ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಪಂಡಿತ್ ಜವಾರಲಾಲ್ ನೆಹರು ಶ್ರೀಮಂತ ಕುಟುಂಬದಲ್ಲಿ ಜನಿಸಿದ್ದರೂ, ಸ್ವತಂತ್ರ ಹೋರಾಟ, ಭಾರತಕ್ಕಾಗಿ ತ್ಯಾಗ ಮಾಡಿ ಜೈಲುವಾಸ ಅನುಭವಿಸಿ, ಬ್ರಿಟೀಷರ ಗುಂಡಿಗೆ ಎದೆಕೊಟ್ಟು ಶಾಂತಿ ಮಾರ್ಗದಲ್ಲಿ ಹೋರಾಟ ನಡೆಸಿದ್ದಾರೆ. ಇಂತಹ ಕುಟುಂಬದ ವಿರುದ್ಧ ಬಿಜೆಪಿಯ ದ್ವೇಷದ ವರ್ತನೆ ಸರಿಯಲ್ಲ ಎಂದು ಮಾಜಿ ಸಚಿವ ಹೆಚ್.ಆಂಜನೇಯ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಗೆ ಗುರುವಾರ ಜಿಲ್ಲಾ ಕಾಂಗ್ರೆಸ್ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ದ್ವೆಷ, ಸೇಡುತನ ಕೆಟ್ಟದ್ದು, ಅದು ತನ್ನನ್ನೇ ಸುಡಲಿದೆ ಎಂಬ ಸತ್ಯವನ್ನು ಬಿಜೆಪಿ ಅರಿತುಕೊಳ್ಳಬೇಕು. ಆದರೆ, ಅಧಿಕಾರದ ಮದ, ಸರ್ವಾಧಿಕಾರಿ ಧೋರಣೆ, ವಾಮಮಾರ್ಗದಲ್ಲಿ ಅಧಿಕಾರವನ್ನು ತನ್ನಲ್ಲಿ ಇಟ್ಟುಕೊಳ್ಳುವ ಬಿಜೆಪಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು.
ರಾಷ್ಟ್ರದಲ್ಲಿನ ಬಹುತೇಕ ತನಿಖಾ ಸಂಸ್ಥೆಗಳನ್ನು ತನ ಕಪಿಮುಷ್ಠಿಗೆ ತೆಗೆದುಕೊಂಡು, ಪ್ರತಿಪಕ್ಷದವರ ಮೇಲೆ ದಾಳಿ ನಡೆಸಲು ಸೂಚಿಸುತ್ತಿರುವ ಬಿಜೆಪಿ, ತನ್ನ ವರ್ತನೆ ಬದಲಾಯಿಸಿಕೊಳ್ಳದಿದ್ದರೇ ಜನದಂಗೆ ಖಚಿತ ಎಂದು ಎಚ್ಚರಿಸಿದರು.
ಪಂಡಿತ್ ಜವಾರಲಾಲ್ ನೆಹರು ಭಾರತವನ್ನು ಆಂಗ್ಲರಿಂದ ಮುಕ್ತಗೊಳಿಸಲು ಬದುಕನ್ನೇ ಸಮರ್ಪಿಸಿದ ಮಹಾನ್ ನಾಯಕ. ಸ್ವತಂತ್ರ್ಯ ಚಳವಳಿಯಲ್ಲಿ ಅನೇಕ ವರ್ಷ ಜೈಲುವಾಸ ಅನುಭವಿಸಿದ್ದಾರೆ. ಬ್ರಿಟೀಷರು ಸಂಪನ್ಮೂಲವನ್ನು ಲೂಟಿ ಮಾಡಿದ್ದ ದೇಶದ ಪ್ರಥಮ ಪ್ರಧಾನಿಯಾಗಿ ನವಭಾರತ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಎಂದರು.
