ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ರಾಷ್ಟ್ರ ರಾಜಧಾನಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರಿಗೆ ಭಾರತ ರತ್ನಕ್ಕೆ ಮನವಿ…
ದೆಹಲಿ ಕರ್ನಾಟಕ ಸಂಘದ ದಕ್ಷ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿ ಯಶಸ್ವಿಯಾಗಿಸಿ ರಾಷ್ಟ್ರಮಟ್ಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ ಮತ್ತು ಇಂತಹದೇ ಇತಿಹಾಸ ಸೃಷ್ಟಿ ಮಾಡುವ ಸಾಲಿಗೆ ಸೇರುವಂತಹ ಕಾರ್ಯಕ್ರಮ ಮನುಜ ಮತ ವಿಶ್ವ ಪಥ ಎಂದು ಸಾರಿದ ಪದ್ಮವಿಭೂಷಣ ಹಾಗೂ ಜ್ಞಾನಪೀಠ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಅವರ ಸಾದನೆ ಕೊಡುಗೆ ಕುರಿತು ವಿಚಾರ ಸಂಕೀರ್ಣವನ್ನು 2025ರ ಡಿಸೆಂಬರ್-17 ರಂದು ರಾಷ್ಟ್ರ ರಾಜಧಾನಿಯ ದೆಹಲಿ ಕರ್ನಾಟಕ ಸಂಘದಲ್ಲಿ ಬಹು ಅರ್ಥಪೂರ್ಣವಾದ ಕಾರ್ಯಕ್ರಮ ಆಯೋಜಿಸಿದ್ದರು.
ಈ ಕಾರ್ಯಕ್ರಮವು ರಾಷ್ಟ್ರಕವಿ ಕುವೆಂಪು ಅವರ ಶ್ರೇಷ್ಠ ಸಾದನೆ ಮತ್ತು ಅತ್ಯುನ್ನತ ಕೊಡುಗೆಗಳಿಗಾಗಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವ ಬಗ್ಗೆ ರಾಷ್ಟ್ರಮಟ್ಟದ ಕಾರ್ಯಕ್ರಮ ಮಾಡುವ ಮೂಲಕ ಭಾರತ ಸರ್ಕಾರಕ್ಕೆ ಮನವಿ ಮಾಡುವ ಸದುದ್ದೇಶದಿಂದ ಆಯೋಜಿಸಲಾಗಿತ್ತು.
ಕಾರ್ಯಕ್ರಮ ಶುರುವಾಗುವುದಕ್ಕೂ ಮೊದಲು ಸ್ಥಳೀಯ ಮಹಿಳೆಯರಿಂದ ಕುವೆಂಪು ವಿರಚಿತ ನಾಡಗೀತೆ ಹಾಡುವ ಮೂಲಕ ಕುವೆಂಪು ಅವರಿಗೆ ನುಡಿ ನಮನ ಸಲ್ಲಿಸಲಾಯಿತು.
ಅತಿಥಿಗಳಾಗಿ ಬಂದಂತಹ ಪೂಜ್ಯ ಸ್ವಾಮೀಜಿಗಳು ಮತ್ತು ಗಣ್ಯರಿಂದ ಜ್ಯೋತಿಯನ್ನು ಪ್ರಜ್ವಲಿಸಲಾಯಿತು. ನಂತರ ಕುವೆಂಪು ಅವರ ಚಿತ್ರಪಟಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮದ ಚಾಲನೆಮಾಡಲಾಯಿತು. ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರು ಭಾರತ ಸರ್ಕಾರದ ಪರವಾಗಿ ರಾಷ್ಟ್ರ ಕವಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಮಾಡಿದ ಮನವಿ ಸ್ವೀಕರಿಸಿ ಮಾತನಾಡುತ್ತಾ ಕುವೆಂಪು ಅವರು ಕನ್ನಡಭಾಷೆಯನ್ನು ವಿಶ್ವದಾದ್ಯಂತ ಗೌರವ ಮೂಡುವಂತ ಕೆಲಸ ಮಾಡಿದ್ದಾರೆ. ಈ ಕಾರ್ಯಕ್ರಮ ಕೇವಲ ಒಬ್ಬ ಕವಿ ಸಾಹಿತಿ ಬರಹಗಾರರಿಗಾಗಿ ಮಾಡಿದ ಔಪಚಾರಿಕ ಸ್ಮರಣ ಕಾರ್ಯಕ್ರಮವಲ್ಲ.
ಬದಲಿಗೆ ಒಂದು ಗಂಭೀರವಾದ ಭೌತಿಕ ಸಂವಾದವನ್ನು 20ನೇ ಶತಮಾನದಲ್ಲಿ ಯಾವ ಕವಿ ತಮ್ಮ ಬರವಣಿಗೆಯಿಂದ ಕನ್ನಡ ಭಾಷೆಯನ್ನು ಉತ್ತುಂಗ ಸ್ಥಿತಿಗೆ ಕೊಂಡೊಯ್ದರೋ ಕನ್ನಡ ಭಾಷೆಗೆ ಒಂದು ಹೊಸ ಚೈತನ್ಯ ಕೊಟ್ಟರೋ ಆ ಮಹಾನ್ ಚೇತನವಾದ ರಾಷ್ಟ್ರಕವಿ ಕುವೆಂಪು ಅವರ ಸಾಧನೆ ತುಂಬಾ ದೊಡ್ಡದು ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ತಾವು ಸಹ ಭಾರತ ಸರ್ಕಾರಕ್ಕೆ ಮನವಿ ಮಾಡುವುದಾಗಿ ಆಶ್ವಾಸನೆ ನೀಡಿದರು.
ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಅವರು ತ್ರಿರಂಗ ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡುತ್ತಾ ಕನ್ನಡ ನಾಡಿನಿಂದ ಬಹು ದೂರ ಇರುವ ದೆಹಲಿಯಲ್ಲಿ ಕನ್ನಡದ ಕಂಪನ್ನು ಕನ್ನಡದ ಮಣ್ಣಿನ ಸೊಗಡನ್ನು ಆಗಾಗ ನೆನಪಿಸುವಂಥ ಕಾರ್ಯಕ್ರಮಗಳನ್ನು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ಎಂ ನಾಗರಾಜ್ ಅವರ ನೇತೃತ್ವದಲ್ಲಿ ಮಾಡುತ್ತಲೇ ಬಂದಿದ್ದಾರೆ. ಮತ್ತು ಈಗ ರಾಷ್ಟ್ರಕವಿ ಕುವೆಂಪು ಅವರ ಸಾಧನೆ ಕೊಡುಗೆ ಕುರಿತು ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುವೆಂಪು ಅವರು ಮಹಾ ಮಾನವತಾವಾದಿಗಳು ಇಂದು ಅವರ ಸಂಸ್ಮರಣೆಯಲ್ಲಿ ನಾವೆಲ್ಲಾ ಸೇರಿದ್ದೇವೆ. ಜಾತಿಯ ಅಂದಭಿಮಾನ ತುಂಬಾ ಇರುವಂತ ಈ ಕಾಲದಲ್ಲಿ ಜಾತಿಯ ಅಭಿಮಾನಿಗಳು ಬಹಳ ಜನ ಸಿಗುತ್ತಾರೆ. ಆದರೆ ಹುಟ್ಟಿದ ಜಾತಿಗೆ ಸಮಾಜಕ್ಕೆ ಶ್ರೇಷ್ಠವಾದಂತವರು ಮಹಾಮಾನವತಾವಾದಿ ಕುವೆಂಪು ಅವರು. ತಮ್ಮ ಸ್ವಾರ್ಥಕ್ಕೆ ಆಸ್ತಿ ಮಾಡಿಕೊಳ್ಳುವಂತವರು ಅಸಂಖ್ಯವಾಗಿ ಸಿಗುತ್ತಾರೆ.

ಆದರೆ ಹುಟ್ಟಿದ ಊರಿಗೆ ಹುಟ್ಟಿದ ನಾಡಿಗಾಗಿ ನುಡಿಗಾಗಿ ದೇಶಕ್ಕಾಗಿ ಆಸ್ತಿಯಾಗುವಂಥವರು ಕುವೆಂಪು ಅವರು. ಭಾಷೆಯ ಅಂದಭಿಮಾನ ಇಂದು ಪ್ರದೇಶವನ್ನೇ ವಿಭಜನೆ ಮಾಡುವಷ್ಟು ಮುಂದುವರಿದಿದೆ ಈ ಸಂದರ್ಭಕ್ಕೆ ಹೋಲಿಸಿದರೆ ಹಿಂದಿನ ಕಾಲದಲ್ಲಿ ಅದ್ಯಾವುದೇ ಗೋಜಿಗೆ ಸಿಲುಕದೆ ಕುವೆಂಪು ಅವರು 75 ವರ್ಷದ ಹಿಂದೆಯೇ ಜಯ ಭಾರತ ಜನನಿಯ ತನುಜಾತೆ ಜಯ ಹೇ ಕರ್ನಾಟಕ ಮಾತೆ ಎಂದು ಬರೆದು ಸಹ ಬಾಳ್ವೆಯ ಸಹಜೀವನದ ಭಾವೈಕ್ಯತೆಯ ಸಂದೇಶವನ್ನು ಸಾರಿದಂತವರು ಕುವೆಂಪು. ಅಂತಹ ಮಹನೀಯರನ್ನು ನೆನಪು ಮಾಡಿಕೊಳ್ಳುವಂತಹ ಸದಾವಕಾಶ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಕುವೆಂಪು ಅವರ ಹಲವಾರು ಕಾವ್ಯ ಕಥನಗಳನ್ನು ವ್ಯಾಖ್ಯಾನಿಸಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿಯನ್ನು ಭಾರತ ಸರ್ಕಾರದಿಂದ ನೀಡುವಂತೆ ತಾವು ಸಹ ಹೃದಯ ಪೂರ್ವಕ ಮನವಿ ಮಾಡುವುದಾಗಿ ತಿಳಿಸಿದರು.
