ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದ ವಿ.ಪಿ.ಬಡಾವಣೆ ಮತ್ತು ನಗರಸಭೆ ಸುತ್ತ-ಮುತ್ತ, ಬಾಲಕಿಯರ ಪದವಿಪೂರ್ವ ಕಾಲೇಜಿನ ಹತ್ತಿರ ಜಿಲ್ಲಾ ಮಟ್ಟದ ತಂಬಾಕು ತನಿಖಾ ತಂಡವು ಈಚೆಗೆ ಆರೋಗ್ಯ ಇಲಾಖೆ, ನಗರಸಭೆ ಮತ್ತು ಪೊಲೀಸ್ ಇಲಾಖೆ ವತಿಯಿಂದ ಕಾರ್ಯಾಚರಣೆ ನಡೆಸಿ, ತಂಬಾಕು ಉತ್ಪನ್ನಗಳ ಮಾರಾಟಗಾರರ ಅಂಗಡಿಗಳಿಗೆ ಭೇಟಿ ನೀಡಿ ನೀಡಿ, ದಂಡ ವಿಧಿಸಿದೆ.
ಯುವಜನತೆಯು ಅತೀ ಹೆಚ್ಚಾಗಿ ತಂಬಾಕಿನ ದುಶ್ಚಟಗಳಿಗೆ ಒಳಗಾಗುತ್ತಿದ್ದಾರೆ. ಇದರಿಂದಾಗಿ ಸಮಾಜದಲ್ಲಿ ಸಾವಿನ ಸಂಖ್ಯೆಯಲ್ಲಿ ಹೆಚ್ಚಾಗಿ ಯುವಕರೇ ಬಲಿಯಾಗುತ್ತಿದ್ದಾರೆ ಎಂದು ಯುವಕರಿಗೆ ಮತ್ತು ಅಂಗಡಿ ಮಾಲೀಕರಿಗೆ ತಂಬಾಕು ಕಾರ್ಯಾಚರಣೆಯನ್ನು ಮಾಡಿ ಸಾರ್ವಜನಿಕರಲ್ಲಿ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್ ಮಸಾಲ, ತಂಬಾಕು ಜಗಿದು ಉಗಿಯದಂತೆ ಎಚ್ಚರಿಕೆ ನೀಡಿ, ಜಾಗೃತಿ ಮೂಡಿಸಲಾಯಿತು.
ಸಂಬಂಧಪಟ್ಟ ಸೆಕ್ಷನ್-4, 6ಎ ಮತ್ತು 6ಬಿ ಬೋರ್ಡ್‍ಗಳನ್ನು ಹಾಕಲು ಸೂಚಿಸಲಾಯಿತು ಮತ್ತು ಸೆಕ್ಷನ್-4 ಅಡಿಯಲ್ಲಿ 15 ಕೇಸುಗಳನ್ನು ದಾಖಲಿಸಿ ರೂ. 1550 ದಂಡವನ್ನು ಮತ್ತು ಸೆಕ್ಷನ್-6ಬಿ ಅಡಿಯಲ್ಲಿ 7 ಕೇಸುಗಳನ್ನು ದಾಖಲಿಸಿ ರೂ. 1050 ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ಬಿ.ಎಂ.ಪ್ರಭುದೇವ, ಸಮಾಜ ಕಾರ್ಯಕರ್ತ ಕೆ.ಎಂ.ತಿಪ್ಪೇಸ್ವಾಮಿ, ನಗರಸಭೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಬಾಬುರೆಡ್ಡಿ, ರುಕ್ಮಿಣಿ, ಪೊಲೀಸ್ ಕಾನ್ಸ್‍ಟೇಬಲ್ ಶೃಂಗಾರ್ ಸಾಗರ್ ಇದ್ದರು.

