ತಹಶೀಲ್ದಾರ್, ಆರ್.ಐ, ವಿಎ ಸಂಬಂಧಿಕರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ!?

News Desk

ತಹಶೀಲ್ದಾರ್, ಆರ್.ಐ, ವಿಎ ಸಂಬಂಧಿಕರ ಖಾತೆಗಳಿಗೆ ಬೆಳೆ ಹಾನಿ ಪರಿಹಾರ!?
47.47 ಕೋಟಿ ವಂಚಿಸಿರುವ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು
ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್
, ಚಿತ್ರದುರ್ಗ:
ಸರ್ಕಾರ ಚಾಪೆ ಕೆಳಗೆ ನುಸುಳಿದರೆ ಭ್ರಷ್ಟ ಅಧಿಕಾರಿಗಳು ರಂಗೋಲಿ ಕೆಳಗೆ ನುಸುಳಲಿದ್ದಾರೆ ಎನ್ನುವುದು ನಿಜ ಎನಿಸಿದೆ.
ಚಿತ್ರದುರ್ಗ, ಚಳ್ಳಕೆರೆ, ಹಿರಿಯೂರು ಸೇರಿದಂತೆ ಇಡೀ ಜಿಲ್ಲೆಯಲ್ಲಿ ರೈತರಿಗೆ ಸೇರಬೇಕಾದ ಬೆಳೆ ಹಾನಿ ಪರಿಹಾರ ಭ್ರಷ್ಟರಾದ
ತಹಶೀಲ್ದಾರ್, ಆರ್ ಐ(ಕಂದಾಯ ಅಧಿಕಾರಿ), ವಿಎ(ಗ್ರಾಮ ಆಡಳಿತಾಧಿಕಾರಿ)ಗಳ ಸಂಬಂಧಿಕರ ಖಾತೆಗಳಿಗೆ, ರೈತರಲ್ಲದ ಖಾತೆಗಳಿಗೆ, ಬೆಳೆ ಬೆಳೆಯದ ರೈತರ ಖಾತೆಗಳಿಗೆ 47.47 ಕೋಟಿ ರೂ. ಜಮಾ ಮಾಡುವ ಮೂಲಕ ಬಹುದೊಡ್ಡ ಹಗರಣ ಮಾಡಲಾಗಿದೆ.

ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು ಅದರಲ್ಲಿ ಅಧಿಕಾರಿಗಳ ಸಂಬಂಧಿಕರ ಖಾತೆಗಳಿಗೆ ಕೋಟ್ಯಂತರ ರೂ. ಪರಿಹಾರ ಹಣ ವರ್ಗಾವಣೆಯಾಗಿದ್ದು ಸಮಗ್ರ ತನಿಖೆಯಿಂದ ಬೆಳಕಿಗೆ ಬಂದಿದೆ.

- Advertisement - 

 ಇಡೀ ಹಗರಣದಲ್ಲಿ ಅಧಿಕಾರಿಗಳ ಪಾತ್ರವೇ ಎದ್ದು ಕಾಣುತ್ತಿದೆ. ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿ, ಕೃಷಿ ಬೆಳೆಗಳಿಗೆ ಬದಲಾಗಿ ತೋಟಗಾರಿಕೆ ಬೆಳೆಗಳೆಂದು ನಮೂದಿಸಿ ಕೋಟ್ಯಂತರ ಹಣ ಗುಳುಂ ಮಾಡಿ ರೈತರಿಗೆ ವಂಚಿಸಿದ್ದಾರೆ.

ಹಗರಣ ಬೆಳಕಿಗೆ:
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ರಘುಮೂರ್ತಿ ಅವರು ಪ್ರಗತಿ ಪರಿಶೀಲನಾ ಸಭೆಯಲ್ಲಿ 23 ಕೋಟಿ ರೂ.ಗಳು ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ಆಗಿದೆ ಎಂದು ಧ್ವನಿ ಎತ್ತಿ
, ತನಿಖೆ ನಡೆಸುವಂತೆ ಒತ್ತಾಯಿಸಿದ್ದರಿಂದ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ತನಿಖಾ ತಂಡ ರಚಿಸಿ ತನಿಖೆ ಮಾಡುವಂತೆ ಆದೇಶಿಸಿದ್ದರು.

