ಟಾಪ್ ಗೇರು!?
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಪಾಸು ಫೇಲು ಆದಾಗ
ಹೊಸದಾಗಿ ಸಂಬಳ ಬಂದಾಗ
ಕಳೆದುಕೊಂಡ ಗೆಳೆಯರ ನೆನಪಾದಾಗ
ಊರು ಬಿಟ್ಟು ದೂರದ ಊರಿಗೆ ಬಂದಾಗ
ನಿನ್ನ ಕೈ ಬೀಸಿ ಕರೆಯುತ್ತಾ ಬಾರು?
ಸಂಪಾದನೆ ಕೈ ತುಂಬಿದಾಗ
ಇಷ್ಟದ ಹುಡುಗಿ ಕೈ ಕೊಟ್ಟಾಗ
ನಂಬಿದವರು ಮೋಸ ಮಾಡಿದಾಗ
ಪ್ರೀತಿಯ ಬಲೆಯಲ್ಲಿ ಬಿದ್ದು ಎದ್ದಾಗ
ನಿನ್ನ ಕೈ ಬೀಸಿ ಕರೆಯುತ್ತಾ ಬಾರು?
ಊರ ಹಬ್ಬಕ್ಕೆ ಬಂದಾಗ
ಮಾರಿ ಹಬ್ಬಕ್ಕೆ ಹೋದಾಗ
ಮದುವೆ ಮುಂಜಿಗೆ ನಿಂತಾಗ
ನಿನ್ನ ನಿಂದಿಸಿದವರನ್ನು ಕಂಡಾಗ
ಅಕ್ಕನ ಮಗಳು ಮುಖ ತಿರುಗಿಸಿ ಹೋದಾಗ
ನಿನ್ನ ಕೈ ಬೀಸಿ ಕರೆಯುತ್ತಾ ಬಾರು?
ಅವರಿವರ ಕುಡಿತವನ್ನು ಕಂಡಾಗ
ಕುಡಿಯಲು ದುಡ್ಡಿಲ್ಲದವರನ್ನು
ನೋಡಿದಾಗ
ಉಳ್ಳವರ ಶೋಕಿಯನ್ನು ಇಣುಕಿದಾಗ
ನಿನ್ನ ಕೈ ಬೀಸಿ ಕರೆಯುತ್ತಾ ಬಾರು?
ನಮ್ಮದೇ ಅನ್ನ ತಿಂದು
ನಮಗೆ ದ್ರೋಹ ಬಗೆದಾಗ
ಹತ್ತಿರದವರು ಎದೆಗೆ
ಒದ್ದು ಹೋದಾಗ
ನಿನ್ನ ಕೈ ಬೀಸಿ ಕರೆಯುತ್ತಾ ಬಾರು?
ಹಳೆಯ ನೆನಪುಗಳು ಮರೆತಾಗ
ಹೊಸ ನೆನಪುಗಳ ಬೆಸೆದಾಗ
ಕಷ್ಟ ಸುಖ ದುಃಖಗಳ
ಮುನ್ನೂರ ಅರವತೈದು ದಿನಗಳು ಕಳೆದು ಹೋದಾಗ
ಮತ್ತೇ ಹೊಸ ವರ್ಷ ಬಂದಾಗ
ನಿನ್ನ ಕೈ ಬೀಸಿ ಕರೆಯುತ್ತಿತ್ತಾ
ಬಾರು!?
ಯಾವುದೋ ಕಾರಣಕ್ಕೆ
ಕುಡಿಯುವುದೇ ಆದರೆ
ನಿನ್ನ ಕಾರುಬಾರು
ಕೆಲವೇ ದಿನಗಳಲ್ಲಿ ಸೇರುವೆ
ಆಸ್ಪತ್ರೆಯ ಕಾರಿಡಾರು
ಇನ್ನೇಷ್ಟು ದಿನ ನಡೆದೀತು
ನಿನ್ನ ದರ್ಬಾರ್
ನಿನ್ನ ಕರೆದೊಯ್ಯಲು
ಬೇಗನೆ ಬೀಳುವುದು ಯಮನ
ಗಾಡಿಗೆ ಟಾಪ್ ಗೇರು……..!
ಜೈ ಬಾಟ್ಲೆಶ್ವರ
ಡಾ. ಉಮೇಶ್ ಬಾಬು ಮಠದ್ (ಉಬಾಮ)

