ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ದಾವಣಗೆರೆ ನಗರದ ಪೊಲೀಸ್ ಕವಾಯತ್ ಮೈದಾನದಲ್ಲಿ ಶುಕ್ರವಾರ ಪೂರ್ವ ವಲಯ ಐಜಿಪಿ ರವಿಕಾಂತೇಗೌಡ, ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ 20.38 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ರಿಟರ್ನ್ಸ್ ಪರೇಡ್ ಕಾರ್ಯಕ್ರಮ ನಡೆಯಿತು.
ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಭೇದಿಸಿ ಮಾಲೀಕರಿಗೆ ಅವರ ವಸ್ತುಗಳು ಹಸ್ತಾಂತರಿಸಲಾಯಿತು.
ಈ ವೇಳೆ ಚಿನ್ನ, ನಗದು, ಬೆಳ್ಳಿ ಕಳೆದುಕೊಂಡಿದ್ದವರ ಮುಖದಲ್ಲಿ ಮಂದಹಾಸ ಮೂಡಿತ್ತು.
20.38 ಕೋಟಿ ಮೌಲ್ಯದ ಆಸ್ತಿ–
ಈ ಪ್ರಾಪರ್ಟಿ ರಿಟರ್ನ್ಸ್ ಪರೇಡ್ನಲ್ಲಿ 2025 ವರ್ಷದಲ್ಲಿ ಪೊಲೀಸ್ ಅಧಿಕಾರಿ, ಸಿಬ್ಬಂದಿ ತಂಡ ಕಾರ್ಯಚರಣೆ ನಡೆಸಿ ಒಟ್ಟು 173 ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣಗಳಿಂದ ಅಂದಾಜು 19,64,52,459 ರೂ. ಮೌಲ್ಯದ ಸುಮಾರು 24 ಕೆಜಿ 726 ಗ್ರಾಂ ತೂಕದ ಚಿನ್ನ, 24,35,362 ರೂ. ಮೌಲ್ಯದ 26 ಕೆಜಿ 672 ಗ್ರಾಂ ಬೆಳ್ಳಿಯ ಆಭರಣಗಳು, ಜೊತೆಗೆ ಒಟ್ಟು 85,68,938 ರೂ ನಗದು, 46,28,517 ರೂ ಮೌಲ್ಯದ 90 ವಿವಿಧ ಮಾದರಿ ಬೈಕ್ಗಳು, 73,80,000 ರೂ ಮೌಲ್ಯದ 492 ವಿವಿಧ ಕಂಪನಿಯ ಮೊಬೈಲ್ಗಳು, 16,81,000 ರೂ ಮೌಲ್ಯದ ಕೃಷಿ ಉಪಕರಣಗಳು, ಒಟ್ಟು 20,38,32,459 ರೂ ಮೌಲ್ಯದ ವಸ್ತುಗಳನ್ನು ಆಯಾ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ. 2025ನೇ ವರ್ಷ ದಾವಣಗೆರೆ ಪೊಲೀಸರ ಪಾಲಿಗೆ ಒಂದು ರೀತಿಯಲ್ಲಿ ಹರ್ಷದ ವರ್ಷ.
ಸುಮಾರು ಆರು ತಿಂಗಳ ಕಾಲ ಶೋಧ ನಡೆಸಿ ನ್ಯಾಮತಿ ಎಸ್ಬಿಐ ಕೇಸ್ ಪತ್ತೆ ಹಚ್ಚಿದ್ದಾರೆ. ಇನ್ನೊಂದು ಕಡೆ ಮಹಾರಾಷ್ಟ್ರ, ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯದಲ್ಲಿ ವೃತ್ತಿಪರ ಕಳ್ಳರ ತಂಡಗಳನ್ನ ಪತ್ತೆ ಹಚ್ಚಿದ್ದಾರೆ. ಇನ್ನು ದಾವಣಗೆರೆ ಓರ್ವ ಖಾಸಗಿ ಬ್ಯಾಂಕ್ ಉದ್ಯೋಗಿ ನಕಲಿ ಚಿನ್ನ ಅಡವಿಟ್ಟು ಯಾಮಾರಿಸಿದ್ದು, ಎಸ್ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುವ ಶರೀಫ್ ಎಂಬಾತ ಏಳು ಲಕ್ಷ ರೂ ಎಗರಿಸಿದ್ದು ಪತ್ತೆಯಾಗಿದ್ದು ವಿಶೇಷ.
2025ರ ವರ್ಷ ಕೊನೆ ಆಗುವ ಹಂತದಲ್ಲಿದ್ದು 2026ರ ನೂತನ ವರ್ಷ ಆಗಮನ ನಿರೀಕ್ಷೆಯಲ್ಲಿರುವ ಜನರು ಹೊಸ ವರ್ಷ ಸ್ವಾಗತಿಸುವುದಕ್ಕೆ ಸಜ್ಜಾಗುತ್ತಿದ್ದಾರೆ. ಇದಕ್ಕಾಗಿ ನಾನಾ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ದಾವಣಗೆರೆ ಪೊಲೀಸರಿಗೆ ಒಂದು ರೀತಿ ಸುವರ್ಣ ಕಾಲವೆಂದರೆ ತಪ್ಪಾಗಲಿಕ್ಕಿಲ್ಲ. ಇಡೀ ರಾಜ್ಯವನ್ನು ಬೆಚ್ಚಿಬಿಳಿಸಿದ್ದ ನ್ಯಾಮತಿ ಬ್ಯಾಂಕ್ ದರೋಡೆ ಕೇಸ್, ಕ್ಷಣದಲ್ಲಿ ಚಿನ್ನ ಕಣ್ಮರೆ ಮಾಡುವ ಬಾಂಡ್ ಬಾಜಾ ಗ್ಯಾಂಗ್ ಸೇರಿ ಹಲವು ಪ್ರಕರಣಗಳನ್ನು ಭೇದಿಸಿದ್ದಾರೆ. ಅಷ್ಟೇ ಅಲ್ಲದೆ 20.38 ಕೋಟಿ ರೂ. ಮೌಲ್ಯದ ಪ್ರಾಪರ್ಟಿ ರಿಟರ್ನ್ಸ್ ಪರೇಡ್ ಮೂಲಕ ಪೊಲೀಸರು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪ್ರಕರಣದಲ್ಲಿ ಸುಮಾರು 17 ಕೋಟಿ ರೂ. ಮೌಲ್ಯದ ಚಿನ್ನ ದೋಚಿಕೊಂಡು ಪರಾರಿಯಾಗಿದ್ದರು. ನ್ಯಾಮತಿ ಪಟ್ಟಣದ ನೆಹರು ರಸ್ತೆಯ ಎಸ್ಬಿಐ ಬ್ಯಾಂಕ್ ಗ್ರಾಹಕರು ಕಣ್ಣೀರು ಹಾಕುವಂತಾಗಿತ್ತು.
ಬ್ಯಾಂಕ್ ಪಕ್ಕದಲ್ಲಿ ಬೇಕರಿ ನಡೆಸುತ್ತಿದ್ದ ಅಜಯ್ ಮತ್ತು ವಿಜಯ್ ಎಂಬ ಇಬ್ಬರು ಸಹೋದರು ಚಿನ್ನ ಕದ್ದು ತಮಿಳುನಾಡಿನ ಬಾವಿಯೊಂದರಲ್ಲಿ ಇಟ್ಟಿದ್ದರು. ಅದನ್ನ ಪೊಲೀಸರು ಪತ್ತೆ ಹಚ್ಚಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು.

