ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಕಾರ್ಮಿಕ ಸಚಿವ ಎಸ್.ಸಂತೋಷ್ಲಾಡ್ಗೆ ಕಾರ್ಮಿಕರು ಹಾಗೂ ಇಲಾಖೆಯ ಬಗ್ಗೆ ಕಿಂಚಿತ್ತು ಕಾಳಜಿಯಿಲ್ಲವೆಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈ.ಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಆಯೋಗ ಹಾಗೂ ಸೆಸ್ ಪ್ರಾಧಿಕಾರ ರಚನೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ಹದಿನಾರು ದಿನಗಳಿಂದಲೂ ಕಾರ್ಮಿಕ ಇಲಾಖೆ ಎದುರು ಧರಣಿ ನಡೆಸುತ್ತಿದ್ದೇವೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಮಂಗಳವಾರ ಚಿತ್ರದುರ್ಗಕ್ಕೆ ಆಗಮಿಸಿದ್ದ ಸಚಿವ ಎಸ್.ಸಂತೋಷ್ಲಾಡ್ ಸೌಜನ್ಯಕ್ಕಾದರೂ ನಮ್ಮ ಬಳಿ ಬಂದು ಸಮಸ್ಯೆಗಳನ್ನು ಆಲಿಸಬಹುದಿತ್ತು.
ಜೆಸಿಆರ್. ರಸ್ತೆ ಮೂಲಕವೆ ಹಾದು ಹೋಗಿದ್ದಾರೆ. ನಮ್ಮ ಕಡೆ ತಿರುಗಿ ನೋಡುವಷ್ಟು ಪುರುಸೊತ್ತು ಇಲ್ಲವೆಂದ ಮೇಲೆ ಇಂತಹವರು ಏಕೆ ಕಾರ್ಮಿಕ ಸಚಿವರಾಗಿರಬೇಕು? ನಿಜವಾದ ಕಾರ್ಮಿಕರಿಗೆ ಇಂತಹವರಿಂದ ನ್ಯಾಯ ಸಿಗುತ್ತದೆಂಬ ನಂಬಿಕೆಯಿಲ್ಲದಂತಾಗಿದೆ.
ಯಾರು ನಮ್ಮ ಬಳಿ ಬಂದು ಅಹವಾಲುಗಳನ್ನು ಕೇಳಲಿ ಬಿಡಲಿ ನಿರಂತರ ಧರಣಿ ಮೂಲಕ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದಿಡುತ್ತೇವೆಂದು ವೈ.ಕುಮಾರ್ ಹೇಳಿದರು.
ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ದಿ ಸಂಘದ ರಾಜ್ಯಾಧ್ಯಕ್ಷ ಜೆ.ಮಂಜುನಾಥ್, ರಾಜಪ್ಪ, ಪ್ರಸನ್ನ, ಓ.ಚಂದ್ರಪ್ಪ, ಮಹದೇವಮ್ಮ ವೇದಾವತಿ, ಮಂಜುಳ, ಸುಧಾ, ಗಂಗಮ್ಮ, ಶೈಲಮ್ಮ ಇವರುಗಳು ಧರಣಿಯಲ್ಲಿ ಪಾಲ್ಗೊಂಡಿದ್ದರು.