ಭಾರತ ಸರ್ಕಾರದ ಭಾರಿ ಕೈಗಾರಿಕ ಸಚಿವರಾದ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡುತ್ತಾ ಕುವೆಂಪು ಅವರ ಸಾಹಿತ್ಯ ಓದಿಕೊಂಡು ಬೆಳೆದವನು ನಾನು. ಅವರ ಸಾಧನೆ ಕೃತಿಗಳ ಬಗ್ಗೆ ದಾಖಲಿಸುತ್ತಾ ಕುವೆಂಪು ಅವರು ನಾನು ಮುಂದಿನ ಜನ್ಮದಲ್ಲಿ ಹುಟ್ಟಿದರೆ ಸಸ್ಯ ಕಾಶಿಯಲ್ಲಿ ಹುಟ್ಟುವ ಆಸೆ ಇದೆ ಎಂದು ಹೇಳಿದ ಮಾತಿಗೆ ಕುಮಾರಸ್ವಾಮಿಯವರು ಹಿಂದಿನ ಕಾಲದಲ್ಲಿ ಮೂಲ ಸೌಕರ್ಯ ಸೌಲಭ್ಯಗಳಿಗೆ ಕೊರತೆ ಇತ್ತು ಆದರೆ ಮನುಷ್ಯನ ನೆಮ್ಮದಿಗೆ ಕೊರತೆ ಇರಲಿಲ್ಲ ಆದರೆ ಈಗ ಪ್ರತಿಯೊಂದು ಸೌಲಭ್ಯಗಳಿವೆ ಆದರೆ ನೆಮ್ಮದಿಯ ಕೊರತೆ ನಮ್ಮೆಲ್ಲರಿಗೂ ಇದೆ ಆದ್ದರಿಂದ ನನಗೆ ಈ ಜನುಮದಲ್ಲಿಯೆ ಕುವೆಂಪು ಅವರು ಹೇಳಿದಂತೆ ಸಸ್ಯಕಾಶಿ ಕಾಡಿನಲ್ಲಿ ಎಲ್ಲಾ ಜಂಜಾಟಗಳನ್ನು ತೊರೆದು ನೆಮ್ಮದಿಯಾಗಿ ಕಾಡಿನಲ್ಲಿ ವಾಸಿಸಿದರೆ ನೆಮ್ಮದಿ ಸಿಗುತ್ತದೆ ಎಂಬ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು ಮತ್ತು ಕುವೆಂಪು ಅವರಿಗೆ ಭಾರತ ರತ್ನ ಕೊಡುವಂತೆ ತಾವು ಪ್ರಾಮಾಣಿಕವಾಗಿ ಭಾರತ ಸರ್ಕಾರಕ್ಕೆ ಮನವಿ ಮಾಡುವೆ ಎಂದು ಆಶ್ವಾಸನೆ ನೀಡಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಕ್ಕರೆ ಅದು ಆ ಭಾರತ ರತ್ನ ಪ್ರಶಸ್ತಿಗೆ ಒಂದು ಕಳೆ ಬರುತ್ತದೆ ಎಂದು ಹೇಳಿದರು.
ಖ್ಯಾತ ಹೃದ್ರೋಗ ತಜ್ಞರು ಹಾಗೂ ಸಂಸದರಾದ ಡಾ. ಸಿ.ಎನ್ ಮಂಜುನಾಥ್ ಅವರು ಮಾತನಾಡುತ್ತಾ ವ್ಯಕ್ತಿಗಳು ಮನೆಮನೆಯಲ್ಲೂ ಹುಟ್ಟುತ್ತಾರೆ ಆದರೆ ಶ್ರೇಷ್ಠ ವ್ಯಕ್ತಿತ್ವ ಇರುವಂತಹವರು ತುಂಬಾ ವಿರಳ ಅಂತಹವರಲ್ಲಿ ಒಬ್ಬರು ನಮ್ಮ ಕುವೆಂಪು. ಮಲೆನಾಡನ್ನು ಕರ್ನಾಟಕದ ಕಾಶ್ಮೀರ ಎಂದು ಕರೆದವರು. ತಮ್ಮ ಸಾಹಿತ್ಯ ಕ್ಷೇತ್ರದಿಂದ ಜಗತ್ಪ್ರಸಿದ್ಧರಾಗಿದ್ದಾರೆ.
ಉಸಿರು ಹೋದ ಮೇಲೆ ಹೆಸರಿರಬೇಕು ಮತ್ತು ಅವರ ಹೆಸರು ಹೇಳಿದರೆ ಯಾವುದೇ ಕೆಲಸವಾಗಬೇಕು ಅಂತಹ ಸಾಧನೆ ಕುವೆಂಪು ಅವರದು ಅವರಿಗೆ ಭಾರತ ರತ್ನ ಈಗಾಗಲೇ ಬರಬೇಕಿತ್ತು, ಆದರೆ ಈಗಾದರೂ ಬರಲಿ ಎಂದರು. ಈಗಿನ ಪೀಳಿಗೆಯು ಆಧುನಿಕ ಜೀವನಕ್ಕೆ ಕಟ್ಟುಬಿದ್ದು ತಮ್ಮ ನೆಮ್ಮದಿಯನ್ನು ಆಳು ಮಾಡಿಕೊಳ್ಳುತ್ತಿದೆ ಮತ್ತು ನಿದ್ರೆಯನ್ನು ಸಮಯ ತಪ್ಪಿ ಪ್ರಕೃತಿಯ ನಿಯಮ ಮೀರಿ ಬಾಳುತ್ತಿದ್ದಾರೆ ಮತ್ತು ಇನ್ನೂ ದೊಡ್ಡ ವಿಚಾರವೆಂದರೆ ಈಗಿನ ಆಧುನಿಕ ಜೀವನದ ಶೈಲಿಯಲ್ಲಿ ಅವರು ಬೆಳಿಗ್ಗೆ 10 ಗಂಟೆಗೆ ನಿದ್ರೆಯಿಂದ ಎಚ್ಚರಗೊಳ್ಳಲು ಸಹ ಅಲಾರಾಂ ಹಾಕುವಂತಹ ಪರಿಸ್ಥಿತಿ ತಲುಪಿದ್ದಾರೆ ಎಂದು ನಯವಾಗಿ ಹಾಸ್ಯದ ಮೂಲಕವಾಗಿ ಎಲ್ಲರಿಗೂ ಎಚ್ಚರಿಸಿದರು.
