ಚಂದ್ರವಳ್ಳಿ ನ್ಯೂಸ್, ಬೆಳಗಾವಿ:
ಉತ್ತರ ಕರ್ನಾಟಕಕ್ಕೆ ನಾವೇನು ಕೊಟ್ಟಿದ್ದೇವೆ. ನೀವು ಏನು ಕೊಡುಗೆ ಕೊಟ್ಟಿದ್ದಿರಿ..? ಮತ್ತು ನಮ್ಮ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ನಿಮ್ಮ ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬ ಬಗ್ಗೆಯೂ ಶ್ವೇತ ಹೊರಡಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ನಾಯಕರಿಗೆ ಸವಾಲು ಹಾಕಿದ ಘಟನೆ ವಿಧಾನಸಭೆಯಲ್ಲಿ ಶುಕ್ರವಾರ ಜರುಗಿತು.
ವಿಧಾನಸಭೆಯಲ್ಲಿ ಉತ್ತರಕರ್ನಾಟಕ ಅಭಿವೃದ್ಧಿ ಕುರಿತ ಚರ್ಚೆಗೆ ಉತ್ತರಿಸುವಾಗ, ಕಳೆದ 20 ವರ್ಷಗಳಲ್ಲಿ ನೀವು ಸುಮಾರು 11 ವರ್ಷಗಳ ಕಾಲ ಅಧಿಕಾರದಲ್ಲಿ ಇದ್ದಿರಿ. ಉತ್ತರ ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು? ಅಧಿಕಾರಕ್ಕೆ ಬರುವುದಕ್ಕೆ ಮೊದಲು ನಿಮಗೆ ಉತ್ತರ ಕರ್ನಾಟಕ ನೆನಪಾಗುತ್ತದೆ. ಅಧಿಕಾರದಲ್ಲಿದ್ದಾಗ ನಿಮಗೆ ಉತ್ತರ ಕರ್ನಾಟಕ ಇದೆ, ಅದರ ಹಿತಾಸಕ್ತಿ ಕಾಪಾಡಬೇಕು ಎಂದು ಅನ್ನಿಸುವುದೇ ಇಲ್ಲ. ಆರ್ ಅಶೋಕ್, ವಿಜಯೇಂದ್ರ ಹಾಗೂ ಇನ್ನಿತರ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರು ಶ್ವೇತಪತ್ರಕ್ಕೆ ಬೇಡಿಕೆ ಇಟ್ಟಿದ್ದಾರೆ. ನಾವು ತಯಾರಿದ್ದೇವೆ. 2006 ರಿಂದಲೂ ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನೂ ಹೇಳುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.
ದಾಖಲೆ ಕೊಡಿ:
ವಿಶೇಷ ಸ್ಥಾನಮಾನದಡಿ 371ಜೆ ಜಾರಿ ಮಾಡಲು ಹೋರಾಡಿ ಜಾರಿ ಮಾಡಿದ್ದು ನಮ್ಮ ಕಾಂಗ್ರೆಸ್ ಪಕ್ಷ. ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಯ ವೇಗಕ್ಕೆ 371ಜೆ ಮೂಲಕ ಚಾಲನೆ ನೀಡಿದ್ದು ನಾವು. ನೀವೇನು ಮಾಡಿದ್ದೀರಿ ದಾಖಲೆ ಕೊಡಿ. ಅಡ್ವಾನಿಮತ್ತು ವಾಜಪೇಯಿ ಇಬ್ಬರೂ ಕೇಂದ್ರದಲ್ಲಿ ಸರ್ಕಾರ ನಡೆಸುವಾಗ 371ಜೆ ಜಾರಿ ಸುತಾರಾಂ ಸಾಧ್ಯವಿಲ್ಲ ಎಂದು ಕಲ್ಯಾಣ ಕರ್ನಾಟಕದ ಜನತೆಯ ಕೈ ಬಿಟ್ಟರು ಎಂದು ಬಿಜೆಪಿ ಸದಸ್ಯರನ್ನು ಕುಟುಕಿದರು. ಜೊತೆಗೆ ಕೇಂದ್ರದಿಂದ ರಾಜ್ಯಕ್ಕೆ ದೊಡ್ಡ ತಾರತಮ್ಯ ಆಗುತ್ತಿದೆ. ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಇದಕ್ಕೆ ಆರ್.