ಚಂದ್ರವಳ್ಳಿ ನ್ಯೂಸ್, ಕಾರವಾರ:
ಬೆಳಗಾವಿ ಅಧಿವೇಶನದಲ್ಲಿ ಕೊರೆಯುವ ಚಳಿಯಲ್ಲೂ ವಿಪಕ್ಷಗಳು ಬಿಸಿ ಮುಟ್ಟಿಸುತ್ತಿರುವುದು ಒಂದೆಡೆಯಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿಯಲ್ಲಿ ಅಲುಗಾಡದಂತೆ ಕೂತಿದ್ದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಿಡುವಿಲ್ಲದ ದೇವರ ಮೊರೆ ಹೋಗಿದ್ದಾರೆ.
ಬಿಡುವಿಲ್ಲದ ಒತ್ತಡದ ಕೆಲಸದಲ್ಲೂ ಡಿಸಿಎಂ ಶಿವಕುಮಾರ್ ಅವರು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಯ ಶಕ್ತಿ ಕೇಂದ್ರಗಳಿಗೆ ಭೇಟಿ ನೀಡಿದ್ದಾರೆ. ಅಂಕೋಲಾ ತಾಲೂಕಿನ ಆಂದ್ಲೆಯಲ್ಲಿರೋ ಕರಾವಳಿ ಶಕ್ತಿದೇವಿ ಜಗದೀಶ್ವರಿ ಸನ್ನಿಧದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರಾಜ್ಯ ಕಾಂಗ್ರೆಸ್ನಲ್ಲಿ ಕುರ್ಚಿ ಕಾಳಗ ದಿನೇ ದಿನೇ ತಾರಕಕ್ಕೇರುತ್ತಿದೆ. ಸಿಎಂ ಸಿದ್ದರಾಮಯ್ಯ ಬಣ ತಂತ್ರ ಹೆಣೆಯುತ್ತಿದ್ದರೆ, ಡಿಕೆ ಬಣ ಕೂಡ ಪ್ರತಿತಂತ್ರ ರೂಪಿಸುತ್ತಿದೆ. ಸಿಎಂ-ಡಿಸಿಎಂ ಎರಡೂ ಬಣಗಳ ನಾಯಕರು ಡಿನ್ನರ್ ಮೀಟಿಂಗ್ ಮಾಡಿದರೆ, ಮತ್ತೊಂದ್ಕಡೆ ಟೆಂಪಲ್ ರನ್ ಮಾಡುತ್ತಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ಅವರು ದೇವಸ್ಥಾನಗಳ ದರ್ಶನ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ನಾನು ಯಾವತ್ತೂ ಅವರು 5 ವರ್ಷ ಇರಲ್ಲ ಎಂದು ಹೇಳಿಲ್ಲ. ಹೈಕಮಾಂಡ್ ಅವರ ಪರವಾಗಿಲ್ಲವೆಂದು ಕೂಡ ನಾನು ಹೇಳಿಲ್ಲ. ಅವರ ಪರವಾಗಿ ಹೈಕಮಾಂಡ್ ಇರುವುದಕ್ಕೆ ಸಿಎಂ ಆಗಿರೋದು.
ನಾನು ಅವರು ಇಬ್ಬರು ಒಂದ ಒಪ್ಪಂದಕ್ಕೆ ಬಂದಿದ್ದೇವೆ. ಹೈಕಮಾಂಡ್ ಕೂಡ ಒಂದು ಒಪ್ಪಂದಕ್ಕೆ ಬಂದಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.
ರಾಜ್ಯ ರಾಜಕಾರಣದಲ್ಲಿ ಉಪಮುಖ್ಯಮಂತ್ರಿ ಡಿಕೆಶಿ ಅವರ ಹೇಳಿಕೆ ಸಂಚಲನ ಮೂಡಿಸಿದೆ. ಹೈಕಮಾಂಡ್ ತಂದಿರುವ ಒಪ್ಪಂದ ಏನು ಎನ್ನುವುದೇ ನಿಗೂಢವಾಗಿದ್ದು ಕಾಂಗ್ರೆಸ್ನಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಾನು ಕೆಲ ವರ್ಷಗಳ ಹಿಂದೆ ದೇವಿಯಲ್ಲಿ ಬೇಡಿಕೆ ಇಟ್ಟಿದ್ದು ಬೇಡಿಕೆ ಈಡೇರಿದ್ದಕ್ಕೆ ಶುಕ್ರವಾರ ದೇವಿಯ ಆಶೀರ್ವಾದ ಪಡೆದಿದ್ದೇನೆ ಎಂದು ಡಿಸಿಎಂ ಸೂಚ್ಯವಾಗಿ ತಿಳಿಸಿದರು.
ಇದೇ ವೇಳೆ ದೇವಿ ಈ ಹಿಂದಿನ ರೀತಿ ಈ ಬಾರಿಯೂ ಒಂದು ದಿನಾಂಕ ಹೇಳಿದ್ಲಾ? ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಡಿಕೆಶಿ ಖುಷಿಯಲ್ಲಿ ನಗುತ್ತಾ ತೆರಳಿದರು.

