ಮೆಕ್ಕೆಜೋಳ ನೋಂದಣಿ, ಖರೀದಿ ಸ್ಥಗಿತ, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಮೆಕ್ಕೆಜೋಳ ಬೆಳೆದ ರೈತರು

News Desk
- Advertisement -  - Advertisement -  - Advertisement - 

ಹೆಚ್.ಸಿ ಗಿರೀಶ್, ಹರಿಯಬ್ಬೆ.
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಿರ್ದಿಷ್ಟ ಬೆಲೆ ದೊರೆಯಲಿದೆ ಎನ್ನುವ ಮುಂದಾಲೋಚನೆಯ ಉದ್ದೇಶ ಹೊಂದಿ ರೈತರು ಅತಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದು ಕೈಸುಟ್ಟುಕೊಂಡಿದ್ದಾರೆ. ಮಳೆ, ಪ್ರಕೃತಿ ವೈಫಲ್ಯದ ಜೊತೆಗೆ ವಿವಿಧ ರೋಗ ಭಾದೆ ಕಾಡಿದರೂ ರೈತರ ನಿರೀಕ್ಷೆಗೆ ತಕ್ಕಂತೆ ಮೆಕ್ಕೆಜೋಳ ಇಳುವರಿ ಬಂದಿದೆ.

ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ 17.6 ಲಕ್ಷ ಹೆಕ್ಟೇರ್‌ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದ್ದು, 53.8 ಲಕ್ಷ ಮೆಕ್ಕೆಜೋಳ ಉತ್ಪಾದನೆ ಆಗುವ ಅಂದಾಜು ಇದೆ. ಆದರೆ ಮೆಕ್ಕೆಜೋಳ ಖರೀದಿ ಮಾಡುವಾಗ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆಯಾಗಿದ್ದು ರೈತರಿಗೆ ಸಂಕಷ್ಟ ಎದುರಾಗಿದೆ.

- Advertisement - 

ಹೆಚ್ಚು ಮೆಕ್ಕೆಜೋಳ ಬೆಳೆಯುವ ದಾವಣಗೆರೆ, ಚಿತ್ರದುರ್ಗ, ಹಾವೇರಿ ಸೇರಿದಂತೆ ಹಲವೆಡೆ ಮೆಕ್ಕೆಜೋಳ ಬೆಳೆದಿದ್ದ ರೈತರು ಈ ಬಾರಿ ಒಳ್ಳೆಯ ಫಸಲಿನ ನಿರೀಕ್ಷೆಯಲ್ಲಿ ಉತ್ತಮ ಆದಾಯ ಬರುತ್ತದೆ, ಸಾಲ-ಸೋಲ ತೀರಿಸಿಕೊಂಡು ನೆಮ್ಮಂದಿಯಿಂದಿರಬಹುದು ಎಂಬ ಕನಸು ಇಟ್ಟುಕೊಂಡಿದ್ದರು.
ಆದರೆ ಬೆಲೆ ಕುಸಿತ ಮತ್ತು ಬೆಂಬಲ ಬೆಲೆಯಲ್ಲಿ ಎಲ್ಲ ರೈತರಿಂದ ಮೆಕ್ಕೆಜೋಳ ಖರೀದಿ ಅಸಾಧ್ಯವಾಗಿರುವುದರಿಂದ ನಷ್ಟು ಅನುಭವಿಸುವುದು ನಿಶ್ಚಿತವಾಗಿದೆ.

ಬಿತ್ತನೆಬೀಜ, ರಸಗೊಬ್ಬರದ ಬೆಲೆ ಗಗನಕ್ಕೇ ರುತ್ತಿದೆ.‌ಐದಾರು ವರ್ಷಗಳ ಹಿಂದೆ ಐದು ಕೆಜಿಗೆ ರೂ. 500ರಿಂದ 800 ರೂ. ರಷ್ಟಿದ್ದ ಉತ್ತಮ ಬಿತ್ತನೆಬೀಜದ ಬೆಲೆ ನಾಲ್ಕು ಕೆಜಿಗೆ 1500 ರಿಂದ 2000ದಷ್ಟಾಗಿದೆ. ಒಟ್ಟಾರೆ ಎಕರೆಗೆ 20 ರಿಂದ 30 ಸಾವಿರ ರೂಪಾಯಿ ಖರ್ಚಾಗುತ್ತದೆ. ಆದರೆ ಉತ್ಪನ್ನದಿಂದ ಮಾತ್ರ ರೈತನಿಗೆ ಲಾಭ ಪಡೆಯಲು ಸಾಧ್ಯವಾಗುತ್ತಿಲ್ಲ, ರೈತರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