ಅಶೋಕ್ ವಿರೋಧಿಸಿ, ಎಲ್ಲವನ್ನು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸಬೇಡಿ. ಕೇಂದ್ರವೇ ಮಾಡುವುದಾದರೆ ನೀವು ಏತಕ್ಕೆ ಬೇಕು..? ನಿಮ್ಮ ಅವಶ್ಯಕತೆ ಇಲ್ಲ. ಜಾಗ ಖಾಲಿ ಮಾಡಿ. ರಾಜ್ಯ ಸರ್ಕಾರದ ಜವಾಬ್ದಾರಿಯೂ ಹೆಚ್ಚಿದೆ. ಈ ಭಾಗಕ್ಕೆ ಬರಪೂರ ಘೋಷಣೆ ಮಾಡುತ್ತಾರೆ ಅಂದುಕೊಂಡರೆ ಇಲ್ಲಿ ಬರ ಇದೆ, ಪೂರ ಇಲ್ಲ ಅಂತಾ ಲೇವಡಿ ಮಾಡಿದರು.
ನಾವು ತೆರಿಗೆ ಕೊಡುವುದು ಯಾರಿಗೆ? ಕೇಂದ್ರ ಸರ್ಕಾರ ಬಿಟ್ಟು ಮಾತನಾಡಲು ಆಗುತ್ತಾ..? ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ, ಜೆಜೆಎಂ 13 ಸಾವಿರ ಕೋಟಿ ಸೇರಿ ಹಲವು ಕಾಮಗಾರಿಗಳಿಗೆ ಅನುದಾನ ನೀಡಿಲ್ಲ. ಇನ್ನು ಕಳೆದ ಬಾರಿ ಬಿಜೆಪಿಯವರು ರಾಜ್ಯದಲ್ಲಿ 600 ಭರವಸೆ ಕೊಟ್ಟು, 60 ಈಡೇರಿಸಿಲ್ಲ. ನಾವು ಕೊಟ್ಟ ಎಲ್ಲಾ ಭರವಸೆ ಈಡೇರಿಸುತ್ತೇವೆ ಎಂದರು.
ಪ್ರಾದೇಶಿಕ ಅಸಮತೋಲನ ನಿವಾರಿಸುವ ಉದ್ದೇಶದಿಂದಲೇ ಡಾ.ನಂಜುಡಪ್ಪ ವರದಿಯ ಅನುಷ್ಠಾನದ ಕುರಿತು ಅಧ್ಯಯನ ನಡೆಸಲು ಆರ್ಥಿಕ ತಜ್ಞ ಗೋವಿಂದರಾವ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈ ಸಮಿತಿ ಬರುವ ಜನವರಿಯಲ್ಲಿ ತನ್ನ ವರದಿ ನೀಡಲಿದೆ. ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದ ಶೈಕ್ಷಣಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಿ ಆರ್ಥಿಕ ತಜ್ಞೆ ಪ್ರೊ.ಛಾಯಾ ದೇವಣಗಾಂವ್‍ಕರ್ ಅವರ ಸಮಿತಿ 400 ಪುಟಗಳ ವರದಿ ನೀಡಿದೆ. ಈ ಎರಡು ವರದಿಗಳ ಶಿಫಾರಸುಗಳನ್ನು ಯಥಾವತ್ತಾಗಿ ಸರ್ಕಾರ ಅನುಷ್ಠಾನಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಉತ್ತರ ಕರ್ನಾಟಕ ಅಭಿವೃದ್ಧಿ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ವಿಪಕ್ಷಗಳಿಗೆ ಸಮಾಧಾನ ತರಲಿಲ್ಲ. ಈ ವೇಳೆ ಆಡಳಿತ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿದ್ದು ಕಾಂಗ್ರೆಸ್ ಪಕ್ಷದಿಂದಲೇ, ಏನೂ ಉದ್ದಾರ ಆಗಿಲ್ಲ ಎಂದು ಆರೋಪಿಸಿದರು. ಇದಕ್ಕೆ 371 ಜೆ ವಿರೋಧಿಸಿದ್ದ ಬಿಜೆಪಿಗರು ಉತ್ತರ ಕರ್ನಾಟಕ ದ್ರೋಹಿಗಳು ಮತ್ತು ವಿರೋಧಿಗಳು. ಉ.ಕ. ಬಗ್ಗೆ ಮಾತನಾಡಲು ಇವರು ನೈತಿಕತೆ ಕಳೆದುಕೊಂಡಿದ್ದಾರೆ ಎಂದು ಸಿಎಂ ಸೇರಿ ಕೈ ಸದಸ್ಯರು ತಿರುಗೇಟು ಕೊಟ್ಟರು. ಬಳಿಕ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿ ಹೊರ ಹೋದರು.