- Advertisement - 

ತನಿಖಾ ತಂಡ:
ಜಿಲ್ಲಾ ಮಟ್ಟದಲ್ಲಿ ತನಿಖೆ ತಂಡವು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ರಚನೆ ಮಾಡಿದ್ದು ತಂಡದಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಉಪನಿರ್ದೇಶಕರು, ರೇಷ್ಮೆ ಇಲಾಖೆ ಉಪನಿರ್ದೇಶಕರುಗಳ ತನಿಖಾ ತಂಡವು ಖುದ್ದಾಗಿ ಬೆಳೆ ಪರಿಹಾರದಲ್ಲಿ ಯಾವ ಯಾವ ಹಿನ್ನೆಲೆಯಲ್ಲಿ ಹಾಗೂ ಅಂಶಗಳನ್ನು ಪರಿಶೀಲಿಸಬೇಕೆಂದು ಚರ್ಚಿಸಿ ನಿರ್ದೇಶನ ನೀಡಲಾಗಿತ್ತು. ಸಮಿತಿ ಸಮಗ್ರವಾಗಿ ತನಿಖೆ ಮಾಡಿ ಕಳೆದ 2024ರ ಆಗಸ್ಟ್-26 ರಂದು ತನ್ನ ವರದಿ ಸಲ್ಲಿಸಿತ್ತು.

ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಡ ಮಾಡದೇ ದಿನಾಂಕ-28-08-2024ರಂದೇ ಕಂದಾಯ ಇಲಾಖೆ(ವಿಪತ್ತು ನಿರ್ವಹಣೆ)ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ತನಿಖಾ ವರದಿ ಸಲ್ಲಿಸಿ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

ದೊಡ್ಡ ಮಟ್ಟದ ಅವ್ಯವಹಾರ ಬೆಳೆಕಿಗೆ ಬರುತ್ತಿದ್ದಂತೆ ಭವಿಷ್ಯದಲ್ಲಿ ಇಂತಹ ಅವ್ಯವಹಾರ ತಪ್ಪಿಸಲು, ಬೆಳೆ ನಷ್ಟ ಪರಿಹಾರವನ್ನು ಬೆಳೆ ಸಮೀಕ್ಷೆಯೊಂದಿಗೆ ಲಿಂಕ್ ಮಾಡಿ ನೀಡಲು ಸರ್ಕಾರ ನಿರ್ಧರಿಸಿದೆ.
ರೈತರು ತಮ್ಮ ಪರಿಹಾರದ ಸ್ಥಿತಿ ಪರಿಶೀಲಿಸಲು
Parihara ವೆಬ್‌ಸೈಟ್‌ನಲ್ಲಿ ಆಧಾರ್ ಸಂಖ್ಯೆ ಅಥವಾ ಪರಿಹಾರ ಐಡಿ ಬಳಸಿ ನೋಡುವ ಅವಕಾಶ ಕಲ್ಪಿಸಲಾಗಿದೆ. ಬೆಳೆ ಪರಿಹಾರದಲ್ಲಿ ನಡೆದ ಅವ್ಯವಹಾರ ದೊಡ್ಡ ವಿವಾದವಾಗಿದ್ದು ಭವಿಷ್ಯದ ಹಣ ವಿತರಣೆಯಲ್ಲಿ ಪಾರದರ್ಶಕತೆ ತರಲು ಕ್ರಮ ಕೈಗೊಳ್ಳಲಾಗಿದೆ.

