ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಅಸಮರ್ಥ ಆರೋಗ್ಯ ಸಚಿವರೇ, ಅಂಗೈ ಹುಣ್ಣಿಗೆ ಕನ್ನಡಿ ಬೇಕೇ? ಕೊಲೆಗಡುಕ ಕಾಂಗ್ರೆಸ್ ಸರ್ಕಾರದ ಭಾಗವಾಗಿರುವ ನೀವು ಮರೆತಿರಬಹುದು, ಮಾಧ್ಯಮಗಳಲ್ಲಿ ವರದಿಯಾಗಿರುವುದು ಸುಳ್ಳೇ? ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿರುದ್ಧ ಜೆಡಿಎಸ್ ಕಿಡಿಕಾರಿದೆ.
ಬಳ್ಳಾರಿ, ರಾಯಚೂರು ಸೇರಿದಂತೆ ರಾಜ್ಯದ ಹಲವು ಜಿಲ್ಲಾಸ್ಪತ್ರೆಗಳಲ್ಲಿ ಬಾಣಂತಿಯರ ಸರಣಿ ಸಾವುಗಳು ಮತ್ತು ಯಾದಗಿರಿಯಲ್ಲಿ 127 ಕಂದಮ್ಮಗಳ ಬಲಿಯಾಗಿದ್ದು ನಿಮ್ಮ ವೈಫಲ್ಯ ಮತ್ತು ಬೇಜಾವಾಬ್ದಾರಿತನಕ್ಕೆ ಸಾಕ್ಷಿ ಎಂದು ಜೆಡಿಎಸ್ ಟೀಕಿಸಿದೆ.
ಆರೋಗ್ಯ ಇಲಾಖೆಯನ್ನು ಕೋಮಾಸ್ಥಿತಿಗೆ ತಂದಿಟ್ಟು, ಸರ್ಕಾರಿ ಆಸ್ಪತ್ರೆಗಳನ್ನು ಮೃತ್ಯುಕೂಪವಾಗಿಸಿರುವ ಅಸಮರ್ಥ ಸಚಿವ ನೀವು.ರಾಜ್ಯದಲ್ಲಿ ಬಡವರು ಸರ್ಕಾರಿ ಆಸ್ಪತ್ರೆಗಳಿಗೆ ಬರುವುದಕ್ಕೆ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ದುರಂತಗಳ ಸರಮಾಲೆ ರಾಜ್ಯದ ಜನರ ಕಣ್ಣಮುಂದೆ ಇದೆ.
ಮೆಡಿಕಲ್ ಮಾಫಿಯಾಕ್ಕೆ ಮಣಿದು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಬಡವರಿಗೆ ಕಡಿಮೆ ದರದಲ್ಲಿ ಸಿಗುತ್ತಿದ್ದ ಜನೌಷಧಿ ಕೇಂದ್ರಗಳನ್ನು ಮುಚ್ಚಿಸಿದ ನಾಲಾಯಕ್ ಸರ್ಕಾರ ನಿಮ್ಮದು. ನ್ಯಾಯಾಲಯ ಛೀಮಾರಿ ಹಾಕಿದ್ದು ನಿಮ್ಮ ಹೊಣೆಗೇಡಿತನಕ್ಕೆ ಸಾಕ್ಷಿ. ಕೈಲಾಗದವರು ಮೈ ಪರಚಿಕೊಂಡರಂತೆ ಇದು ನಿಮ್ಮ ಪರಿಸ್ಥಿತಿ ಎಂದು ಜೆಡಿಎಸ್ ವಾಗ್ದಾಳಿ ಮಾಡಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ, ವೈದ್ಯರು, ಸಿಬ್ಬಂದಿ ಕೊರತೆ ಇಂದಿಗೂ ಗಂಭೀರ ಸಮಸ್ಯೆಯಾಗಿದೆ. ಕುಡಿಯುವ ನೀರು, ಕರೆಂಟ್ ಸೇರಿ ಅಗತ್ಯ ಮೂಲಸೌಕರ್ಯಗಳಿಲ್ಲದೇ ಪದೇ ಪದೇ ಸುದ್ದಿಯಾಗುತ್ತಾ ಬೆತ್ತಲಾಗುತ್ತಿರುವುದು ನೀವು ಮತ್ತು ಭ್ರಷ್ಟಕಾಂಗ್ರೆಸ್ ಸರ್ಕಾರ.
ಜನ ವಿರೋಧಿ, ಬಡವರ ವಿರೋಧಿ ಕಾಂಗ್ರೆಸ್ ಸರ್ಕಾರ ಮಾಡುವುದೆಲ್ಲ “ಅನಾಚಾರ, ಮನೆ ಮುಂದೆ ಬೃಂದಾವನ” ಎಂದು ಜೆಡಿಎಸ್ ಹರಿಹಾಯ್ದಿದೆ.

