ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡ್ ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಹಾಗೂ ಕಾನೂನು ಮಾಪನಶಾಸ್ತ್ರ ಇಲಾಖೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿ ಗುರುವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ ಶಾಸಕರಾದ ಬಾಲಕೃಷ್ಣ .ಸಿ.ಎನ್ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡ್ದಾರರ ಆದಾಯ ಮಿತಿಯನ್ನು ರೂ.1.20 ಲಕ್ಷಕ್ಕೆ ಮಿತಿಗೊಳಿಸಿದೆ. ಆದರೆ ಕೂಲಿ ಕೆಲಸಗಾರರಿಗೂ ಪ್ರತಿದಿನ 500 ಕೂಲಿ ದೊರೆಯುತ್ತದೆ. ಇದರ ಆಧಾರದಲ್ಲಿ ಕೂಲಿ ಮಾಡುವವರ ಆದಾಯವೂ ವರ್ಷಕ್ಕೆ 1.80 ಲಕ್ಷಕ್ಕೂ ಅಧಿಕವಾಗುತ್ತಿದೆ. ಈ ಹಿನ್ನಲೆಯಲ್ಲಿ ಪರಿಷ್ಕರಿಸಲು ಚಿಂತನೆ ನಡೆದಿದೆ ಎಂದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿ 7,75,206 ಶಂಕಾಸ್ಪದ ಪಡಿತರ ಫಲಾನುಭವಿಗಳನ್ನು ಗುರುತಿಸಿದೆ. ರಾಜ್ಯದಲ್ಲಿ 4.53 ಲಕ್ಷ ಬಿ.ಪಿ.ಎಲ್ ಹಾಗೂ 1.25 ಲಕ್ಷ ಎ.ಪಿ.ಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿವೆ. ರಾಜ್ಯದ ಜನಸಂಖ್ಯೆಗೆ ಹೊಲಿಸಿದರೆ ಶೇ.73 ರಷ್ಟು ಕುಟುಂಬಗಳು ಬಿ.ಪಿ.ಎಲ್ ಕಾರ್ಡು ಪಡೆದಿವೆ. ರಾಜ್ಯವು ಜಿ.ಎಸ್.ಟಿ ಪಾವತಿ, ಆದಾಯ ತೆರಿಗೆ ಪಾವತಿಯಲ್ಲಿ ದೇಶದಲ್ಲಿ ಮುಂಚೂಣಿಯಲ್ಲಿದೆ. ಈ ಅಂಶವನ್ನು ಪರಿಗಣಿಸಿದರೆ ಬಿ.ಪಿ.ಎಲ್. ಕುಟುಂಬಗಳ ಪ್ರಮಾಣ ಶೇ.50 ರಷ್ಟು ಇರಬೇಕಿತ್ತು. ಆದರೆ ಇದಕ್ಕೂ ಹೆಚ್ಚಿನ ಕುಟುಂಬ ಬಿ.ಪಿ.ಎಲ್ ಕಾರ್ಡು ಪಡೆದಿವೆ.
ರಾಜ್ಯದಲ್ಲಿ ಆದ್ಯತಾ ಪಡಿತರ ಚೀಟಿಗಳನ್ನು ಪಡೆಯುವ ಹಾಗೂ ಹೊರಗಿಡುವ ಬಗ್ಗೆ 2017ರಲ್ಲಿ ಮಾನದಂಡಗಳನ್ನು ರೂಪಿಸಿದೆ. ಇದರ ಅನ್ವಯ ಸರ್ಕಾರಿ, ಅನುದಾನಿತ ಸಂಸ್ಥೆಗಳು, ಮಂಡಳಿ, ನಿಗಮ, ಸ್ವಾಯತ್ತ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ನೌಕರರು, ಆದಾಯ, ಸೇವಾ ಹಾಗೂ ಜಿ.ಎಸ್.ಟಿ ತೆರಿಗೆ ಪಾವತಿ ಮಾಡುವ ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡ್ ನೀಡುವುದಿಲ್ಲ. ಆದಾಯ ಮಿತಿ ಪರಿಷ್ಕರಣೆಗೆ ಚಿಂತನೆ ನಡೆಸಿರುವುದರಿಂದ, ತಾತ್ಕಾಲಿಕವಾಗಿ ಯಾವುದೇ ಬಿ.ಪಿ.ಎಲ್.ಕಾರ್ಡುಗಳನ್ನು ರದ್ದು ಮಾಡದಂತೆ ಅಧಿಕಾರಿಗಳಿಗೆ ಸೂಚನೆ ನೀಡಿರುವುದಾಗಿ ಎಂದು ಸಚಿವರು ಹೇಳಿದರು.
ಸದ್ಯ ವೈದ್ಯಕೀಯ ಆಧಾರದಲ್ಲಿ ಮಾತ್ರ ಬಿ.ಪಿ.ಎಲ್ ಕಾರ್ಡು ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಕುಟುಂಬದ ಸದಸ್ಯರು ನೌಕರಿಗೆ ಸೇರಿದ್ದಾರೆ ಎನ್ನುವ ಕಾರಣದಿಂದ ಬಿ.ಪಿ.ಎಲ್ ಕಾರ್ಡು ರದ್ದಾಗಿದ್ದರೆ, ಬಾಧಿತ ಕುಟುಂಬದವರು ನೌಕರಿಗೆ ಸೇರಿದವರು ತಮ್ಮೊಂದಿಗೆ ವಾಸವಾಗಿಲ್ಲ ಎನ್ನುವ ಕಾರಣ ನೀಡಿ, ಸಂಬಂಧಪಟ್ಟ ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದರೆ 15 ದಿನದ ಒಳಗಾಗಿ ಬಿ.ಪಿ.ಎಲ್ ಕಾರ್ಡು ನೀಡಲಾಗುವುದು. ಬಂಟ್ವಾಳ ಕ್ಷೇತ್ರದಲ್ಲಿ 2023-24ನೇ ಸಾಲಿನವರೆಗೆ ರೂ.48,715 ಕುಟುಂಬಗಳಿಗೆ ಬಿ.ಪಿ.ಎಲ್ ಕಾರ್ಡು ನೀಡಲಾಗಿದೆ. 2023 ರಿಂದ ಜನವರಿ 2025ವರೆಗೆ ಒಟ್ಟು 688 ಬಿ.ಪಿ.ಎಲ್ ಕಾರ್ಡು ವಿತರಿಸಲಾಗಿದೆ. 99 ಕುಟಂಬಗಳ ಬಿ.ಪಿ.ಎಲ್ ಕಾರ್ಡು ರದ್ದು ಪಡಿಸಲಾಗಿದೆ.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 930 ಬಿ.ಪಿ.ಎಲ್ ಕಾರ್ಡುಗಳನ್ನು ಎ.ಪಿ.ಎಲ್ ಕಾರ್ಡುಗಳಾಗಿ ಪರಿವರ್ತಿಸಲಾಗಿದೆ ಎಂದು ಸಚಿವ ಕೆ.ಹೆಚ್.ಮುನಿಯಪ್ಪ ಅವರು ತಿಳಿಸಿದರು.
ಶ್ರವಣಬೆಳಗೊಳ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 964 ಹೊಸ ಬಿ.ಪಿ.ಎಲ್ ಕಾರ್ಡು ನೀಡುವ ಅರ್ಜಿಗಳು ಬಾಕಿಯಿವೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಶಾಸಕ ಬಾಲಕೃಷ್ಣ ಸಿ.ಎನ್ ಅವರು ಸಚಿವರಲ್ಲಿ ಕೋರಿದರು.