ಚುರುಕುಗೊಳಿಸಿದ ಜಿಲ್ಲಾಧಿಕಾರಿಗಳು:
2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ಸಾಕಷ್ಟು ಅವ್ಯವಹಾರ ನಡೆದಿತ್ತು. ಶಾಸಕ ರಘುಮೂರ್ತಿ ಅವರು ಹಲವು ಸಂದರ್ಭದಲ್ಲಿ ಇದರ ವಿರುದ್ಧ ಧ್ವನಿ ಎತ್ತಿದ್ದರೂ ಅಂದಿನ ಜಿಲ್ಲಾಧಿಕಾರಿಗಳು ಇದರ ಬಗ್ಗೆ ಅಷ್ಟೇನು ಗಮನ ನೀಡಿರಲಿಲ್ಲ. ಹಾಗಾಗಿ ತನಿಖೆ ಕೇವಲ ಆದೇಶಕ್ಕೆ ಸೀಮಿತವಾಗಿತ್ತು.
ಆದರೆ ರೈತಪರ ಚಿಂತಕ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ಚಿತ್ರದುರ್ಗ ಜಿಲ್ಲೆಗೆ ಆಗಮಿಸಿದ ನಂತರ ಜಿಲ್ಲಾ ಮಟ್ಟದ ತನಿಖಾ ತಂಡದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ ಯಾವ ಯಾವ ಅಂಶಗಳನ್ನಿಟ್ಟುಕೊಂಡು ತನಿಖೆ ಮಾಡುವಂತೆ ಸೂಚಿಸಿದರಲ್ಲದೆ ಇಡೀ ಜಿಲ್ಲೆಯ ಪ್ರತಿಯೊಬ್ಬ ರೈತರ ವೈಯಕ್ತಿಕ ಅಂಕಿ ಅಂಶಗಳನ್ನು ಸಂಗ್ರಹ ಮಾಡಿ ಸರ್ಕಾರದಿಂದ ಯಾವ ರೈತರಿಗೆ ಎಷ್ಟು ಪರಿಹಾರ ಪಾವತಿ ಆಗಬೇಕಿತ್ತು.

ರೈತರಲ್ಲದ ಖಾತೆಗಳಿಗೆ, ಅಧಿಕಾರಿಗಳ ಸಂಬಂಧಿಕರ ಖಾತೆಗಳಿಗೆ ಪರಿಹಾರ ಹಣ ಪಾವತಿ ಆಗಿರುವ ಕುರಿತು ಸಮಗ್ರ ತನಿಖೆಗೆ ಮಾರ್ಗದರ್ಶನ ನೀಡಿದ್ದಲ್ಲದೆ ಇಡೀ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ನಡೆದಿರಬಹುದಾದ ಅವ್ಯವಹಾರ ಕುರಿತು ಪ್ರತಿ ಹಂತದಲ್ಲೂ ಜಿಲ್ಲಾಧಿಕಾರಿ ವೆಂಕಟೇಶ್ ಅವರು ನಿಗಾ ವಹಿಸಿ ಕೆಲಸ ಮಾಡಿದ್ದರಿಂದ 47.47 ಕೋಟಿ ರೂ. ಹಗರಣ ಬಯಲಿಗೆ ಬಂದಿದೆ.

ಭ್ರಷ್ಟ ಅಧಿಕಾರಿಗಳು:
ರೈತರಿಗೆ ನೀಡಬೇಕಿದ್ದ ಬೆಳೆ ನಷ್ಟ ಪರಿಹಾರ ಹಣವನ್ನು ಅಧಿಕಾರಿಗಳೇ ನುಂಗಿ ನೀರು ಕುಡಿದಿರುವ ಪ್ರಕರಣ ಚಿತ್ರದುರ್ಗ ಜಿಲ್ಲೆಯ 6 ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

