ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಾಚಕರ ಪತ್ರ, ಮೊನ್ನೆ ನಮ್ಮ ಚಿತ್ರದುರ್ಗದ ಪೇಟೆ ಬೀದಿಯ ಉಡುಗೊರೆ (ಗಿಫ್ಟ್) ಮಾರಾಟ ಮಳಿಗೆಯೊಂದಕ್ಕೆ ಹೋದಾಗ ಅಲ್ಲಿ ಮಕ್ಕಳು ಮತ್ತು ಪೋಷಕರಿಂದ ತುಂಬಿ ಹೋಗಿತ್ತು. ಕಾಲಿಡಲು ಜಾಗವಿರಲಿಲ್ಲ. ಅಷ್ಟೊಂದು ಸಂಖ್ಯೆಯಲ್ಲಿ ನಾ- ಮುಂದು ತಾ- ಮುಂದು ಎಂದು ಖರೀದಿ ಭರಾಟೆಯಲ್ಲಿ ಅವರಿದ್ದರು.
ಅಲ್ಲೇ ಹುಡುಗರನ್ನು ಯಾಕೆ ಇಷ್ಟು ಸಂಖ್ಯೆಯಲ್ಲಿ ಸೇರಿದ್ದೀರಿ ? ಯಾರಿಗಾಗಿ ಕೊಡಲು ಈ ಖರೀದಿ ಎಂದಾಗ ..! ಅದೇ ಅಂಕಲ್ ಇನ್ನೆರಡು ದಿನ ಬಿಟ್ಟು ಕ್ರಿಸ್ ಮಸ್ ಇದೆಯಲ್ಲ, ಹಾಗಾಗಿ ನಾವು ಫ್ರೆಂಡ್ಸ್ ಹಾಗೂ ನಮ್ಮ ಟೀಚರ್ಸ್ ಗೆ ಗಿಫ್ಟ್ ಕೊಡಲು ಕೊಂಡು ಹೋಗಲು ಬಂದಿದ್ದೇವೆ ಎಂದರು.
ನಾವು ಅವರಿಗೆ ಅವರು ನಮಗೆ ಉಡುಗೊರೆ ವಿನಿಮಯ ಮಿಡಿಕೊಳ್ಳು ಕಾರ್ಯಕ್ರಮವಿದೆ ಎಂದರು. ಹೌದು ಇದು ಒಳ್ಳೆಯ ಬೆಳವಣಿಗೆಯಾದರೂ, ಒಂದಷ್ಟು ದಿನ ಅಥವಾ ವರ್ಷ ನೆನಪಿನಲ್ಲಿ ಇಡುವ ವಸ್ತು ಹೌದಾದರೆ …
ಈ ಪದ್ಧತಿ ಅನುಸರಿಸುವ ಶಾಲೆ ಅಥವಾ ಕಾಲೇಜುಗಳಲ್ಲಿ ಇನ್ನೂ ಮುಂದುವರೆದು ಓದಿದ್ದು ಸದಾ ನೆನಪಿನಲ್ಲಿ ಉಳಿಯುವ ಮನೆಯ ಕಪಾಟಿನಲ್ಲಿಟ್ಟುಕೊಳ್ಳಬಹುದಾದ ಬದುಕನ್ನು ಬದಲಿಸಬಲ್ಲ, ಮಾರ್ಗದರ್ಶಿಯಾಗಬಲ್ಲ ಪುಸ್ತಕಗಳನ್ನು ತೆಗೆದುಕೊಂಡು ಅದನ್ನೇ “ಗ್ರಂಥ ವಿನಿಮಯ” ದಂತಹ ಒಂದು ಸಮಾರಂಭವನ್ನು ಏರ್ಪಡಿಸಿ ನೀಡಿದರೆ ಎಷ್ಟು ಉಪಯುಕ್ತವಾಗುತ್ತದೆ.
ಇದರಿಂದ ಓದಲು ಪ್ರೇರಣೆ ನೀಡಿದಂತಾಗುತ್ತದೆ. ಒಂದು ಪುಸ್ತಕದ ಓದಿನಿಂದ ಕೆಲವರು ತಮ್ಮ ಬದುಕನ್ನೇ ಅಥವಾ ದಿಕ್ಕನ್ನೇ ಬದಲಿಸಿಕೊಂಡ ಉದಾಹರಣೆ ಇರುವಾಗ.. ಇಂತಹ ಉಪಕ್ರಮವನ್ನು ಅನುಸರಿಸಬಾರದೇಕೆ ಎಂದನಿಸಿತು. ಈಗೀಗ ಪುಸ್ತಕಗಳನ್ನು ಓದುವವರ ಸಂಖ್ಯೆಯೇ ವಿರಳವಾಗುತ್ತಿರುವಾಗ ಶಾಲೆಗಳಲ್ಲಿ ಮಕ್ಕಳಿಗೆ ಕಥೆ, ಕಾದಂಬರಿ, ಅನುಭವಕಥನ
ಹೀಗೆ ಒಟ್ಟಿನಲ್ಲಿ ಮಕ್ಕಳ ನೈತಿಕ ಬೆಳವಣಿಗೆಗೆ ಪೂರಕವಾಗುವಂತಹ ಪುಸ್ತಕಗಳನ್ನು ಓದಲು ಮನೆ, ಪಾಠಶಾಲೆ ಇದರೊಂದಿಗೆ ಸಾರ್ಜನಿಕರು ಮುತುವರ್ಜಿವಹಿಸಿ ಸ್ವಲ್ಪ ಆಸಕ್ತಿ ತೆಗೆದುಕೊಂಡರೆ ಗ್ರಂಥಗಳನ್ನ ಉಡುಗೊರೆಯಾಗಿ ಕೊಡುವ ಆ ಮೂಲಕ ಓದಿಸುವ ಕ್ರಮವಾದರೆ ವಿದ್ಯಾರ್ಥಿಗಳ ಬುದ್ಧಿ, ಜ್ಞಾನಕ್ಕೆ ಇಂಬು ನೀಡಿದಂತಾಗುತ್ತದೆ. ಅವರು ಪಠ್ಯದ ಜೊತೆಗೆ ಇತರ ಕೃತಿಗಳನ್ನು ಓದುವ ಹವ್ಯಾಸ ರೂಡಿಸಿಕೊಂಡಂತಾಗುತ್ತದೆ.
ರುದ್ರಮೂರ್ತಿ ಎಂ. ಜೆ, ಚಿತ್ರದುರ್ಗ.

