ಮರ್ಯಾದಾ ಹತ್ಯೆ ತಡೆಗಾಗಿ ಕಠಿಣ ಕಾಯ್ದೆ ರೂಪಿಸಿ-ಟೆಲೆಕ್ಸ್ ರವಿ ಕುಮಾರ್

News Desk
- Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಜ್ಯದಲ್ಲಿ  ದಿನದಿಂದ ದಿನಕ್ಕೆ ಜಾತಿ ವೈಷಮ್ಯ ಹೆಚ್ಚಾಗುತ್ತಿದೆ. ಇದೊಂದು ಆತಂಕಕಾರಿ ಬೆಳವಣಿಗೆ. ಇದೊಂದು ಜಾತಿ ಭಯೋತ್ಪಾದನೆ.(Caste Terrorism).

 ಜಾತಿ ವಿನಾಶಕ್ಕೆ ಅಥವಾ ಜಾತಿ ಆಧಾರಿತ ತಾರತಮ್ಯ, ಹಿಂಸೆಗಳಿಗೆ ಅಂತರ್ ಜಾತಿ ವಿವಾಹಗಳು ಪರಿಹಾರ ಎಂಬುದನ್ನು ಮಹಾಮಾನವತಾವಾದಿಗಳಾದ ಬಸವಣ್ಣ, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕರಾರುವಕ್ಕಾಗಿ ಪ್ರತಿಪಾದಿಸಿದ್ದರು. ಮತ್ತೂ ಅದನ್ನು ಅನುಷ್ಠಾನ ಗೊಳಿಸುವಲ್ಲಿ ತಮ್ಮ ಬದುಕನ್ನು ಸಮರ್ಪಿಸಿಕೊಂಡವರು.

- Advertisement - 

ವಿಪರ್ಯಾಸವೆಂದರೆ ಅಂತರ್ ಜಾತಿ ವಿವಾಹಗಳನ್ನು ಒಪ್ಪಲಾರದ  ಜಾತೀಯತೆಯ ರೋಗಪೀಡಿತ ಮನೋಸ್ಥಿತಿ ವಿಜ್ಞಾನ ಯುಗದಲ್ಲೂ ಮುಂದುವರೆದಿದೆ ಮತ್ತು ಹೆಚ್ಚಾಗುತ್ತಲೇ ಇದೆ. ಇದು ಸಮ ಸಮಾಜ ನಿರ್ಮಾಣದ ಎಲ್ಲಾ ಬಗೆಯ ಮಾನವೀಯ ಪ್ರಯತ್ನಗಳನ್ನು ಹತ್ತಿಕ್ಕಿಬಿಡುತ್ತವೆ.

ಇಂತಹ ಮನೋಸ್ಥಿತಿ ಎಷ್ಟೊಂದು ಕ್ರೌರ್ಯ ವನ್ನು ಮೆರೆಯುತ್ತಿದೆ ಎಂದರೆ  ಅಂತರ್ ಜಾತಿ ವಿವಾಹಗಳಾದ ಮಕ್ಕಳನ್ನು ತಮ್ಮ ಪೋಷಕರೇ ಕಾನೂನಿನ ಭಯವಿಲ್ಲದೆ  ಮರ್ಯಾದೆಯ ಹೆಸರಲ್ಲಿ ನಿರ್ದಯವಾಗಿ ಹತ್ಯೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದಕ್ಕೆ  ” ಮರ್ಯಾದ ಹತ್ಯೆ” ಎಂಬ ಹೆಸರಿನಿಂದಲೂ ಕರೆಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜಾತಿವಾದಿಗಳು ಇಂತಹ ಕ್ರೌರ್ಯವನ್ನೇ ಸಾಮಾಜಿಕ ಘನತೆ/ ಮೌಲ್ಯ  ಎಂಬಂತೆ ಪ್ರತಿಷ್ಠಾಪಿಸುವ ಅಪಾಯವೂ ಇದೆ.

- Advertisement - 

ಈ ಪಿಡುಗನ್ನು ಬುಡಸಮೇತ ಕಿತ್ತುಹಾಕಲು ಸರ್ಕಾರ  ಇಚ್ಛಾಶಕ್ತಿ  ತೋರಬೇಕು. ಜಾತಿ ದ್ವೇಷದಿಂದ ಪ್ರೇಮಿಗಳ ಅಥವಾ ದಂಪತಿಗಳ ಮೇಲೆ ಅವರ ಕುಟುಂಬದ ಮೇಲೆ ನಡೆಯುವ  ಹಲ್ಲೆ, ಹತ್ಯೆಯಂತಹ ಅಮಾನವೀಯ ಅಪರಾಧಗಳನ್ನು “ಘೋರ ಅಪರಾಧ”  ಎಂದು ಪರಿಗಣಿಸಬೇಕು.

ಸರ್ಕಾರ ಇಂತಹ ಘೋರ ಅಪರಾಧಗಳನ್ನು ನಿಗ್ರಹಿಸಲು ಉಗ್ರ ಕಾನೂನನ್ನು ರೂಪಿಸಿ ಜಾರಿಗೆ ತರಬೇಕು.  ಮೊನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದಾ ಹತ್ಯೆ ಹೆಸರಿನ ಜಾತಿ ಭಯೋತ್ಪಾದನೆಗೆ ( CASTE TERRORISM) ಬಲಿಯಾದ  “ಮಾನ್ಯ”ಳ  ಹೆಸರಲ್ಲಿ ಉಗ್ರ ಶಿಕ್ಷೆಯ ಕಾನೂನು ರೂಪಿಸಬೇಕಾಗಿದೆ.

ಈ ಉಗ್ರ ಶಿಕ್ಷೆಯ ಕಾಯ್ದೆಗೆ  “ಮಾನ್ಯ” ಹೆಸರಿಡುವುದು ಇದುವರೆಗೂ ಈ ರಾಜ್ಯದಲ್ಲಿ ಮರ್ಯಾದ ಹತ್ಯೆಗೆ ಬಲಿಯಾದ ಜೀವಗಳನ್ನು ಪ್ರತಿನಿಧಿಸುವಂತಾಗಲಿ ಎಂದು ಪತ್ರಕರ್ತ ಟೆಲೆಕ್ಸ್ ಎನ್.ರವಿಕುಮಾರ್ ಸೇರಿದಂತೆ ವಿಚಾರವಾದಿಗಳು, ಸಾಮಾಜಿಕ ಹೋರಾಟಗಾರರು, ವಕೀಲರು, ಸಮಾಜ ಚಿಂತಕರು, ಸಾಹಿತಿಗಳು, ಲೇಖಕರು, ಮಹಿಳಾ ವಿಚಾರವಾದಿಗಳು, ಜ್ಞಾನ ವಿಜ್ಞಾನ ಸಮಿತಿ, ಐಎಎಸ್ ಅಧಿಕಾರಿಗಳು, ರಂಗ ನಿರ್ದೇಶಕರು, ಕಲಾವಿದರು, ಮಠ ಮಾನ್ಯಗಳ ಸ್ವಾಮೀಜಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರಕ್ಕೆ ಆಗ್ರಹ ಮಾಡಿದ್ದಾರೆ.

 

 

 

 

Share This Article
error: Content is protected !!
";