ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕರ್ನಾಟಕದಲ್ಲಿ ಕನ್ನಡದ ವಾತಾವರಣವನ್ನು ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ವಿವಿಧ ಕನ್ನಡ ಸಂಘಟನೆಗಳು ಆಯೋಜಿಸಿದ್ದ ಜನರಾಜ್ಯೋತ್ಸವ –2025ರ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯಮಂತ್ರಿ ಅವರ ಮಾತನಾಡಿದರು.
ರಾಜ್ಯದಲ್ಲಿ ಕನ್ನಡ ಕಲಿಯದೆಯೇ ಬದುಕಬಹುದಾದ ವಾತಾವರಣವಿದೆ. ಕನ್ನಡ ಕಲಿಯಲೇಬೇಕಾದ ಅನಿವಾರ್ಯತೆ ಇಲ್ಲ. ಬೇರೆ ಭಾಷೆಯಲ್ಲಿ ಮಾತನಾಡುವವರೊಂದಿಗೆ ನಾವು ಕನ್ನಡದಲ್ಲಿಯೇ ಮಾತನಾಡಬೇಕು. ತಮಿಳುನಾಡು, ತೆಲಂಗಾಣ, ಕೇರಳ, ಮಹಾರಾಷ್ಟ್ರ ಹಾಗೂ ಆಂಧ್ರದಲ್ಲಿ ಅವರವರ ಭಾಷೆಯಲ್ಲಿಯೇ ಮಾತನಾಡುತ್ತಾರೆ. ಕನ್ನಡಿಗರು ಏಕೆ ಕನ್ನಡದಲ್ಲಿ ಮಾತನಾಡಬಾರದು? ಕನ್ನಡದಲ್ಲಿಯೇ ಮಾತನಾಡಬೇಕು. ಅನಿವಾರ್ಯವಾದರೆ ಬೇರೆ ಭಾಷೆ ಬಳಸಿ. ಯಾವ ಭಾಷೆ ಕಲಿತರೂ ಕನ್ನಡಿಗರಾಗಿಯೇ ಉಳಿಯಬೇಕು.
ಕನ್ನಡ ಭಾಷೆ, ನೆಲ, ಜಲ, ಗಡಿ ಇವುಗಳ ಬಗ್ಗೆ ಹೋರಾಟ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. “ಎಲ್ಲಾದರೂ ಇರು, ಎಂತಾದರೂ ಇರು, ಎಂದೆಂದಿಗೂ ಕನ್ನಡವಾಗಿರು” ಎಂದು ಕುವೆಂಪು ಹೇಳಿದ್ದಾರೆ. 1983 ರಲ್ಲಿ ಕನ್ನಡ ಕಾವಲು ಸಮಿತಿ ಅಧ್ಯಕ್ಷನಾಗಿ ನೇಮಕಗೊಂಡು ಒಂದೂವರೆ ವರ್ಷ ಕಾರ್ಯನಿರ್ವಹಿಸಿದ್ದೆ, ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಕನ್ನಡ ಬೆರಳಚ್ಚು ಯಂತ್ರಗಳನ್ನು ಎಲ್ಲೆಡೆ ಕಳುಹಿಸಿದ್ದೆ.
ಕನ್ನಡ ಆಡಳಿತ ಭಾಷೆಯಾಗಿದ್ದು, ಕನ್ನಡ ಬಳಕೆ ಅನಿವಾರ್ಯವಾಗಬೇಕೆಂದು ತೀರ್ಮಾನಿಸಿ ಈ ಕೆಲಸ ಮಾಡಿದೆ. ಯಾರೇ ನನ್ನೊಂದಿಗೆ ಆಂಗ್ಲ ಭಾಷೆಯಲ್ಲಿ ಮಾತನಾಡಿದರೂ ನಾನು ಕನ್ನಡದಲ್ಲಿಯೇ ಮಾತನಾಡಿಸುವುದು ಹಾಗೂ ಕನ್ನಡದಲ್ಲಿಯೇ ಸಹಿ ಮಾಡುವುದು ಮತ್ತು ಟಿಪ್ಪಣಿ ಬರೆಯುವುದು. ಹೊರರಾಜ್ಯಗಳಿಗೆ ಪತ್ರ ಬರೆಯುವಾಗ ಮಾತ್ರ ಆಂಗ್ಲ ಭಾಷೆ ಬಳಸಿದರೂ, ಕನ್ನಡ ನಾಡಿನಲ್ಲಿ ಕನ್ನಡವೇ ಸಾರ್ವಭೌಮ ಭಾಷೆ.
