ಚಂದ್ರವಳ್ಳಿ ನ್ಯೂಸ್, ದೊಡ್ಡಬಳ್ಳಾಪುರ:
ಪವಿತ್ರ ವೈಕುಂಠ ಏಕಾದಶಿ ಪರ್ವ ದಿನವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಹಲವಾರು ಗ್ರಾಮಗಳ ವೆಂಕಟೇಶ್ವರ ಸ್ವಾಮಿ, ರಂಗನಾಥ ಸ್ವಾಮಿ, ವೇಣುಗೋಪಾಲ ಸ್ವಾಮಿ ದೇವಾಲಯಗಳಲ್ಲಿ ಅದರಲ್ಲೂ ವಿಶೇಷವಾಗಿ ವಡ್ಡರಹಳ್ಳಿ,ಹಾಗೂ
ನಗರದ ತೇರಿನಬೀದಿಯ ಪ್ರಸಿದ್ಧ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನಗಳಲ್ಲಿ ಮಂಗಳವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ವೈಕುಂಠ ಏಕಾದಶಿಯನ್ನು ಆಚರಿಸಲಾಯಿತು.ವೈಕುಂಠ ದ್ವಾರ ದರ್ಶನಕ್ಕಾಗಿ ಸುತ್ತಮುತ್ತಲಿನ ಗ್ರಾಮಗಳು ಹಾಗೂ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.
ಬೆಳಗಿನ ಜಾವದಿಂದಲೇ ದೇವಾಲಯದಲ್ಲಿ ವಿಶೇಷ ಅಲಂಕಾರ, ಅಭಿಷೇಕ, ಮಹಾಪೂಜೆ ಹಾಗೂ ವೈಕುಂಠ ದ್ವಾರ ದರ್ಶನ ಶ್ರದ್ಧಾಭಕ್ತಿಯಿಂದ ನೆರವೇರಿತು.
ದೇವಾಲಯಗಳು ಮತ್ತು ಗ್ರಾಮಗಳು ಜಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಹಬ್ಬದ ವಾತಾವರಣವನ್ನು ಸೃಷ್ಟಿಸಿತು. ಭಕ್ತರಿಗೆ ಸುಗಮ ದರ್ಶನ ಒದಗಿಸಲು ಸರತಿ ಸಾಲು ವ್ಯವಸ್ಥೆ, ಕುಡಿಯುವ ನೀರು, ನೆರಳು ಹಾಗೂ ಇತರೆ ಮೂಲಭೂತ ಸೌಲಭ್ಯಗಳನ್ನು ದೇವಸ್ಥಾನ ಆಡಳಿತ ಮಂಡಳಿ ಸಮರ್ಪಕವಾಗಿ ಒದಗಿಸಿದ್ದವು.
ವೈಕುಂಠ ಏಕಾದಶಿ ದಿನ ದೇವಾಲಯದಲ್ಲಿ ನಿರಂತರ ಅನ್ನಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭದಲ್ಲಿ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಗೆ ವಿಶೇಷವಾಗಿ ಅರ್ಪಿಸಲಾದ ತಿರುಪತಿ ಲಡ್ಡು ಪ್ರಸಾದವನ್ನು ಭಕ್ತರಿಗೆ ವಿತರಿಸಲಾಯಿತು. ಶಾಂತಿ, ಶಿಸ್ತು ಮತ್ತು ಭಕ್ತಿಭಾವದಿಂದ ಕಾರ್ಯಕ್ರಮಗಳು ಸಾಂಗವಾಗಿ ನೆರವೇರಿದವು.
ವೈಕುಂಠ ಏಕಾದಶಿ ಪ್ರಯುಕ್ತ ಖಿಲ್ಲೆ ವೇಣುಗೋಪಾಲ ಸ್ವಾಮಿ, ವೈಕುಂಠ ಜನಾರ್ದನ ಸ್ವಾಮಿ, ಕೆರೆ ಬಾಗಿಲು ವೇಣುಗೋಪಾಲ ಸ್ವಾಮಿ, ನಾರಾಯಣ ಮಂದಿರ, ನರಸಿಂಹ ಸ್ವಾಮಿ, ತೂಬಗೆರೆ ಲಕ್ಷ್ಮಿ ವೆಂಕಟ ರಮಣ ಸ್ವಾಮಿ, ಪಾಲ್ ಪಾಲ್ ದಿಣ್ಣೆ ವಿಶ್ವ ಕಲ್ಯಾಣ ವೆಂಕಟ ರಮಣ ಸ್ವಾಮಿ, ಗುಟ್ಟೆ ಲಕ್ಷ್ಮಿ ನರಸಿಂಹ ಸ್ವಾಮಿ, ಹೆಗ್ಗಡಿ ಹಳ್ಳಿ ಶ್ರೀ ದೇವಿ ಭೂ ದೇವಿ ಸಮೇತ ಲಕ್ಷ್ಮಿ ವೆಂಕಟ ರಮಣ ಸ್ವಾಮಿ ದೇವಾಲಯಗಳಲ್ಲಿ ನಡೆದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಭಕ್ತರು ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣ ಸ್ವಾಮಿಯ ದಿವ್ಯ ಕೃಪೆಗೆ ಪಾತ್ರರಾದರು. ದೇವಾಲಯ ಆಡಳಿತ ಮಂಡಳಿಗಳು ಹಾಗೂ ಸ್ವಯಂಸೇವಕರ ಸಹಕಾರಕ್ಕೆ ಭಕ್ತ ಸಮುದಾಯ ಮೆಚ್ಚುಗೆ ವ್ಯಕ್ತಪಡಿಸಿದೆ.