- Advertisement - 

ಕೇಂದ್ರ ಸರ್ಕಾರ ಪ್ರತಿ ಕ್ವಿಂಟಾಲ್ ಮೆಕ್ಕೆಜೋಳಕ್ಕೆ 2400 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಮಾರುಕಟ್ಟೆಯಲ್ಲಿ 1600 ರಿಂದ 1800ಕ್ಕೆ ಖಾಸಗಿಯಾಗಿ ವರ್ತಕರು ಮೆಕ್ಕೆಜೋಳ ಖರೀದಿ ಮಾಡುತ್ತಿದ್ದಾರೆ. ರೈತರಿಗೆ 600 ರೂ.ನಿಂದ 800 ರೂ.ಗಷ್ಟು ಹಣ ಪ್ರತಿ ಕ್ವಿಂಟಾಲ್ ಗೆ ನಷ್ಟವಾಗುತ್ತಿದೆ. ಮೆಕ್ಕೆಜೋಳ ಖರೀದಿಗೆ ದಾವಣಗೆರೆ ಪ್ರಮುಖ ಮಾರುಕಟ್ಟೆಯಾಗಿದೆ. ದಿನಾಂಪ್ರತಿ ಸುಮಾರು 4-5 ಸಾವಿರ ಚೀಲಗಳಷ್ಟು ಆವಕ ಬರುತ್ತಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ 2,000-2,200 ರೂ.ಗೆ ಖರೀದಿ ಮಾಡಲಾಗುತ್ತಿತ್ತು. ಪ್ರಸಕ್ತ ಸಾಲಿನಲ್ಲಿ ತೇವಾoಶ ಹೆಚ್ಚಿರುವುದರಿಂದ ಖರೀದಿ ಮಾಡಲು ಹಿಂದೇಟು ಹಾಕಲಾಗುತ್ತಿದೆ.
ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ಕ್ವಿಂಟಲ್ ಗೆ 1600-1800 ಇದ್ದು ಪೂರ್ಣ ಪ್ರಮಾಣದಲ್ಲಿ ಒಣಗಿದ ಮೆಕ್ಕೆ ಜೋಳಕ್ಕೆ 1,800-2,000 ರೂ.ಗೆ ಮಾರಾಟವಾಗುತ್ತಿದೆ. ಆದರೂ ಬಹುತೇಕ ರೈತರು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಲಿ ಎಂದು ಆಗ್ರಹ ಮಾಡುತ್ತಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ, ಹಿರಿಯೂರಿನ ಕೆಲ ಭಾಗದಲ್ಲಿ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದೆ. ರೈತರ ನಿರೀಕ್ಷೆಯಂತೆ ಹೆಚ್ಚಿನ ಇಳುವರಿ ಬಾರದಿದ್ದರೂ ಕಳಪೆ ಇಳುವರಿ ಬಂದಿಲ್ಲ. ಆದರೂ ಮೆಕ್ಕೆಜೋಳ ಹೇಗೆ ಮಾರಾಟ ಮಾಡಬೇಕೆನ್ನುವುದೇ ರೈತರ ಸದ್ಯದ ಚಿಂತೆಯಾಗಿದೆ.

ಬೆಂಬಲ ಬೆಲೆಯಲ್ಲಿ ರೈತರಿಂದ ಮೆಕ್ಕೆಜೋಳ ಖರೀದಿ ಮಾಡುವಂತೆ ರೈತ ಸಂಘಟನೆಗಳು ಹೋರಾಟ ಆರಂಭಿಸಿದ್ದರಿಂದ ರಾಜ್ಯ ಸರ್ಕಾರ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಸೂಚನೆ ನೀಡಿತು.
ಬೆಲೆ ಕುಸಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಮೆಕ್ಕೆಜೋಳ ಬೆಳೆಗಾರರಿಗೆ ನೆರವಾಗುವ ಸಲುವಾಗಿ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದಕರೊಂದಿಗೆ ಸಭೆ ನಡೆಸಿ
5 ಲಕ್ಷ ಮೆಟ್ರಿಕ್‌ಟನ್‌ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ತಕ್ಷಣ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದರು. ಈ ವರ್ಷ ಅತ್ಯಧಿಕ ಪ್ರಮಾಣದಲ್ಲಿ ಮೆಕ್ಕೆಜೋಳ ಉತ್ಪಾದನೆಯಾಗಿದ್ದು, ರೈತರಿಗೆ ನೆರವಾಗಲು ರಾಜ್ಯ ಸರ್ಕಾರ ಕರ್ನಾಟಕ ಮಾರುಕಟ್ಟೆ ಫೆಡರೇಶನ್‌ಮೂಲಕ ರೈತರಿಂದ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ.

