ಬುದ್ದ, ಬಸವಣ್ಣನವರ ಕಾಲದಿಂದಲೂ ಧ್ಯಾನಕ್ಕೆ ಮಹತ್ವವಿದೆ-ಮಾದಾರಶ್ರೀ

News Desk

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಇಂದಿನ ಯುವ ಜನಾಂಗ ಬೇರೆ ಬೇರೆ ಮಾರ್ಗಗಳಲ್ಲಿ ಸಾಗುವ ಬದಲು ಧ್ಯಾನದಲ್ಲಿ ತೊಡಗಿಕೊಳ್ಳುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳುವಂತೆ ಮಾದಾರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ತಿಳಿಸಿದರು.

ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರ ಸಹಯೋಗದೊಂದಿಗೆ ವಿಶ್ವ ಧ್ಯಾನ ದಿನದ ಅಂಗವಾಗಿ ಮುರುಘಾಮಠದ ಅನುಭವ ಮಂಟಪದಲ್ಲಿ ಭಾನುವಾರ ನಡೆದ ಸಾಮೂಹಿಕ ಸಂಗೀತ ಧ್ಯಾನ ಉದ್ಘಾಟಿಸಿ ಮಾತನಾಡಿದರು.

- Advertisement - 

ಬುದ್ದ, ಬಸವಣ್ಣನವರ ಕಾಲದಿಂದಲೂ ಧ್ಯಾನಕ್ಕೆ ಮಹತ್ವವಿದೆ. ವೈಜ್ಞಾನಿಕ ಯುಗದಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯ ಒತ್ತಡ ನಾನಾ ಬಗೆಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ವೈದ್ಯರ ಬಳಿ ಹೋಗಿ ಚಿಕಿತ್ಸೆ ಪಡೆದುಕೊಳ್ಳುವುದರ ಜೊತೆ ಧ್ಯಾನ ಮಾಡಿದರೆ ಮಾನಸಿಕ, ದೈಹಿಕವಾಗಿ ಸದೃಢರಾಗಿರಬಹುದು ಎಂದು ಹೇಳಿದರು.

ಬ್ರಹ್ಮಶ್ರೀ ಪ್ರೇಮನಾಥ ಮಾತನಾಡಿ ಭೌತಿಕ ಮತ್ತು ಆಧ್ಯಾತ್ಮಿಕ ಜೀವನದ ಮಹತ್ವ ತಿಳಿದುಕೊಳ್ಳಬೇಕಾದರೆ ಪ್ರತಿಯೊಬ್ಬರು ಧ್ಯಾನದ ಮೊರೆ ಹೋಗಬೇಕು.

- Advertisement - 

ವೇದ, ಉಪನಿಷತ್ತು, ಭಗವದ್ಗೀತೆಯಲ್ಲಿ ಧರ್ಮ ಅಂದರೆ ಏನು ಎನ್ನುವುದನ್ನು ಹೇಳಿದೆ. ಅದನ್ನು ತಿಳಿದುಕೊಳ್ಳಬೇಕಾದರೆ ಮೊದಲು ಸತ್ಯ ಗೊತ್ತಿರಬೇಕು. ಬಸವೇಶ್ವರ, ವಿಘ್ನೇಶ್ವರ, ಯೋಗೇಶ್ವರ, ವೆಂಕಟೇಶ್ವರ ಎಲ್ಲಾ ಪದಗಳಲ್ಲಿಯೂ ಈಶ್ವರ ಇದ್ದಾನೆ. ದೇಹಕ್ಕೆ ಆಹಾರ, ಮನಸ್ಸಿಗೆ ನೆಮ್ಮದಿ ಬೇಕು. ಜೀವನದಲ್ಲಿ ಆನಂದ ಅನುಭವಿಸಬೇಕಾದರೆ ಆರೋಗ್ಯ ಮುಖ್ಯ. ಆರೋಗ್ಯಕ್ಕಿಂತ ಸಂಪತ್ತು ಬೇರೆ ಯಾವುದೂ ಇಲ್ಲ. ಧ್ಯಾನದಿಂದ ಮಾನಸಿಕ ಒತ್ತಡ ನಿವಾರಿಸಿಕೊಂಡು ಕಾಯಿಲೆಯಿಂದ ದೂರವಿರಬಹುದೆಂದು ಹೇಳಿದರು.