ಪ್ರತಿ ಹಳ್ಳಿಯಲ್ಲಿಯೂ ಕನ್ನಡ ಶಾಲೆ ಇರಬೇಕು ಎಂದು ಬರಗೂರು ರಾಮಚಂದ್ರಪ್ಪ ಅವರು ಸಲಹೆ ನೀಡಿದ್ದು, ಗ್ರಾಮಗಳಲ್ಲಿ ಕನ್ನಡ ಶಾಲೆ ಇರಲೇಬೇಕು. ನಾನೂ ಕೂಡ ಕನ್ನಡ ಶಾಲೆ, ಕನ್ನಡ ಮಾಧ್ಯಮದ ಪರವಾಗಿ ಇರುವವನು. ಇತ್ತೀಚೆಗೆ ಆಂಗ್ಲ ಭಾಷೆಯ ವ್ಯಾಮೋಹ ಹೆಚ್ಚುತ್ತಿದೆ. ಇದಕ್ಕೆ ಪೋಷಕರ ಸಹಾಯವೂ ಅಗತ್ಯ. ಪೋಷಕರ ಸಹಾಯವಿಲ್ಲದೆ ಹೋದರೆ ಕನ್ನಡ ಶಾಲೆಗಳು ಉಳಿದು, ಬೆಳೆಯುವುದು ಕಷ್ಟ.
ಬರಗೂರು ರಾಮಚಂದ್ರಪ್ಪ ಅವರು ಹೇಳಿದಂತೆ ಕನ್ನಡ ಶಾಲೆಗಳ ಬಗ್ಗೆ ಕೂಡಲೇ ಒಂದು ಸಭೆ ಕರೆದು, ಅಲ್ಲಿನ ತೀರ್ಮಾನವನ್ನು ಜಾರಿಗೊಳಿಸಲಾಗುವುದು. ವೈಯಕ್ತಿಕವಾಗಿ ನಾನು ದ್ವಿಭಾಷಾ ನೀತಿಯ ಪರವಾಗಿದ್ದು, ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ.
ಕನ್ನಡ ಚಳವಳಿಗಾರರ ಮೇಲಿರುವ ಪ್ರಕರಣಗಳನ್ನು ಹಿಂಪಡೆಯುವ ಬಗ್ಗೆ ಉಪಸಮಿತಿಯನ್ನು ರಚಿಸಲಾಗಿದ್ದು, ಗೃಹ ಸಚಿವರು ಅಧ್ಯಕ್ಷರಾಗಿದ್ದಾರೆ. ಅವರೊಂದಿಗೆ ಚರ್ಚಿಸಿ ತೀರ್ಮಾನ ಮಾಡಲಾಗುವುದು.
ರಾಜ್ಯ ಸರ್ಕಾರ ಹಿಂದಿಯನ್ನು ವಿರೋಧಿಸುವುದಿಲ್ಲ. ಆದರೆ ಹಿಂದಿ ನಮ್ಮ ರಾಷ್ಟ್ರ ಭಾಷೆ ಅಲ್ಲ. ಕನ್ನಡವೇ ಸಾರ್ವಭೌವ ಭಾಷೆ. 1956 ರಲ್ಲಿ ಭಾಷಾವಾರು ಪ್ರಾಂತ್ಯ ವಿಂಗಡಣೆ ಆಗಿದೆ. 1973 ರಲ್ಲಿ ದೇವರಾಜ ಅರಸು ಅವರು ಮುಖ್ಯಮಂತ್ರಿ ಆಗಿದ್ದಾಗ ಕರ್ನಾಟಕ ಎಂದು ನಾಮಕರಣವಾಯಿತು. ಇದಾಗಿ 50 ವರ್ಷಗಳಾದರೂ ಬಿಜೆಪಿ ಸರ್ಕಾರ ಇದರ ಆಚರಣೆ ಮಾಡಲಿಲ್ಲ. ನಮ್ಮ ಸರ್ಕಾರ ಇದನ್ನು ಇಡೀ ರಾಜ್ಯದಲ್ಲಿ ಆಚರಣೆ ಮಾಡಿತು. ಇದರ ಪ್ರಯುಕ್ತ ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ದೇವಿಯ ಪ್ರತಿಮೆ ಸ್ಥಾಪನೆ ಮಾಡಲಾಗಿದೆ.