ಜೊತೆಗೆ ರೈತರಿಗೆ ಸಾಗಣೆ ವೆಚ್ಚ, ಲೋಡಿಂಗ್‌, ಅನ್‌ಲೋಡಿಂಗ್‌ವೆಚ್ಚವನ್ನು ಸರ್ಕಾರವೇ ಭರಿಸುವುದು ಸೇರಿದಂತೆ ಮಾರುಕಟ್ಟೆಯಲ್ಲಿ ಮೆಕ್ಕೆಜೋಳ ದರ ಕುಸಿತದಿಂದ ತೊಂದರೆಗೆ ಸಿಲುಕಿರುವ ರೈತರಿಗೆ ನೆರವಾಗುವ ದೃಷ್ಟಿಯಿಂದ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ.

ಡಿಸ್ಟಿಲರಿಗಳು 7 ಲಕ್ಷ ಮೆಟ್ರಿಕ್‌ಟನ್‌ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಪ್ರಾರಂಭಿಸಿದ್ದರೆ, ಕೆಎಂಎಫ್‌50,000 ಮೆಟ್ರಿಕ್‌ಟನ್‌ಮೆಕ್ಕೆಜೋಳ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಿದೆ. ಹಾಗೆಯೇ ಪಶು ಮತ್ತು ಕುಕ್ಕುಟ ಆಹಾರ ಉತ್ಪಾದನಾ ವಲಯ ಇಂಡೆಂಟ್‌ನೀಡಿ 5 ಲಕ್ಷ ಮೆಟ್ರಿಕ್‌ಟನ್‌ಮೆಕ್ಕೆಜೋಳ ಖರೀದಿಯನ್ನು ತಕ್ಷಣ ಪ್ರಾರಂಭಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.

ಆದರೂ ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲಾಗುತ್ತಿಲ್ಲ ಎನ್ನುವ ದೂರುಗಳು ಸಾಕಷ್ಟಿವೆ.
ಉದಾಹರಣೆಗೆ ಚಿತ್ರದುರ್ಗ ಜಿಲ್ಲೆಯಾದ್ಯಂತ 87 ರಿಂದ 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು. ಸುಮಾರು 6 ಲಕ್ಷ ಮೆಟ್ರಿಕ್ ಟನ್ ಮೆಕ್ಕೆಜೋಳ ಉತ್ಪಾದನೆ ಆಗಿದೆ ಎನ್ನುವ ಮಾಹಿತಿಯನ್ನ ಕೃಷಿ ಇಲಾಖೆ ನೀಡುತ್ತಿದೆ.

ಆದರೂ ಬೆಂಬಲ ಬೆಲೆಯಲ್ಲಿ  ಜಿಲ್ಲೆಯ  ಹಿರಿಯೂರು ತಾಲೂಕಿನ ನಂದಾ ಫುಡ್ಸ್, ಚಿತ್ರದುರ್ಗದ ಶಾಲಿಮಾರ್ ಫುಡ್ಸ್, ಗೋದ್ರೇಜ್, ಪಶು ಇಲಾಖೆಗಳು ಮೆಕ್ಕೆಜೋಳ ಖರೀದಿಗೆ ಮುಂದಾಗಿವೆ. ಇದರ ಜೊತೆಯಲ್ಲಿ ಶಿವಮೊಗ್ಗದ ಸಾಗರ್ ಫುಡ್ಸ್ ಕಂಪನಿಯಿಂದ 20 ಟನ್ ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ.

ಇಡೀ ಜಿಲ್ಲೆಯಿಂದ 1365 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿಗೆ ವಿವಿಧ ಫುಡ್ಸ್ ಕಂಪನಿಗಳು ಸಿದ್ಧವಾಗಿದ್ದರೂ ಇಲ್ಲಿಯ ತನಕ ಕೇವಲ 750 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡಲು ಶೇ.20ರಷ್ಟು ಹಣ ತುಂಬಿವೆ. ಇನ್ನೂ 615 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುವ ಅವಕಾಶ ಇದ್ದರೂ ರೈತರಿಂದ ನೋಂದಣಿ ಮಾಡಿಕೊಳ್ಳುತ್ತಿಲ್ಲ. ಹೀಗಾಗಿ ರೈತರು ನಿತ್ಯ ಕೃಷಿ ಪತ್ತಿನ ಸಹಕಾರ ಸಂಘ, ಕೃಷಿ ಇಲಾಖೆ, ಕರ್ನಾಟಕ ಮಾರುಕಟ್ಟೆ ಫೆಡರೇಶನ್‌ ಕಚೇರಿಗಳಿಗೆ ಅಲೆಯುತ್ತಿದ್ದು ಮೆಕ್ಕೆಜೋಳ ಬೆಳೆದ ರೈತರ ಸ್ಥಿತಿ ಮೂರಾಬಟ್ಟೆಯಾಗಿದೆ.