ಐ.ಆರ್.ಎಸ್ ಅಧಿಕಾರಿ ಜಯರಾಮ್ ರಾಮಪುರ ಅವರು ತಮ್ಮ ಭಾಷಣದಲ್ಲಿ ಕುವೆಂಪು ಅವರು ಒಬ್ಬ ಶೂದ್ರ ಸಮುದಾಯದಲ್ಲಿ ಹುಟ್ಟಿ ಒಬ್ಬ ಶೂದ್ರನಿಂದ ಅತ್ಯುನ್ನತ ಉತ್ಕೃಷ್ಟ ಶ್ರೇಷ್ಠವಾದ ಸಾಹಿತ್ಯ ಸಾಧನೆ ಮಾಡಿದ್ದಾರೆ. ಒಬ್ಬ ಶೂದ್ರನಿಂದ ಸಾಧ್ಯವಾಗುತ್ತದೆ ಎಂಬ ನಂಬಿಕೆ ಇಲ್ಲದಂತ ಕಾಲದಲ್ಲಿ ಅವರು ಅತ್ಯಂತ ಶ್ರೇಷ್ಠವಾದ ವಿಶಿಷ್ಟವಾದ ಉತ್ಕೃಷ್ಟವಾದ ಸಾಹಿತ್ಯವನ್ನು ಸೃಷ್ಟಿ ಮಾಡಿದ್ದಾರೆ.
ಅಲ್ಲದೆ ಇದರಿಂದ ಇಡೀ ಶೂದ್ರ ಸಮುದಾಯಕ್ಕೆ ಹಾಗೂ ತಳ ಸಮುದಾಯಕ್ಕೆ ಜಾಗೃತಿ ಮೂಡಿಸುವಂತಹ ಸಾಧನೆ ಅವರ ಬರವಣಿಗೆಯ ಮೂಲಕವೇ ಸ್ಪಷ್ಟವಾಗುತ್ತದೆ. ಭಾರತೀಯ ತತ್ವ ಮಿಮಾಂಸೆ ಮತ್ತು ಭಾರತೀಯ ಧರ್ಮಸಾರವನ್ನು ಕುವೆಂಪು ಅವರು ತಮ್ಮ ಎಲ್ಲಾ ಕೃತಿಗಳಲ್ಲಿ ಅತ್ಯಂತ ದಟ್ಟವಾಗಿ ಜಿನುಗುವಂತೆ ಸೃಷ್ಟಿಸಿ ಕೊಟ್ಟಿದ್ದಾರೆ.
ಮಲೆಗಳಲ್ಲಿ ಮದುಮಗಳು ಕಾದಂಬರಿಯ ಮೂಲಕ ನಾಯಿಗುತ್ತಿ ಕಥೆ ಹೇಳುತ್ತಾ ಆಧುನಿಕವಾಗಿ ಬದಲಾವಣೆಯನ್ನು ಕಾಣಬಯಸುವ ಮೊಟ್ಟಮೊದಲ ಸಾಹಿತಿ. ಕಾವ್ಯ ಕಾದಂಬರಿ ನಾಟಕವಾದ ಮೂರು ಪ್ರಕಾರಗಳಲ್ಲಿ ವಿಶ್ವಕ್ಕೆ ಮಾದರಿಯಾಗುವಂತಹ ಸರ್ವ ಶ್ರೇಷ್ಠ ಸಾಹಿತ್ಯ ಕೃಷಿ ಮಾಡಿದ್ದಾರೆ ಅವರಿಗೆ ಭಾರತರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಭಾರತ ಸರ್ಕಾರವು ಅವರನ್ನು ಗೌರವಿಸಬೇಕು ಎಂದರು.
