ಚಂದ್ರವಳ್ಳಿ ನ್ಯೂಸ್, ಮೈಸೂರು :
ಸಚಿವ ಜಮೀರ್ ಅವರ ಆಪ್ತ ಸಹಾಯಕನ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಡೆಸಿರುವ ದಾಳಿಯ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ವಸತಿ ಮತ್ತು ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು.
ಸಚಿವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ಅವರ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿರುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಚಿವ ಜಮೀರ್ ಅಹ್ಮದ್ ಖಾನ್, ಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಸರ್ಫರಾಜ್ಖಾನ್ ಅವರ ತಂದೆಯ ಕಾಲದಿಂದಲೂ ಶ್ರೀಮಂತರು. ಈ ದಾಳಿ ಯಾಕೆ ಆಗಿದೆ ಎಂಬುದು ಗೊತ್ತಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಸಹಕಾರ ನಿರ್ದೇಶನಾಲಯ ಇಲಾಖೆಯಿಂದ ವಸತಿ ಇಲಾಖೆಗೆ ನಿಯೋಜನೆಯಲ್ಲಿರುವ ಸರ್ದಾರ್ ಸರ್ಫರಾಜ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಸರ್ದಾರ್ ಸರ್ಫರಾಜ್ ಖಾನ್ಗೆ ಸಂಬಂಧಿಸಿದ ಬೆಂಗಳೂರಿನ ಹಲಸೂರು ಮತ್ತಿತರ ಕಡೆಗಳಲ್ಲಿರುವ ಮನೆಗಳು, ಕೊಡಗಿನಲ್ಲಿರುವ ಕಾಫಿ ಎಸ್ಟೇಟ್, ಹೆಚ್.ಡಿ. ಕೋಟೆಯಲ್ಲಿರುವ ರೆಸಾರ್ಟ್ ಸೇರಿದಂತೆ 5ಕ್ಕೂ ಅಧಿಕ ಸ್ಥಳಗಳ ಮೇಲೆ ಏಕಕಾಲದಲ್ಲಿ ಲೋಕಾಯುಕ್ತರು ದಾಳಿ ನಡೆಸಲಾಗಿದ್ದು, ಶೋಧಕಾರ್ಯ ಕೂಡ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಕೂಡ ಮಾಹಿತಿ ನೀಡಿದ್ದಾರೆ.
ಇದೇ ಸಂದರ್ಭದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಜಮೀರ್ ಅಹ್ಮದ್ ಖಾನ್, ಡಿಸಿಎಂ ತಮ್ಮ ಇಲಾಖೆಯ ವಿಚಾರಕ್ಕೆ ದೆಹಲಿ ಹೋಗಿದ್ದಾರೆ. ಅವರು ಹೈಕಮಾಂಡ್ ಭೇಟಿಮಾಡುತ್ತಿಲ್ಲ ಎಂದು ತಿಳಿಸಿದರು.

ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡಬೇಕೆಂದು ಅವರ ಆಪ್ತ ಹಾಗೂ ಕಾಂಗ್ರೆಸ್ ಶಾಸಕ ಇಕ್ಬಾಲ್ ಹುಸೇನ್ ಪುನರುಚ್ಚರಿಸಿದ್ದು, ಈ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲರೂ ಅವರವರ ಅಭಿಪ್ರಾಯ ಹೇಳುತ್ತಾರೆ. ನನ್ನ ಅಭಿಪ್ರಾಯ ನಾನು ಹೇಳಿದ್ದೇನೆ.
ಸಿದ್ದರಾಮಯ್ಯ ಈಗ ಸಿಎಂ ಕುರ್ಚಿ ಮೇಲೆ ಕೂತಿದ್ದಾರೆ. 2028ರ ವರೆಗೆ ಅವರೇ ಸಿಎಂ ಅಗಿರುತ್ತಾರೆ. ಇದು ನನ್ನ ಅಭಿಪ್ರಾಯ. ಆದರೆ, ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅದಕ್ಕೆ ನಾವು ಬದ್ಧ. ಆದರೆ ಸದ್ಯಕ್ಕೆ ಸಿಎಂ ಬದಲಾವಣೆ ಸನ್ನಿವೇಶ ಇಲ್ಲ ಎಂದು ಸಚಿವ ಜಮೀರು ಹೇಳಿದರು.