ರೈತರಿಗೆ ವಿತರಿಸಲೆಂದು ಸರ್ಕಾರದಿಂದ ಬಿಡುಗಡೆಯಾಗಿದ್ದ ಕೋಟ್ಯಂತರ ಹಣದಲ್ಲಿ 47.47 ಕೋಟಿ ರೂ. ಹಣವನ್ನು ಜಿಲ್ಲೆಯ ಆರು ತಾಲೂಕುಗಳ ಕಂದಾಯ ಇಲಾಖೆ ಅಧಿಕಾರಗಿಳು ತಮ್ಮ ಸಂಬಂಧಿಕರ ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿದ್ದಾರೆ. ಕೆಲವು ಅರ್ಹ ರೈತರ ಖಾತೆಗಳಿಗೂ ಪರಿಹಾರ ಮೊತ್ತ ಜಮೆ ಮಾಡಿ ನಂತರ ಆ ರೈತರಿಂದ ಅಧಿಕಾರಿಗಳು ವಾಪಸ್ ಪಡೆದಿರುವ ಸಂಗತಿ ಕೂಡ ನಡೆದಿದೆ. ಈ ರೀತಿಯ ಅವ್ಯವಹಾರ ಮಾಡಿದ್ದ ಎಲ್ಲ ತಹಶೀಲ್ದಾರ್, ಕಂದಾಯ ಅಧಿಕಾರಿಗಳು, ಗ್ರಾಮ ಸಹಾಯಕರ ಮೇಲೆ ಈಗ ತೂಗುಗತ್ತಿ ನೇತಾಡುತ್ತಿದ್ದು ನೂರಷ್ಟು ಶಿಕ್ಷೆ ಆಗುವ ಎಲ್ಲ ಲಕ್ಷಣಗಳು ಗೋಚರಿಸಿವೆ.

ಕೃಷಿ ಬೆಳೆಗಳ ಬದಲಿಗೆ ತೋಟಗಾರಿಕೆ ಬೆಳೆ ನಮೂದಿಸಿ, ಹೆಚ್ಚಿನ ಮೊತ್ತದ ಹಣ ಲಪಟಾಯಿಸಿದ್ದಾರೆ. ಅರ್ಹ ರೈತರಿಗೆ ಅಲ್ಪ ಪ್ರಮಾಣದ ಪರಿಹಾರ ನೀಡಿ ತಮಗೆ ಬೇಕಾದ ನೆಂಟರು, ನಿಷ್ಟರು, ಪಹಣಿ ಹೊಂದಿರುವಂತ ಪತ್ನಿ, ಮಕ್ಕಳ ಹೆಸರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿಪತ್ತು ನಿರ್ವಹಣಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕೋಟ್ಯಂತರ ರೂಪಾಯಿ ಪರಿಹಾರ ವಿತರಣೆ ಮಾಡಿ ಅಧಿಕಾರಿಗಳು ಲಪಟಾಯಿಸಿದ್ದಾರೆ.

ಬೆಳೆ ಹಾನಿ ಪರಿಹಾರವನ್ನು ಮೊದಲು ಚೆಕ್‌ರೂಪದಲ್ಲಿ ನೀಡುತ್ತಿದ್ದ ಸರ್ಕಾರ ಇಂಥಹ ಲೋಪದೋಷ ನಡೆಯಬಾರದೆಂದು ರೈತರ ಬ್ಯಾಂಕ್‌ ಖಾತೆಗೆ ನೇರ ಪಾವತಿ ರೂಪದಲ್ಲಿ ಪರಿಹಾರ ನೀಡುವ ವ್ಯವಸ್ಥೆ ಜಾರಿಗೆ ತಂದಿದ್ದರೂ ಭ್ರಷ್ಟ ಅಧಿಕಾರಿಗಳು ಮಾತ್ರ ಸರ್ಕಾರ ಚಾಪೆ ಕೆಳಗೆ ನುಸುಳಿದರೆ ನಾವು ರಂಗೋಲಿ ಕೆಳಗೆ ನುಸುಳುತ್ತೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಸಮಗ್ರ ತನಿಖೆಯಲ್ಲಿ ಕಂಡು ಬಂದ ಲೋಪಗಳು:
ರೈತ ಫಲಾನುಭವಿಗಳ ಬೆಳೆಹಾನಿ ವಿಸ್ತೀರ್ಣಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿಪತ್ತು ನಿರ್ವಹಣಾ ಮಾರ್ಗಸೂಚಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಮೊತ್ತ ಪಾವತಿ ಮಾಡಲಾಗಿದೆ.
ಬೆಳೆ ನಷ್ಟದ ಪ್ರಮಾಣ ಪರಿಗಣಿಸದೆ ಮಳೆಯಾಶ್ರಿತ ಬೆಳೆಗಳಿಗೆ ಹೆಚ್ಚುವರಿ ಪಾವತಿ ಮಾಡಲಾಗಿದೆ. ಬೆಳೆ ನಷ್ಟದ ಪ್ರಮಾಣ ಪರಿಗಣಿಸದೆ ನೀರಾವರಿ ಬೆಳೆಗಳಿಗೆ ಹೆಚ್ಚುವರಿ ಪಾವತಿ ಮಾಡಲಾಗಿದೆ.

