ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಚಿತ್ರದುರ್ಗ ನಗರದ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಆವರಣದಲ್ಲಿ 2026 ರ ಜನವರಿ 30 ರಂದು ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್ ಹೇಳಿದರು.
ನಗರದ ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿ ಮಂಗಳವಾರ ಉದ್ಯೋಗ ಮೇಳ ಆಯೋಜಿಸುವ ಕುರಿತು ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಜೀವಿನಿ-ಕೆಎಸ್‍ಆರ್‍ಎಲ್‍ಪಿಎಸ್-ಡಿಡಿಯುಜಿಕೆವೈ ಯೋಜನೆ, ಜಿಲ್ಲಾ ಪಂಚಾಯಿತಿಯ ಎನ್.ಆರ್.ಎಲ್.ಎಂ ಹಾಗೂ ಜಿಲ್ಲಾ ಕೌಶಲ್ಯಾಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಉದ್ಯೋಗ ಮೇಳ ಆಯೋಜಿಸಲಾಗುತ್ತಿದ್ದು, ಮೇಳದ ಯಶಸ್ವಿಗೆ ಉಪಸಮಿತಿಗಳನ್ನು ರಚಿಸಲಾಗಿದೆ. ಸಮಿತಿಯ ಮುಖ್ಯಸ್ಥರು ಈಗಿನಿಂದಲೇ ಅಗತ್ಯ ಸಿದ್ಧತೆ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ನಡೆಯುವ ಉದ್ಯೋಗ ಮೇಳ ಆಯೋಜನೆ ಕುರಿತು ಕಾಲೇಜುಗಳಲ್ಲಿ ಹಾಗೂ ವೃತಿಪರ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ಉದ್ಯೋಗದ ಮೇಳದ ಬಗ್ಗೆ ಮಾಹಿತಿ ನೀಡಬೇಕು. ಉದ್ಯೋಗದಾತರು ಹಾಗೂ ಉದ್ಯೋಗಾಕಾಂಕ್ಷಿಗಳ ನೋಂದಣಿಗೆ ಪ್ರತ್ಯೇಕ ವೆಬ್ ಲಿಂಕ್ ರಚಿಸಿ ವ್ಯಾಪಕ ಪ್ರಚಾರ ನೀಡುವಂತೆ ಜಿ.ಪಂ. ಸಿಇಓ ಡಾ.ಎಸ್.ಆಕಾಶ್ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಮುಖ್ಯ ಯೋಜನಾಧಿಕಾರಿ ಸಿ.ಎಸ್.ಗಾಯತ್ರಿ, ಯೋಜನಾ ನಿರ್ದೇಶಕಿ ಕೆ.ಜಯಲಕ್ಷ್ಮಿ, ಮುಖ್ಯ ಲೆಕ್ಕಾಧಿಕಾರಿ ಡಿ.ಆರ್.ಮಧು, ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ವೇಮಣ್ಣ, ಜಿಲ್ಲಾ ಉದ್ಯೋಗಾಧಿಕಾರಿ ರವಿಚಂದ್ರ, ಜಿ.ಟಿ.ಟಿ.ಸಿ ಪ್ರಾಂಶುಪಾಲ ಸುಹಾಸ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಪದವಿ, ಐಟಿಐ, ಇಂಜಿನಿಯರಿಂಗ್ ಕಾಲೇಜುಗಳ ಪ್ರತಿನಿಧಿಗಳು ಇದ್ದರು.

