ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೆಹಲಿಯಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಟೇಕ್ ಆಫ್ ಆದ ಸ್ವಲ್ಪ ಹೊತ್ತಲ್ಲೇ ಪುನಃ ದೆಹಲಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ ಘಟನೆ ದೆಹಲಿಯಲ್ಲಿ ಜರುಗಿದೆ.
ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್ (SOP) ಪ್ರಕಾರ ಈ ನಿರ್ಧಾರ ತೆಗೆದುಕೊಳ್ಳಲಾಯಿತು. ದೆಹಲಿ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದೆ. ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸಂಪೂರ್ಣವಾಗಿ ಸುರಕ್ಷಿತರಾಗಿದ್ದಾರೆ. ಅನಿರೀಕ್ಷಿತ ಪರಿಸ್ಥಿತಿಯಿಂದ ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ವಿಮಾನಯಾನ ಸಂಸ್ಥೆ ಸ್ಪಷ್ಟಪಡಿಸಿದೆ.
ದೆಹಲಿಯಿಂದ ಮುಂಬೈಗೆ ಡಿ.22ರಂದು ಸೋಮವಾರ ಹಾರಾಟ ನಡೆಸಬೇಕಿದ್ದ AI887 ವಿಮಾನದಲ್ಲಿ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ತಾಂತ್ರಿಕ ದೋಷ ಕಂಡು ಬಂದಿದ್ದು, ಪೈಲಟ್‌ಗಳು ವಿಮಾನಯಾನವನ್ನು ಮುಂದುವರಿಸುವ ಬದಲು ಮುನ್ನೆಚ್ಚರಿಕೆಯಾಗಿ ದೆಹಲಿಗೆ ಹಿಂತಿರುಗಿಸಲು ನಿರ್ಧರಿಸಿದರು. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಮೊದಲ ಆದ್ಯತೆ ಆಗಿದ್ದರಿಂದ ವಿಮಾನವನ್ನು ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ದೆಹಲಿ ವಿಮಾನ ನಿಲ್ದಾಣಕ್ಕೆ ಹಿಂತಿರುಗಿಸಿದ್ದಾರೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.
ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ಆದ ತಕ್ಷಣ ಎಲ್ಲ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು. ಮುಂಬೈಗೆ ಹೋಗುವ ಪ್ರಯಾಣಿಕರನ್ನು ಅವರ ಗಮ್ಯಸ್ಥಾನಕ್ಕೆ ತಲುಪಿಸಲು ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗಾಗಿ ಸಂಸ್ಥೆ ಕ್ಷಮೆ ಯಾಚಿಸುತ್ತದೆ. ಸದ್ಯ ವಿಮಾನ ಅಗತ್ಯ ತಪಾಸಣೆಗೆ ಒಳಗಾಗುತ್ತಿದೆ. ಎಲ್ಲ ಸುರಕ್ಷತಾ ಪರಿಶೀಲನೆಗಳು ಪೂರ್ಣಗೊಂಡ ನಂತರವೇ ಅದನ್ನು ಮತ್ತೆ ಕಾರ್ಯಾಚರಣೆಗೆ ಒಳಪಡಿಸಲಾಗುತ್ತದೆ.
ಇದು ಅನಿರೀಕ್ಷಿತ ತಾಂತ್ರಿಕ ಪರಿಸ್ಥಿತಿ. ಆದರೆ, ಅಂತಹ ಸಂದರ್ಭಗಳಲ್ಲಿ ಸುರಕ್ಷತೆಯಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ಪ್ರಯಾಣಿಕರು ಮತ್ತು ಸಿಬ್ಬಂದಿಯ ಸುರಕ್ಷತೆ ಏರ್ ಇಂಡಿಯಾಕ್ಕೆ ಅತ್ಯಂತ ಮುಖ್ಯ. ಅದಕ್ಕಾಗಿಯೇ ಈ ಸಕಾಲಿಕ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ಮಾಹಿತಿ ನೀಡಿದ್ದಾರೆ.
ಫ್ಲೈಟ್ ಟ್ರ್ಯಾಕಿಂಗ್ ವೆಬ್‌ಸೈಟ್ Flightradar24.comನಲ್ಲಿ ಲಭ್ಯವಿರುವ ಮಾಹಿತಿ ಪ್ರಕಾರ, AI887 ವಿಮಾನವು ಬೋಯಿಂಗ್ 777-300 ER ವಿಮಾನದೊಂದಿಗೆ ಕಾರ್ಯನಿರ್ವಹಿಸುತ್ತಿತ್ತು. ಬೆಳಿಗ್ಗೆ 6.30ರ ಸುಮಾರಿಗೆ ಟೇಕ್ ಆಫ್ ಆದ ನಂತರ ಸುಮಾರು ಒಂದು ಗಂಟೆ ಕಾಲ ಹಾರಾಟ ನಡೆಸಿ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ಪುನಃ ದೆಹಲಿ ವಿಮಾನ ನಿಲ್ದಾಣಲ್ಲಿ ಲ್ಯಾಂಡ್ ಆಗಿದೆ.

