ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕೇಂದ್ರ ಸಂವಹನ ಸಚಿವಾಲಯದಿಂದ ಚಿತ್ರದುರ್ಗ ಜಿಲ್ಲೆಯ 8 ಗ್ರಾಮಗಳಲ್ಲಿ ಅಂಚೆ ಕಚೇರಿ ಕಟ್ಟಡಗಳನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರ 3.4೦ ಕೋಟಿ ಅನುದಾನ ಬಿಡುಗಡೆ ಮಾಡಿದೆ ಎಂದು ಚಿತ್ರದುರ್ಗ ಲೋಕಸಭಾ ಸದಸ್ಯ ಗೋವಿಂದ ಎಂ ಕಾರಜೋಳ ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ ದೊಡ್ಡ ದೊಡ್ಡ ಗ್ರಾಮಗಳಲ್ಲಿ ಅಂಚೆ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತದ್ದವು. ಇದನ್ನು ಮನಗಂಡು ಅಂಚೆ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಪ್ರಸ್ತಾವನೆ ಅನುಮೋದಿಸಿ ಕೇಂದ್ರ ಸಂವಹನ ಖಾತೆ ಸಚಿವರಾದ ಜ್ಯೋತಿರಾದಿತ್ಯ ಸಿಂಧಿಯಾ ರವರು ಅನುದಾನ ಬಿಡುಗಡೆ ಮಾಡಿದ್ದಾರೆ.
ಹಿರಿಯೂರು ತಾಲ್ಲೂಕು ಆದಿವಾಲ ಗ್ರಾಮದಲ್ಲಿ ಬಿ.ಮಾದರಿ ಅಂಚೆ ಕಚೇರಿ ಕಟ್ಟಡ ನಿರ್ಮಾಣಕ್ಕಾಗಿ 50 ಲಕ್ಷ, ಚಿತ್ರದುರ್ಗ ತಾಲ್ಲೂಕು ಭೀಮಸಮುದ್ರ ಗ್ರಾಮದಲ್ಲಿ ಸಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 35 ಲಕ್ಷ, ಹೊಳಲ್ಕೆರೆ ತಾಲ್ಲೂಕು ಚಿಕ್ಕಜಾಜೂರು ಗ್ರಾಮದಲ್ಲಿ ಬಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 45 ಲಕ್ಷ, ಚಿತ್ರದುರ್ಗ ತಾಲ್ಲೂಕು ಓಬಳಾಪುರ ಗ್ರಾಮದಲ್ಲಿ ಸಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ ೩೭ ಲಕ್ಷ, ಚಳ್ಳಕೆರೆ
ತಾಲ್ಲೂಕು ಪರಶುರಾಂಪುರ ಗ್ರಾಮದಲ್ಲಿ ಬಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 44 ಲಕ್ಷ, ಮೊಳಕಾಲ್ಮೂರು ತಾಲ್ಲೂಕು ಕೊಂಡ್ಲಹಳ್ಳಿ ಗ್ರಾಮದಲ್ಲಿ ಬಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 48 ಲಕ್ಷ, ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮದಲ್ಲಿ ಬಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 45 ಲಕ್ಷ, ಹೊಸದುರ್ಗ ತಾಲ್ಲೂಕು ಬೆಲಗೂರು ಗ್ರಾಮದಲ್ಲಿ ಸಿ ಮಾದರಿ ಅಂಚೆ ಕಛೇರಿ ಕಟ್ಟಡ ನಿರ್ಮಾಣಕ್ಕಾಗಿ 36 ಲಕ್ಷ ಹೀಗೆ ಒಟ್ಟು 3.40 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಸಂಸದರು ತಿಳಿಸಿದ್ದಾರೆ.
ಶೀಘ್ರದಲ್ಲಿ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಅಧಿಕಾರಿಗಳು ಸಂಸದರು ಸೂಚನೆ ನೀಡಿದ್ದಾರೆ. ಅದೇ ರೀತಿ ಅನುದಾನ ಬಿಡುಗಡೆ ಮಾಡಿದ ಜ್ಯೋತಿರಾದಿತ್ಯ ಸಿಂದಿಯಾ ರವರಿಗೆ ಚಿತ್ರದುರ್ಗ ಜಿಲ್ಲೆಯ ಜನತೆಯ ಪರವಾಗಿ ಸಂಸದರು ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