ಸಿಎಂ ಭಾಷಣದ ಸಾರಾಂಶ:
ಸಾಮಾಜಿಕ ಹಾಗೂ ಅರ್ಥಿಕ ಅಸಮತೋಲನ ಸರಿಪಡಿಸುವ ಸಲುವಾಗಿಯೇ ರಾಜ್ಯ ಸರ್ಕಾರ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಒಟ್ಟು ಜನಸಂಖ್ಯೆಯಲ್ಲಿ ದಕ್ಷಿಣ ಭಾಗದಲ್ಲಿ ಶೇ.58 ರಷ್ಟು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಶೇ.42 ರಷ್ಟು ಜನಸಂಖ್ಯೆಯಿದೆ. ಆದರೆ ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಡಿ ಶೇ.43.63 ರಷ್ಟು ಹಣವನ್ನು ಉತ್ತರ ಕರ್ನಾಟಕ ಭಾಗಕ್ಕೆ ಖರ್ಚು ಮಾಡಿದೆ. ಗೃಹಲಕ್ಷ್ಮಿ ಯೋಜನೆಯಡಿ ರಾಜ್ಯದಾದ್ಯಂತ 1,24,12,543 ಫಲಾನುಭವಿಗಳು ಇದ್ದಾರೆ. ಈ ಪೈಕಿ ಉತ್ತರ ಕರ್ನಾಟಕ ಭಾಗದಲ್ಲಿ 58,92,156 ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ. ರಾಜ್ಯ ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ರೂ.52,400 ಕೋಟಿ ಖರ್ಚು ಮಾಡಿದ್ದು, ಇದರಲ್ಲಿ ಉತ್ತರ ಕರ್ನಾಟಕ ಭಾಗದ ಫಲಾನುಭವಿಗಳ ಖಾತೆಗೆ ರೂ.24,631 ಕೋಟಿ ಜಮೆ ಮಾಡಿದೆ.
ಗೃಹಜ್ಯೋತಿ ಯೋಜನೆಯಡಿ ರಾಜ್ಯದ್ಯಂತ 1,65,24,547 ಮನೆಗಳಿಗೆ 200 ಯುನಿಟ್‍ವರೆಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ 56,70,211 ಮನೆಗಳು ಉಚಿತ ವಿದ್ಯುತ್ ಪಡೆಯುತ್ತಿವೆ. ಇದಕ್ಕಾಗಿ ರಾಜ್ಯದ್ಯಂತ ರೂ.20,639 ಕೋಟಿ ವೆಚ್ಚ ಮಾಡಿದ್ದು ಈ ಪೈಕಿ ರೂ.6038 ಉತ್ತರ ಕರ್ನಾಟಕ ಭಾಗಕ್ಕೆ ಖರ್ಚಾಗಿದೆ ಎಂದರು.
