ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕ್ರೀಡಾ ಪಟುಗಳು ಕ್ರೀಡಾ ಸ್ಫೂರ್ತಿ ಮೈಗೂಡಿಸಿಕೊಂಡು, ಸಮಾಜದ ಉತ್ತಮ ಪ್ರಜೆಯಾಗಿ ರೂಪುಗೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ಕರ್ನಾಟಕ ಒಲಿಂಪಿಕ್ಸ್‌ಅಸೋಸಿಯೇಶನ್‌ನ ಲೋಕಭವನದಲ್ಲಿ (ರಾಜಭವನ) ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಒಲಿಂಪಿಕ್-2025 ಪ್ರಶಸ್ತಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು.
ಸರ್ಕಾರ ಕ್ರೀಡಾಪಟುಗಳ ಅಭಿವೃದ್ಧಿಗಾಗಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ತಿಳಿಸಿದರು.
ಒಲಂಪಿಕ್ಸ್ ನಲ್ಲಿ ಚಿನ್ನ ಗೆದ್ದರೆ 6 ಕೋಟಿ, ಬೆಳ್ಳಿ ಗೆದ್ದರೆ 4 ಕೋಟಿ, ಕಂಚು ಗೆದ್ದರೆ 3 ಕೋಟಿ ನೀಡಲಾಗುವುದು ಎಂದು ಘೋಷಿಸಿದ್ದೇನೆ. ಕ್ರೀಡಾಪಟುಗಳು ಕಠಿಣ ಪರಿಶ್ರಮ ಮತ್ತು ಉತ್ತಮ ಗುರಿ ಹೊಂದಿದ್ದರೆ ಮಾತ್ರ ಗೆಲವು ಸುಲಭವಾಗುತ್ತದೆ. ಪ್ರತಿಯೊಬ್ಬ ಕ್ರೀಡಾಪಟುವಿಗೆ ಕ್ರೀಡಾ ಸ್ಫೂರ್ತಿ ಬಹಳ ಮುಖ್ಯ. ಕರ್ನಾಟಕದ ಕ್ರೀಡಾಪಟುಗಳು ಒಲಂಪಿಕ್ ನಲ್ಲಿ ಚಿನ್ನ ಗೆಲ್ಲಬೇಕು ಎಂಬ ಉದ್ದೇಶದಿಂದ ಕಾಯುತ್ತಿರುವೆ ಎಂದು ಅವರು ತಿಳಿಸಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ವತಿಯಿಂದ ನೀಡಲಾಗುತ್ತಿರುವ ಕರ್ನಾಟಕ ಒಲಿಂಪಿಕ್ಸ್ 2025 ಪ್ರಶಸ್ತಿಗೆ ಭಾಜನರಾಗಿರುವ ಕ್ರೀಡಾ ಸಾಧಕರಿಗೆ ಅಭಿನಂದನೆಗಳು. 1958ರಲ್ಲಿ ಪ್ರಾರಂಭವಾದ ಒಲಂಪಿಕ್ಸ್ ಸಂಸ್ಥೆ ಇಲ್ಲಿಯವರೆಗೆ ಕ್ರೀಡಾ ಕ್ಷೇತ್ರದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದೆ.

ವಿಧಾನ ಪರಿಷತ್ ಸದಸ್ಯರಾದ ಗೋವಿಂದರಾಜ್ ಅವರು ಸಂಸ್ಥೆಯ ಅಧ್ಯಕ್ಷತೆ ವಹಿಸಿಕೊಂಡ ನಂತರ ಸಂಸ್ಥೆ ಹೆಚ್ಚು ಕ್ರಿಯಾಶೀಲವಾಗಿದೆ. ನನ್ನ ಅವಧಿಯಲ್ಲಿಯೇ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಕಟ್ಟಡಕ್ಕೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯನ್ನೂ ನೆರವೇರಿಸಿದ್ದೇನೆ. ಇಡೀ ದೇಶದಲ್ಲಿಯೇ ಆಂಧ್ರ ಮತ್ತು ಕೇರಳ ರಾಜ್ಯದಂತೆ ಕರ್ನಾಟಕದಲ್ಲಿಯೂ ಸಂಸ್ಥೆ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಎಂ ತಿಳಿಸಿದರು.
ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆ ಎಲ್ಲ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಕಠಿಣ ಪರಿಶ್ರಮ ಹಾಗೂ ಗುರಿಸಾಧನೆ ಮಾಡುವ ಛಲವಿದ್ದರೆ, ನಮ್ಮವರು ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪದಕ ಗೆಲ್ಲಬಹುದು. ಕರ್ನಾಟಕದ ಕ್ರೀಡಾಪಟುಗಳು ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆಲ್ಲುತ್ತಾರೆಂಬ ವಿಶ್ವಾಸವಿದೆ. ಕ್ರೀಡೆಯಲ್ಲಿ ಕ್ರೀಡಾಸ್ಪೂರ್ತಿ ಅತ್ಯಂತ ಅವಶ್ಯಕ. ಗುರಿಸಾಧನೆಯೇ ಜೀವನದ ಧ್ಯೇಯವಾಗಬೇಕು ಎಂದರು.
ಉದ್ಯೋಗದಲ್ಲಿ ಮೀಸಲಾತಿ:
ಕ್ರೀಡಾಪಟುಗಳಿಗೆ ಸರ್ಕಾರದ ನೇಮಕಾತಿಯಲ್ಲಿಯೂ ಮೀಸಲಾತಿ ನೀಡಿದ್ದೇವೆ. ಪೊಲೀಸ್ ಹಾಗೂ ಅರಣ್ಯ ಇಲಾಖೆಯಲ್ಲಿ ಶೇ.3ರಷ್ಟು ಹಾಗೂ ಇನ್ನುಳಿದ ಇಲಾಖೆಗಳಲ್ಲಿ ಶೇ.2ರಷ್ಟು ಕ್ರೀಡಾಪಟುಗಳಿಗೆ ಮೀಸಲಾತಿ ನೀಡಲಾಗುವುದು. ಜನವರಿಯಲ್ಲಿ ಕ್ರೀಡಾ ಮೀಸಲಾತಿಯಡಿಯಲ್ಲಿ ಸರ್ಕಾರಿ ಉದ್ಯೋಗದ ನೇಮಕಾತಿಗೆ ಸರ್ಕಾರಿ ಆದೇಶ ಹೊರಡಿಸಲಾಗುತ್ತದೆ. ಆದ್ದರಿಂದ ಹೆಚ್ಚಿನ ಯುವಜನರು ಕ್ರೀಡಾ ಕ್ಷೇತ್ರದಲ್ಲಿ ಭಾಗಿಯಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.
ಸಮಾರಂಭಧಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಂಎಲ್‍ಸಿ ಮತ್ತು ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ನ ಅಧ್ಯಕ್ಷ ಡಾ. ಕೆ. ಗೋವಿಂದರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಆಯುಕ್ತ ಆರ್. ಚೇತನ್, ಕರ್ನಾಟಕ ಒಲಿಂಪಿಕ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಟಿ. ಅನಂತರಾಜು ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.

