ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ವಾಹನ ಸಂಚಾರ ದಿನೇದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಕ್ಕಳ ರಸ್ತೆ ಸುರಕ್ಷತೆ ಪ್ರಮುಖ ಚಿಂತನೆಯ ವಿಷಯವಾಗಿದೆ ಎಂದು ಯುನಿಸೆಫ್ ವೈದ್ಯಕೀಯ ಸಲಹೆಗಾರರಾದ ಡಾ.ಶ್ರೀಧರ ಮ್ಯಾವಂಕಿ ಆತಂಕ ವ್ಯಕ್ತಪಡಿಸಿದರು.
ದಾವಣಗೆರೆ ವಿಶ್ವವಿದ್ಯಾನಿಲಯ ಮತ್ತು ಮೈಸೂರು ವಿಶ್ವವಿದ್ಯಾಲಯದ ಸಹಭಾಗಿತ್ವದಲ್ಲಿ ಯುನಿಸೆಫ್ ಸಹಯೋಗದೊಂದಿಗೆ ಏರ್ಪಡಿಸಿದ್ದ ಎರಡು ದಿನಗಳ ಮಕ್ಕಳ ಸಮಸ್ಯೆ ವರದಿಗಾರಿಕೆ ಕುರಿತು ಪತ್ರಕರ್ತರ ಪುನರ್ಮನನ ಕಾರ್ಯಾಗಾರದಲ್ಲಿ ಮಕ್ಕಳು ಮತ್ತು ರಸ್ತೆ ಸುರಕ್ಷತೆ ವಿಷಯವಾಗಿ ಮಾತನಾಡಿದರು.
ಶಾಲೆಗೆ ಹೋಗುವಾಗ, ಆಟವಾಡುವಾಗ ಅಥವಾ ಮನೆಮುತ್ತಲಲ್ಲಿ ಸಂಚರಿಸುವಾಗ ಮಕ್ಕಳು ಅಪಘಾತಗಳಿಗೆ ಒಳಗಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ ರಸ್ತೆ ನಿಯಮಗಳ ಬಗ್ಗೆ ಮಕ್ಕಳಲ್ಲಿ ಮತ್ತು ಕೆಲವೊಮ್ಮೆ ದೊಡ್ಡವರಲ್ಲಿಯೂ ಸೂಕ್ತ ಅರಿವಿನ ಕೊರತೆಯಾಗಿರುವುದೇ ಕಾರಣವಾಗಿದೆ ಎಂದರು.
ಪೊಲೀಸ್ ಇಲಾಖೆ ಮತ್ತು ಸಾರಿಗೆ ಇಲಾಖೆ ಬಿಡುಗಡೆ ಮಾಡಿದ ಅಂಕಿಅAಶಗಳ ಪ್ರಕಾರ, ರಸ್ತೆ ಅಪಘಾತಗಳಲ್ಲಿ ಗಾಯಗೊಂಡ ಮಕ್ಕಳ ಪ್ರಮಾಣ ಆತಂಕಕಾರಿ ಮಟ್ಟದಲ್ಲಿದೆ. ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನದಲ್ಲಿ ಮಕ್ಕಳನ್ನು ಕೂರಿಸುವುದು, ಪಾದಚಾರಿ ಮಾರ್ಗವನ್ನು ಬಳಸದೇ ರಸ್ತೆ ದಾಟಿಸುವುದು, ಶಾಲೆಗಳ ಮುಂದೆ ವೇಗ ನಿಯಂತ್ರಣದ ಕೊರತೆ ಇವು ಪ್ರಮುಖ ಸಮಸ್ಯೆಗಳಾಗಿವೆ ಎಂದು ಹೇಳಿದರು.
ರಸ್ತೆ ಸುರಕ್ಷತೆ ಕುರಿತು ಮಕ್ಕಳಿಗೆ ಬಾಲ್ಯದಲ್ಲಿಯೇ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ. ಶಾಲಾ ಮಟ್ಟದಲ್ಲಿ ರಸ್ತೆ ನಿಯಮಗಳು, ಟ್ರಾಫಿಕ್ ಸಂಕೇತಗಳು, ಪಾದಚಾರಿ ನಿಯಮಗಳ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಬೇಕು. ಜೊತೆಗೆ ಪೋಷಕರು ಮಕ್ಕಳಿಗೆ ಮಾದರಿಯಾಗುವಂತೆ ನಿಯಮ ಪಾಲನೆ ಮಾಡುವುದು ಅನಿವಾರ್ಯ ಎಂದು ನುಡಿದರು.
