ಚಂದ್ರವಳ್ಳಿ ನ್ಯೂಸ್, ಬಳ್ಳಾರಿ:
ಬಳ್ಳಾರಿಯಲ್ಲಿ ಸಿಬಿಐ ಅಧಿಕಾರಿಗಳು ಬುಧವಾರ ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ. ನಾಗೇಂದ್ರ ಅವರ ಆಪ್ತ ವಿಶ್ವನಾಥ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಬಳ್ಳಾರಿ ನಗರದ ಬೆಂಗಳೂರು ರಸ್ತೆಯಲ್ಲಿರುವ ಮಾಜಿ ಸಚಿವ ನಾಗೇಂದ್ರ ಅವರ ಆಪ್ತ ವಿಶ್ವನಾಥ ನಿವಾಸಕ್ಕೆ ನಾಲ್ಕು ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಮನೆ ಪರಿಶೀಲನೆ ನಡೆಸಲಾಗಿದೆ.
ಈ ವೇಳೆ ವಿಶ್ವನಾಥ ಮನೆಯಲ್ಲಿಲ್ಲದ ಕಾರಣ, ಅವರ ಸಹೋದರ ಮಹೇಶ್ರನ್ನು ಸಿಬಿಐ ಅಧಿಕಾರಿಗಳು ಬ್ರೂಸ್ ಪೇಟೆ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಿದ್ದಾರೆ.
ಠಾಣೆಯಲ್ಲಿಯೇ ಸಿಬಿಐ ಅಧಿಕಾರಿಗಳು ವಿಶ್ವನಾಥ ಸಂಬಂಧಿತ ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದಾರೆ. ಈ ದಾಳಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದೆ ಎನ್ನಲಾಗಿದ್ದು, ಪ್ರಕರಣದಲ್ಲಿ ವಿಶ್ವನಾಥ ಪಾತ್ರವಿದೆ ಎಂಬ ಆರೋಪದ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿದ್ದು ವಾಲ್ಮೀಕಿ ನಿಗಮ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಬಿ.ನಾಗೇಂದ್ರ ಆಪ್ತನಿಗೆ ಸಿಬಿಐ ಶಾಕ್ನೀಡಿದ್ದು, ಬಳ್ಳಾರಿಯಲ್ಲಿ ವಿಶ್ವನಾಥ್ಮನೆ ಮೇಲೆ ದಾಳಿ ನಡೆಸಲಾಗಿದೆ.
ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಕೋಟ್ಯಾಂತರ ರೂಪಾಯಿಗಳ ಹಗರಣವು ನಿಗಮದ ನಿಧಿಯನ್ನು ನಕಲಿ ಖಾತೆಗಳಿಗೆ ಅಕ್ರಮವಾಗಿ ವರ್ಗಾಯಿಸಿ ದುರ್ಬಳಕೆ ಮಾಡಿಕೊಂಡಿದ್ದು, ಇದರಲ್ಲಿ ಮಾಜಿ ಸಚಿವ ನಾಗೇಂದ್ರ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