ಯೋಗ, ಧ್ಯಾನ ಮಾಡುವವರು ನಿಜವಾಗಿಯೂ ಶಾಂತಚಿತ್ತರಾಗಿರುತ್ತಾರೆ. ಚಂಲವಾದ ಮನಸ್ಸನ್ನು ಹಿಡಿದಿಕೊಟ್ಟುಕೊಳ್ಳುವ ಶಕ್ತಿ ಧ್ಯಾನಕ್ಕಿದೆ. ಮಾನಸಿಕ ಒತ್ತಡಕ್ಕೆ ಯೋಚನೆ ಕಾರಣ. ಇವೆಲ್ಲದರಿಂದ ಮನುಷ್ಯ ದೂರವಿರಬೇಕಾದರೆ ಧ್ಯಾನಸ್ಥನಾಗಬೇಕು. ಟ್ಯಾಬ್ಲೆಟ್‌ಗೆ ದುಡ್ಡು ಬೇಕು. ಧ್ಯಾನಕ್ಕೆ ಸಮಯ ಮತ್ತು ಮನಸ್ಸು ಬೇಕು. ಧ್ಯಾನದಿಂದ ದೇವರು, ಋಷಿಮುನಿಗಳು ಕಾಣುತ್ತಾರೆಂದರು.

ಬೆಂಗಳೂರಿನ ಡಾ.ಹರಿಕೃಷ್ಣ ಮಾತನಾಡಿ ಉತ್ತಮ ಆರೋಗ್ಯ, ಮನಸ್ಸಿಗೆ ಶಾಂತಿ ಎಲ್ಲರಿಗೂ ಬೇಕು. ಧ್ಯಾನದಿಂದ ಜ್ಞಾನ ಸಿಗುತ್ತದೆ. ಆಧ್ಯಾತ್ಮಿಕತೆ ಎನ್ನುವುದು ವಿಜ್ಞಾನ. ಧ್ಯಾನಕ್ಕಾಗಿ ಮೊದಲು ಮನಸ್ಸನ್ನು ಕೇಂದ್ರೀಕರಿಸಿಕೊಳ್ಳಬೇಕು. ಚಿಕ್ಕಂದಿನಿಂದಲೇ ಧ್ಯಾನ ಮಾಡಿದರೆ ಒಳ್ಳೆಯದು. ಧ್ಯಾನದಿಂದ ಒತ್ತಡ ಮುಕ್ತ ಜೀವನ ನಡೆಸಬಹುದು ಎಂದು ಹೇಳಿದರು.

ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಶಿವರಶ್ಮಿ ಅಕ್ಕ ಮಾತನಾಡುತ್ತ ಧ್ಯಾನದಿಂದ ಅಂತರಂಗದ ಶಕ್ತಿ ವೃದ್ದಿಯಾಗುತ್ತದೆ. ಧ್ಯಾನದಿಂದ ಪರಮೇಶ್ವರನ ಜೊತೆ ಸಂಪರ್ಕವಿಟ್ಟುಕೊಳ್ಳಬಹುದು. ಸ್ವಪರಿವರ್ತನೆ, ಸ್ವಶಕ್ತರಾಗಲು ಧ್ಯಾನ ಮುಖ್ಯ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಗೌರೀಶ್ ಮಾತನಾಡಿ ಧ್ಯಾನದಿಂದ ಆತ್ಮವಿಶ್ವಾಸ ಹೆಚ್ಚುತ್ತದೆ. ಆಧುನಿಕ ಜಂಜಾಟದಲ್ಲಿ ಪ್ರತಿಯೊಬ್ಬರು ಒತ್ತಡ, ದುಃಖದಲ್ಲಿ ಮುಳುಗಿರುತ್ತಾರೆ. ಇದರಿಂದ ಹೊರ ಬರಲು ಧ್ಯಾನ ಮಾಡಬೇಕೆಂದರು.

ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ. ಯುವ ಮುಖಂಡ ಜಿ.ಎಸ್.ಅನಿತ್‌ಕುಮಾರ್, ಆದಿಯೋಗಿ ಧ್ಯಾನಾಮೃತ ಪಿರಮಿಡ್ ಧ್ಯಾನ ಕೇಂದ್ರದ ಅಧ್ಯಕ್ಷೆ ಮಧುಶ್ರಿ ಇವರುಗಳು ವೇದಿಕೆಯಲ್ಲಿದ್ದರು. ಶಿವರಾಜ್ ಪ್ರಾರ್ಥಿಸಿದರು, ಡಾ.ಮಂಜುಳಗೌಡ ಸ್ವಾಗತಿಸಿದರು. ರಶ್ಮಿ ವಂದಿಸಿದರು, ಪ್ರಸನ್ನಕುಮಾರಿ ನಿರೂಪಿಸಿದರು.

Share This Article
error: Content is protected !!
";