ಚಂದ್ರವಳ್ಳಿ ನ್ಯೂಸ್, ಬೆಂಗಳೂರು :
ಮಂತ್ರಿಗಳಿಗೆ ಹತ್ತಿರಇರೋರು, ಪಕ್ಷದ ಪದಾಧಿಕಾರಿಗಳೇ ಡ್ರಗ್ಸ್ ದಂಧೆಯಲ್ಲಿ ಶಾಮೀಲಾಗಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ್ ನಾರಾಯಣ್ ಗಂಭೀರ ಆರೋಪ ಮಾಡಿದ್ದಾರೆ.
ಮಾಜಿ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹಾಗೂ ಅಶ್ವತ್ಥ್ ನಾರಾಯಣ್ ಅವರು ಭಾನುವಾರ ಜಂಟಿ ಮಾಧ್ಯಮಗೋಷ್ಟಿ ನಡೆಸಿ ಬೆಂಗಳೂರಿನಲ್ಲಿ ಮೂರು ಡ್ರಗ್ಸ್ ಫ್ಯಾಕ್ಟರಿ ಪತ್ತೆ ಪ್ರಕರಣದ ವಿಚಾರವಾಗಿ ಮಾತನಾಡಿ ಗಂಭೀರ ಆರೋಪ ಮಾಡಿದರು.
ಡ್ರಗ್ಸ್ ಹಾವಳಿ ತಡೆಯಲು ಗೃಹ ಇಲಾಖೆ ವಿಫಲವಾಗಿದೆ. ಮಾದಕ ವಸ್ತುಗಳ ತಯಾರಿ, ಸಾಗಾಣಿಕೆ, ಮಾರಾಟ ರಾಜ್ಯದಲ್ಲಿ ಹೆಚ್ಚಾಗಿದೆ. ಕೋಟ್ಯಂತರ ಮೌಲ್ಯದ ಡ್ರಗ್ಸ್ ತಯಾರಿಕೆ ಫ್ಯಾಕ್ಟರಿಗಳಿವೆ. ಯಾವ ಮಟ್ಟದಲ್ಲಿ ಗೃಹ ಇಲಾಖೆ ಕಾರ್ಯ ನಿರ್ವಹಿಸುತ್ತಿದೆ ಅಂತ ಗೊತ್ತಾಗುತ್ತೆ. ನಾರ್ಕೋಟಿಕ್ ದಳದಲ್ಲಿ ಯಾರಿದ್ದಾರೆ, ಏನು ಮಾಡ್ತಿದ್ದಾರೆ?. ಮಹಾರಾಷ್ಟ್ರ ಪೊಲೀಸರು ಬಂದು ಕಲಬುರಗಿ, ಮೈಸೂರು, ಈಗ ಬೆಂಗಳೂರಿನಲ್ಲಿ ಮೂರು ಕಡೆ ಡ್ರಗ್ಸ್ ಫ್ಯಾಕ್ಟರಿಗಳಮೇಲೆ ದಾಳಿ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕ ರಾಜ್ಯದಲ್ಲಿರುವ ಡ್ರಗ್ಸ್ ಫ್ಯಾಕ್ಟರಿಗಳು ಮಹಾರಾಷ್ಟ್ರ ಪೊಲೀಸರಿಗೆ ಎಲ್ಲಿದೆ ಅಂತ ಗೊತ್ತಾಗುತ್ತದೆ. ನಮ್ಮ ಪೊಲೀಸರಿಗೆ ಗೊತ್ತಾಗಲ್ಲ, ಅಂದ್ರೆ ಹೇಗೆ ಕೆಲಸ ಮಾಡ್ತಿದ್ದಾರೆ ಇವರು?. ಗೃಹ ಸಚಿವರಿಗೆ ಏನೂ ಗೊತ್ತಿಲ್ಲ, ಪರಿಶೀಲಿಸುತ್ತೇವೆ, ನೋಡ್ತೇವೆ ಅಂತಾರೆ. ಸಿಎಂ ಪಾಪ ಬಹಳ ಬ್ಯುಸಿ. ಎಲ್ರೂ ಬ್ಯುಸಿ. ಹೀಗೆ ಬ್ಯುಸಿಯಾಗಿ ಏನು ಮಾಡ್ತಿದ್ದಾರೆ ಗೊತ್ತಿಲ್ಲ. ಪೊಲೀಸ್ ಹುದ್ದೆಗಳನ್ನು ಮಾರಾಟಕ್ಕಿಟ್ಟಿದ್ದಾರೆ ಎಂದು ಅವರು ವಾಗ್ದಾಳಿ ಮಾಡಿದರು.