ಕೇಂದ್ರದ ಬೆಂಬಲ ಬೆಲೆ:
ಕೇಂದ್ರ ಸರ್ಕಾರವು ಮೆಕ್ಕೆಜೋಳಕ್ಕೆ ಕ್ವಿಂಟಾಲ್‌ಗೆ
2400 ಬೆಂಬಲ ಬೆಲೆ ನಿಗದಿಪಡಿಸಿದೆ ಮತ್ತು ಕರ್ನಾಟಕದಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಆರಂಭದಲ್ಲಿ ಪ್ರತಿ ರೈತರಿಂದ ಕೇವಲ 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಗೆ ಸರ್ಕಾರ ಸಿದ್ಧತೆ ಮಾಡಿಕೊಂಡಿತ್ತು. ಆದರೆ ರೈತರ ಪ್ರತಿಭಟನೆ ನಂತರ ಪ್ರತಿ ರೈತರಿಂದ ಬೆಂಬಲ ಬೆಲೆಯಲ್ಲಿ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲು ಸರ್ಕಾರ ಆದೇಶಿಸಿದೆ.
ಗುಣಮಟ್ಟದ ಮೆಕ್ಕೆಜೋಳ (14% ತೇವಾಂಶದೊಂದಿಗೆ) ಖರೀದಿಸಲಾಗುತ್ತದೆ. ಖರೀದಿಯ ನಿಯಮಗಳು:
ಗರಿಷ್ಠ ಮಿತಿ: ಪ್ರತಿ ರೈತರಿಂದ ಗರಿಷ್ಠ 50 ಕ್ವಿಂಟಾಲ್ ಮೆಕ್ಕೆಜೋಳ ಖರೀದಿಸಲಾಗುವುದು.
ಕೇವಲ ನಿರ್ದಿಷ್ಟ ಗುಣಮಟ್ಟದ ಮೆಕ್ಕೆಜೋಳ (14% ತೇವಾಂಶ) ಮಾತ್ರ ಸ್ವೀಕರಿಸಲಾಗುವುದು.

ಖರೀದಿ ಪ್ರಕ್ರಿಯೆ:
ರಾಜ್ಯಾದ್ಯಂತ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ರಾಜ್ಯ ಸರ್ಕಾರ  ತೆರೆದಿದೆ. ಡಿಸೆಂಬರ್-1 ರಿಂದ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಮೆಕ್ಕೆಜೋಳ ಖರೀದಿಗಾಗಿ ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ಅಗತ್ಯ ದಾಖಲಾತಿಗಳೊಂದಿಗೆ ನೋಂದಣಿ ಮಾಡಿಸುವುದು ಕಡ್ಡಾಯ.

ಮಕ್ಕೆಜೋಳ ಬೆಳೆದು ಸಂಕಷ್ಟ ಎದುರಿಸುತ್ತಿದ್ದೇನೆ. ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ನೋಂದಣಿ ಕೇಂದ್ರಕ್ಕೆ ಅಲೆದು ಸುಸ್ತಾಗಿದೆ. ಈಗಾಗಲೇ ನೋಂದಣಿ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಸಬೂಬು ಹೇಳುತ್ತಿದ್ದಾರೆ. ಆದರೆ ಒಂದು ಗಂಟೆ ಕೂಡ ಯಾವುದೇ ಕೇಂದ್ರದಲ್ಲಿ ನೋಂದಣಿ ಕಾರ್ಯ ಮಾಡಿಲ್ಲ. ನೋಂದಣಿ ಕಾರ್ಯ ಮತ್ತೆ ಆರಂಭಿಸಿ ರೈತರಿಂದ ಮೆಕ್ಕೆಜೋಳ ಖರೀದಿ ಮಾಡಬೇಕು.
ರೈತರು ನಷ್ಟ ಕ್ಕೀಡಾಗುತ್ತಿರುವುದರಿಂದ ಕೃಷಿ ಇಲಾಖೆ ಮತ್ತು ಸರ್ಕಾರ ರೈತರ ನೆರವಿಗೆ ನಿಲ್ಲುವ ಮೂಲಕ ನಿರಂತರ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರನ್ನು ಮೇಲೆತ್ತುವ ಕಾರ್ಯ ಆಗಬೇಕು ಎನ್ನುತ್ತಾರೆ ಹಿರಿಯೂರು ತಾಲೂಕಿನ
ಬಿದರೆಕೆರೆ ರೈತ ಈರದಿಮ್ಮಯ್ಯ.