ಯುವನಿಧಿ ಯೋಜನೆಯಡಿ ರಾಜ್ಯಾದ್ಯಂತ 2,84,802 ಕೋಟಿ ಫಲಾನುಭವಿಗಳಿದ್ದಾರೆ. ಈ ಪೈಕಿ ಉತ್ತರ ಕರ್ನಾಟಕದಲ್ಲಿ 1,73,722 ನಿರುದ್ಯೋಗಿ ಫಲಾನುಭವಿಗಳು ಯೋಜನೆಯಡಿ ಭತ್ಯೆ ಪಡೆಯುತ್ತಿದ್ದಾರೆ. ಯೋಜನೆಗೆ ರಾಜ್ಯದಲ್ಲಿ ರೂ.750 ಕೋಟಿ ಖರ್ಚಾಗಿದ್ದು, ರೂ.456 ಕೋಟಿಯನ್ನು ಉತ್ತರ ಕರ್ನಾಟಕ ಫಲಾನುಭವಿಗಳ ಖಾತೆ ಜಮೆ ಮಾಡಲಾಗಿದೆ. ಇದೇ ರೀತಿ ಅನ್ನಭಾಗ್ಯ ಯೋಜನೆಯಡಿ ಉತ್ತರ ಕರ್ನಾಟಕಕ್ಕೆ ರೂ.7848 ಕೋಟಿ, ಶಕ್ತಿ ಯೋಜನೆಯಡಿ ರೂ.7027 ಕೋಟಿ ವ್ಯಯಿಸಲಾಗಿದೆ ಎಂದು ತಿಳಿಸಿದರು.
ಉತ್ತರ ಕರ್ನಾಟಕದ 10 ಜಿಲ್ಲೆಗಳ ತಲಾ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆ: ರಾಜ್ಯದ ಜನಸಂಖ್ಯೆ 6.95 ಕೋಟಿ ಎಂದು ಅಂದಾಜಿಸಲಾಗಿದೆ. ಈ ಪೈಕಿ ಉತ್ತರ ಕರ್ನಾಟಕ ಭಾಗದ ಜನಸಂಖ್ಯೆ 2,96,28,767 ಆಗಿದೆ. ಸುಮಾರು 4 ಕೋಟಿಗೂ ಅಧಿಕ ಜನರು ದಕ್ಷಿಣ ಕರ್ನಾಟಕ ಭಾಗದಲ್ಲಿ ವಾಸವಾಗಿದ್ದಾರೆ. 31 ಜಿಲ್ಲೆಗಳ ಪೈಕಿ 14 ಜಿಲ್ಲೆಗಳು ಉತ್ತರ ಕರ್ನಾಟಕ ಭಾಗದಲ್ಲಿವೆ. 224 ವಿಧಾನಸಭೆ ಕ್ಷೇತ್ರಗಳ ಪೈಕಿ 97 ವಿಧಾನಸಭೆ ಕ್ಷೇತ್ರಗಳು ಉತ್ತರ ಕರ್ನಾಟಕದಲ್ಲಿವೆ. ರಾಜ್ಯದ ಸರಾಸರಿ ತಲಾ ಆದಾಯ ರೂ.3,39,813 ಗಳಾಗಿದೆ. ರಾಜ್ಯ ತಲಾ ಆದಾಯದಲ್ಲಿ ದೇಶದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಗ್ಯಾರೆಂಟಿ ಯೋಜನೆಗಳ ಅನುಷ್ಠಾನದ ಫಲವಾಗಿ ತಲಾ ಆದಾಯ ಹೆಚ್ಚಾಗಿದೆ. ಆದರೆ ಉತ್ತರ ಕರ್ನಾಟಕದ 10 ಜಿಲ್ಲೆಗಳ ತಲಾ ಆದಾಯ ರೂ.2 ಲಕ್ಷಕ್ಕಿಂತ ಕಡಿಮೆಯಿದೆ. ಕಲಬುರ್ಗಿ ತಲಾ ಆದಾಯದಲ್ಲಿ ಕೊನೆಯ ಸ್ಥಾನದಲ್ಲಿದೆ. ಇದು ಪ್ರಾದೇಶಿಕ ಅಸಮತೋಲವನ್ನು ಎತ್ತಿ ತೋರಿಸುತ್ತದೆ. ಅಸಮಾನತೆ ಇದ್ದರೆ ಸಂವಿಧಾನ ಧ್ಯೇಯೊದ್ದೇಶಗಳು ಈಡೇರಿಕೆಯಾಗುವುದಿಲ್ಲ. ಸ್ವಾತಂತ್ರ್ಯ ಪಡೆದಿದ್ದಕ್ಕೆ ಸಾರ್ಥಕತೆ ಇರುವುದಿಲ್ಲ ಎಂದು ಮುಖ್ಯಮುಂತ್ರಿ ಸಿದ್ದರಾಮಯ್ಯ ಹೇಳಿದರು.