ಮೂವತ್ತು ನಲವತ್ತು ವರ್ಷ ಅನುಭವ ಇರೋರೇ ಆಳ್ತಿದ್ದಾರೆ, ಏನ್ ಮಾಡ್ತಿದ್ದಾರೆ. ಯುವಕರು ಡ್ರಗ್ಸ್ ಸೇವನೆಯಿಂದ ಹಾಳಾಗ್ತಿದ್ದಾರೆ. ಡ್ರಗ್ಸ್ ಪೆಡ್ಲರ್ಸ್‌ಗಳ ಬಳಿ ಹಣ ಸೇರಿ ಅವರೇ ಆಡಳಿತ ಮಾಡ್ತಿದ್ದಾರೆ. ನಮ್ಮ ಯುವಕರಿಗೂ ಭವಿಷ್ಯ ಇಲ್ಲ, ನಮ್ಮ ನಾಡಿಗೂ ಭವಿಷ್ಯ ಇಲ್ಲ. ಕಾಂಗ್ರೆಸ್ನವರಿಗೆ ಯಾವುದನ್ನೂ ನಿರ್ವಹಣೆ ಮಾಡಲು ಆಗ್ತಿಲ್ಲ. ಇವರು ಯಾರ ಮೇಲೆ ಕ್ರಮ ತಗೊಂಡಿದ್ದಾರೆ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಸರ್ಕಾರಕ್ಕೆ ಆತ್ಮಸಾಕ್ಷಿ ಇದ್ದರೆ ಒಂದು ಕ್ಷಣ ಅಧಿಕಾರದಲ್ಲಿರದೇ ರಾಜೀನಾಮೆ ಕೊಡಲಿ. ನಿಮ್ಮ ಪಕ್ಷದಲ್ಲಿ ಯೋಗ್ಯರು ಯಾರಾದ್ರೂ ಇದ್ದರೆ ಅವರಿಗೆ ಅಧಿಕಾರ ಕೊಡಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಶಿಕ್ಷಣ ವ್ಯವಸ್ಥೆ, ಕ್ರೀಡಾ ವ್ಯವಸ್ಥೆ ಹಾಳಾಗಿದೆ ಎಂದು ಅವರು ವಾಗ್ದಾಳಿ ಮಾಡಿದ್ದಾರೆ. ಕುರ್ಚಿ ಗಲಾಟೆಯಲ್ಲಿ ಕಾಂಗ್ರೆಸ್‌ನವರು ಮುಳುಗಿದ್ದಾರೆ. ಹಾಳಾಗಿ ಹೋಗಿದ್ದಾರೆ. ಇವರು ಹೇಗಾದರೂ ಹಾಳಾಗಲಿ, ರಾಜ್ಯ ಹಾಳಾಗೋದು ಬೇಡ. ಸಿಎಂ, ಗೃಹ ಸಚಿವರು ರಾಜೀನಾಮೆ ಕೊಟ್ಟು ಮನೆಗೆ ಹೋಗಲಿ.
ಇಡೀ ಪೊಲೀಸ್ ಇಲಾಖೆ ರಾಜೀನಾಮೆ ಕೊಡಲಿ. ನೇಮಕಾತಿ, ವರ್ಗಾವಣೆಯಲ್ಲಿ ಭ್ರಷ್ಟಾಚಾರ ನಡೀತಿದೆ. ಸಿಎಂ, ಗೃಹ ಸಚಿವರು ಪ್ರಜೆಗಳ ರಕ್ಷಣೆ ಮಾಡಲು ವಿಫಲರಾಗಿದ್ದಾರೆ.
ಕಾಂಗ್ರೆಸ್ನವರಿಗೆ ಹತ್ತಿರ ಇರೋರೇ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ. ಶಾಸಕರು, ಮಂತ್ರಿಗಳಿಗೆ ಹತ್ತಿರ ಇರೋರೇ ಶಾಮೀಲು ಆಗಿದ್ದಾರೆ. ಮೈಸೂರಲ್ಲಿ 192 ಕೆಜಿಯ 391 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದ್ದರೆ, ಬೆಂಗಳೂರಿನಲ್ಲಿ 56 ಕೋಟಿ ಮೊತ್ತದ ಡ್ರಗ್ಸ್ ಪತ್ತೆ ಆಗಿದೆ ಎಂದು ಅಶ್ವಥ್ ನಾರಾಯಣ್ ಟೀಕಾ ಪ್ರಹಾರ ಮಾಡಿದರು.