ಮಕ್ಕಳ ಭವಿಷ್ಯ ಸುರಕ್ಷಿತವಾಗಿರಬೇಕಾದರೆ, ರಸ್ತೆ ಸುರಕ್ಷತೆ ಕೇವಲ ನಿಯಮವಲ್ಲ, ಅದು ಸಾಮಾಜಿಕ ಹೊಣೆಗಾರಿಕೆಯಾಗಿ ಪರಿಗಣಿಸಬೇಕಾಗಿದೆ. ಸರ್ಕಾರ ಮತ್ತು ಸ್ಥಳೀಯ ಆಡಳಿತಗಳು ಶಾಲೆಗಳ ಸಮೀಪ ಸ್ಪೀಡ್ ಬ್ರೇಕರ್ಗಳು, ಜೀಬ್ರಾ ಕ್ರಾಸಿಂಗ್, ಸೂಚನಾ ಫಲಕಗಳು ಮತ್ತು ಟ್ರಾಫಿಕ್ ವಾರ್ಡನ್ಗಳ ನಿಯೋಜನೆಗೆ ಆದ್ಯತೆ ನೀಡಬೇಕಿದೆ. ಸಾರ್ವಜನಿಕರ ಸಹಕಾರದಿಂದ ಮಾತ್ರ ಮಕ್ಕಳಿಗೆ ಸುರಕ್ಷಿತ ರಸ್ತೆ ಪರಿಸರವನ್ನು ನಿರ್ಮಿಸಲು ಸಾಧ್ಯ ಎಂದರು.
ಮೈಸೂರು ವಿಶ್ವವಿದ್ಯಾಲಯ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕಿ ಪ್ರೊ.ಎಂ.ಎಸ್.ಸಪ್ನಾ ಮಾತನಾಡಿ, ಸಮಾಜದಲ್ಲಿ ಮಕ್ಕಳಿಗೆ ಸಂಬAಧಿಸಿದ ಸಮಸ್ಯೆಗಳ ವರದಿಗಾರಿಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಬಾಲಕಾರ್ಮಿಕತೆ, ಪೌಷ್ಟಿಕಾಂಶ ಕೊರತೆ, ಶಿಕ್ಷಣದಿಂದ ವಂಚನೆ, ಬಾಲ್ಯವಿವಾಹ ಮತ್ತು ಡಿಜಿಟಲ್ ದುರುಪಯೋಗದಂತಹ ವಿಷಯಗಳನ್ನು ಮಾಧ್ಯಮಗಳು ಜವಾಬ್ದಾರಿಯಿಂದ ವರದಿ ಮಾಡಬೇಕಾಗಿದೆ. ಇಂತಹ ವರದಿಗಳಲ್ಲಿ ನಿಖರ ದತ್ತಾಂಶ ಮತ್ತು ಸತ್ಯಶೋಧನೆ ಅತ್ಯಂತ ಅಗತ್ಯವಾಗಿವೆ ಎಂದು ತಿಳಿಸಿದರು.
ವರದಿಗಾರರು ವಿಶ್ವಾಸಾರ್ಹ ದತ್ತಾಂಶ ಮೂಲಗಳನ್ನು ಅವಲಂಬಿಸಬೇಕು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ಆಯೋಗ, ಯುನಿಸೆಫ್, ಎನ್ಸಿಆರ್ಬಿ, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳ ವರದಿಗಳು ಪ್ರಮುಖ ಮೂಲಗಳಾಗಿವೆ. ಜೊತೆಗೆ ಸ್ಥಳೀಯ ಆಡಳಿತ, ಶಾಲೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಎನ್ಜಿಓಗಳ ಮಾಹಿತಿಯೂ ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಸತ್ಯಶೋಧನೆ ಪ್ರಕ್ರಿಯೆಯಲ್ಲಿ ಒಂದೇ ಮೂಲದ ಮಾಹಿತಿಗೆ ಅವಲಂಬಿಸದೆ, ಬಹುಮೂಲ ಪರಿಶೀಲನೆ ಮಾಡುವುದು ಅವಶ್ಯಕ. ಮಕ್ಕಳ ಗುರುತು ಬಹಿರಂಗವಾಗದAತೆ ನೈತಿಕ ಮಾರ್ಗಸೂಚಿಗಳನ್ನು ಪಾಲಿಸಬೇಕು. ನಿಖರತೆ, ಸಂವೇದನಾಶೀಲತೆ ಮತ್ತು ಹೊಣೆಗಾರಿಕೆಯೊಂದಿಗೆ ಮಾಡಿದ ವರದಿಗಾರಿಕೆ ಮಕ್ಕಳ ಹಿತಾಸಕ್ತಿಗೆ ಹಾಗೂ ಸಮಾಜದ ಜಾಗೃತಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಯುನಿಸೆಫ್ ಅಧಿಕಾರಿ ಪ್ರೊಸುನ್ ಸೇನ್ ಭಾಗವಹಿಸಿದ್ದ ಪತ್ರಕರ್ತರಿಗೆ ಪ್ರಮಾಣ ವಚನ ವಿತರಿಸಿದರು. ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಶಿವಕುಮಾರ ಕಣಸೋಗಿ, ಡಾ. ಎಂ.ವಿನಯ, ಡಾ.ಜೆ.ಎಂ.ಚಂದ್ರಲೇಖ ಉಪಸ್ಥಿತರಿದ್ದರು.
ಶಿಬಿರಾರ್ಥಿ ಪತ್ರಕರ್ತರು ಕಾರ್ಯಾಗಾರ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

