ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಕುವೆಂಪು ಸ್ಮರಣೆ-೧
“ಬೆಲೆ ತುಂಬಾ ಹೆಚ್ಚಾಯ್ತು!”
‘ಜಗದ ಕವಿ ಯುಗದ ಕವಿ‘ ಎಂದೇ ವರಕವಿ ಬೇಂದ್ರೆಯವರಿಂದ ಹೊಗಳಿಸಿಕೊಂಡವರು ರಾಷ್ಟ್ರಕವಿ ಕುವೆಂಪು . ಸರಳ ರಗಳೆಯಲ್ಲಿ ‘ಶ್ರೀ ರಾಮಾಯಣ ದರ್ಶನಂ ಕೃತಿ‘ ರಚಿಸಿ ಇಪ್ಪತ್ತನೇ ಶತಮಾನದಲ್ಲೂ ಮಹಾಕಾವ್ಯಗಳ ಸಂತತಿ ಬತ್ತಿಲ್ಲ ಎಂದು ನಿರೂಪಿಸಿದವರು ಡಾ. ಕೆ ವಿ ಪುಟ್ಟಪ್ಪನವರು!.
ಅದು ೧೯೯೦ ನೇ ವರ್ಷ. ಕಡು ಬೇಸಿಗೆಯ ಮಾರ್ಚ್ ತಿಂಗಳು! ಫ಼ಲ್ಗುಣನಿನ್ನೂ ಜೂಗರಿಸುತ್ತ, ತೂಕಡಿಸುತ್ತಿದ್ದ. ಅವನನ್ನು ಭುವಿಯಿಂದ ಹೊರಗಟ್ಟಲು ವಸಂತ ಸಿದ್ಧನಾಗುತ್ತಿದ್ದ.
ಅಂತಹದೊಂದು ದಿನ, ಕುವೆಂಪುರವರನ್ನು ಭೇಟಿಯಾಗಲು ಬಂದಾತನೊಬ್ಬ, ಮಿತ ಭಾಷಿ ಕುವೆಂಪುರವರಿಗೆ, “ನಿಮ್ಮ ಕೃತಿ ‘ಶ್ರೀ ರಾಮಾಯಣ ದರ್ಶನಂ‘ ಬೆಲೆ ಐವತ್ತು ರೂಪಾಯಿಗಳು! ತುಂಬಾ ಹೆಚ್ಚಾಯ್ತು!” ಎಂದ.
ಆ ವ್ಯಕ್ತಿಯನ್ನು ಕುವೆಂಪು ಆಪಾದಮಸ್ತಕವಾಗಿ ವೀಕ್ಷಿಸಿದರು! ಅವರ ದೃಷ್ಟಿ ಆತ ಧರಿಸಿದ್ದ, ಮಿರಿ ಮಿರಿ ಮಿಂಚುತ್ತಿದ್ದ ಕಾಲಿನ ‘ಶೂ‘ಗಳತ್ತ ಹೋಯಿತು!.
“ಓಹ್! ನಿಮ್ಮ ‘ಶೂ‘ ಗಳು ತುಂಬಾ ಚೆಂದಿವೆ. ಮೊದಲ ನೋಟಕ್ಕೆ ನನ್ನ ಗಮನ ಸೆಳೆದವು. ಇವುಗಳ ಬೆಲೆ ಎಷ್ಟು?” ಎಂದು ಪ್ರಶ್ನಿಸಿದರು.
ಆತನಿಗೆ ತುಂಬಾ ಖುಷಿಯಾಯಿತು. ತನ್ನ ‘ಶೂ‘ಗಳನ್ನೇ ನೋಡಿಕೊಳ್ಳುತ್ತ ಹೆಮ್ಮೆಯಿಂದ ಎದೆಯುಬ್ಬಿಸಿ ಹೇಳಿದ,”ಅವುಗಳಿಗೆ ನಾನು ನೂರಿಪ್ಪತ್ತು ರೂಪಾಯಿಗಳನ್ನು ನೀಡಿದೆ” ಎಂದ.
“ನಿಮ್ಮ ಪಾದಗಳನ್ನು ಮುಚ್ಚಲು ನೀವು ನೂರಿಪ್ಪತ್ತು ರೂಪಾಯಿಗಳನ್ನು ನೀಡಿದಿರಿ! ಅದೇ ನಿಮ್ಮ ತಲೆಯನ್ನು ತುಂಬುವುದಕ್ಕೆ ಐವತ್ತು ರೂಪಾಯಿಗಳನ್ನು ಕೊಡಲು ಸಿದ್ದನಿಲ್ಲವಲ್ಲ!” ಎಂದರು.
ಆತನ ಮನಸ್ಸಿಗೆ ಕವಿದಿದ್ದ ಶಿಶಿರ ತಿಮಿರಕ್ಕೆ ನಾಚಿಕೆಯಾಯ್ತೋ ಏನೋ! ಆ ಕ್ಷಣ ಆತ ತಲೆ ತಗ್ಗಿಸಿದ! ಏನೋ ತಳಮಳ ಆತನಲ್ಲಿ! ಆವಾಗಲೇ ಆತನ ಶಿರ ಶೈಲದಲ್ಲಿ ವಸಂತ ಸೂರ್ಯನಾಗಮನದ ಸೂಚನೆಗಳು ಕಾಣಿಸಿದವು!.
ಇದು ಮೂವತ್ತು ವರ್ಷಗಳ ಹಿಂದಿನ ಮಾತಾದರೂ ಪರಿಸ್ಥಿತಿಯಲ್ಲಿ ಈಗಲೂ ಸಾಕಷ್ಟು ಬದಲಾವಣೆಗಳೇನೂ ಆಗಿಲ್ಲ ಅಲ್ಲವೇ?
ಆಡಂಬರ- ಆಭರಣಗಳಿಗೆ ಹಿಂದೆ- ಮುಂದೆ ಯೋಚಿಸದೆ ವ್ಯಯಿಸುವ ನಾವು ಮೌಲಿಕ ಪುಸ್ತಕಗಳನ್ನು ಕೊಂಡು ಓದುವುದಕ್ಕೆ, ಇತರರಿಗೆ ಉಡುಗೊರೆ ಕೊಡುವುದಕ್ಕೆ ಮೀನ-ಮೇಷ ಏಣಿಸುತ್ತೇವಲ್ಲವೇ?
ಕಿರು ಮಾಹಿತಿ ಲೇಖನ: ಸಿ ಬಿ ಶೈಲಾ ಜಯಕುಮಾರ್. ಚಿತ್ರದುರ್ಗ.