ರೈತರ ಮಳೆಯಾಶ್ರಿತ ಬೆಳೆಗಳಿಗೆ ಬದಲಾಗಿ ನೀರಾವರಿ ಬೆಳೆಗಳೆಂದು ಪರಿಗಣಿಸಿ ಪಾವತಿ ಮಾಡಲಾಗಿದೆ.
ಜಿಲ್ಲೆಯಲ್ಲಿ ಬೆಳೆಯದ ಬೆಳೆಗಳನ್ನು ನಮೂದಿಸಿ ಉದಾ-ಭತ್ತ, ಕಬ್ಬು, ಅನಾನಲ್, ಆಲುಗಡ್ಡೆ, ಗೋದಿ, ಉದ್ದು ಇತರೆ ಬೆಳೆಗಳನ್ನು ನಮೂದಿಸಿ ಹೆಚ್ಚಿನ ಪರಿಹಾರ ವಿತರಣೆ ಮಾಡಲಾಗಿದೆ.
ಭೂಮಿ ತಂತ್ರಾಂಶದಲ್ಲಿ ಪಡೆದ ಪರಿಹಾರ ಪಾವತಿ ಮಾಹಿತಿ ಪರಿಶೀಲಿಸಿದಾಗ ಜಿಲ್ಲೆಯಲ್ಲಿ ಒಟ್ಟು 42958 ಅರ್ಹರಲ್ಲದ ಫಲಾನುಭವಿಗಳಿಗೆ 47.47 ಕೋಟಿ ಪಾವತಿಯಾಗಿದೆ.

ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಲ್ಲಿ ಇಳುವರಿ ನಷ್ಟ ಆಗುತ್ತದೆ ಹೊರತು ಬೆಳೆ ನಷ್ಟ ಆಗುವುದಿಲ್ಲ. ಆದರೆ ಬೆಳೆ ನಷ್ಟ ಆಗಿದ ಎಂದು ಪರಿಹಾರ ಮೊತ್ತ ಪಾವತಿ ಮಾಡಿರುತ್ತಾರೆ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ಕಡಿಮೆ ವಿಸ್ತೀರ್ಣ ನಮೂದಿಸಿ ಹೆಚ್ಚು ಪರಿಹಾರ ಪಾವತಿ ಮಾಡಿರುತ್ತಾರೆ. ಬೆಳಹಾನಿ ವಿಸ್ತೀರ್ಣಕ್ಕೆ ಅನುಗುಣವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮಾರ್ಗಸೂಚಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಪರಿಹಾರ ಮೊತ್ತ ಪಾವತಿ ಮಾಡಲಾಗಿದೆ. ದೀರ್ಘಕಾಲಿಕ ಬೆಳೆಗಳಿಗೆ ಪಾವತಿ ಮಾಡಲಾಗಿದೆ.

