ಸಮಾಜ ಒಡೆಯುವುದೇ ಬಿಜೆಪಿ ಸಾಧನೆ-ಸಿದ್ದರಾಮಯ್ಯ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ದೇಶದಲ್ಲಿ ಧರ್ಮ-ಧರ್ಮಗಳ ಮಧ್ಯ ಒಡಕು ಉಂಟು ಮಾಡಿ ಸಮಾಜ ಒಡೆಯುವುದೇ ಬಿಜೆಪಿ ಸಾಧನೆಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭಾನುವಾರ ನಡೆದ ಕಾಂಗ್ರೆಸ್ ಪಕ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಈ ದೇಶಕ್ಕೆ ಬಿಜೆಪಿಯ ಕೊಡುಗೆ ಏನಿಲ್ಲ. ದೇಶ ಹಾಗೂ ಸಮಾಜ ಒಡೆಯುವುದೇ ಇವರ ಸಾಧನೆ, ಕೆಲಸ ಎಂದು ಸಿದ್ದರಾಮಯ್ಯ ಟೀಕಿಸಿದರು.

- Advertisement - 

ಸಮಾಜದಲ್ಲಿ ಚಾತುರ್ವರ್ಣ ವ್ಯವಸ್ಥೆ ರೂಪಿಸಿದ್ದೇ ಮನುಸ್ಮೃತಿ. ದೇಶದಲ್ಲಿ ಜಾತಿ ವ್ಯವಸ್ಥೆ ಹುಟ್ಟು ಹಾಕಿದ್ದೇ ಮನವಾದಿಗಳು. ಇದನ್ನೇ ಬಿಜೆಪಿಯವರು ಪಾಲಿಸುತ್ತಿದ್ದಾರೆ. ದೇಶಕ್ಕೆ ಬಿಜೆಪಿಯವರ ಕೊಡುಗೆ ಏನೂ ಇಲ್ಲ ಎಂದು ಸಿಎಂ ಆರೋಪಿಸಿದರು.

ಆರ್‌ಎಸ್‌ಎಸ್ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನವರು ಬ್ರಿಟಿಷರ ಜತೆ ಸೇರಿಕೊಂಡಿದ್ದರು. ಕ್ವಿಟ್ ಇಂಡಿಯಾ ಚಳವಳಿ, ಅಸಹಕಾರ ಚಳವಳಿ ಯಾವುದೇ ಚಳವಳಿಯಲ್ಲಿ ಆರ್‌ಎಸ್‌ಎಸ್‌ ನವರು ಭಾಗಿಯಾಗಲಿಲ್ಲ ಎಂದು ಸಿದ್ದರಾಮಯ್ಯ ದೂರಿದರು.

- Advertisement - 

ಆರ್‌ಎಸ್‌ಎಸ್‌ನವರು ಈಗ ರಾಷ್ಟ್ರಭಕ್ತಿ ಬಗ್ಗೆ ಮಾತನಾಡುತ್ತಾರೆ. ಉದ್ದುದ್ದ ಭಾಷಣ ಹೊಡೆಯುತ್ತಾರೆ. ಮಹಾತ್ಮಗಾಂಧೀಜಿಯವರನ್ನು ಕೊಂದಿದ್ದೇ ಆರ್‌ಎಸ್‌ಎಸ್‌ನಾತುರಾಮ್ ಗೋಡ್ಸ್ ಎಂದು ಸಿಎಂ ಟೀಕಾಪ್ರಹಾರ ಮಾಡಿದರು.

ಆರಂಭದಿಂದಲೂ ಮಹಾತ್ಮಗಾಂಧಿಯನ್ನು ಆರ್‌ಎಸ್‌ಎಸ್‌ನವರು ದ್ವೇಷಿಸುತ್ತಿದ್ದರು. ಈಗ ಕೇಂದ್ರ ಸರ್ಕಾರ ದ್ವೇಷ ಮಾಡಲು ಶುರು ಮಾಡಿದೆ. ನರೇಗಾ ಯೋಜನೆಯಿಂದ ಮಹಾತ್ಮ ಗಾಂಧೀಜಿ ಹೆಸರನ್ನು ಕೈ ಬಿಟ್ಟಿದ್ದು ಇವರೆಲ್ಲ ದೇಶ ಭಕ್ತರೇ ಎಂದು ಸಿದ್ದರಾಮಯ್ಯ ಹರಿಹಾಯ್ದರು.