ಬೆಂಗಳೂರು ಬೇಲಿ ಮಠದ ಶ್ರೀ ಶಿವರುದ್ರ ಮಹಾಸ್ವಾಮಿಗಳು ಅವರು ಮಾತನಾಡುತ್ತಾ ರಾಷ್ಟ್ರ ಹಿತವನ್ನು ರಾಜ್ಯ ಹಿತವನ್ನು ಮತ್ತು ಸಾಮಾಜಿಕ ಚಿಂತನೆಯನ್ನು ಯಾವತ್ತೂ ಬಿಟ್ಟುಕೊಡಂತಹ ಅದ್ಭುತವಾದ ಅಭಿವ್ಯಕ್ತಿ ಕುವೆಂಪು ಅವರದು. ತಮ್ಮ ಬದುಕನ್ನೇ ಬೆಳಕಾಗಿಸಿಕೊಂಡು ಎಲ್ಲರೊಳಗೊಂದಾಗಿ ಎಲ್ಲರಿಗೂ ಬೇಕಾಗಿ ಎಲ್ಲರ ಬಾಳ ಬದುಕಿನಲ್ಲಿ ಬೆಳಕಾಗಿರುವಂತಹ ಮಹಾನ್ ಚೇತನ ಕುವೆಂಪು. ಅವರ ಬರವಣಿಗೆಯಲ್ಲಿ ಅವರ ಹೃದಯದ ಮಿಡಿತವೇ ಆಕಾರಗೊಂಡು ಅಕ್ಷರ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಕುವೆಂಪು ಅವರಿಗೆ ಭಾರತ ರತ್ನಕೊಟ್ಟರೆ ಭಾರತ ರತ್ನದ ಪಾವಿತ್ರ್ಯತೆ ಅದರ ಬೆಳಕು ವಿಶ್ವದಾದ್ಯಂತ ಹೆಚ್ಚುತ್ತದೆ ಎಂದರು.
ಚಿತ್ರದುರ್ಗ ಮಾದಾರ ಚನ್ನಯ್ಯ ಗುರುಪೀಠಾಧ್ಯಕ್ಷರಾದ ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರು ಮಾತನಾಡುತ್ತಾ ನಮಗೆ ಜಾಗೃತಿ ಎಂಬುದು ಈಗ ತಾನೇ ಬರುತ್ತಿದೆ. ನಾವು ಕುವೆಂಪು ಅವರನ್ನು ಹಿಮಾಲಯದ ಎತ್ತರಕ್ಕೆ ಕೊಂಡೊಯ್ಯಬೇಕು. ವಿಶ್ವಮಾನವರಾಗಿ ವಿಶ್ವ ಭೂಪಟದಲ್ಲಿ ನಿಲ್ಲಿಸಬೇಕು. ಸಾಹಿತ್ಯ ಕೃಷಿಯಲ್ಲಿ ಅನೇಕ ಸಾಹಿತಿಗಳನ್ನು ಕವಿಗಳನ್ನು ಮೀರಿಸಿದಂತಹ ಸಾಹಿತ್ಯ ಕೃಷಿ ಮಾಡಿದ ಹೆಮ್ಮೆಯ ಪುತ್ರ ನಮ್ಮ ನಾಡಿನ ಕುವೆಂಪು.
ಬುದ್ಧ ದಯವೇ ಧರ್ಮದ ಮೂಲ ಎಂದರು, ಆದಿಕವಿ ಪಂಪನವರು ಮನುಷ್ಯ ಜಾತಿ ತಾನೊಂದೇ ವಲಯಂ ಎಂದರು ಹಾಗೆ ಕುವೆಂಪು ಮನುಜ ಮತ ವಿಶ್ವ ಪಥ ಎಂದು ಸಾರಿದರು ಅಂತಹ ವಿಶ್ವ ಮಾನವರಿಗೆ ಭಾರತರತ್ನ ನೀಡಿ ಗೌರವಿಸಬೇಕಾಗಿದೆ ಅವರಿಗೆ ಭಾರತ ರತ್ನ ಸಿಕ್ಕರೆ ಒಂದು ಶೋಷಿತ ವರ್ಗಕ್ಕೆ ಸಾಮಾಜಿಕ ನ್ಯಾಯ ಸಿಕ್ಕಂತಾಗುವುದು ಎಂದರು.
ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ. ನಿಶ್ಚಲಾನಂದನಾಥ ಸ್ವಾಮಿ ಅವರು ಮಾತನಾಡುತ್ತಾ ಈ ಜಗತ್ತು ಕಂಡ ಅದ್ಬುತ ಸಂತ ಕವಿ ವಿಶ್ವಮಾನವ ಪ್ರಜ್ಞೆಯನ್ನು ಮೊದಲಿಗೆ ತಮ್ಮ ಸಾಹಿತ್ಯದಲ್ಲಿ ಪ್ರಕಟಿಸಿದ ಮಣ್ಣಿನ ಮಗ. ಶೂದ್ರ ಸಮುದಾಯದಲ್ಲಿ ಇಂತಹ ಒಂದು ವಿಸ್ಮಯವಾದ ಸಾಹಿತ್ಯವನ್ನು ಸೃಷ್ಟಿ ಮಾಡಬಹುದು ಎಂದು ಜಗತ್ತಿಗೆ ತೋರಿಸಿದಂತಹ ಶ್ರೇಷ್ಠ ಕವಿ ಅವರಿಗೆ ಭಾರತರತ್ನ ನೀಡಿದ್ದೆ ಆದರೆ ಅದು ಕನ್ನಡಿಗರಿಗೆ ಅತ್ಯಂತ ಸಂತೋಷದ ಕ್ಷಣ ಮತ್ತು ಭಾರತ ಸರ್ಕಾರದಿಂದ ದ್ರಾವಿಡ ಭಾಷೆಗೆ ಕೊಟ್ಟ ದೊಡ್ಡ ಗೌರವ ಆಗಿರುತ್ತದೆ ಕುವೆಂಪು ಅವರ ಸಾಹಿತ್ಯವು ಎಲ್ಲಾ ಭಾಷೆಗೆ ಅನುವಾದವಾಗಿದ್ದರೆ ನೋಬೆಲ್ ಪಾರಿತೋಷಕ ಪಡೆದ ಎರಡನೇ ಭಾರತೀಯರಾಗುತ್ತಿದ್ದರು. ಕುವೆಂಪು ಈ ಜಗತ್ತಿಗೆ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸಿದಂತ ಭಾರತೀಯ ಸಂಸ್ಕೃತಿಯ ಘನತೆಯಾದಂತ ವೇದಗಳು ಉಪನಿಷತ್ತುಗಳು ಮತ್ತು ಭಗವದ್ಗೀತೆ ಅಂತಹ ಶ್ರೇಷ್ಠ ದರ್ಶನವನ್ನು ಜಗತ್ತಿಗೆ ಮಾಡಿಕೊಟ್ಟ ಸ್ವಾಮಿ ವಿವೇಕಾನಂದರ ಮತ್ತೊಂದು ಅವತಾರ ಇಂತಹ ಶ್ರೇಷ್ಠ ಕವಿ ಸಂತನಿಗೆ ಭಾರತರತ್ನ ಸಿಕ್ಕರೆ ಭಾರತ ರತ್ನದ ತೂಕ ಹೆಚ್ಚಾಗುತ್ತದೆ ಎಂದರು.
ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಶ್ರೀ ಡಾ. ನಂಜಾವದೂತ ಮಹಾಸ್ವಾಮೀಜಿ ಅವರು ಮಾತನಾಡುತ್ತಾ ನಾಡಿಗೆ ಒಳಿತಾಗುವುದಾದರೆ ದೇಶಕ್ಕೆ ಒಳಿತಾಗುವುದಾದರೆ ಸನ್ಮಾನ್ಯ ಎಚ್.ಡಿ ಕುಮಾರಸ್ವಾಮಿ ಅವರು ನೊಂದವರ ಪರವಾಗಿ ನಿಲ್ಲುವ ಹೃದಯ ವೈಶಾಲ್ಯತೆ ಇರುವ ರಾಜಕಾರಣಿ ಎಂದರು. ದೆಹಲಿಯಂತ ನಗರದಲ್ಲಿ ನಮ್ಮಂತ ಎಲ್ಲ ಕನ್ನಡಿಗರಿಗೆ ದೊಡ್ಡ ಭರವಸೆ ಎಂದರೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಶ್ರೀ ಸಿ.ಎಂ ನಾಗರಾಜ್. ಅವರು ಎಂತೆಂತಹ ದೊಡ್ಡ ದೊಡ್ಡವರನ್ನು ಕರೆಯಿಸಿ ಇಂತಹ ದೊಡ್ಡ ಕಾರ್ಯಕ್ರಮ ಆಯೋಜನೆ ಮಾಡಲಿಕ್ಕೆ ಅವರಿಗೆ ಮಾತ್ರ ಸಾಧ್ಯ ಸನ್ಮಾನ್ಯ ಪಿ.ಎಂ ನರೇಂದ್ರ ಮೋದಿಯವರನ್ನು ಕರೆಸಿ ಅಮೃತ ಮಹೋತ್ಸವವನ್ನು ಮಾಡಿದರು ಹಾಗೆ ಕೆಂಪೇಗೌಡ ಪ್ರತಿಷ್ಠಾನ ಕಾರ್ಯಕ್ರಮವನ್ನು ಮಾಡಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರನ್ನು ಕರೆಯಿಸಿದರು ಎಂದು ಹೇಳಿ ಸಿ.ಎಂ ನಾಗರಾಜ್ ಅವರನ್ನು ಶ್ಲಾಘಿಸಿದರು.
ಕುವೆಂಪು ಅವರು ಸುಲಭವಾಗಿ ಅರ್ಥೈಸಿಕೊಳ್ಳಲಾಗದ ದೊಡ್ಡ ಪ್ರತಿಭೆ ಅವರು ಎಲ್ಲಾ ವಿಧವಾದ ಸಾಹಿತ್ಯವನ್ನು ಬರೆದವರು ಅವರಿಗೆ ಭಾರತರತ್ನ ಸಿಗಲೇಬೇಕು ನಮ್ಮ ದೊಡ್ಡ ದೊಡ್ಡ ರಾಜಕಾರಣಿಗಳು ಎಲ್ಲಾ ದೊಡ್ಡ ದೊಡ್ಡ ಬರಹಗಾರರು ಸೇರಿ ಭಾರತ ಸರ್ಕಾರಕ್ಕೆ ಮನವಿ ಮಾಡಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಗಲು ಪ್ರಯತ್ನಿಸಬೇಕು ಎಂದರು.
ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ಅವರು ಮಾತನಾಡುತ್ತಾ ಕಳೆದ 5000 ವರ್ಷಗಳ ಭಾರತ ಕೇವಲ 3 ವರ್ಣಗಳಿಗೆ ಸೀಮಿತವಾಗಿತ್ತು ಇನ್ನು ಮುಂದಿನ ಭವಿಷ್ಯದ ಭಾರತ ನಿರ್ಮಾಣವಾಗಬೇಕೆಂದರೆ ಪದದಳಿತವಾಗಿರುವಂತಹ ಮತ್ತು ಅವಗಣನೆಗೆ ಒಳಗಾಗಿರುವಂತಹ ಒಂದು ಸಮುದಾಯ ಮೇಲೆದ್ದು ಕೆಲಸ ಮಾಡದೇ ಹೋದರೆ ಅವರನ್ನು ಮೇಲಕ್ಕೆ ಎತ್ತದೆ ಹೋದರೆ ಯಾವುದೇ ಕಾರಣಕ್ಕೂ ಭಾರತ ಮೇಲಕ್ಕೇರಲು ಸಾಧ್ಯವಿಲ್ಲ.
ಬಹು ಪಾಲು ಸಂಖ್ಯೆಯಲ್ಲಿರುವ ಈ ಶೂದ್ರವರ್ಗವನ್ನು ಮೇಲಕ್ಕೆ ಎತ್ತದೇ ಹೋದರೆ ಮತ್ತು ಶೂದ್ರ ತಾನು ಮೈಕೊಡವಿಕೊಂಡು ಮೇಲೆಳದೇ ಹೋದರೆ ಈ ದೇಶ ಮೇಲೆ ಬರದು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದನ್ನು ನೆನಪಿಸಿದರು. ಕುವೆಂಪು ಅವರು ಮನದಾಳದಿಂದ ಬರೆದ ಕವಿತೆಗಳ ಶುದ್ಧತೆಯನ್ನು ರಾಮಾಯಣ ದರ್ಶನಂ ನಲ್ಲಿನ ಆಳವಾದ ಅರ್ಥವನ್ನು ತಿಳಿಸುತ್ತಾ ಎಲ್ಲರಿಗೂ ರೋಮಾಂಚನ ಮಾಡಿದರು ಮುಂದುವರಿದು ಕುವೆಂಪು ಅವರ ವೈಜ್ಞಾನಿಕ ದಾರ್ಶನಿಕ ಮತ್ತು ಸಮಾಜದ ನ್ಯೂನತೆಗಳನ್ನು ತಿದ್ದುವಂತಹ ಸಾಹಿತ್ಯವನ್ನು ರಚಿಸಿ ಯುಗದ ಕವಿ ಆಗಿದ್ದಾರೆ ಎಂದರು.
ವಿಲಿಯಂ ಬ್ಲೇಕ್ ಅವರ ಕವಿತೆಯನ್ನು ಕುವೆಂಪು ಅವರು ತಮ್ಮ ಶೈಲಿಯಲ್ಲಿ ಭಾಷಾಂತರ ಮಾಡಿದ “ಮರಳಕಣ ಒಂದರಲ್ಲಿ ಜಗವ ಕಾಂಬುವಾಸೆ l ಅರಳಿರುವ ವನಸುಮದಿ ಸಗ್ಗವನ್ನು ಕಾಂಬುವಾಸೆ l ಪರಿಮಿತಿಗೆ ಎಟುಕದನ್ನು ಅಂಗೈಯಲ್ಲಿ ಪಿಡಿವಾಸೆ l ಅರೆ ಗಳಿಗೆಯಲ್ಲಿ ನಿತ್ಯ ಸತ್ಯವನ್ನು ಅರಿವಾಸೆ” ಎಂಬುವ ಕವಿತೆಯನ್ನು ವಾಚಿಸಿ ಎಲ್ಲರನ್ನು ಮಂತ್ರಮುಗ್ಧರನ್ನಾಗಿಸಿದರು.
ಕುವೆಂಪು ಅವರು ಯುಗದ ಚಿಂತನೆಯನ್ನು ಬದಲಿಸಿದಂತವರು ವಿಶ್ವಮಾನವ ಪ್ರಜ್ಞೆಯನ್ನು ಎಲ್ಲರಲ್ಲೂ ಬಿತ್ತಿದವರು ಅಂತಹ ಮಹಾನ್ ಕವಿಗೆ ಭಾರತರತ್ನ ಅವರಿಗೆ ಬೇಕಿಲ್ಲ ಆದರೆ ಅವರಿಗೆ ಕೊಡುವ ಮೂಲಕ ನಮ್ಮ ಕನ್ನಡ ಸಾಹಿತ್ಯಕ್ಕೆ ತಾಯಿ ಭುವನೇಶ್ವರಿಗೆ ಒಂದು ಗೌರವ ಪದವಿಯನ್ನು ಕೊಟ್ಟಂತಾಗುತ್ತದೆ ಎಂದು ತಮ್ಮ ಸುಧೀರ್ಘ ಭಾಷಣ ಆಶೀರ್ವಚನದಲ್ಲಿ ತಮ್ಮ ಅಗಾಧ ಜ್ಞಾನ ಭಂಡಾರದಿಂದ ಎಲ್ಲರನ್ನೂ ತನ್ಮಯರನ್ನಾಗಿಸಿದರು.
