ಪ್ರಖರ, ವೈಚಾರಿಕ ಸಾಹಿತಿ ಕುವೆಂಪುರವರು ಅವಮಾನ, ಕಷ್ಟ ಅನುಭವಿಸಿದ್ದಾರೆ

News Desk
- Advertisement -  - Advertisement -  - Advertisement - 

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ :
ಸಾಹಿತ್ಯವನ್ನು ಅಸ್ತ್ರವಾಗಿಟ್ಟುಕೊಂಡು ಜಾತಿಯತೆ
, ಮೂಢನಂಬಿಕೆ, ಕಂದಾಚಾರದ ವಿರುದ್ದ ಪ್ರಬಲವಾದ ಧ್ವನಿ ಎತ್ತಿದವರು ರಸ ಋಷಿ ಕುವೆಂಪು ಎಂದು ಚಿತ್ರದುರ್ಗ ವಿಜ್ಞಾನ ಕೇಂದ್ರದ ಅಧ್ಯಕ್ಷರಾದ ಜೆ.ಯಾದವರೆಡ್ಡಿ ಬಣ್ಣಿಸಿದರು.

ಹಳೆ ಕಲ್ಲಹಳ್ಳಿಯ ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಚಿತ್ರದುರ್ಗ ವಿಜ್ಞಾನ ಕೇಂದ್ರದ ವತಿಯಿಂದ ಸೋಮವಾರ ನಡೆದ ಕುವೆಂಪು ಜನ್ಮದಿನಾಚರಣೆಯಲ್ಲಿ ಕುವೆಂಪುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.

- Advertisement - 

ಶ್ರೇಷ್ಟ ಸಾಹಿತಿ, ಮಹಾನ್ ಪ್ರತಿಭೆಯುಳ್ಳ ದಾರ್ಶನಿಕರಾಗಿದ್ದ ಕುವೆಂಪುರವರು ಕೊಟ್ಟಷ್ಟು ಕೊಡುಗೆ ಬೇರೆ ಯಾವ ಸಾಹಿತಿಯೂ ನೀಡಿಲ್ಲ. ಅವರ ಆಲೋಚನೆ ಕ್ರಮವೆ ಬೇರೆಯಾಗಿತ್ತು. ಎಲ್ಲರೂ ವಿಶ್ವಮಾನವರಾಗಬೇಕೆಂಬ ಸಂದೇಶವನ್ನು ನೀಡಿದ್ದರು.

ಜಾತಿ, ಧರ್ಮ, ಲಿಂಗದ ಹೆಸರಿನಲ್ಲಿ ರಕ್ತಪಾತವಾಗುತ್ತಿದೆ. ಪ್ರಖರ, ವೈಚಾರಿಕ ಸಾಹಿತಿಯಾಗಿದ್ದ ಕುವೆಂಪುರವರು ಅವಮಾನ, ಕಷ್ಟಗಳನ್ನು ಅನುಭವಿಸಿದ್ದಾರೆ. ಪ್ರಾಣಿ, ಪಕ್ಷಿ, ಪರಿಸರ, ಸಕಲ ಜೀವರಾಶಿಗಳ ಬಗ್ಗೆ ಅವರಲ್ಲಿ ಕಾಳಜಿಯಿತ್ತು. ಕನ್ನಡವನ್ನು ಕಲಿಯಿರಿ ಬೇರೆ ಭಾಷೆ ಬಗ್ಗೆ ಮಡಿವಂತಿಕೆ ಬೇಡ ಎನ್ನುತ್ತಿದ್ದರು. ಪ್ರೀತಿ, ಕರುಣೆಯೇ ನಿಜವಾದ ಧರ್ಮ ಎನ್ನುವ ಸಂದೇಶವನ್ನು ಸಾರಿದ ವಿಶ್ವಮಾನವ ಎಂದು ಹೇಳಿದರು.