ಆರ್‌ಎಸ್‌ಎಸ್‌ನವರನ್ನು ನಾನು ಡಕಾಯಿತರು ಎಂದು ಕರೆಯಲು ಹೋಗಲ್ಲ. ಆದರೆ ಅವರು ದೇಶ ಭಕ್ತರಂತೂ ಅಲ್ಲ. ಇಷ್ಟು ಮಾತ್ರ ಹೇಳುತ್ತೇನೆ. ಅವರಿಗೆ ದೇಶಕ್ಕೆ ಸ್ವಾತಂತ್ರ್ಯ ಬರುವುದು ಇಷ್ಟವಿರಲಿಲ್ಲ ಎಂದು ಸಿಎಂ ಆರೋಪಿಸಿದರು.

ಜವಾಹರ್ ಲಾಲ್ ನೆಹರು ಅವರು ಆಧುನಿಕ ಭಾರತದ ರೂವಾರಿ. ದೇಶಕ್ಕೆ ಜೈಜವಾನ್ ಜೈ ಕಿಸಾನ್ ಮಂತ್ರ ಕೊಟ್ಟವರು ಲಾಲ್ ಬಹದ್ದೂರ್ ಶಾಸ್ತ್ರಿ. ಸಾಮಾಜಿಕ ನ್ಯಾಯದ ರೂವಾರಿ ಇಂದಿರಾಗಾಂಧಿ. ಗರಿಬಿ ಹಠಾವೋ ಎಂಬ ಘೋಷಣೆ ನೀಡಿದವರು ಇಂದಿರಾಗಾಂಧಿ. ದೇಶದಲ್ಲಿ ಆಹಾರದ ಸ್ವಾವಲಂಬನೆಗೆ ಕಾರಣವಾದ ಹಸಿರು ಕ್ರಾಂತಿ ತಂದವರು ಇಂದಿರಾಗಾಂಧಿ, ಜಗಜೀವನರಾಮ್ ಅವರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

ಈ ದೇಶವನ್ನು ೨೧ನೇ ಶತಮಾನಕ್ಕೆ ಮುನ್ನಡೆಸಿದವರು ರಾಜೀವ್‌ಗಾಂಧಿ. ಹೀಗಿರುವಾಗ ದೇಶಕ್ಕೆ ಬಿಜೆಪಿಯವರ ಕೊಡುಗೆ ಏನು. ಬಿಜೆಪಿಗೆ ಸೇರಿದ ವಾಜಪೇಯಿ ಇವರೆಲ್ಲಾ ಪ್ರಧಾನಿಯಾಗಿರಬಹುದು ಅಷ್ಟೇ. ಆದರೆ ದೇಶಕ್ಕೆ ಹೆಚ್ಚಿನ ಕೊಡುಗೆ ನೀಡಿದ್ದು ಕಾಂಗ್ರೆಸ್. ನಾವು ಕಾಂಗ್ರೆಸ್ಸಿಗರು ಎಂಬುದು ಹೆಮ್ಮೆಯ ವಿಚಾರ ಎಂದು ಅವರು ತಿಳಿಸಿದರು.

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಜಾತಿ ವ್ಯವಸ್ಥೆ, ಅಸಮಾನತೆ ವಿರುದ್ಧ ಸಮರ ಸಾರಿ ಈ ಅನಿಷ್ಠಗಳನ್ನು ತೊಲಗಿಸಲು ಸಂವಿಧಾನ ಜಾರಿ ಮಾಡಿದರು. ಭಾರತದ ಪ್ರಜಾಪ್ರಭುತ್ವ, ಸಾಮಾಜಿಕ ತಳಹದಿಯ ಮೇಲೆ ನಿಂತಿದೆ ಎಂದು ಹೇಳಿದವರು ಅಂಬೇಡ್ಕರ್, ದೇಶದ ಜನರಿಗೆ ಸಮಾನ ಅವಕಾಶ ಬಂದದ್ದು ಸಂವಿಧಾನ ರಚನೆಯಾದ ಮೇಲೆ ಎಂದು ಅವರು ಹೇಳಿದರು.

 

 

Share This Article
error: Content is protected !!
";