ತಲಾ ಆದಾಯದಲ್ಲಿ ಉತ್ತರ ಕರ್ನಾಟಕ ಭಾಗ ಹಿಂದುಳಿದಿರುವಿಕೆ ಬಗ್ಗೆ ವಿಶ್ಲೇಷಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 1985ರಲ್ಲಿ ನಾನು ಹೈನುಗಾರಿಕೆ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದು ಅಂದಿನಿಂದಲೂ ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಗೆ ಆಸಕ್ತಿ ಕಡಿಮೆಯಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟದಲ್ಲಿ ದಿನ ಒಂದಕ್ಕೆ 17 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತದೆ. ಆದರೆ ಕಲಬುರ್ಗಿ, ಯಾದಗಿರಿ, ಬೀದರ್ ರಾಯಚೂರು ಸಹಕಾರಿ ಹಾಲು ಒಕ್ಕೂಟದಲ್ಲಿ ದಿನ ಒಂದಕ್ಕೆ ಕೇವಲ 67 ಸಾವಿರ ಲೀಟರ್ ಹಾಲು ಶೇಖರಣೆಯಾಗುತ್ತದೆ. ರಾಜ್ಯದ ಎಲ್ಲಾ ಸಹಕಾರಿ ಒಕ್ಕೂಟಗಳಲ್ಲಿ ದಿನ ಒಂದಕ್ಕೆ 1 ಕೋಟಿ ಲೀಟರ್ ಹಾಲು ಸಂಗ್ರಹಣೆಯಾದರೆ, ಇದರಲ್ಲಿ ಉತ್ತರ ಕರ್ನಾಟಕ ಭಾಗದ ಸಹಕಾರಿ ಹಾಲು ಒಕ್ಕೂಟಗಳಲ್ಲಿ ಕೇವಲ 10 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತದೆ.
ಹೈನುಗಾರಿಕೆ ಆದಾಯದ ಉತ್ತಮ ಮೂಲವಾಗಿದೆ. ರಾಜ್ಯ ಸರ್ಕಾರವು ಇದಕ್ಕೆ ಪ್ರೋತ್ಸಾಹ ನಿಡುತ್ತಿದ್ದು, ರೈತರಿಗೆ ಪ್ರತಿ ಲೀಟರ್‍ಗೆ ರೂ.7 ಪ್ರೋತ್ಸಾಹ ಧನ ನೀಡುತ್ತಿದೆ. ಈ ಇದಕ್ಕಾಗಿ ಪ್ರತಿದಿನ ರೂ.5 ಕೋಟಿ ವೆಚ್ಚವಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆ ಹೆಚ್ಚಾದರೆ ಜನರ ಆದಾಯವು ಹೆಚ್ಚಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ 24,778 ಕೋಟಿ ರೂ. ಅನುದಾನ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 1990ರಲ್ಲಿ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಲಾಯಿತು. 2013ರಲ್ಲಿ ಕೇಂದ್ರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಅಡಿ ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿತು. ತದ ನಂತರ ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ (ಕೆಕೆಆರ್ಡಿಬಿ)ಯಾಗಿ ಮರುನಾಮಕರಣ ಮಾಡಲಾಗಿದ್ದು, ಇದುವರೆಗೂ ರೂ.24,778 ಕೋಟಿ ಅನುದಾನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