ಬಿಜೆಪಿ ಮುಖಂಡ, ಮಾಜಿ ಪೊಲೀಸ್ ಕಮೀಷನರ್ ಭಾಸ್ಕರ್ ರಾವ್ ಮಾತನಾಡಿ, ಡ್ರಗ್ಸ್ ವಿಚಾರದಲ್ಲಿ ಸರ್ಕಾರಕ್ಕೆ ಸಾಫ್ಟ್ ಕಾರ್ನರ್ ಇದೆ. ಮೈಸೂರಿನಲ್ಲಿ ಡ್ರಗ್ಸ್ ಪತ್ತೆ ಪ್ರಕರಣದ ಸರಿಯಾದ ತನಿಖೆ ನಡೀತಿಲ್ಲ. ಕರ್ನಾಟಕದಲ್ಲಿ ಆ್ಯಂಟಿ ಡ್ರಗ್ ಪಾಲಿಸಿಯೇ ಇಲ್ಲ. ಫಾಸ್ಟ್ ಟ್ರ್ಯಾಕ್ ಕೋರ್ಟ್ಗಳಿಲ್ಲ. ಡ್ರಗ್ಸ್ ನಿಯಂತ್ರಣಕ್ಕೆ ಶಾಲಾ, ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಆಗ್ತಿಲ್ಲ.
ಗೃಹ ಇಲಾಖೆಯಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಬದ್ಧತೆ ಇರುವ ಅಧಿಕಾರಿಗಳ ನೇಮಕ ಆಗಿಲ್ಲ. ಡ್ರಗ್ಸ್ ಕಂಟ್ರೋಲ್ ದಳ ದುರ್ಬಲವಾಗಿದೆ. ಹೊರ ರಾಜ್ಯದ ಪೊಲೀಸರು ಮುಂದೆಯೂ ಬಂದು ರೇಡ್ ಮಾಡುವ ಪರಿಸ್ಥಿತಿ ಇದೆ. ಡ್ರಗ್ಸ್ ಫ್ಯಾಕ್ಟರಿಗಳ ಪತ್ತೆ, ಡ್ರಗ್ಸ್ ಸೇವನೆ, ಮಾರಾಟ ಹೆಚ್ಚಳ ಎಲ್ಲಕ್ಕೂ ಪೊಲೀಸ್ ವೈಫಲ್ಯ ಕಾರಣ. ಅನೇಕ ಕಡೆ ಪೊಲೀಸರೇ ಡ್ರಗ್ಸ್ ಪೆಡ್ಲರ್ಗಳ ಜತೆ ಕೈ ಜೋಡಿಸಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಅನೇಕ ಠಾಣೆಗಳ ಪೊಲೀಸರು ಡ್ರಗ್ ಪೆಡ್ಲರ್‌ಗಳಿಂದ ಹಣ ಪಡೆದುಕೊಳ್ಳುತ್ತಾರೆ. ಪೊಲೀಸ್ ಠಾಣೆಗಳಿಗೆ ಇಂತಿಷ್ಟು ಕೊಡಬೇಕು ಅಂತ ಫಿಕ್ಸ್ ಮಾಡಿದ್ದಾರೆ. ಹೀಗಾಗಿ, ಪೊಲೀಸರು ಡ್ರಗ್ಸ್ ಪೆಡ್ಲರ್‌ಗಳಿಂದ ಹಣ ಪಡೆದು ದಂಧೆಗೆ ಸಹಾಯ ಮಾಡ್ತಿದ್ದಾರೆ. ಗೃಹ ಇಲಾಖೆ ಸಂಪೂರ್ಣ ವಿಫಲವಾಗಿದೆ. ಒಂದೊಂದು ಸ್ಟೇಷನ್, ಸಬ್ ಡಿವಿಜನ್‌ಗೆ ಇಷ್ಟು ಕೊಡಬೇಕು ಅಂತ ಫಿಕ್ಸ್ ಮಾಡಿದ್ದಾರೆ ಎಂದು ದೂರಿದರು.