ಕೈಗಾರಿಕೆ, ಶಿಕ್ಷಣ, ಆರೋಗ್ಯ, ಜಲಾಶಯಗಳು, ವಿಮಾನ ನಿಲ್ದಾಣ ಹೀಗೆ ಅನೇಕ ಅಭಿವೃದ್ಧಿ ಕೆಲಸ ಮಾಡಿರುವ ನೆಹರು ಕುರಿತು ಹಾಗೂ ಚಿಕ್ಕ ವಯಸ್ಸಿನಲ್ಲಿಯೇ ಅಪ್ಪ ನೆಹರು ಜೊತೆ ಜೈಲು ಸೇರಿದ್ದ ಇಂದಿರಾ ಗಾಂಧಿ ಕುಟುಂಬದ ತ್ಯಾಗ ಸಹಿಸಿಕೊಳ್ಳಲು ಬಿಜೆಪಿಯಿಂದ ಆಗುತ್ತಿಲ್ಲ ಎಂದು ದೂರಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸಾರ್ವಜನಿಕ ಸಂಸ್ಥೆ ಆಗಿದ್ದು, ಸೇವಾ ಕಾರ್ಯದಲ್ಲಿನ ಸಂಸ್ಥೆಯ ಪ್ರಗತಿಗೆ ನೆಹರು ಕುಟುಂಬದ ಎಲ್ಲರೂ ಶ್ರಮಿಸಿದ್ದಾರೆ. ಆದರೆ, ಇದನ್ನೆ ಮಹಾಪರಾಧವೆಂಬಂತೆ ಅವರ ವಿರುದ್ಧ ತನಿಖೆ ಸಂಸ್ಥೆಗಳನ್ನು ಬಿಟ್ಟು ಸುಳ್ಳು ಪ್ರಕರಣ ದಾಖಲಿಸಿ ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಬಿಜೆಪಿ ಮಾಡಿದೆ ಎಂದರು.
ಬಿಜೆಪಿಯ ಈ ನಡೆ ವಿರುದ್ಧ ಈಗಾಗಲೇ ಕೋರ್ಟ್ ಛಿಮಾರಿ ಹಾಕಿದೆ. ಸುಳ್ಳು, ದ್ವೇಷದ ಬಿಜೆಪಿಯ ಗುಣಕ್ಕೆ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ. ಆದರೂ ಬಿಜೆಪಿ ನಾಯಕರಿಗೆ ಬುದ್ಧಿ ಬಂದಿಲ್ಲ. ದ್ವೇಷ, ಸೇಡನ್ನು ಮತ್ತಷ್ಟು ಮುಂದುವರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಭರ್ಜರಿ ಬಹುಮತದೊಂದಿಗೆ ಜನರ ಬದುಕು ಉತ್ತಮಗೊಳಿಸಲು ಗ್ಯಾರೆಂಟಿ ಯೋಜನೆಗಳ ಮೂಲಕ ದೇಶದಲ್ಲಿಯೇ ಕಾಂಗ್ರೆಸ್ ಗಮನ ಸೆಳೆದಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಕ್ಷ ಕೇಂದ್ರದಲ್ಲೂ ಅಧಿಕಾರಕ್ಕೆ ಬರಲಿದೆ. ಆಗ ನಾವು ಕೂಡ ದ್ವೇಷದ ರಾಜಕಾರಣ ಮಾಡಿದರೆ ಏನಾಗುತ್ತೇ. ಅಂತಹ ಕೆಟ್ಟಬುದ್ಧಿ ನಮ್ಮಲ್ಲಿಲ್ಲ. ನಾವು ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಕರು, ಬಿಜೆಪಿ ರೀತಿ ಭಕ್ಷರಲ್ಲ ಎಂದು ಹೇಳಿದರು.
ಮತಗಳ್ಳತನ ಸೇರಿ ವಿವಿಧ ವಿಷಯಗಳಲ್ಲಿ ಧ್ವನಿಯೆತ್ತಿ ಜನಪರ ಹೋರಾಟ ನಡೆಸುತ್ತಿರುವ ರಾಹುಲ್ ಗಾಂಧಿ ಅವರನ್ನು ನೇರವಾಗಿ ಎದುರಿಸಲು ಸಾಧ್ಯವಾಗದೆ ವಾಮಮಾರ್ಗದಲ್ಲಿ ಬಿಜೆಪಿ ಸಾಗುತ್ತಿದೆ. ಇದೊಂದು ಕೆಟ್ಟ, ದ್ವೇಷದ ರಾಜಕಾರಣ.
ಈಗಾಗಲೇ ಎಲ್ಲ ಕ್ಷೇತ್ರಗಳನ್ನು ತಾನು ಹೇಳದಂತೆ ಕುಣಿಯುವ ರೀತಿ ಮಾಡಿಕೊಂಡಿರುವ ಬಿಜೆಪಿ ನಾಯಕರಿಗೆ, ನ್ಯಾಯಾಲಯದ ತೀರ್ಪುಗಳು ಸದಾ ಮಂಗಳಾರತಿ ಮಾಡುತ್ತಿವೆ. ಪ್ರತಿಪಕ್ಷಗಳು ಹಾಗೂ ಬಡ ಜನರ ಬದುಕು ಕೋರ್ಟ್ ಇರುವ ಕಾರಣ ಉಳಿದಿದೆ. ಇಲ್ಲದಿದ್ದರೆ ಪ್ರತಿಪಕ್ಷದವರು ಜೈಲು, ಜನರು ಬೀದಿಗೆ ಬೀಳಬೇಕಾಗಿತ್ತು ಎಂದು ಆತಂಕ ವ್ಯಕ್ತಪಡಿಸಿದರು.
