ಚಂದ್ರವಳ್ಳಿ ನ್ಯೂಸ್, ಮಂಡ್ಯ:
ನೂತನವಾಗಿ ಸ್ಥಾಪನೆಯಾದ ರೋಟರಿ ಮಾಂಡವ್ಯ ಪದಗ್ರಹಣ ಕಾರ್ಯಕ್ರಮವು ಮಂಡ್ಯ ನಗರದ ವಲಯದಲ್ಲಿರುವ ಲೆಮನ್ ಗ್ರಾಸ್ ಆವರಣದಲ್ಲಿ ಅರ್ಥಪೂರ್ಣವಾಗಿ ನೆರವೇರಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎ.ಎನ್. ಪ್ರಕಾಶ್ ಗೌಡ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಸರ್ಕಾರ ಮತ್ತು ಜನಸಾಮಾನ್ಯರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುವಲ್ಲಿ ಸೇವಾ ಸಂಸ್ಥೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಸಮಾಜದ ನಡುವೆ ಬಾಂಧವ್ಯದ ಕೊಂಡಿಯಾಗಿ ಕಾರ್ಯನಿರ್ವಹಿಸಿ ಸೇವೆಯ ಹೆಜ್ಜೆ ಇಡಬೇಕಾದರೆ ರೋಟರಿಯಂತಹ ಸಂಸ್ಥೆಗಳು ಮುಖ್ಯ ವೇದಿಕೆಯಾಗುತ್ತವೆ ಎಂದು ತಿಳಿಸಿದರು.
ನೂತನ ಅಧ್ಯಕ್ಷರಾಗಿ ಅಶೋಕ್ ಡಿ.ಸಿ ಅವರು ಆಯ್ಕೆಯಾಗಿರುವುದು ಸಂತಸದ ವಿಷಯವೆಂದು ಹೇಳಿದ ಅವರು, ಅಶೋಕ್ ಅವರು ಬಾಲ್ಯದಿಂದಲೇ ರಾಷ್ಟ್ರೀಯ ಸೇವಾ ಯೋಜನೆ ಸೇರಿದಂತೆ ಹಲವು ಸಮಾಜಮುಖಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದು ಎಸ್ಪಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮನುಷ್ಯ ಹುಟ್ಟಿದ್ದು ಕೇವಲ ಹೆಸರಿಗಾಗಿ ಅಲ್ಲ, ಹುಟ್ಟು–ಸಾವುಗಳ ನಡುವಿನ ಬದುಕಿಗೆ ಅರ್ಥ ನೀಡುವ ಕಾರ್ಯಗಳೇ ಜೀವನದ ಸಾರ್ಥಕತೆ ಎಂದು ಎಸ್ಪಿ ಪ್ರಕಾಶ್ ಗೌಡ ಅಭಿಪ್ರಾಯಪಟ್ಟರು.
ರೋಟರಿ ಜಿಲ್ಲಾ ರಾಜ್ಯಪಾಲ ಪ್ರೊ.ಡಾ. ಎಲಿಜಬೆತ್ ಚೆರಿಯನ್ ಮಾತನಾಡಿ, ರೋಟರಿ ಒಂದು ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು 120 ವರ್ಷಗಳ ಶ್ರೀಮಂತ ಇತಿಹಾಸ ಹೊಂದಿದೆ. ಈ ಮಹತ್ವದ ಸಂಸ್ಥೆಗೆ ನೂತನವಾಗಿ ರೋಟರಿ ಮಾಂಡವ್ಯ ಸೇರ್ಪಡೆಗೊಂಡಿರುವುದು ನಮಗೆಲ್ಲ ಹೆಮ್ಮೆಯ ವಿಷಯ. ಸಮಾಜ ಸೇವೆಯೇ ರೋಟರಿಯ ಅಸ್ತಿತ್ವ. ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ಈ ಸಂಸ್ಥೆ ಉತ್ತಮ ಕಾರ್ಯಗಳನ್ನು ಮಾಡಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ 2026ನೇ ಸಾಲಿನ ಕ್ಯಾಲೆಂಡರ್ ಹಾಗೂ ರೋಟರಿ ಧ್ವಜವನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಯಿತು.
ಸಮಾಜ ಸೇವಾ ಕ್ಷೇತ್ರದಲ್ಲಿ ರೊ ಶ್ರೀನಿವಾಸ ವಿ, ಪರಿಸರ ವಿಭಾಗದಲ್ಲಿ ಶಿವಕುಮಾರ್ ಎಂ, ವೈದ್ಯಕೀಯ ಕ್ಷೇತ್ರದಲ್ಲಿ ಡಾ. ಚೇತನ್ ಕುಮಾರ್, ಸಾವಯವ ಕೃಷಿ ವಿಭಾಗದಲ್ಲಿ ಮಹೇಶ್ ಕುಮಾರ್, ಶಿಕ್ಷಣ ಕ್ಷೇತ್ರದಲ್ಲಿ ಶ್ರೀಮತಿ ಚಂದ್ರಕಾಂತ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಇದೇ ವೇಳೆ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕೃಷ್ಣವೇಣಿ ಹಾಗೂ ಎಸ್‌ಎಸ್‌ಎಲ್‌ಸಿಯಲ್ಲಿ ಗ್ರಾಮೀಣ ಭಾಗದಿಂದ ಅತಿ ಹೆಚ್ಚು ಅಂಕ ಗಳಿಸಿದ ರಕ್ಷಿತಾ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ ಮೆಂಬರ್ ಚೆರ್ಮಾನ್ ಹಾಗೂ ಡಿಜಿಎನ್ ವಿನೋದ್ ಕುಮಾರ್.ಬಿ. ಎಸ್, ಮಾಜಿ ಜಿಲ್ಲಾ ಪಾಲಕರಾದ ರೋ. ಶ್ರೀನಿವಾಸ್ ಮೂರ್ತಿ, ಜಿಲ್ಲಾ ಕಾರ್ಯದರ್ಶಿ ಹೊನ್ನೇಗೌಡ, ರಾಜೇಶ್ ತಿಪ್ಪೂರು, ಅಧ್ಯಕ್ಷ ಶ್ರೀನಿವಾಸ್, ಕಾರ್ಯದರ್ಶಿ ಮಂಜುನಾಥ್ ನಾಯ್ಡು, ನೂತನ ರೋಟರಿ ಮಾಂಡವ್ಯ ಅಧ್ಯಕ್ಷ ಅಶೋಕ್ ಡಿ.ಸಿ, ಕಾರ್ಯದರ್ಶಿ ಆದರ್ಶ ಎಚ್.ಆರ್, ನೂತನ ಪದಾಧಿಕಾರಿಗಳ ತಂಡ, ಸದಸ್ಯರು ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