ನಿಯಮ ಬದ್ಧವಾಗಿ ಮನೆ ಕಟ್ಟಿರುವವರಿಗೇ ಕಿರುಕುಳ, ಕಾಟ ಕೊಡೋರು ಇವರು.ಸಮಸ್ಯೆ ಬಗೆಹರಿಸುವ ಸರ್ಕಾರ ಅಲ್ಲ ಇದು, ಸಮಸ್ಯೆ ಹುಟ್ಟು ಹಾಕುವ ಸರ್ಕಾರ ಇದು. ಜನ ಕಷ್ಟ ಪಟ್ಟು ಖರೀದಿಸಿದ ಸೈಟ್‌ಗಳಲ್ಲಿ ಕಷ್ಟದಿಂದ ಮನೆ ಕಟ್ಟಿಸ್ತಿದ್ದಾರೆ. ಇವರು ನೋಡಿದರೆ ಅಕ್ರಮ ಮನೆಗಳನ್ನು ಕಟ್ಟಿಕೊಂಡ ಮುಸ್ಲಿಮರ ಪರ ಮಾತಾಡ್ತಿದ್ದಾರೆ. ಯಾರು ಮುಸ್ಲಿಮರ ಚಾಂಪಿಯನ್ ಆಗಬೇಕು ಅಂತ ಸ್ಪರ್ಧೆಗೆ ಇಳಿದಿದ್ದಾರೆ. ಅಕ್ರಮ ಮನೆಗಳ ತೆರವು ಆಗ್ತಾನೇ ಇರುತ್ತೆ. ಇಲ್ಲಿನ ಸರ್ಕಾರ ಸತ್ತು ಹೋಗಿದೆ. ಸತ್ತು ಹೋದ ಸರ್ಕಾರ ಜನ ವಿರೋಧಿ ಆಡಳಿತ ಮಾಡ್ತಿದೆ. ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲಿ ಇದೆಲ್ಲ ಆಗ್ತಿದೆ. ಇದರ ಬಗ್ಗೆ ಕೃಷ್ಣಬೈರೇಗೌಡ ಏನಂತಾರೆ?. ಅವರ ಸದ್ದು ಎಲ್ಲಿ ಕಾಣ್ತಿಲ್ಲ?. ಎಲ್ಲಿ ಹೋಯಿತು ಕೃಷ್ಣಬೈರೇಗೌಡರ ಧ್ವನಿ?. ಕೃಷ್ಣಬೈರೇಗೌಡರ ಧ್ವನಿ ಅಡಗಿಹೋಗಿದೆಯಾ? ಹುಡುಕಿ ಕೊಟ್ಟವರಿಗೆ ಬಹುಮಾನ. ಕಾಂಗ್ರೆಸ್ ಹೈಕಮಾಂಡ್ ರಾಜ್ಯದ ಮಾನ ಹರಾಜು ಹಾಕಿದೆ ಎಂದು ಅವರು ಕಿಡಿಕಾರಿದ್ದಾರೆ.
ವೇಣುಗೋಪಾಲ್ ಅವರ ಟ್ವೀಟ್ ನೋಡಿದ್ರೆ ಅವರ ಸರ್ಕಾರ ಸರಿಯಾಗಿ ಆಡಳಿತ ಮಾಡ್ತಿಲ್ಲ ಅಂತನಾ?. ಮುಸ್ಲಿಂ ವೋಟ್ ಪಾಲಿಟಿಕ್ಸ್, ಮುಸ್ಲಿಮರ ವೋಟು ಕಮ್ಯೂನಿಸ್ಟರಿಗೆ ಹೋಗಬೇಕಾ? ಕಾಂಗ್ರೆಸ್ಗೆ ಹೋಗಬೇಕಾ ಅಂತ ಸ್ಪರ್ಧೆ. ಮುಸ್ಲಿಂ ವೋಲೈಕೆ ಅಷ್ಟೇ ಇದರ ಹಿಂದಿನ ಉದ್ದೇಶ, ಇದು ತುಷ್ಟೀಕರಣದ ಪರಮಾವಧಿ. ಕೋಗಿಲು ಲೇಔಟ್‌ನಲ್ಲಿ ಅಕ್ರಮ ಮನೆಗಳ ತೆರವು ಹಿಂದೆ ಬೇರೆ ದುರುದ್ದೇಶ ಇತ್ತು. ಅದೆಲ್ಲ ಬೇಡ ಈಗ, ಮುಸ್ಲಿಮರು ಅಂತ ಮಾತ್ರ ಇವರ ಕಣ್ಣಿಗೆ ಕಾಣ್ತಿದೆ. ಹೇಗಾದರೂ ಮಾಡಿ ಕೇರಳ ಚುನಾವಣೆ ಗೆಲ್ಲಬೇಕು ಅಷ್ಟೇ. ಜನವಿರೋಧಿ, ಸೂಕ್ಷ್ಮತೆ ಇಲ್ಲದ, ನೈತಿಕತೆ ಇಲ್ಲದ ಭಂಡ ಸರ್ಕಾರ ಇದು. ಇವರಿಗೆ ಯಾವ ಭಾಷೆಯಲ್ಲಿ ಮಾತಾಡಬೇಕೋ ಗೊತ್ತಿಲ್ಲ ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