- Advertisement - 

ಇಂದಿನ ಸಮಾಜಕ್ಕೆ ವಿಶ್ವಮಾನವ ಪ್ರಸ್ತುತ. ಮಾನವ ಸಂಬಂಧ ಗಟ್ಟಿಯಾಗಬೇಕಾದರೆ ಚಿಕ್ಕಂದಿನಿಂದಲೆ ಮಕ್ಕಳು ಕುವೆಂಪುರವರನ್ನು ಓದಿಕೊಳ್ಳಬೇಕೆಂದು ತಿಳಿಸಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಉಪಾಧ್ಯಕ್ಷ ಎಂ.ಆರ್.ದಾಸೆಗೌಡ ಮಾತನಾಡಿ ಧರ್ಮ ಜಾತಿ ಎತ್ತಿಕಟ್ಟುವವರನ್ನು ಧಿಕ್ಕರಿಸುತ್ತಿದ್ದ ಕುವೆಂಪುರವರಲ್ಲಿ ವೈಚಾರಿಕತೆಯಿತ್ತು. ಮೌಢ್ಯ, ಕಂದಾಚಾರ, ಕಟ್ಟುಪಾಡುಗಳ ವಿರೋಧಿಯಾಗಿದ್ದರು. ವೈಜ್ಞಾನಿಕ ಮನೋಭಾವವುಳ್ಳವರಾಗಿದ್ದರಿಂದ ಪ್ರಖರವಾಗಿ ಜನರ ಮನಸ್ಸನ್ನು ಮುಟ್ಟಿದ್ದಾರೆ. ಪರಿಸರ ಪ್ರಜ್ಞೆಯುಳ್ಳವರಾಗಿದ್ದ ಅವರು ನಡೆ-ನುಡಿಯೆ ಧರ್ಮ ಎಂದಿದ್ದರು. ಗುಡಿ, ಚರ್ಚು, ಮಸೀದಿಗಳನ್ನು ಬಿಟ್ಟು ಹೊರ ಬನ್ನಿ ಎಂಬ ಸಂದೇಶ ನೀಡಿದವರು. ವಿಜ್ಞಾನ-ತಂತ್ರಜ್ಞಾನ ಬಳಸುತ್ತಿದ್ದೇವೆ. ಆದರೆ ವೈಜ್ಞಾನಿಕ ಚಿಂತನೆಯಿಲ್ಲ. ಕುವೆಂಪು ಸಾಹಿತ್ಯ ಓದಿ ಎಂದು ಮಕ್ಕಳಿಗೆ ಕರೆ ನೀಡಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಕಾರ್ಯದರ್ಶಿ ಕೆ.ರಾಜ್‌ಕುಮಾರ್ ಮಾತನಾಡುತ್ತ ಕುವೆಂಪುರವರ ಆಸೆಯಂತೆ ಎಲ್ಲರೂ ವಿಶ್ವಮಾನವರಾಗಲು ಪ್ರಯತ್ನ ಮಾಡೋಣ. ಅದಕ್ಕೆ ಮೊದಲು ಶಿಕ್ಷಣವಂತರಾಗಬೇಕು. ವೈಜ್ಞಾನಿಕ, ವೈಚಾರಿಕತೆಯನ್ನು ಬೆಳೆಸಿಕೊಂಡಾಗ ವಿಶ್ವಮಾನವನ ಜನ್ಮದಿನಾಚರಣೆ ಆಚರಿಸಿದ್ದಕ್ಕೂ ನಿಜವಾದ ಅರ್ಥ ಬರುತ್ತದೆ. ಮೊಬೈಲ್‌ಗಳಿಂದ ಸಾಧ್ಯವಾದಷ್ಟು ದೂರವಿದ್ದು, ಕುವೆಂಪುರವರ ವಿಚಾರಗಳನ್ನು ಓದಿಕೊಳ್ಳಿ ಎಂದು ಹೇಳಿದರು.