ನ್ಯಾಷನಲ್ ಹೆರಾಲ್ಡ್ ಸಂಸ್ಥೆ ವಿಷಯದಲ್ಲಿ ಸೋನಿಯಾ, ರಾಹುಲ್ ಗಾಂಧಿ ವಿರುದ್ಧದ ತನಿಖಾ ಸಂಸ್ಥೆ ವರದಿಯನ್ನು ತಿರಸ್ಕರಿಸುವ ಮೂಲಕ ನೆಹರು ಕುಟುಂಬದ ಘನತೆ, ಗೌರವವನ್ನು ನ್ಯಾಯಾಲಯ ರಕ್ಷಿಸಿದೆ.
ಈಗಾಲದರೂ ಬಿಜೆಪಿ ಬುದ್ಧಿ ಕಲಿತು, ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಬಡ ಜನರ ಪರವಾಗಿ ಅಭಿವೃದ್ಧಿಗಾಗಿ ಯೋಜನೆ ರೂಪಿಸದೆ ದ್ವೇಷದ ರಾಜಕಾರಣ ಮುಂದುವರಿಸಿದರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಕಾಂಗ್ರೆಸ್ ಕಾರ್ಯಕರ್ತರು ದಂಗೆ ಎದ್ದರೇ ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ನಾವು ಶಾಂತಿ ಮಾರ್ಗದಲ್ಲಿ ನಂಬಿಕೆ ಇಟ್ಟವರು. ಆದ್ದರಿಂದಲೇ ಇಂದು ಶಾಂತಿಯುತ, ಪ್ರಜಾಪ್ರಭುತ್ವದ ಹಾದಿಯಲ್ಲಿ ಪ್ರತಿಭಟನೆ ನಡೆಸಿ ಎಚ್ಚರಿಕೆ ನೀಡಿದ್ದೇವೆ. ಕೋರ್ಟ್ ತೀರ್ಪು ಕೇಂದ್ರ ಸರ್ಕಾರಕ್ಕೆ ಮುಖಭಂಗವನ್ನುಂಟು ಮಾಡಿದೆ. ಆದ್ದರಿಂದ ಸಂಬಂಧಿಸಿದ ಸಚಿವರು, ಷಡ್ಯಂತರ ನಡೆಸಿದ ಬಿಜೆಪಿ ನಾಯಕರು ಕೂಡಲೇ ರಾಜೀನಾಮೆ ನೀಡಿ ದೇಶದ ಜನರ ಬಳಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಬಿಜೆಪಿ ಕಾರ್ಯಾಲದಯವರಿಗೆ ಪ್ರತಿಭಟನಾ ಮೆರವಣಿಗೆ ಮೂಲಕ ಆಗಮಿಸಿದ ಕಾರ್ಯಕರ್ತರು, ಭಾಜಪ ಕಚೇರಿಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆಸಿದರು. ಪೊಲೀಸ್ ಸರ್ಪಗಾವಲು ತಡೆವೊಡ್ಡಿತು. ಬಳಿಕ ಬಿಜೆಪಿ ಹಾಗೂ ಆ ಪಕ್ಷದ ನಾಯಕರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತ್ಯಾಗಮಯಿ ವಿರುದ್ಧ ಸೇಡು–
ಮಹಾತ್ಮ ಗಾಂಧೀಜಿ ಅವರನ್ನು ದೇಶ-ವಿದೇಶಗಳಲ್ಲಿ ಪೂಜನೀಯ ಭಾವನೆಯಿಂದ ಕಾಣಲಾಗುತ್ತದೆ. ಆದರೆ ದೇಶದಲ್ಲಿನ ಬಿಜೆಪಿ ನಾಯಕರಿಗೆ ಅವರ ಹೆಸರು ಕೇಳುತ್ತಿದ್ದಂತೆ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಆಂಜನೇಯ ದೂರಿದರು.
