ಶ್ರೀಮಠದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆ ಸ್ಮರಿಸಿದ ಸಿಎಂ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳ ಜಯಂತೋತ್ಸವಗಳು ಹಲವು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ನಡೆದುಕೊಂಡು ಬರುತ್ತಿದ್ದು, ಮುಂದಿನ ವರ್ಷ ಗುಂಡ್ಲುಪೇಟೆಯಲ್ಲಿ ನಡೆಯಲಿರುವುದು ಸಂತೋಷದ ವಿಚಾರ ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಆಯೋಜಿಸಿದ್ದ ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ 1066ನೇ ಜಯಂತಿ ಮಹೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಿ, ಶ್ರೀ ಮಠದ ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸೇವೆಯನ್ನು ಸ್ಮರಿಸಿ ಮಾತನಾಡಿದರು.

- Advertisement - 

ಈ ಕಾರ್ಯಕ್ರಮ ಆಯೋಜನೆಯಲ್ಲಿ ಸಹಕರಿಸಿದ ಶಾಸಕ ನರೇಂದ್ರ ಸ್ವಾಮಿ ಅವರಿಗೆ ಧನ್ಯವಾದ ತಿಳಿಸಿದ ಸಿಎಂ ಈ ದೇಶದಲ್ಲಿ ಹಲವಾರು ಸಾಧುಸಂತರು, ಸೂಫಿ ಸಂತರು ಸಮಾಜದ ಬದಲಾವಣೆಗೆ ಶ್ರಮಿಸಿದ್ದು, ಈ ಪ್ರಯತ್ನದಲ್ಲಿ ಶ್ರೀಗಳು ಮೇಲ್ಪಂಕ್ತಿಯಲ್ಲಿ ನಿಲ್ಲುತ್ತಾರೆ ಎಂದು ಹೇಳಿದರು.

ಸಮಾಜದಲ್ಲಿ ವಿವಿಧ ಜಾತಿ-ಧರ್ಮಗಳಿದ್ದು, ಇದು ಅಸಮಾನತೆಯ ಹುಟ್ಟಿಗೆ ಕಾರಣವಾಗಿದೆ. ಈ ಅಸಮಾನತೆ ನಿವಾರಣೆಯಾಗದೇ ಸಮಾಜದಲ್ಲಿ ಶಾಂತಿ ಸ್ಥಾಪನೆ ಅಸಾಧ್ಯ. ಬಸವಾದಿ ಶರಣರು ಮನುಷ್ಯ ಸಮಾಜ, ಸಮಸಮಾಜ ನಿರ್ಮಾಣವಾಗಬೇಕೆಂದು ಅವಿರತ ಶ್ರಮಿಸಿದರು.

- Advertisement - 

ಆದಾಗ್ಯೂ ಸಮಾಜದಲ್ಲಿ ಜಾತಿವ್ಯವಸ್ಥೆ ಸಂಪೂರ್ಣ ನಿರ್ಮೂಲನೆಯಾಗಿಲ್ಲ. ಕವಿ ಕುವೆಂಪು ಹೇಳಿದಂತೆ ಸರ್ವಜನಾಂಗದ ಶಾಂತಿಯ ತೋಟ ಸ್ಥಾಪನೆಯಾಗಲು ಮಾನವೀಯ ಸಮಾಜ ನಿರ್ಮಾಣವಾಗಬೇಕು ಎಂದು ಸಿದ್ದರಾಮಯ್ಯ ಕರೆ ನೀಡಿದರು.

ಯಾವುದೇ ಧರ್ಮವಾಗಲಿ ಪ್ರೀತಿಯನ್ನು ಬೋಧಿಸುತ್ತದೆಯೇ ಹೊರತು ದ್ವೇಷವನ್ನು ಬೋಧಿಸುವುದಿಲ್ಲ. ಇದು ನಮ್ಮ ಸಂಸ್ಕೃತಿ. ಮನುಷ್ಯ – ಮನುಷ್ಯನನ್ನು ಪ್ರೀತಿಸುವ ಮನುಷ್ಯ ಸಮಾಜ ನಿರ್ಮಾಣವಾಗಬೇಕು. ದ್ವೇಷಾಸೂಯೆ ಬಿತ್ತುವ ಅನೇಕ ಶಕ್ತಿಗಳು ಸಮಾಜದಲ್ಲಿ ಇವೆ. ಅಂತಹ ಶಕ್ತಿಗಳ ವಿರುದ್ಧ ಹೋರಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು.

ಹುಟ್ಟು ಸಾವಿನ ನಡುವಿನ ಜೀವನವನ್ನು ನಾವು ಸಾರ್ಥಕಗೊಳಿಸಿಕೊಳ್ಳಬೇಕು. ವಿದ್ಯಾವಂತರಿಗೆ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯಿರಬೇಕು. ಸಮಾಜದಲ್ಲಿ ಸಮಾಜಮುಖಿಯಾಗಿ ಬಾಳುವುದು ಮುಖ್ಯ. ಮನುಷ್ಯ ಮನುಷ್ಯರ ನಡುವಿನ ದ್ವೇಷ ಅಮಾನವೀಯ.

ಮನುಷ್ಯನ ಕಷ್ಟ ಸುಖಗಳಿಗೆ ಸ್ಪಂದಿಸುವುದೇ ದಾಸೋಹ.  ದೇ. ಜವರೇ ಗೌಡ ಅವರು ಕಾಯಕ ಎಂದರೆ ಉತ್ಪಾದನೆ, ದಾಸೋಹ ಅಂದರೆ ವಿತರಣೆ ಎಂದು ಹೇಳಿದ್ದರು. ಪ್ರತಿಯೊಬ್ಬರೂ ಉತ್ಪಾದನೆಯಲ್ಲಿ ಭಾಗವಹಿಸಬೇಕು. ಒಬ್ಬರು ಉತ್ಪಾದಿಸಿದ್ದನ್ನು ಮತ್ತೊಬ್ಬರು ಅನುಭವಿಸುವಂತಾಗಬಾರದು. ಆಗ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಸಿಎಂ ಅಭಿಪ್ರಾಯಪಟ್ಟರು.

ಸುತ್ತೂರು ಮಠದ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿ ಸ್ವಾಮೀಜಿ, ಸಚಿವರಾದ ಹೆಚ್.ಸಿ.ಮಹದೇವಪ್ಪ, ಎನ್.ಚಲುವರಾಯಸ್ವಾಮಿ, ಶಾಸಕರಾದ ನರೇಂದ್ರಸ್ವಾಮಿ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಹಲವು ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

 

 

Share This Article
error: Content is protected !!
";