ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಮತ್ತು ಸಮಗ್ರ ಭೂ ಅಭಿವೃದ್ಧಿಗಾಗಿ ಶೇ.3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಅಧ್ಯಕ್ಷ ಪಿ.ಎಸ್.ಸಾದತ್ ವುಲ್ಲಾ ತಿಳಿಸಿದರು.
ಇಲ್ಲಿನ ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಕರೆಯಲಾಗಿದ್ದ ಕಾರ್ಯಕಾರಿ ಮಂಡಳಿ ನಿರ್ದೇಶಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಪ್ರಸ್ತುತ ಶೂನ್ಯ ಬಡ್ಡಿ ದರದಲ್ಲಿ ಕೆಸಿಸಿ ಸಾಲ ಮತ್ತು ಭೂ ಅಭಿವೃದ್ಧಿಗಾಗಿ ಶೇ.3ರಷ್ಟು ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ ಎಂದು ಅವರು ತಿಳಿಸಿದರು.
ನಿರ್ದೇಶಕ ಹರಿಯಬ್ಬೆ ಸಿ.ಹೆಂಜಾರಪ್ಪ ಮಾತನಾಡಿ ರೈತರ ಕೃಷಿ ಚಟುವಟಿಕೆಗಳಿಗೆ ನಮ್ಮ ಸಂಘ ಹೆಚ್ಚಿನ ಬೆಂಬಲ ನೀಡಬೇಕು ಆ ಮೂಲಕ ರೈತರ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅಲ್ಲದೆ ಸಾಲ ಮರು ಪಾವತಿಯ ಹೊಣೆಗಾರಿಕೆಯನ್ನು ಎಲ್ಲ ನಿರ್ದೇಶಕರು ತೆಗೆದುಕೊಳ್ಳಬೇಕು, ಯಾವುದೇ ಕಾರಣಕ್ಕೂ ಸಾಲ ತೀರುವಳಿ ಮಾಡದವರಿಗೆ ಸಾಲ ನೀಡಬಾರದು ಎಂದು ತಿಳಿಸಿದರು.
ನಿರ್ದೇಶಕ ಎಂ.ಡಿ ಸಣ್ಣಪ್ಪ ಮಾತನಾಡಿ ಹೆಚ್ಚಿನ ಷೇರುದಾರರಿಗೆ ಸಾಲ ಸೌಲಭ್ಯ ನೀಡಲು ಪ್ರತಿಯೊಬ್ಬರು ಕೆಲಸ ಮಾಡಬೇಕು. ಸಂಘದ ಅಡಿಯಲ್ಲಿ ಕಾಮನ್ ಸರ್ವಿಸ್ ಸೆಂಟರ್ ತೆರೆದು ಸೇವೆ ಒದಗಿಸಬೇಕು ಎಂದು ತಿಳಿಸಿದರು.
ನಿರ್ದೇಶಕರಾದ ವೆಂಕಟೇಶ್ ಹೆಚ್.ಎನ್ ವೆಂಕಟೇಶ್, ಸುಬ್ರಮಣ್ಯ ಮಾತನಾಡಿ, ಪ್ರತಿ ತಿಂಗಳು ನಿಗದಿತ ಸಮಯಕ್ಕೆ ಕಡ್ಡಾಯವಾಗಿ ಸಭೆ ಮಾಡಬೇಕು. ಲೆಕ್ಕ ಪತ್ರಗಳನ್ನು ವಿವರವಾಗಿ ದಾಖಲಿಸಬೇಕು ಎಂದು ಕಾರ್ಯದರ್ಶಿ ಯಶವಂತ್ ಗೆ ಸೂಚನೆ ನೀಡಿದರು.
ಗುಟ್ಕಾ, ಪಾನ್ ಪರಾಕ್, ಹೊಗೆ ಸೊಪ್ಪು ಇತ್ಯಾದಿ ಕ್ಯಾಸ್ಸರ್ ಕಾರಕ ವಸ್ತುಗಳನ್ನು ಸೇವನೆ ಮಾಡುತ್ತಿದ್ದು ಸಂಘದ ವತಿಯಿಂದ ಕ್ಯಾಸ್ಸರ್ ತಪಾಸಣೆ ಶಿಬಿರ ಏರ್ಪಡಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಸಭೆಯಲ್ಲಿ ಒಮ್ಮತದ ತೀರ್ಮಾನ ಮಾಡಲಾಯಿತು.
ಯಶಸ್ವಿನಿ ಯೋಜನೆ ಅಡಿ ಷೇರುದಾರ ಕುಟುಂಬಗಳಿಗೆ ವಿಮೆ ಮಾಡಿಸಬೇಕು. ಎಸ್ಸಿ, ಎಸ್ಟಿ ವರ್ಗಗಳಿಗೆ ಯಶಸ್ವಿನಿ ಪಾಲಿಸಿಗೆ ಯಾವುದೇ ಶುಲ್ಕ ಇರುವುದಿಲ್ಲ. ಸಾಮಾನ್ಯ ರೈತ ಕುಟುಂಬಗಳಿಗೆ ತಲಾ ನೂರು ರೂ.ಶುಲ್ಕ ಇದ್ದು ನಿರ್ದೇಶಕರು ಹೆಚ್ಚು ಸದಸ್ಯರಿಗೆ ವಿಮೆ ಮಾಡಿಸಲು ಅರಿವು ಮೂಡಿಸಬೇಕು ಎಂದು ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಗಳ ಮಹತ್ವ: ಸಂಘದ ಅಧ್ಯಕ್ಷರು ಮತ್ತು ನಿರ್ದೇಶಕರು ಸದಸ್ಯರೊಂದಿಗೆ ಸಭೆಗಳನ್ನು ನಡೆಸಿ, ಸಂಘದ ಕಾರ್ಯಗಳ ಬಗ್ಗೆ ಚರ್ಚಿಸಿ, ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು.
ಹಿರಿಯೂರು ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ನಿಯಮಿತ ಸಭೆಗಳನ್ನು ನಡೆಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಲಾಯಿತು.
ನಿರ್ದೇಶಕರಾದ ಪ್ಯಾರೇಜಾನ್, ಎನ್.ಪ್ರಕಾಶ್ ಕುಮಾರ್, ಸಿ.ಸುಬ್ರಮಣ್ಯ, ಎನ್.ಸುಬ್ರಮಣ್ಯ, ನಾಗರತ್ನಮ್ಮ, ಸಂಘದ ಕಾರ್ಯದರ್ಶಿ ಯಶವಂತ್, ಸಹಾಯಕಿ ಸುಲೋಚನ ಹಾಜರಿದ್ದರು.

