ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅಡಿಕೆ ತೋಟದಲ್ಲಿ ಕೊಯ್ಲಿಗೆ ಬಂದಿದ್ದ 35 ಕ್ವಿಂಟಾಲ್ ಅಡಿಕೆಯನ್ನು ಕಳ್ಳರು ತೋಟಕ್ಕೆ ನುಗ್ಗಿ ಕದ್ದು ಪರಾರಿಯಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ವಿಜಾಪುರ ಗ್ರಾಮದ ರೈತ ಮರುಳಸಿದ್ದಪ್ಪ ಜಮೀನಿನಲ್ಲಿ ಜರುಗಿದೆ.
ರೈತ ಮರುಳಸಿದ್ದಪ್ಪ ಅವರ 400 ಅಡಿಕೆ ಮರಗಳಿಂದ 30-35 ಕ್ವಿಂಟಾಲ್ ಅಡಿಕೆಯನ್ನು ಕೊಯ್ದುಕೊಂಡು ಕಳ್ಳರು ಕದ್ದು ಪರಾರಿಯಾಗಿದ್ದಾರೆ.
ಕೋಟೆನಾಡಿನಲ್ಲಿ ವರ್ಷದಿಂದ ವರ್ಷಕ್ಕೆ ರೈತರು ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವುದು ಒಂದು ಕಡೆಯಾದರೆ ಫಸಲಿಗೆ ಬಂದ ಅಡಿಕೆ, ದಾಳಿಂಬೆ, ತೆಂಗಿನ ಕಾಯಿ, ಬಾಳೆ ಹಣ್ಣು ಸೇರಿದಂತೆ ಮತ್ತಿತರ ಬೆಲೆ ಬಾಳುವ ಫಸಲನ್ನು ಕಳ್ಳರು ಕದ್ದುಕೊಂಡು ಹೋಗುತ್ತಿರುವುದು ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚುತ್ತಿದೆ.
ಜಿಲ್ಲೆಯಲ್ಲಿ ಸದ್ಯ ಕೊಳವೆ ಬಾವಿಗಳನ್ನೇ ನೆಚ್ಚಿಕೊಂಡು ಕೃಷಿ ಮಾಡಲಾಗುತ್ತಿದೆ. ಅಂತರ್ಜಲ ಮಟ್ಟ ಕುಸಿದು ನೀರಿನ ಕೊರತೆ ಉಂಟಾದರೆ ಅಡಿಕೆ ಗಿಡ ಉಳಿಸಿಕೊಳ್ಳುವುದು ಅಸಾಧ್ಯ.
ಇದರ ಮಧ್ಯ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ವಾರ, 15 ದಿನಗಳಿಗೊಮ್ಮೆ ಮೋಟರ್ ಪಂಪ್ ಸುಟ್ಟು ಹೋಗುತ್ತಿದ್ದು ರೈತಾಪಿ ವರ್ಗ ಸಂಕಷ್ಟು ಎದುರಿಸುತ್ತಿದೆ.
ಆದರೂ ಕೂಡ ಬಯಲು ಸೀಮೆಯ ರೈತರು ಗಟ್ಟಿ ಧೈರ್ಯ ಮಾಡಿ ಸಾಲ ಸೋಲ ಮಾಡಿ ಅಡಿಕೆ ಬೆಳೆಯುವುದಕ್ಕೇ ಉತ್ಸಾಹಿಯಾಗಿದ್ದಾರೆ. ಆದರೆ ಈಗ ಅಡಿಕೆಗೆ ಕಳ್ಳರ ಕಾಟ ಹೆಚ್ಚಾಗಿದ್ದು ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡು ಅಡಿಕೆ ಕಳ್ಳರ ಎಡೆಮುರಿ ಕಟ್ಟುವಂತೆ ಸಂತ್ರಸ್ತ ರೈತರು ಆಗ್ರಹಿಸಿದ್ದಾರೆ.

