ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಹಾಲಿ ಸೇವೆ ಸಲ್ಲಿಸುತ್ತಿರುವ ಸರ್ಕಾರಿ ಶಾಲೆಗಳ ಶಿಕ್ಷಕರು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಬರೆಯಬೇಕೆಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು ಈ ಸಂಬಂಧ ಸರ್ಕಾರ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಮಧು ಬಂಗಾರಪ್ಪ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಿಕ್ಷಣದಲ್ಲಿ ಗುಣಾತ್ಮಕ ಬದಲಾವಣೆ ತರಲು ನಿವೃತ್ತಿ ಅಂಚಿನಲ್ಲಿರುವವರನ್ನು ಹೊರತುಪಡಿಸಿ ಉಳಿದೆಲ್ಲ ಶಿಕ್ಷಕರು ಟಿಇಟಿ ಬರೆಯಬೇಕೆಂದು ಕೋರ್ಟ್ ಆದೇಶ ಮಾಡಿರುವುದು ಸರಿ ಇದೆ. ಈಗ ಇರುವ ಶಿಕ್ಷಕರು 20ರಿಂದ 30 ವರ್ಷಗಳ ಹಿಂದೆ ನೇಮಕಗೊಂಡವರು.
ಅವರು ಇಂದಿನ ಕಾಲಕ್ಕೆ ತಕ್ಕಂತೆ ಬದಲಾವಣೆ ಆಗಬೇಕು. ಈಗ ರಾಜ್ಯ ಸರ್ಕಾರ ಮುಂದಿನ 25 ವರ್ಷವನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರನ್ನು ನೇಮಿಸಿಕೊಳ್ಳುತ್ತದೆ. ಸುಪ್ರೀಂ ಕೋರ್ಟ್ ಮಕ್ಕಳು ದಡ್ಡರಾಗುತ್ತಿದ್ದಾರೆಂದು ಎಂದು ತಿಳಿದು ಟಿಇಟಿ ಬರೆಯಲು ಹೇಳಿರಬೇಕು ಎಂದು ಸಚಿವರು ತಿಳಿಸಿದರು.
ಶೇ.100ರಷ್ಟು ಫಲಿತಾಂಶ ಪಡೆವ ಶಾಲೆಗೆ ಪ್ರಶಸ್ತಿ:
ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಶಾಲೆಯಲ್ಲಿ ಶೇ.100ರಷ್ಟು ಫಲಿತಾಂಶ ಬಂದ ಶಾಲೆಗಳಿಗೆ ಪ್ರಶಸ್ತಿ ನೀಡಲಾಗುತ್ತದೆ. ಉತ್ತಮ ಫಲಿತಾಂಶ ಬಂದ ಶಾಲೆಗಳಿಗೆ 25 ಸಾವಿರ ರೂಪಾಯಿ ನೀಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಶಿಕ್ಷಣ ಇಲಾಖೆಯಲ್ಲಿ ಅನುದಾನಕ್ಕೆ ಕೊರತೆ ಇಲ್ಲ. ಫಲಿತಾಂಶವೂ ಉತ್ತಮವಾಗಿ ಬಂದಿದೆ. ಇದಕ್ಕೆ ವಿರೋಧ ಪಕ್ಷದವರೂ ಸಹ ಭೇಷ್ ಎಂದಿದ್ದಾರೆ. ಸರ್ಕಾರಿ ಶಾಲೆಯಲ್ಲಿ ಮಾನವೀಯ ಗುಣಗಳ ಬಗ್ಗೆ ತಿಳಿಸಿಕೊಡಲಾಗುತ್ತದೆ. ನಾನೂ ಸಹ ಫೇಲ್ ಆದವನೇ. ಆದರೆ ನನ್ನಲ್ಲಿ ಉತ್ತಮ ಗುಣಗಳನ್ನು ಪೋಷಕರು ಕಲಿಸಿದ್ದಾರೆ.
ಅನುದಾನಿತ ಶಾಲೆಗಳಿಗೆ ಆರು ಸಾವಿರ ಶಿಕ್ಷಕರ ನೇಮಕಕ್ಕೆ ಸಿಎಂ ಸೂಚನೆ ನೀಡಿದ್ದಾರೆ. ಕನ್ನಡ ಶಾಲೆಗಳಿಗೆ ಅನುದಾನ ನೀಡಬೇಕೆಂಬ ಬೇಡಿಕೆ ಇದೆ. ಇದರ ಕುರಿತೂ ಸಹ ಸೂಕ್ತ ತೀರ್ಮಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಪಿಯು ಮಕ್ಕಳಿಗೂ ಬಿಸಿಯೂಟ:
ಎಲ್ಲ ಕೆಪಿಎಸ್ ಶಾಲೆಗಳ 12 ತರಗತಿ ವಿದ್ಯಾರ್ಥಿಗಳಿಗೂ ಸಹ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತದೆ. ಇದರಿಂದ ಸರ್ಕಾರಕ್ಕೆ ಹೊರೆ ಆಗುತ್ತದೆ. ಆದರೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸರ್ಕಾರ ಇದನ್ನು ಭರಿಸಲಿದೆ. ಇಲ್ಲಿ ದೈಹಿಕ ಹಾಗೂ ಸಂಗೀತ ಶಿಕ್ಷಕರನ್ನು ನೇಮಕ ಮಾಡಲು ಸಿಎಂಗೆ ಮನವಿ ಮಾಡಲಾಗಿದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.