ಮಳೆಯಾಶ್ರಿತ ಪ್ರದೇಶದಲ್ಲಿ ತೋಟಗಾರಿಕಾ ಬೆಳೆಗಳಿವದ್ದರೆ ಅದರ ಬದಲು ಬಹುವಾರ್ಷಿಕ ಬೆಳೆಗಳೆಂದು ನಮೂದಿಸಿ (ಉದಾ: ತೆಂಗು ಅಡಿಕೆ, ಸೀದೆ ದಾಳಿಂಬೆ ಮಾವು ಮತ್ತು ನಿಂಬೆ) ಪರಿಹಾರ ಪಾವತಿ ಮಾಡಲಾಗಿದೆ.
ದಾಳಿಂಬೆ
, ತೆಂಗು, ಅಡಿಕೆ, ಮೆಣಸಿನಕಾಯಿ, ಸುಗಂದರಾಜ, ಕರಬೂಜ, ಕೊತ್ತಂಬರಿ, ಮಲ್ಲಿಗೆ, ಕುಂಬಳಕಾಯಿ, ಕ್ಯಾಲೆಟ್, ಕೋಸು ಎಲೆಕೋಸು ಸೌರ ಬದನೆ ಬಟಾಣಿ, ಬೀನ್ಸ್ ಬೆಂಡೆಕಾಯಿ ಆಲುಗಡ್ಡೆ ಮತ್ತು ಜವಳಿಕಾಯಿ) ಪರಿಹಾರ ಪಾವತಿ ಮಾಡಲಾಗಿದೆ.

ಮಳೆಯಾಶ್ರಿತ ಬೆಳೆಗಳಿಗೆ ಹೆಚ್ಚುವರಿ ಪರಿಹಾರ ಪಾವತಿಸಲಾಗಿದೆ. ಈ ರೀತಿಯ ಕರ್ತವ್ಯಲೋಪವೆಸಗಿರುವ ಆ ಅವಧಿಯ ತಹಶೀಲ್ದಾರ್, ಅಧಿಕಾರಿ, ನೌಕರ, ಖಾಸಗಿ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕ್ರಮ ಕೈಗೊಳ್ಳಲಾಗಿದೆ.

ಶಾಸಕ ರಘುಮೂರ್ತಿ ಅವರು 2022-23 ನೇ ಸಾಲಿನ ಬೆಳೆ ನಷ್ಟ ಪರಿಹಾರದ ಹಣ ದುರುಪಯೋಗವಾಗಿದೆ, ತನಿಖೆ ಕೈಗೊಳ್ಳಿ ಎಂದು ತಿಳಿಸಿದ್ದರು. ಜಿಲ್ಲಾ ಮಟ್ಟದ ತನಿಖಾ ತಂಡ ರಚಿಸಿ ಪರಿಶೀಲನಾ ತನಿಖಾ ವರದಿ ಸಲ್ಲಿಸಿತ್ತು. ತಹಶೀಲ್ದಾರ್, ವಿಎ, ಆರ್ಐ ಸೇರಿದಂತೆ ಖಾಸಗಿ ವ್ಯಕ್ತಿಗಳು ಈಪ್ರಕರಣದಲ್ಲಿ ಭಾಗಿಯಾಗಿದ್ದು ಅನೇಕ ಅಕ್ರಮಗಳನ್ನು ಎಸಗಿರುವುದು ತನಿಖೆಯಿಂದ ಕಂಡು ಬಂದಿದೆ. ತನಿಖಾ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ನೌಕರರು ಸರ್ಕಾರ ನಿರ್ದಿಷ್ಟ ಪಡಿಸಿರುವ ಮಾರ್ಗ ಸೂಚಿಗಳನ್ವಯ ಫಲಾನುಭವಿಗಳ ಖಾತೆಗೆ ನೇರವಾಗಿ ಪರಿಹಾರದ ಹಣ ಪಾವತಿ ಮಾಡದೇ, ಸರ್ಕಾರದ ಮಾರ್ಗಸೂಚಿಗಳನ್ನಯನ್ನು ಉಲ್ಲಂಘಿಸಿ ತಮ್ಮ ಸ್ವಂತ ಬ್ಯಾಂಕ್ ಖಾತೆಗಳಿಗೆ ಪರಿಹಾರ ಮೊತ್ತ ಹಾಕಿಸಿಕೊಂಡು ರೈತರಿಗೆ ವಂಚಿಸಲಾಗಿದೆ. ತಹಶೀಲ್ದಾರ್, ಸೇರಿದಂತೆ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗಿದೆ.
ಟಿ.ವೆಂಕಟೇಶ್, ಜಿಲ್ಲಾಧಿಕಾರಿಗಳು, ಚಿತ್ರದುರ್ಗ.

Share This Article
error: Content is protected !!
";