ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶಿಥಿಲಾವಸ್ಥೆಯಲ್ಲಿರುವ ಸೇತುವೆಗಳ ನಿರ್ಮಾಣಕ್ಕೆ ಕ್ರಮವಹಿಸಿದ್ದು, ಹೊಸ ಸೇತುವೆಗಳ ನಿರ್ಮಾಣಕ್ಕೆ ಆದ್ಯತೆಯ ಮೇಲೆ ಕ್ರಮಕೈಗೊಳ್ಳಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ನಿಯಮ-73ರ ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಕುರಿತು ಪ್ರಸ್ತಾಪಿಸಿದ್ದ ವಿಚಾರಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಉತ್ತರಿಸಿದ್ದಾರೆ.
ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-150ಎ ವ್ಯಾಪ್ತಿಯಲ್ಲಿ ಓಬಳಾಪುರದಿಂದ ಪಗಲಬಂಡೆ, ಕೊರ್ಲಕುಂಟೆ, ಪರಶುರಾಂಪುರ, ದೊಡ್ಡಚೆಲ್ಲೂರು ಕಿ.ಮೀ 74.92 ರಲ್ಲಿರುವ ವೇದಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆಯು ಸುಮಾರು 43 ವರ್ಷಗಳ ಹಳೆಯ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸೇತುವೆಯಾಗಿದ್ದು, ಸೇತುವೆಯು ಸುತ್ತಮುತ್ತಲಿನ 25 ರಿಂದ 30 ಗ್ರಾಮಗಳ ಸಂಪರ್ಕ ಸೇತುವೆಯಾಗಿದ್ದು, ಸೇತುವೆಯು ನಿರ್ಮಾಣ ಮಾಡುವುದು ಅವಶ್ಯವಿರುತ್ತದೆ
ಅಲ್ಲದೇ ಪರಶುರಾಂಪುರ, ಕೊರಲಕುಂಟೆ ಇದರ ಹೊಸ ಸೇತುವೆಯ ನಿರ್ಮಾಣ 17.90 ಕಿ.ಮೀ ಉದ್ದದ ಕೆಳ ಸೇತುವೆಯು ಶಿಥಿಲಗೊಂಡಿದ್ದು, 2022-23ನೇ ಸಾಲಿನಲ್ಲಿ ಮಳೆಗಾಲದಲ್ಲಿ ರಸ್ತೆ ದಾಟುವಾಗ ಇಬ್ಬರು ವ್ಯಕ್ತಿಗಳು ಮರಣ ಹೊಂದಿರುತ್ತಾರೆ ಎಂಬ ವಿಷಯದ ಕುರಿತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ಲೋಕೋಪಯೋಗಿ ಸಚಿವರ ಗಮನ ಸೆಳೆದರು.
ಶಾಸಕರ ಕಳಕಳಿಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು, ಚಳ್ಳಕೆರೆ ತಾಲ್ಲೂಕಿನ ಚಳ್ಳಕೆರೆ (ರಾಷ್ಟ್ರೀಯ ಹೆದ್ದಾರಿ-150ಎ) ಯಿಂದ ವಿಶ್ವನಾಥನಹಳ್ಳಿ ರಸ್ತೆ (ರಾಜ್ಯ ಹೆದ್ದಾರಿ-243) ಕಿ.ಮೀ 75.30ರಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು ರೂ.650.00 ಲಕ್ಷಗಳಿಗೆ ಹಾಗೂ ಚಳ್ಳಕೆರೆ ತಾಲ್ಲೂಕಿನ ದೊಡ್ಡೇರಿ-ಓಬೇನಹಳ್ಳಿ ರಸ್ತೆ ಮಾರ್ಗ ರೆಡ್ಡಿಹಳ್ಳಿ, ಗೋಪನಹಳ್ಳಿ, ಚಿಕ್ಕನಹಳ್ಳಿ, ಯಲಗಟ್ಟಿ, ಕೋನಿಗರಹಳ್ಳಿ, ಗೋಸಿಕೆರೆ ಕಾವಲ್, ಗೋಸಿಕೆರೆ, ಚಿಕ್ಕಚೆಲ್ಲೂರು (ಜಿಲ್ಲಾ ಮುಖ್ಯ ರಸ್ತೆ) ಕಿ.ಮೀ. 18.00 ರಲ್ಲಿ ಹೊಸ ಸೇತುವೆ ನಿರ್ಮಾಣ ಮಾಡಲು 4000 ಲಕ್ಷಗಳಿಗೆ ಅಂದಾಜಿಸಲಾಗಿದ್ದು, ಈ ಸೇತುವೆಗಳಿಗೆ ಅನುದಾನದೊಂದಿಗೆ ಅನುಮೋದನೆ ಕೋರಿರುವ ಪ್ರಸ್ತಾವನೆ ಸ್ವೀಕೃತವಾಗಿದೆ ಎಂದು ಸಚಿವರು ತಿಳಿಸಿದರು.
2025-26 ನೇ ಸಾಲಿನ ಆಯವ್ಯಯ ಭಾಷಣದಲ್ಲಿ ಸೇತುವೆಗಳ ದುರಸ್ಥಿ ಮತ್ತು ಪುನರ್ ನಿರ್ಮಾಣಕ್ಕಾಗಿ ರೂ.1,000.00 ಕೋಟಿಗಳ ಯೋಜನೆ ರೂಪಿಸಲಾಗುವುದು ಎಂದು ಘೋಷಿಸಲಾಗಿದ್ದು, ಅದರಂತೆ ಸರ್ಕಾರದ ಆದೇಶ ಸಂಖ್ಯೆ: ಲೋಇ 434 ಸಿಆರ್‍ಎಂ 2025 (ಇ) ದಿನಾಂಕ: 22.11.2025ರಲ್ಲಿ ಲೋಕೋಪಯೋಗಿ ಇಲಾಖೆ ವ್ಯಾಪ್ತಿಯ ರಸ್ತೆಗಳ ಮೇಲಿರುವ ಸೇತುವೆಗಳ ಪುನರ್ ನಿರ್ಮಾಣ ಹಾಗೂ ಪುನಶ್ಚೇತನ ಕಾಮಗಾರಿಗಳನ್ನು ರೂ.2000/- ಕೋಟಿಗಳ ಅಂದಾಜು ವೆಚ್ಚದಲ್ಲಿ ಹಂತ ಹಂತವಾಗಿ ಕೈಗೊಳ್ಳಲು ಅನುಮೋದನೆ ನೀಡಲಾಗಿರುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಅತೀ ಹೆಚ್ಚಿನ ಮಳೆಯಿಂದಾಗಿ ರಸ್ತೆ, ಸೇತುವೆಗಳ ಕುಸಿತದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಇದರ ಜೊತೆಗೆ ಕಳೆದ ಮಳೆಗಾಲದ ಸಂದರ್ಭದಲ್ಲಿ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಹೊಸ ಸೇತುವೆಗಳ ನಿರ್ಮಾಣಕ್ಕೆ ಲೋಕೋಪಯೋಗಿ ಸಚಿವರಿಂದ ಸಕರಾತ್ಮಕ ಸ್ಪಂದನೆ ದೊರಕಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದ್ದಾರೆ.