ಹೈದ್ರಾಬಾದ್ ಕರ್ನಾಟಕಕ್ಕೆ ಕಲ್ಯಾಣ ಕರ್ನಾಟಕ ಎಂದು ಮರು ನಾಮಕರಣವಾಗಿದ್ದು, 371ಜೆ ಕಾಯ್ದೆಯ ಜಾರಿಯಾಗಿದ್ದು ಸೋನಿಯಾ ಗಾಂಧಿಯವರ ನಾಯಕತ್ವದಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ. ಕಲ್ಯಾಣ ಕರ್ನಾಟಕ ದಲ್ಲಿ 70% ಮೀಸಲಾತಿ ಹಾಗೂ ರಾಜ್ಯದಲ್ಲಿ 8% ಮೀಸಲಾತಿ ನೀಡುವ ಶಿಫಾರಸ್ಸನ್ನು ಯಥಾವತ್ತು ಜಾರಿ ಮಾಡಲಾಗಿದೆ.
ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೊದಲ ವರ್ಷದಲ್ಲಿ 3000 ಕೋಟಿ ಹಾಗೂ ಈಗ 5000 ಕೋಟಿ ಅನುದಾನವನ್ನು ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ನೀಡಲಾಗಿದೆ. ಆರೋಗ್ಯ ಮತ್ತು ಶಿಕ್ಷಣದಲ್ಲಿ ಹಿಂದುಳಿದಿರುವ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಹತ್ತಾರು ವರ್ಷಗಳಲ್ಲಿ ಪ್ರಾದೇಶಿಕ ತಾರತಮ್ಯ ನಿವಾರಣೆಯಾಗಲಿದೆ ಎಂಬ ನಂಬಿಕೆ ನಮಗಿದೆ. ಅನುದಾನ ಸೂಕ್ತ ರೀತಿಯಲ್ಲಿ ಬಳಕೆಯಾಗಬೇಕು ಎಂದು ಸಿಎಂ ತಿಳಿಸಿದರು.
ಕನ್ನಡ ಭಾಷೆ, ನೆಲ, ಜಲ, ಗಡಿ, ಕನ್ನಡಿಗರಿಗೆ ಉದ್ಯೋಗ ವಿಚಾರದಲ್ಲಿ ನಮ್ಮ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ. ಕನ್ನಡದ ವಿಷಯದಲ್ಲಿ ನಾವು ಸದಾ ಮುಂಚೂಣಿಯಲ್ಲಿರುತ್ತೇವೆ. ಕನ್ನಡದ ಪರಧ್ವನಿ ಎತ್ತುವ ಕೆಲಸವನ್ನು ಮಾಡುತ್ತೇನೆ. ಮಹದಾಯಿ ಯೋಜನೆಗೆ ಕೇಂದ್ರ ಸರ್ಕಾರದಿಂದ ಪರಿಸರ ತೀರುವಳಿ ಸಿಕ್ಕಿದ ಕೂಡಲೇ ಜಾರಿ ಮಾಡಲಾಗುವುದು. ಕೇಂದ್ರ ಸರ್ಕಾರ ಕೃಷ್ಣ ಮೂರನೇ ಹಂತ ಯೋಜನೆಗೆ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯನ್ನು ಕನ್ನಡಿಗರು ಖಂಡಿಸಬೇಕು.
ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಕನ್ನಡಪರವಾದ ತೀರ್ಮಾನ ಮಾಡಲಾಗುವುದು. ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಸಿಗಬೇಕು. ರಾಜ್ಯದಲ್ಲಿ ಕನ್ನಡದ ವಾತಾವರಣ ನಿರ್ಮಿಸಬೇಕು. ಕರ್ನಾಟಕಕ್ಕೆ ಅನ್ಯಾಯವಾದಾಗ ಒಗ್ಗಟ್ಟಿನಿಂದ ಹೊರಡಬೇಕು. ಕನ್ನಡಿಗರು ಯಾವುದಕ್ಕೂ ಕಡಿಮೆಯಿಲ್ಲ. ಕನ್ನಡ ಭಾಷೆ, ನೆಲ, ಜಲ, ಗಡಿಗಳ ರಕ್ಷಣೆಗೆ ಪಣ ತೊಡೋಣ.
ಮರ್ಯಾದಾ ಹತ್ಯೆ ತಡೆಯಲು ಕಾಯ್ದೆಯನ್ನು ರೂಪಿಸಿ ಜಾರಿ ಮಾಡಬೇಕೆಂಬ ಮನವಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ ಸೇರಿದಂತೆ ಇತರೆ ಮುಖಂಡರು, ಜನಪರ ಹೋರಾಟಗಾರರು ಹಾಜರಿದ್ದರು.

