ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಜಿಪಂ, ತಾಪಂ ಸೇರಿದಂತೆ ಮುಂಬರುವ ಎಲ್ಲ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡರು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಬಲದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದ್ದು, ಈ ಬಗ್ಗೆ ಪ್ರತಿಕ್ರಿಯಿಸಲು ದೇವೇಗೌಡ ನಿರಾಕರಿಸಿದ್ದಾರೆ. ಈ ಬೆಳವಣಿಗೆಗಳು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಯಲ್ಲಿ ಗೊಂದಲ, ಬಿರುಕು ಹೆಚ್ಚಾಗುತ್ತಿದೆಯಾ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಗೌಡರು ಏನು ಹೇಳಿದರು?
ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ನಾವು ಲೋಕಸಭೆ, ವಿಧಾನಸಭೆ ಮತ್ತು ಪರಿಷತ್ತಿನ ಚುನಾವಣೆಗಳಲ್ಲಿ ಬಿಜೆಪಿ ಮೈತ್ರಿಯೊಂದಿಗೆ ಸ್ಪರ್ಧಿಸಲಿದ್ದೇವೆ. ಬಿಜೆಪಿ ರಾಜ್ಯ ಅಧ್ಯಕ್ಷರು ಹೇಳಿರುವ ವಿಚಾರದ ಬಗ್ಗೆ ನಾನು ಯಾವುದೇ ಪ್ರಶ್ನೆಗಳನ್ನು ಎತ್ತುವುದಿಲ್ಲ. ಎಲ್ಲಾ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿಯೂ ಜೆಡಿಎಸ್ ಸ್ವಂತ ಬಲದ ಮೇಲೆ ಸ್ಪರ್ಧಿಸಲಿದೆ ಎಂದು ಹೇಳಿದರು.
ಕಳೆದ ಲೋಕಸಭೆ ಚುನಾವಣೆ ವೇಳೆಗೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡ ಜೆಡಿಎಸ್, ಆ ಮೂಲಕ ಎನ್ಡಿಎ ಮಿತ್ರಕೂಟದ ಭಾಗವಾಗಿದೆ. ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಲಿವೆ ಎಂದು ಗೌಡರು ತಿಳಿಸಿದರು.
ವಿಜಯೇಂದ್ರ ಏನು ಹೇಳಿದ್ದರು?
ಇತ್ತೀಚೆಗೆ ನಡೆದ 4 ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಹಿಡಿದಿದ್ದು ಆ ಉತ್ಸಾಹದಲ್ಲಿ ಬಿಜೆಪಿ ಮುಂದಿನ ವಿಧಾನಸಭಾ ಚುನಾವಣೆಯಲ್ಲೂ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯುವ ಲೆಕ್ಕಾಚಾರಕ್ಕೆ ಇಳಿದಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ಮುಂಬರುವ 2028ರ ವಿಧಾನಸಭೆ ವೇಳೆಗೆ ಬಿಜೆಪಿ, ಜೆಡಿಎಸ್ ಮೈತ್ರಿ ಮುರಿದು ಬೀಳುತ್ತಾ ಎಂಬ ಪ್ರಶ್ನೆ ಮೂಡಲು ಕಾರಣವಾಗಿದೆ. ಆದರೆ, ವಿಜಯೇಂದ್ರ ಹೇಳಿಕೆ ಬಗ್ಗೆ ಜಾಣತನದಿಂದ ಪ್ರತಿಕ್ರಿಯಿರುವ ದೇವೇಗೌಡರು, ಆ ಬಗ್ಗೆ ಪ್ರಶ್ನೆ ಮಾಡಲು ಹೋಗುವುದಿಲ್ಲ ಎಂದಿದ್ದಾರೆ.
ಬಿಜೆಪಿ ರಾಜ್ಯ ನಾಯಕರು ಬಿಜೆಪಿ-ಜೆಡಿಎಸ್ ಮೈತ್ರಿಗೆ ಸಂಪೂರ್ಣ ಸಹಮತ ನೀಡುತ್ತಿಲ್ಲ ಎಂಬುದು ಇತ್ತೀಚಿನ ಬೆಳವಣಿಗೆಗಳಿಂದ ಸ್ಪಷ್ಟವಾಗಿದೆ. ವರಿಷ್ಠರ ಕಟ್ಟಪ್ಪಣೆಗೆ ಮಣಿದ ನಾಯಕರು, ನಾವು ಜೊತೆಗಿದ್ದೇವೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ.
ಆದರೆ, ಸರ್ಕಾರದ ವಿರುದ್ಧ ಜಂಟಿಯಾಗಿ ಹೋರಾಟ ರೂಪಿಸುವಲ್ಲಿ ಈ ಮೈತ್ರಿ ಸಫಲವಾಗಿಲ್ಲ. ಆಗೊಮ್ಮೆ ಈಗೊಮ್ಮೆ ಸಭೆ ನಡೆದರೂ ಅದು ಟೀ-ಕಾಫಿಗಷ್ಟೇ ಸೀಮಿತವಾಗಿದೆ ಎಂಬ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ಹಲವು ಬಾರಿ ಚರ್ಚೆಗಳಾಗಿವೆ.
ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಮೈತ್ರಿ ವಿಪಕ್ಷಗಳಾಗಿ ಯಾವುದೇ ರೀತಿಯ ಗನನ ಸೆಳೆಯುವ ಕೆಲಸ ಮಾಡಿಲ್ಲ. ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸ್ವಂತ ಬಲದ ಬಗ್ಗೆ ಮಾತನಾಡಿದ್ದಾರೆ. ಜೆಡಿಎಸ್ ಸಹ ಸ್ವಂತ ಬಲದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ಎದುರಿಸುವ ಘೋಷಣೆ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಮುಂದೆ ಯಾವ ಹಂತಕ್ಕೆ ಕೊಂಡೊಯ್ಯಲಿದೆ ಎಂಬುದನ್ನು ಕಾದುನೋಡಬೇಕಿದೆ.