ಚಿತ್ರದುರ್ಗ ಜಿಲ್ಲೆಯಲ್ಲಿ 90 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯಲಾಗಿದೆ. ವಿವಿಧ ಕಂಪನಿಗಳು 1365 ಮೆಟ್ರಿಕ್ ಟನ್ ಮೆಕ್ಕೆಜೋಳ ಖರೀದಿ ಮಾಡುವುದಾಗಿ ತಿಳಿಸಿದ್ದರೂ ಇಲ್ಲಿಯ ತನಕ 750 ಮೆಟ್ರಿಕ್ ಟನ್ ಖರೀದಿಗೆ ನೋಂದಣಿ ಮಾಡಲಾಗಿದೆ”.
ಮಂಜುನಾಥ್, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಚಿತ್ರದುರ್ಗ.

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಸರ್ಕಾರ ಕಠಿಣ ರೀತಿಯ ಮಾನದಂಡಗಳನ್ನು ನಿಗದಿ ಮಾಡಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ ಶೇ.12ರಷ್ಟು ತೇವಾಂಶ, ಶೇ.1ರಷ್ಟು ಕಸಕಡ್ಡಿ ಹಾಗೂ ಪ್ರತಿ 100 ಗ್ರಾಂಗೆ 350 ಗಟ್ಟಿಕಾಳುಗಳಿರಬೇಕೆಂದಿದೆ.
ಜಿಲ್ಲೆಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಜೊತೆಯಲ್ಲಿ ನಿರೀಕ್ಷೆಗೂ ಮೀರಿದ ಚಳಿ ಇದೆ. ಇಂಥಹ ಪರಿಸ್ಥಿತಿಯಲ್ಲಿ ಮಾರ್ಗಸೂಚಿಗಳನ್ನು ಪಾಲಿಸುವುದು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮಾರ್ಗಸೂಚಿಯಲ್ಲಿ ಸಡಲಿಕೆ ಮಾಡಬೇಕು. ಎಲ್ಲ ರೀತಿಯಿಂದ 25 ಕ್ವಿಂಟಾಲ್ ಮೆಕ್ಕೆಜೋಳ ಖರೀದಿ ಮಾಡಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಆಗಲಿದೆ
”.
ಧನಂಜಯ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ರೈತ ಸಂಘ, ಚಿತ್ರದುರ್ಗ.

ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಮಾಡಲು ಜಿಲ್ಲೆಯ ಮೂರು ಕಡೆ ಅವಕಾಶ ಕಲ್ಪಿಸಲಾಗಿತ್ತು. ಈಗಾಗಲೆ 750 ಮೆಟ್ರಿಕ್ ಟನ್ ಖರೀದಿಗೆ ರೈತರು ನೋಂದಣಿ ಮಾಡಿಕೊಂಡಿದ್ದಾರೆ. ಮತ್ತಷ್ಟು ಖರೀದಿಗೆ ಅವಕಾಶ ಇದ್ದರೂ ಬೇಡಿಕೆ ಕೊಟ್ಟಿರುವ ಕಂಪನಿಗಳು ಶೇ.20ರಷ್ಟು ಹಣ ತುಂಬಿಲ್ಲವಾದ್ದರಿಂದ ನೋಂದಣಿ ಮಾಡುತ್ತಿಲ್ಲ. ಹಣ ತುಂಬಿದ ಕೂಡಲೇ ಮತ್ತಷ್ಟು ರೈತರಿಂದ ನೋಂದಣಿ ಮಾಡಿಕೊಳ್ಳಲಾಗುತ್ತದೆ”.
ಬಸವೇಶ್, ವ್ಯವಸ್ಥಾಪಕರು, ಕರ್ನಾಟಕ ಮಾರುಕಟ್ಟೆ ಫೆಡರೇಶನ್‌, ಚಿತ್ರದುರ್ಗ.

 

 

Share This Article
error: Content is protected !!
";