ಚಿತ್ರದುರ್ಗ ವಿಜ್ಞಾನ ಕೇಂದ್ರದ ಸಹ ಕಾರ್ಯದರ್ಶಿ ನವೀನ್ ಪಿ.ಆಚಾರ್ ಮಾತನಾಡಿ ಜಾತಿ ಗಡಿಯನ್ನು ವಿರೋಧಿಸುತ್ತಿದ್ದ ಕುವೆಂಪುರವರು ಮಾನವ ಕುಲವನ್ನು ತಿದ್ದುವ ಕೆಲಸ ಮಾಡಿದ್ದಾರೆ. ಮನುಜ ಮತ ವಿಶ್ವಪಥ ಎನ್ನುವ ಸಂದೇಶ ಅವರದು ಎಂದರು.

ಬಾಪೂಜಿ ಗ್ರಾಮಾಂತರ ಪ್ರೌಢಶಾಲೆಯ ಮುಖ್ಯ ಶಿಕ್ಷಕ ರಾಮಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಜಾತಿ, ಧರ್ಮ, ಕೋಮುಗಲಭೆಗಳು ಜಾಸ್ತಿಯಾಗುತ್ತಿರುವ ಇಂದಿನ ದಿನಮಾನಗಳಲ್ಲಿ ಕುವೆಂಪುರವರ ವಿಚಾರಧಾರೆಗಳನ್ನು ವಿದ್ಯಾರ್ಥಿಗಳ ಮನಸ್ಸಿಗೆ ಮುಟ್ಟಿಸಬೇಕಿದೆ. ಬುದ್ದನ ವಿಚಾರಧಾರೆಗಳು ವಿದೇಶಗಳಲ್ಲಿ ಮೊಳಗುತ್ತಿವೆ. ನಮ್ಮ ದೇಶದಲ್ಲಿ ಏಕಿಲ್ಲ. ಇದಕ್ಕೆ ಬ್ರಾಹ್ಮಣ್ಯ ಕಾರಣ. ಸಾಹಿತ್ಯ, ವೈಜ್ಞಾನಿಕ, ಜೀವಪರ ವಿಚಾರಗಳನ್ನು ಮಕ್ಕಳಲ್ಲಿ ತುಂಬಬೇಕಿದೆ ಎಂದು ಹೇಳಿದರು.

ದೇಶಕ್ಕೆ ಗಡಿ ಹಾಕಿರಬಹುದು. ಆದರೆ ಮನಸ್ಸುಗಳಿಗೆ ಗಡಿ ಹಾಕಿ ಮಾನವೀಯ ಮೌಲ್ಯಗಳನ್ನು ತಲೆಕೆಳಗೆ ಮಾಡಲಾಗಿದೆ. ಸಾಮಾಜಿಕ ಅಸಮತೋಲನ, ಜಾತಿ ವ್ಯವಸ್ಥೆಯನ್ನು ಕುವೆಂಪುರವರು ಸಾಹಿತ್ಯದ ಮೂಲಕ ವಿರೋಧಿಸುತ್ತಿದ್ದರು. ಹಾಗಾಗಿ ಅವರ ವಿಚಾರಧಾರೆಗಳನ್ನು ಹಿಂಬಾಲಿಸಬೇಕಿದೆ ಎಂದು ನುಡಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಾಗಿಣಿ, ಶಿಕ್ಷಕರುಗಳಾದ ಮಲ್ಲಿಕಾರ್ಜುನ್, ದಿನೇಶ್, ಶಿಕ್ಷಕಿಯರುಗಳಾದ ಲಾವಣ್ಯ, ಮಮತ, ಸವಿತ ಇವರುಗಳು ಕುವೆಂಪು ಜನ್ಮದಿನಾಚರಣೆಯಲ್ಲಿ ಭಾಗವಹಿಸಿದ್ದರು.

Share This Article
error: Content is protected !!
";