371(ಜೆ) ತಿದ್ದುಪಡಿಯ ನಂತರ ಅಂದಿನ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಹೆಚ್.ಕೆ.ಪಾಟೀಲ್ ಅವರ ಅಧ್ಯಕ್ಷತೆಯ ಸಮಿತಿ ಮಾಡಿ ವರದಿ ಪಡೆಯಲಾಯಿತು. ಈ ವರದಿಯಲ್ಲಿ ಸೂಚಿಸಿದ ಮಾದರಿಯಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಎ ಹಾಗೂ ಬಿ ಗ್ರೂಪ್ ಹುದ್ದೆಗಳಲ್ಲಿ ಶೇ.75 ರಷ್ಟು, ಸಿ ಗ್ರೂಪ್ ಹುದ್ದೆಗಳಲ್ಲಿ ಶೇ.80 ಹಾಗೂ ಡಿ ಗ್ರೂಪ್ ಹುದ್ದೆಗಳಲ್ಲಿ ಶೇ.85 ಹಾಗೂ ರಾಜ್ಯದ ಇತರೆ ಭಾಗಗಳಲ್ಲಿ ಶೇ.8 ರಷ್ಟು ಮೀಸಲಾತಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿಯನ್ನು ಹೈದರಾಬಾದ್ ಕರ್ನಾಟಕ ಅಭ್ಯರ್ಥಿಗಳಿಗೆ ನೀಡಲಾಗಿದೆ.
ಇದರ ಪರಿಣಾಮವಾಗಿ ಇದುವರೆಗೂ ಈ ಭಾಗದ ವಿದ್ಯಾರ್ಥಿಗಳಿಗೆ 10,000 ವೈದ್ಯಕೀಯ, 31,000 ಇಂಜಿನಿಯರಿಂಗ್, ಡೆಂಟಲ್ ಹೋಮಿಯೋಪತಿ ಸೇರಿದಂತೆ ಇತರೆ ವ್ಯಾಸಂಗಗಳಿಗೆ 12,000 ಸೀಟುಗಳು ಲಭ್ಯವಾಗಿವೆ. ಉನ್ನತ ವ್ಯಾಸಾಂಗದಲ್ಲಿ ಒಟ್ಟು 51,606 ವಿದ್ಯಾರ್ಥಿಗಳಿಗೆ ಲಾಭವಾಗಿದೆ. ರಾಜ್ಯ ಸರ್ಕಾರ 900 ಕೆಪಿಎಸ್ ಶಾಲೆಗಳನ್ನು ತೆರೆಯಲು ಅನುಮೊದನೆ ನೀಡಿದೆ. ಈ ಪೈಕಿ 300 ಶಾಲೆಗಳನ್ನು ಕಲ್ಯಾಣ ಕರ್ನಾಟಕ ಭಾಗದಲ್ಲಿ ತೆರೆಯಲಾಗುವುದು. ಇದರೊಂದಿಗೆ ಈ ಭಾಗದಲ್ಲಿ ಖಾಲಿಯಿರುವ 32,000 ಹುದ್ದೆಗಳ ಭರ್ತಿಗೂ ಅನುಮೋದನೆ ನೀಡಲಾಗಿದೆ ಎಂದರು.
ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪನೆ ಪರಿಶೀಲನೆ: ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಮಾದರಿಯಲ್ಲಿ ಕಿತ್ತೂರು ಕರ್ನಾಟಕ ಅಭಿವೃದ್ಧಿ ಮಂಡಳಿ ಸ್ಥಾಪಿಸಿ, ಪ್ರತಿ ವರ್ಷ 5 ಸಾವಿರ ಕೋಟಿ ಅನುದಾನ ನೀಡುವಂತೆ ಶಾಸಕ ಎನ್.ಹೆಚ್.ಕೋನರೆಡ್ಡಿ ನೇತೃತ್ವದಲ್ಲಿ ಈ ಭಾಗದ ಎಲ್ಲಾ ಶಾಸಕರು ಮನವಿ ನೀಡಿದ್ದಾರೆ. ಪ್ರೊ.ಗೋವಿಂದರಾವ್ ಅವರ ವರದಿ ಬಳಿಕ ಈ ಕುರಿತು ಪರೀಶಿಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ನೀಡಿದರು.