ಬಡವರು, ಮಧ್ಯವರ್ಗದ ಜನ ಗುಳೆ, ವಲಸೆ ಹೋಗದಂತೆ ಅವರಿಗೆ ಉದ್ಯೋಗ ನೀಡಲು ಮಹಾತ್ಮ ಗಾಂಧೀಜಿ ಹೆಸರಲ್ಲಿ ನರೇಗಾ ಯೋಜನೆ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿತ್ತು. ಈಗ ಆ ಯೋಜನೆಯ ಹೆಸರು ಬಳಸುವ ಕೆಟ್ಟ ಪದ್ಧತಿ ಬಿಜೆಪಿ ಮಾಡುತ್ತಿದೆ. ಬಿಜೆಪಿ ಸರ್ಕಾಕ್ಕೆ ತಾಕತ್ತು ಇದ್ದರೇ ಹೊಸದಾಗಿ ಯೋಜನೆ ರೂಪಿಸಿ ಅದಕ್ಕೆ ತಮ್ಮಿಷ್ಟದ ಹೆಸರು ಇಟ್ಟುಕೊಳ್ಳಲಿ ಎಂದು ಆಗ್ರಹಿಸಿದರು. ದೇಶಕ್ಕಾಗಿ ಹೋರಾಟ ನಡೆಸಿದ ಗಾಂಧೀಜಿ ಮೇಲೇ ಏಕೆ ಸಿಟ್ಟು ಎಂದು ಪ್ರಶ್ನಿಸಿದರು.
ಸುಳ್ಳು ದಾಖಲೆ ಸೃಷ್ಟಿ-
“ಬಿಜೆಪಿ ನಾಯಕರು ಇಡಿ, ಸಿಬಿಐ ತನಿಖಾ ಸಂಸ್ಥೆಗಳನ್ನು ರಾಜಕೀಯವಾಗಿ ಬಳಸಿಕೊಂಡು, ಸುಳ್ಳು ದಾಖಲೆ ಸೃಷ್ಟಿ ಮಾಡಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿ ಇತರೆ ಮುಖಂಡರ ಮೇಲೆ ಕೇಸ್ ಹಾಕಿ, ತೇಜೋವಧೆ ಮಾಡುತ್ತಿದ್ದಾರೆ. ಇಂತಹ ನಡೆಗೆ ಈಗ ಕೋರ್ಟ್ ತಡೆ ಹಾಕಿದೆ. ಈಗಾಲದರೂ ಬುದ್ಧಿ ಕಲಿಯಲಿ. ಅಧಿಕಾರ ಶಾಶ್ವತ ಅಲ್ಲ”.
ಹೆಚ್.ಆಂಜನೇಯ, ಮಾಜಿ ಸಚಿವರು.
ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‍ಪೀರ್, ಕಾರ್ಯಾಧ್ಯಕ್ಷ ಹಾಲಸ್ವಾಮಿ, ನಗರಸಭೆ ಸದಸ್ಯೆ ಮೀನಾಕ್ಷಿ, ಮಾಜಿ ಅಧ್ಯಕ್ಷರಾದ ಸಿ.ಟಿ.ಕೃಷ್ಣಮೂರ್ತಿ, ಹೆಚ್.ಮಂಜಪ್ಪ, ಡಿ.ಎನ್.ಮೈಲಾರಪ್ಪ, ಮುಖಂಡರಾದ ಶಿವಣ್ಣ, ಗೀತಾನಂದಿನಿಗೌಡ, ಡಿ.ಆರ್.ಲೋಕೇಶ್ವರಪ್ಪ, ಆರ್.ಕೆ.ಸರ್ಧಾರ್, ಓ.ಶಂಕರ್, ಕೆ.ಪಿ.ಸಂಪತ್‍ಕುಮಾರ್, ಸೈಯದ್ ಮೋಹಿದ್ದೀನ್ ಚೋಟು, ಜಿ.ಎಸ್.ಕುಮಾರಗೌಡ, ಎನ್.ಡಿ.ಕುಮಾರ್,
ಕಾರೇಹಳ್ಳಿ ಉಲ್ಲಾಸ್, ಸುದರ್ಶನ್, ಬೋರೇನಹಳ್ಳಿ ಚೇತನ್, ಸೈಯದ್ ಖುದ್ದೂಸ್, ಹೆಚ್.ಅಂಜಿನಪ್ಪ, ಆಶಾ, ಅನೀಸ್, ಅಶ್ವಕ್ ಅಲಿ, ಪ್ರಕಾಶ್, ಲಕ್ಷ್ಮೀಕಾಂತ್, ಅನಿಲ್ ಕೋಟಿ, ಎಸ್.ಎನ್.ರವಿಕುಮಾರ್, ಜಿ.ವಿ.ಮಧುಗೌಡ, ಬಸವರಾಜ್, ಶಿವಣ್ಣ, ತಿಪ್ಪೇಸ್ವಾಮಿ ಇತರರು ಪಾಲ್ಗೊಂಡಿದ್ದರು.

