ ನಿಯಮಾವಳಿ ಬದಲಾವಣೆಯಿಂದ ಈಗಾಗಲೇ ನೀಲನಕ್ಷೆ ಹಾಗೂ ನಾಲ್ಕು ಮಾದರಿ ಪ್ರಶ್ನೆ ಪತ್ರಿಕೆ ಬಿಡುಗಡೆಯಿಂದ ಮಕ್ಕಳ ಉತ್ತೀರ್ಣಕ್ಕೆ ಸಹಾಯಕವಾಗಬಹುದು ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರುಗಳಿಗೆ ಒಂದು ತಿಂಗಳಿಂದ ಸುಮಾರು 580ಕ್ಕೂ ಹೆಚ್ಚು ಮರು ಸಿಂಚನ, ಜ್ಞಾನಸೇತು, ಪೋಕ್ಸೋ, ಮೌಲ್ಯಶಿಕ್ಷಣ, ವೃತ್ತಿ ಮಾರ್ಗದರ್ಶನ, ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ತರಬೇತಿ ನೀಡಲಾಗಿದೆ ಎಂದು ಹೇಳಿದರು.
ಮಕ್ಕಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ವೃತ್ತಿ ಮಾರ್ಗದರ್ಶನ ಅಗತ್ಯ ಹಾಗೂ ಉತ್ತಮ ಭವಿಷ್ಯ ರೂಪಿಸಲು ಮೌಲ್ಯಶಿಕ್ಷಣ ಅಗತ್ಯವಾಗಿದ್ದು, ಪ್ರಸ್ತುತ ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದರಿಂದ ಸಮಾಜದಲ್ಲಿ ಕಳವಳಕಾರಿ ಸಂಗತಿ ಎಂದು ವಿಷಾಧಿಸಿದರು.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಆರ್.ಮಂಜುನಾಥ್ ಮಾತನಾಡಿ, ಬರದನಾಡು ಚಿತ್ರದುರ್ಗ ಶಿಕ್ಷಣ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದು, ಎಲ್ಲ ವಿಷಯ ಶಿಕ್ಷಕರು ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ ಪರೀಕ್ಷಾ ಭಯ ಹೋಗಲಾಡಿಸಿ, ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.100ರಷ್ಟು ಫಲಿತಾಂಶ ತರಲು ಶ್ರಮಿಸಬೇಕು ಎಂದು ಹೇಳಿದರು.
ತರಬೇತಿಯ ನೋಡಲ್ ಅಧಿಕಾರಿ ಜ್ಞಾನೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯು ಫಲಿತಾಂಶ ಸುಧಾರಣೆ ಸಹಾಯವಾಗಬೇಕು ಎಂದು ತರಬೇತಿಯ ರೂಪುರೇಷೆಗಳನ್ನು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ವಿಜ್ಞಾನ ವಿಷಯದ ನಿಧಾನ ಕಲಿಕಾ ಮಕ್ಕಳಿಗೆ ಸಿದ್ದಪಡಿಸಿದ ಮಿಷನ್ 40+ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಸಮಾಜ ವಿಜ್ಞಾನ ವಿಷಯ ಪರಿವೀಕ್ಷಕರಾದ ಕೆ.ಜೆ.ಪ್ರಶಾಂತ, ನಿತ್ಯಾನಂದ, ಡಯಟ್ ಉಪನ್ಯಾಸಕರಾದ ಎಸ್.ರವಿಬಸವರಾಜ್, ರೇವಣ್ಣ, ರಾಮಚಂದ್ರಪ್ಪ ಸೇರಿದಂತೆ ಜಿಲ್ಲೆಯ ಎಲ್ಲಾ ಸಮಾಜ ವಿಜ್ಞಾನ ಶಿಕ್ಷಕರು ಇದ್ದರು.

