1600 ಪಿಎಸ್ಐ ಹುದ್ದೆಗಳ ನೇಮಕಾತಿಗೆ ಪ್ರಸ್ತಾವನೆ- ಡಾ.ಜಿ.ಪರಮೇಶ್ವರ

News Desk

ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಗೃಹ ಇಲಾಖೆಯಿಂದ 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಅನುಮತಿ ಕೋರಿ ಆರ್ಥಿಕ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಅವರು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿಂದು ಶಿವಮೊಗ್ಗ ಶಾಸಕರಾದ ಚನ್ನಬಸಪ್ಪ  ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.

- Advertisement - 

ಈ ಹಿಂದಿನ ಸರ್ಕಾರದಲ್ಲಿ 545 ಪಿ.ಎಸ್.ಐ ನೇಮಕಾತಿ ವಿಚಾರದಲ್ಲಿ ಗೊಂದಲ ಉಂಟಾಗಿ ನೇಮಕಾತಿ ಪ್ರಕ್ರಿಯೆ ಸ್ಥಗಿತವಾಗಿತ್ತು. ಸದ್ಯ ಸರ್ಕಾರ 947 ಪಿ.ಎಸ್.ಐ ಹುದ್ದೆಗಳನ್ನು ಭರ್ತಿ ಮಾಡಿದೆ. ಆಯ್ಕೆಗೊಂಡ ಅಭ್ಯರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ.

ತರಬೇತಿ ಪೂರ್ಣಗೊಂಡ ನಂತರ ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ 42 ಪಿ.ಎಸ್.ಐ ಹುದ್ದೆಗಳ ಪೈಕಿ 32 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕ ಮಾಡಲಾಗುವುದು. ಶಿವಮೊಗ್ಗ ಜಿಲ್ಲೆಯಲ್ಲಿ ಒಟ್ಟು 33 ಪೊಲೀಸ್ ಠಾಣೆಗಳಿದ್ದು, 1549 ಹುದ್ದೆಗಳಲ್ಲಿ 1394 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 155 ಹುದ್ದೆಗಳು ಖಾಲಿಯಿವೆ. ಪೊಲೀಸ್ ಠಾಣೆಗಳ ದಿನನಿತ್ಯದ ಕರ್ತವ್ಯಕ್ಕೆ ತೊಂದರೆಯಾಗದಂತೆ 103 ಗೃಹ ರಕ್ಷಕ ಸಿಬ್ಬಂದಿ ನೇಮಿಸಿಕೊಂಡು ಕರ್ತವ್ಯ ಭಾರವನ್ನು ಸರಿದೂಗಿಸಲಾಗಿದೆ ಎಂದರು.

- Advertisement - 

 ಮುಂಬರುವ ದಿನಗಳಲ್ಲಿ ಮಾನದಂಡಗಳನ್ನು ಆಧರಿಸಿ  ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಪೊಲೀಸ್ ಕಮಿಷನರೇಟ್ ಸ್ಥಾಪಿಸುವ ಕುರಿತು ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕಾಪಾಡಲು ಸ್ಪೆಷಲ್ ಆಕ್ಷನ್ ಫೋರ್ಸ್ ಅನ್ನು ಶಿವಮೊಗ್ಗದಲ್ಲಿ ನಿಯೋಜಿಸಲಾಗಿದೆ ಎಂದು ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ತಿಳಿಸಿದರು. 

 ಇದೇ ವೇಳೆ ಸಾಗರ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವರು, ಸಿಗಂಧೂರು ಉಪ ಪೊಲೀಸ್ ಠಾಣೆಯನ್ನು ಪೊಲೀಸ್ ಠಾಣೆಯನ್ನಾಗಿ ಮೇಲ್ದರ್ಜೆಗೆ ಏರಿಸುವ ಭರವಸೆ ನೀಡಿದರು.

 

Share This Article
error: Content is protected !!
";