ಎಂತೆಂತಹ ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಒಂದು ವಿಸ್ಮಯ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರನ್ನು ಶ್ಲಾಘನೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಆಶ್ರಮ ಮೈಸೂರಿನ ಶ್ರೀ ಮುಕ್ತಿದಾನಂದ ಸ್ವಾಮಿಗಳು ಮತ್ತು ಸಚಿವರಾದ ವಿ ಸೋಮಣ್ಣ, ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಡಾ.ಟಿ ಬಿ ಜಯಚಂದ್ರ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಇನ್ನು ಮುಂತಾದವರು ಭಾಗವಹಿಸಿ ಈ ಕಾರ್ಯಕ್ರಮದ ಬಗ್ಗೆ ಅಚ್ಚುಮೆಚ್ಚಿನ ಮಾತಾಡಿ ಕುವೆಂಪು ಅವರಿಗೆ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡಲು ತಾವೆಲ್ಲರೂ ಭಾರತ ಸರ್ಕಾರಕ್ಕೆ ಮನವಿ ಮಾಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದ ನಡುವೆ ರಾಷ್ಟ್ರಕವಿ ಕುವೆಂಪು ಅವರ ಸಾಧನೆ ಮತ್ತು ಕೊಡುಗೆ ಬಗ್ಗೆ ಒಂದು ಕಿರು ಚಿತ್ರವನ್ನು ಹಾಗೂ ಸಾಹಿತಿ ಚದುರಂಗ ರವರು ರಚಿಸಿ ನಿರ್ದೇಶಿಸಿದಂತ ಒಂದು ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮಕ್ಕೆ ಕರ್ನಾಟಕದ ಮೈಸೂರು, ಬೆಂಗಳೂರು, ಚಿಕ್ಕಮಗಳೂರು, ಚಿತ್ರದುರ್ಗ, ಬಳ್ಳಾರಿ, ಮಂಡ್ಯದಿಂದ ಬಂದಂತಹ ಕನ್ನಡಪ್ರಿಯರು ಮತ್ತು ದೆಹಲಿಯ ಸ್ಥಳೀಯ ಕನ್ನಡಿಗರು ಅಪಾರ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಕಾರ್ಯಕ್ರಮವನ್ನು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಮೈಸೂರು ಹಾಗೂ ದೆಹಲಿ ಕರ್ನಾಟಕ ಸಂಘದ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿತ್ತು. ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರು ಅವಿರತ ಶ್ರಮಿಸಿ ಕಾರ್ಯಕ್ರಮವು ಅಚ್ಚುಕಟ್ಟಾಗಿ ನಡೆಯಲು ಎಲ್ಲರನ್ನೂ ಒಗ್ಗೂಡಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವರೇ ಕಾರಣಿಕರ್ತರಾಗಿದ್ದಾರೆ.
ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸಿ.ಎಂ ನಾಗರಾಜ್ ಅವರು ಮತ್ತು ವಿಶ್ವಮಾನವ ಕ್ಷೇಮಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ಹೆಚ್.ಕೆ ರಾಮುರವರು ಸ್ವಾಗತ ಭಾಷಣವನ್ನು ಮಾಡಿದರು ಮತ್ತು ಈ ಕಾರ್ಯಕ್ರಮದ ನಿರೂಪಣೆಯನ್ನು ದೆಹಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎಸ್ ಮೂರ್ತಿ ಅವರು ಮಾಡಿದರು.
ಭಕ್ತಿ ಪೂರ್ವಕವಾಗಿ ಮಾಡಿದ ತಪಸ್ಸಿಗೆ ದೇವರು ಒಲಿಯುವಂತೆ ಶ್ರದ್ದೆಯಿಂದ ಮಾಡಿದ ಕೆಲಸಕ್ಕೆ ಪ್ರತಿಫಲ ಸಿಗುವಂತೆ ಒಳ್ಳೆಯ ಮನಸ್ಸಿನಿಂದ ಮಾಡಿದ ಕಾರ್ಯಕ್ಕೆ ಒಳ್ಳೆಯದೇ ಆಗುವಂತೆ ಮುತುವರ್ಜಿಯಿಂದ ನೀರುಣಿಸಿ ನೆಟ್ಟ ಸಸಿಯು ಹೆಮ್ಮರವಾಗಿ ಬೆಳೆಯುವಂತೆ ಆದಷ್ಟು ಬೇಗ ಕುವೆಂಪು ಅವರಿಗೆ ಭಾರತರತ್ನ ಸಿಗುವ ಮೂಲಕ ಈ ಕಾರ್ಯಕ್ರಮದ ಯಶಸ್ಸು ಸಿಗಲೆಂದು ಆಶಿಸುತ್ತೇನೆ.
ಸುದ್ದಿ ಲೇಖನ: ವೆಂಕಟೇಶ. ಹೆಚ್, ಚಿತ್ರದುರ್ಗ. (ನವ ದೆಹಲಿ), 7760023887/ 9742933400.

